“ಮಾಲ್ಗುಡಿ ಡೇಸ್ ಅಂದ್ರೆ ಒಂಥರ ಥ್ರಿಲ್”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 9

(ಶಂಕರ್ ನಾಗ್ ಆತ್ಮೀಯ ಗೆಳೆಯ ಜಗದೀಶ್ ಮಲ್ನಾಡ್ ಅವರ ನೆನಪುಗಳು)


ಮಧ್ಯರಾತ್ರಿ 2‌ ಗಂಟೆಯಲ್ಲಿ ಮಾಡಿದ ಟ್ರೇನ್ ಶೂಂಟಿಗ್‌ ಸ್ಟೋರಿ

ಜಗದೀಶ್: ರೈಲ್ವೇ ಸ್ಟೇಶನ್ ಬೇಕೂಂತ ಆದಾಗ, ನಾವು ಫಸ್ಟ್ ಬೆಂಗಳೂರು ರೈಲ್ವೇ ಸ್ಟೇಶನ್ ಅಪ್ರೋಚ್ ಮಾಡಿದ್ವಿ. ಇಲ್ಲಿನ ಸರ್ಕಾರದಿಂದ ಲೆಟರ್ ತೆಗೊಂಡ್ಹೋಗ್ಬೇಕು. ಚೆನ್ನೈಗೆ ಹೋಗಿ ಅಲ್ಲಿ ಲೆಟರ್ ಕೊಟ್ಟು, ಪರ್ಮಿಶನ್ ತಗೊಂಡು, ಅದನ್ನ ಬೆಂಗಳೂರಿಗೆ ತಂದು ತೋರ್ಸಿ, ಯಾಕಂದ್ರೆ ಬೆಂಗ್ಳೂರಿಂದ ಹೊರಟು ಅರಸಾಳಿಗೆ ಬರೋದು ಟ್ರೇನು. ನಮಗೆ ರೈಲ್ವೇಸ್ಟೇಶನ್ ಪರ್ಮಿಶನ್ ಬೇಕಾಗಿರೋದು. ಟ್ರೇನ್ ಒಳಗಡೆ ಶೂಟ್ಗೆ ಅಲ್ಲ, ಬರೀ ಎಕ್ಸ್ಟೀರಿಯರ್ ಶೂಟ್ ಇರೋದು. ಟ್ರೇನ್ ಬೆಳಗ್ಗೆ ಒಂದೇ ಸಲ ಬರೋದು. ಸಂಜೆ ಬರುವಾಗ ಕತ್ತಲೆ ಆಗಿರುತ್ತೆ. ಶೂಟ್ ಮಾಡಕ್ಕೆ ಆಗಲ್ಲ. ಬೆಳಗ್ಗೆ ಏಳು ಗಂಟೆಗೆ ಅರಸಾಳುಗೆ ಟ್ರೇನ್ ಬಂದು, ಅಲ್ಲಿ ಎರಡು ನಿಮಿಷ ನಿಂತು ಹೊರ್ಟ್ಹೋಗೊದು. ಟೈಮ್ ಇದ್ದಿದ್ದು ಅಷ್ಟೇ.ನಾವು ರಾತ್ರಿ ಎರಡು ಗಂಟೆಯವರೆಗೂ ಶೂಟ್ ಮಾಡಿದ್ವಿ. ಬೆಳಗ್ಗೆ ಅರಸಾಳು ಗೆ ಹೋಗ್ಬೇಕು, ಪರ್ಮಿಶನ್ ಎಲ್ಲ ರಡಿ ಇತ್ತು. ರಾತ್ರಿಯೆಲ್ಲಾ ಶೂಟ್ ಮಾಡಿ, ಎಲ್ಲಾ ಪ್ಯಾಕ್ ಮಾಡಿ, ಎಲ್ಲರನ್ನೂ ಹೊರಡಿಸಿ, ರಾತ್ರೋ ರಾತ್ರಿನೇ ಹೊರಟು ಬೆಳಗ್ಗೆ ನಾಲ್ಕು ಗಂಟೆಗೆನೇ ಅರಸಾಳು ರೀಚ್ ಆದ್ವಿ. ಯಾರಿಗೂ ನಿದ್ದೆ ಇರ್ಲಿಲ್ಲ. ನನ್ನ ಕೆಲಸ ಏನೂಂತಂದ್ರೆ, ಹಿಂದಿನ ದಿನನೇ, ಬಂದು ಡ್ರೈವರ್ ಯಾರೂಂತ ತಿಳ್ಕೋಂಡು, ಮಾತಾಡಿ “ಸ್ಟೇಶನಿಗೆ ಟ್ರೇನ್ ರೀಚ್ ಆಗೋದಕ್ಕೆ ಮುಂಚೆ, ನೀವು ಎಲ್ಲಿಂದ ಸ್ಪೀಡ್ ಪಿಕಪ್ ಮಾಡ್ತೀರ?” ಅಂತೆಲ್ಲ ತಿಳ್ಕೊಂಡು, ನಾನು ಬೆಳಗ್ಗೆ ಟ್ರೇನ್ ಹತ್ತಿ ನೋಡೊದು. ಕ್ಯಾಮರ ಪ್ಲೇಸ್ಮೆಂಟ್ ಎಲ್ಲಿದೆ? ಮಾರ್ಕ್ ಎಲ್ಲಿದೆ? ಅಂತ ನೋಡ್ಕೊಂಡು ಡ್ರೈವರ್ಗೆ ಎಲ್ಲಿ ಸ್ಲೋ ಮಾಡ್ಬೇಕು, ಎಲ್ಲಿ ನಿಲ್ಸ್ ಬೇಕು ಅಂತ ನೋಡ್ಕೊಂಡು ಹೇಳ್ತಿದ್ದೆ.

