
ಮಿಮಿಕ್ರಿ ದಯಾನಂದ ಕಂಡ ಹಾಗೆ ಶಂಕರ್ನಾಗ್ ವ್ಯಕ್ತಿತ್ವ
ಮಿಮಿಕ್ರಿ ದಯಾನಂದ ಲೈಫ್ಸ್ಟೋರಿ ಭಾಗ 52

ಕಾವೇರಿ ಎಂಪೋರಿಯಂನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನನಗೆ ಒಂದು ಪೋನ್ ಬಂತು. ರಮೇಶ್ ಭಟ್ ಸಹಾಯಕ ನಿರ್ದೇಶಕರಾಗಿದ್ರು, ಆ್ಯಕ್ಸಿಡೆಂಟ್ ಸಿನಿಮಾಕ್ಕೆ ನಿಮಗೊಂದು ರೋಲ್ ಇದೆ ಎಂದು ಹೇಳಿದ್ರು. ಆಯ್ತು ಎಂದೆ. ಬೇರೆ ಸಿನಿಮಾಗಳಲ್ಲಿ ಪೂರ್ತಿ ದಿನ ಮೇಕಪ್ ಹಾಕಿ ಸಂಜೆ ನಮಗೆ ಶಾಟ್ ಇಲ್ಲದೇ ಕಳುಹಿಸುತ್ತಿದ್ದ ಕಾಲವದು. ಅದು ನಮಗೆ ಅಭ್ಯಾಸ ಆಗಿ ಹೋಗಿತ್ತು. ಸಂಜೆ ನಾಲ್ಕು ಗಂಟೆಗೆ ಕಾರು ಬರುತ್ತೆ ಎಂದ್ರು. ಅಂಬಾಸಿಡರ್ ಕಾರು ಬಂತು ಹೋದೆ. ಕ್ರೈಸ್ಟ್ ಕಾಲೇಜು ಬಳಿ ಹೋಗುತ್ತಿದ್ದಾಗ ಹಳೆ ಟೆಂಪೊ ವ್ಯಾನ್ ಬಂತು. ಅದರೊಳಗೆ ಶಂಕರ್ನಾಗ್ ಕೂತಿದ್ರು. ಒಳಗೆ ಸೋಫಾ ಹಾಕಿಸಿದ್ರು. ಬೇಜಾರು ಮಾಡಿಕೊಳ್ಳಬೇಡಿ, ಸಣ್ಣ ಶಾಟ್ ಇದೆ ಎಂದ್ರು. ಪರ್ವಾಗಿಲ್ಲ ಸರ್ ಎಂದೆ. ಅವಕಾಶ ಸಿಕ್ಕಿದ್ರೆ ಸಾಕು ಎನ್ನುವಂತಹ ಕಾಲವದು.
ನನ್ನ ಪಾತ್ರದ ಬಗ್ಗೆ ಹೇಳಿದ್ರು. ಚಿಕ್ಕ ಪಾತ್ರವನ್ನೂ ವಿಶೇಷವಾಗಿ ಮಾಡಬೇಕೆಂಬ ಕ್ರೇಜ್ ನನಗೆ. ಸರ್, ಇದಕ್ಕೊಂದು ಮಲಯಾಳದ ಶೈಲಿಯನ್ನ ಹಾಕಿಕೊಳ್ಳೋಣ್ವಾ ಎಂದೆ. ವಾವ್ ಚೆನ್ನಾಗಿದೆ ರೀ ಎಂದ್ರು. ಆಲ್ರೆಡಿ ಪಾತ್ರಕ್ಕಾಗಿ ಕೋಟ್ ಎಲ್ಲ ರೆಡಿಯಾಗಿತ್ತು. ಆದರೆ, ಅವರು ಅಲ್ಲೇ ಗಾಡಿ ನಿಲ್ಲಿಸಿದ್ರು. ರಮೇಶ್ ಭಟ್ಗೆ ಫೋನ್ ಮಾಡಿ, ಪಂಚೆ, ಶರ್ಟ್ ಬೇಗ ತಗೊಂಡು ಬಾ ಎಂದ್ರು. ನಾವು ಇಲ್ಲಿಂದ ಟ್ರಾಫಿಕ್ನಲ್ಲಿ ಹೋಗುವುದರೊಳಗೆ ರಮೇಶ್ ಪಂಚೆ, ಜುಬ್ಬ ತರಿಸಿ ಇಟ್ಟಿದ್ರು. ಡಮ್ಮಿ ಫೋನ್ ವ್ಯಾನ್ನಲ್ಲಿತ್ತು. ನಾನು ರಿಹರ್ಸಲ್ ಮಾಡಿದ್ದೆ. ಅಲ್ಲಿ ಹೋಗಿ ಶೂಟಿಂಗ್ ಮುಗೀತು.
ನನಗೆ ಸಿನಿಮಾ ಮಾಡಿದ ಹಾಗೆ ಆಗಿಲ್ಲ. ಊಟಕ್ಕೆ ಕುಳಿತು ಒಂದು ತುತ್ತು ತಿಂದ ಹಾಗೆ ಆಯಿತು. ಸುಯ್ ಎಂದು ಕಾವೇರಿ ಎಂಪೋರಿಯಂಗೆ ಬಿಟ್ರು. 4.30ಗೆ ಹೋಗಿದ್ದೆ. 6.30ಗೆ ಕಾವೇರಿ ಎಂಪೋರಿಯಂಗೆ ವಾಪಸ್ ಬಂದಿದ್ದೆ. ಶೂಟಿಂಗ್, ಟ್ರಾವೆಲಿಂಗ್, ಪೇಮೆಂಟ್ ಎಲ್ಲ ಆಗಿ ಹೋಗಿತ್ತು. ಒಮ್ಮೆ ನೀವು ಮನೆಗೆ ಹೋಗುವ ವೇಳೆ ಚಾಮುಂಡೇಶ್ವರಿ ಸ್ಟುಡಿಯೊಗೆ ಬಂದು ಹೋಗಿ ಅಂದಿದ್ರು. ನಾನು ಹೋದೆ, ನಾನು ಡೈಲಾಗ್ ಶುರು ಮಾಡುತ್ತಿದ್ದಂತೆ ಅನಂತ್ನಾಗ್ ನಗುತ್ತಿದ್ರು. ಅವರನ್ನು ಹೊರಗೆ ಕೂರಿಸಿ, ಡಬ್ಬಿಂಗ್ ಕೂಡ ಮುಗಿಸಿದ್ರು. ಇದು ಶಂಕರ್ನಾಗ್. ಅವರು ಪಾದರಸ ಇದ್ದಂತೆ.
ಮುಂದುವರೆಯುವುದು...