ಎರಡು ಮೂರು ಟೇಕ್ ಆಗ್ತಿತ್ತು. ಆದ್ರೆ ಪಬ್ಲಿಕ್ ಗೆ ತೊಂದ್ರೆ ಕೊಡಕ್ಕೆ ಆಗಲ್ಲ. ಆದ್ರೆ ಪ್ಯಾಸೆಂಜರ್ಸ್ಗಳು ಒಬ್ಲೇಜ್ ಮಾಡಿದ್ರು. ಆದ್ರೆ ತುಂಬಾ ಟೈಮ್ ತಗೊಳಕ್ಕೆ ಆಗಲ್ಲ. ನಮಗೆ ಬೇಕಾಗಿದ್ದು ರೈಲ್ವೇ ಸ್ಟೇಶನ್ ಮತ್ತೆ ರೈಲ್ವೇ ಬ್ಯಾಕ್ ಗ್ರೌಂಡ್. ರೈಲ್ ಒಳಗೆ ಕಡಿಮೆನೇ ಶೂಟ್ ಮಾಡಿದ್ದು. ಶ್ರೀನಾಥ್ ಮಗ ರೈಲಲ್ಲಿ ಕೂತ್ಕೊಂಡು ಹೋಗ್ತಾ, ಟಾಟ ಮಾಡೊದು. ಅದನ್ನ ಬಿಟ್ರೆ ಇಂಟೀರಿಯರ್ ಶೂಟೇ ಮಾಡಿಲ್ಲ. ರೈಲ್ ಹೋದ್ಮೇಲೆ, ಕ್ಲೋಸಪ್ ಶಾಟ್ ತಗೊಬೇಕಲ್ಲ. ಅದಕ್ಕೆ ರೈಲ್ವೆ ವಿಂಡೋ ತರನೇ ಒಂದು ಕಟೌಟ್ ಮಾಡ್ಸಿದ್ವಿ, ಆರ್ಟ್ ಡೈರಕ್ಟರ್ ಹತ್ರ. ಅದನ್ನ ರೈಲ್ವೆ ಡಿಪಾರ್ಟ್ಮೆಂಟ್ ಅವ್ರದ್ದು ಚೆಕ್ ಮಾಡುವ ಟ್ರಾಲಿ ಇರುತ್ತಲ್ವ, ಅದಕ್ಕೆ ಕರಕ್ಟಾಗಿ ಫಿಕ್ಸ್ ಮಾಡ್ಕೊಂಡು, ಅದರ ಹಿಂದೆ ಆರ್ಟಿಸ್ಟ್ ನ ಕೂರ್ಸಿ, ಅದ್ರಿಂದ ಕ್ಲೋಸ್ ತೆಗೊಂಡ್ವಿ. ಯಾರಿಗೂ ಗೊತ್ತಾಗಲ್ಲ. ಆಮೇಲೆ ಅದ್ರಲ್ಲೇ ಮೂವ್ಮೆಂಟ್. ಮತ್ತೆ ಒಂದು ಜನರೇಟರ್ ಬಸ್ ನ ಟ್ರೇನ್ ತರ ಪೇಯಿಂಟ್ ಮಾಡಿದ್ರು ಜಾನ್ ದೇವರಾಜ್. ಬಸ್ ನೇ ಟ್ರೇನ್ ಕಂಪಾರ್ಟ್ಮೆಂಟ್ ತರನೇ ಪೇಂಟ್ ಮಾಡಿದ್ದ. ಅದರಲ್ಲೇ ಆರ್ಟಿಸ್ಟ್ ನ ಕೂರ್ಸ್ಕೊಂಡು, ಮೂವ್ಮೆಂಟ್ ಶಾಟ್ಸ್ ತಗೊಂಡ್ವಿ. ಹಾಗೆ ಆರ್ಟ್ ಡೈರಕ್ಟರ್ ಅದನ್ನ ಚಾಲೆಂಜಿಂಗಾಗಿ ತಗೊಂಡು ಮಾಡ್ದ.


ಮಾಲ್ಗುಡಿಲಿದ್ದ ಪಾಸಿಟಿವ್‌ ವೈಬ್ಸ್‌‌ ಮತ್ತು ಪಾಸಿಟಿವ್‌ ಮೈಂಡ್ಸ್

ಹೀಗೆ ಎಲ್ಲಾನೂ ಪ್ಲಸ್ ಆಗ್ತನೇ ಬರುತ್ತೆ. ಈಗ್ಲೂ ಮಾಲ್ಗುಡಿ ಡೇಸ್ ಅಂದ ತಕ್ಷಣ ಮೈ ಜುಂ ಅನ್ನುತ್ತೆ. ಒಂಥರಾ ರೋಮಾಂಚನ ಆಗುತ್ತೆ. ಯಾಕಂದ್ರೆ ನಾವು ಮಾಡಿದ ಕೆಲ್ಸ, ನಾವು ಮಾಡಿದ ಪ್ರಾಜೆಕ್ಟ್. ಇದು ಎಷ್ಟು ವರ್ಷ ಆದ್ರುನೂ ಹಾಗೆ ಇರುತ್ತೆ. ಯಾಕಂದ್ರೆ ಪ್ರಾಜೆಕ್ಟ್ ಹಾಗಿದೆ. ಕತೆಗಳು ಹಾಗಿದೆ. ಇದೆಲ್ಲಾ ನಾವು ಹೇಳಿದ್ದು ಅರ್ಥ ಆಗುತ್ತೇ ಹೊರತು, ಜನಗಳು ಕಥೆ ನೋಡ್ತಾರೆ, ಆಕ್ಟಿಂಗ್ ನೋಡ್ತಾರೆ, ಮ್ಯೂಸಿಕ್ ಕಿವಿಗೆ ಬೀಳ್ತಾ ಇರುತ್ತೆ. ಅಷ್ಟೇ ಅವ್ರ ಕಣ್ಣಿಗೆ ಬೀಳೋದು. ಆದ್ರೆ ಏನಾಗುತ್ತೆ ಅಂದ್ರೆ, ಎಲ್ಲಾ ಕೆಲ್ಸಗಳು ಒಟ್ಟಿಗೆ ಸೇರಿ ಒಂದು ಮೂರ್ತಿ ರೂಪುಗೊಳ್ಳೋ ಹಾಗೆ. ಎಲ್ಲಾ ಒಳ್ಳೆ ಶಿಲ್ಪಿಗಳು ಸೇರಿ ಕೆತ್ತಿರುವಂತಹ ಒಂದು ಮೂರ್ತಿ, ಮಾಲ್ಗುಡಿ ಡೇಸ್.


ವಿಷ್ಣುವರ್ಧನ್‌ ಅವರು ನಟಿಸಿದ ಮೊದಲ ಮತ್ತು ಕೊನೆಯ ಸೀರಿಯಲ್‌ ಇದು

ಇನ್ನೊಂದು ಎಕ್ಸಾಯಿಟಿಂಗ್ ಆಗುವಂತ ವಿಷಯ ಏನೂಂತಂದ್ರೆ ’45 ಮಂಥ್ ಅ ಡೇ’ ಅಂತ ಒಂದು ಎಪಿಸೋಡ್ ಮಾಡಿದ್ವಿ. ಅದರಲ್ಲಿ ವಿಷ್ಣುವರ್ಧನ್ ಸರ್ ಹೀರೋ, ಮತ್ತೆ ಗಾಯತ್ರಿ ಯವರು ಗಂಡ, ಹೆಂಡ್ತಿ ಪಾತ್ರ ಮಾಡಿದ್ರು. ಎಲ್ಜಿನ್ ಮಿಲ್ ಅಂತ ಹೊಟ್ಟು ಬೂಸ ತಯಾರು ಮಾಡೋ ಮಿಲ್ ಇತ್ತು. ಅದರ ಮುಂದೆನೇ ಅವರದ್ದೊಂದು ಆಫೀಸ್ ಇತ್ತು. ಅಲ್ಲಿ ಶೂಟ್ ಮಾಡಿದ್ವಿ, ಪೂರ್ತಿ ಎಪಿಸೋಡ್ನ. ವಿಷ್ಣುವರ್ಧನ್ ಸರ್, ಬಹಳ ಖುಷಿಯಿಂದ ಬಂದು ಮಾಡಿ ಕೊಟ್ರು, ಅವ್ರು ಅವಾಗ ಅಷ್ಟು ದೊಡ್ಡ ಹೀರೋ ಆಗಿದ್ರೂ, ಅದೇನೂ ತೋರಿಸಿ ಕೊಳ್ಳದೆ, ಎಷ್ಟು ಸಾಧ್ಯನೋ ಅಷ್ಟು ಸಿಂಪಲ್ ಆಗಿದ್ರು. ನಮ್ಮ ಜೊತೆ ಎಲ್ಲಾ ಮಾತಾಡ್ಕೊಂಡು ಖುಷಿಯಾಗಿರ್ತಾ ಇದ್ರು. ತುಂಬಾ ಚೆನ್ನಾಗೇ ಬಂದಿದೆ ಆ ಎಪಿಸೋಡ್.


ಅದೂ ಅಲ್ಲದೆ ‘ಸ್ವಾಮಿ ಆಂಡ್ ಫ್ರೆಂಡ್ಸ್’ಮಕ್ಕಳದ್ದು. ಅದ್ರಲ್ಲಿ ಮಾಸ್ಟರ್ ಮಂಜುನಾಥ್, ಮತ್ತೆ ರಘುರಾಮ್ ಅಂತ ಹುಡುಗ ಬಾಂಬೆಯಿಂದ ಬೆಂಗಳೂರಿಗೆ ಬಂದಿದ್ದಾನೆ. ಮತ್ತೆ ಶ್ರೀನಾಥ್ ಅವ್ರ ಮಗ. ಇವ್ರು ಮೂರು ಜನ ಮೇಜರ್ ಕ್ಯಾರೆಕ್ಟರ್. ಮತ್ತೆ ಕೆಲವರು ಇಲ್ಲಿನ ಥಿಯೇಟರ್ ಆಕ್ಟರ್ ಗಳ ಮಕ್ಕಳು. ಬಟ್ ಸ್ವಾಮಿ ಅಂದ್ರೆ, ಮಾಸ್ಟರ್ ಮಂಜುನಾಥ್ ಬಹಳ ಅದ್ಭುತವಾದ ನಟ. ಅವ್ನಿಗೆ ಅದ್ರಲ್ಲಿ ಇಂಟರ್ ನ್ಯಾಷನಲ್ ಅವಾರ್ಡು ಬಂದಿತ್ತು. ಮತ್ತೆ ಆ ಮುಗ್ಧತೆ, ಸ್ವಾಮಿ ಏನೂಂತ ‘ಆರ್.ಕೆ. ನಾರಾಯಣ್’ ಅನ್ಕೊಂಡಿದ್ರೋ, ನಿಜವಾದ ಸ್ವಾಮಿ ಸಿಕ್ಕಿದಷ್ಟು ಖುಷಿಯಾಗಿದ್ರು. ಮಾಸ್ಟರ್ ಮಂಜುನಾಥ್ ಕ್ಯಾರಕ್ಟರ್ನ ನಿಜವಾಗ್ಲೂ ಆ ಲೆವೆಲಿಗೆ ತಂದು ನಿಲ್ಲಿದ್ದ. ಸ್ವಾಮಿ ಮತ್ತೆ ಮೂರು ಜನರ ಕಾಂಬಿನೇಶನ್ ಇತ್ತು ಅದ್ರಲ್ಲಿ. ಮಾಲ್ಗುಡಿ ಡೇಸ್ ಆದ್ಮೇಲೆ ‘ನೋಡಿ ಸೌಮಿ ನಾವಿರೋದು ಹೀಗೆ’ ಮತ್ತು ‘ಪರಮೇಶಿ ಪ್ರೇಮ ಪ್ರಸಂಗʼ ಮಾಡಿದ್ರು ಅನ್ಸುತ್ತೆ, ನನಗೆ ಸರಿಯಾಗಿ ನೆನಪಿಲ್ಲ. ಆಮೇಲೆ ಶಂಕರ್ ನಾಗ್ ಕೆಲವೊಂದು ಕಮರ್ಷಿಯಲ್ ಸಿನಿಮಾಗಳಲ್ಲಿ ಬ್ಯುಸಿ ಆಗ್ಬಿಟ್ರು. ಅವ್ರು ‘ಮಾಲ್ಗುಡಿ ಡೇಸ್’ ಮುಗಿದು ಮೂರು ವರ್ಷದಲ್ಲೇ ಅಂದ್ರೆ 1990 ರಲ್ಲಿ ತಿರ್ಹೋಗ್ಬಿಟ್ರು.

ಅವರು ತೀರಿ ಹೋದ್ಮೇಲೆ ನಮ್ಮ ಜೀವನನೂ ಶುರು ಮಾಡ್ಬೇಕಲ್ವ, ನಾನು ಹೋಟೆಲ್ ಮಾಡ್ದೆ, ತುಂಬ ಇಂಟರ್ನ್ಯಾಶನಲ್ ಪ್ರೊಡಕ್ಷನ್ ಎಲ್ಲಾ ಮಾಡ್ದೆ. ರಜಿನಿಕಾಂತ್ ಅವ್ರದ್ದು ಒಂದು ಮೂವಿ ಆಗಿತ್ತು. ಅದೂ ಶೂಟಿಂಗ್ ಆಗಿದ್ದು ಬೆಂಗ್ಳೂರಲ್ಲೇ. ಅದರ ಪ್ರೊಡಕ್ಷನ್ ನಾನೇ ಹ್ಯಾಂಡಲ್ ಮಾಡಿರೋದು. ಅದಕ್ಕೆ ಇಡೀ ಟ್ರೇನ್ ಬುಕ್ ಮಾಡಿದ್ವಿ. ಟ್ರೇನ್ ಒಳಗಡೆ ಎಲ್ಲಾ ಸೀಕ್ವೆನ್ಸ್ ಇತ್ತು. ಅವ್ರು ಪಾರ್ಟ್ ಬೈಪಾರ್ಟ್ ಕೊಡಲ್ಲ. ಇಡೀ ಟ್ರಾಕೇ ಕೊಟ್ಬಿಟ್ಟಿದ್ರು. ರಜಿನಿಕಾಂತ್, ಮತ್ತೆ ಬಾಲಿವುಡ್ ಹಾಗೂ ಹಾಲಿವುಡ್ ಆಕ್ಟರ್ ಗಳೆಲ್ಲಾ ಇದ್ರು ಅದ್ರಲ್ಲಿ. ಒಳಗಡೆ ಲೈಟ್ಸ್ ಎಲ್ಲ ಇಟ್ಕೊಂಡು ಶೂಟ್ ಮಾಡಿದ್ಚಿ. ಆಮೇಲೆ ಡಿಸ್ಕವರಿ ಚಾನೆಲ್ ಗೆ ಸುಮಾರು ಒಂದಿಷ್ಟು ಪ್ರಾಜೆಕ್ಟ್ ಮಾಡ್ದೆ. ಶಂಕರ್ ನಾಗ್ ಸಾಯೋದಕ್ಕಿಂತ ಮುಂಚೆ ಕೊನೆ ಸಿನಿಮಾ ನಾನು ಮತ್ತೆ ರಮೇಶ್ ಭಟ್ ಪ್ರೊಡ್ಯೂಸ್ ಮಾಡಿದ್ವಿ.


ಶಂಕರ್‌ ನಾಗ್‌ ಅವರು ಮಾಡಬೇಕಿದ್ದ ಸಿನಿಮಾಗಳು

ಪರಮ್: ಯಾವ ಸಿನಿಮಾ ಸರ್ ಅದು?


ಜಗದೀಶ್: ‘ನಿಗೂಡ ರಹಸ್ಯ’ಅಂತ ಅದರ ಒಂದು ಸಾಂಗ್ ಏನೋ ಬ್ಯಾಲೆನ್ಸ್ ಇತ್ತು, ಅದು ಮಾಡ್ಕೊಡಕ್ಕೆ ಆಗ್ಲೇ ಇಲ್ಲ ಅವ್ರಿಗೆ. ಹೇಗೋ ಚೀಟ್ ಮಾಡಿ ಆ ಸಿನಿಮಾ ಮುಗಿಸಿ, ಇಡೀ ಸಿನಿಮಾನ ಅನಂತ್ ನಾಗ್ ಅವರ ಹತ್ರ ಡಬ್ಬಿಂಗ್ ಮಾಡಿಸಿ ಕೊಂಡ್ವಿ. ಅನಂತ್ ನಾಗ್ ಅವರಿಗೆ ಬಹಳ ಕಷ್ಟ ಆಗ್ತಿತ್ತು. ಆದ್ರೂ ಆ ಎಮೋಶನ್ ಎಲ್ಲಾ ಕಂಟ್ರೋಲ್ ಮಾಡ್ಕೊಂಡು, ಡಬ್ಬಿಂಗ್ ಮಾಡ್ಕೊಟ್ರು ನಮಿಗೆ.


ಪರಮ್: ಜೋಕುಮಾರ ಸ್ವಾಮಿ ಮಾಡುವಾಗ ನೀವಿದ್ರ? ಅದ್ರ ಬಗ್ಗೆ ಸ್ವಲ್ಪ ವಿವರವಾಗಿ ಹೇಳ್ಬಹುದಾ?


ಜಗದೀಶ್: ‘ಜೋಕುಮಾರ ಸ್ವಾಮಿ’ನಾನೇ ಮಾಡ್ಬೇಕೂಂತಾಯ್ತು, ನಾನು ಮತ್ತೆ ರಮೇಶ್ ಪಂಡಿತ್. ಅವ್ರು ನನಗೆ ಅಸಿಸ್ಟೆಂಟ್ ಆಗಿದ್ರು. ನಾವಿಬ್ರು ಹೋದ್ವಿ ಲೋಕಾಪುರಕ್ಕೆ. ಅಲ್ಲಿ ಹೊಗಿ ಎಲ್ಲ ಅರೇಂಜ್ ಮಾಡಿದ್ವಿ. ಶೂಟಿಂಗ್ ಪರ್ಮಿಶನ್, ಎಲ್ಲರಿಗೂ ಊಟ ತಿಂಡಿ ವ್ಯವಸ್ಥೆ, ಉಳ್ಕೊಳಕ್ಕೆ ಜಾಗ ಇದನ್ನೆಲ್ಲ ವ್ಯವಸ್ಥೆ ಮಾಡಿದ್ವಿ. ಕ್ಯಾಮೆರಾ ಬಂದಿತ್ತು. ಅದರಲ್ಲಿ ಏನೋ ಟೆಕ್ನಿಕಲ್ ಪ್ರಾಬ್ಲಮ್ ಇತ್ತು. ರಾಜೀವ್ ಮೆನನ್ ದೊಡ್ಡ ಕ್ಯಾಮರಾಮೆನ್ ಅವ್ರು, ಕ್ಯಾಮರಾ ನೋಡ್ಬಿಟ್ಟು “ನಾನು ಈ ಕ್ಯಾಮರಾದಲ್ಲಿ ಶೂಟ್ ಮಾಡಲ್ಲ, ನನಗೆ ಬೇರೆ ಕ್ಯಾಮರಾ ತರಿಸ್ಕೊಡಿ” ಅಂತಂದ್ರು. ಬೇರೆ ಕ್ಯಾಮರಾ ತರಿಸ್ಬೇಕು ಅಂದ್ರೆ, ಚೆನ್ನೈಗೆ ಹೋಗ್ಬೇಕು.


ಎರಡು ದಿವಸ ಗ್ಯಾಪ್ ಇತ್ತು ಅಂತ ಹೇಳಿ ನಾನು ಬೆಂಗ್ಳೂರಿಗೆ ಬಂದ್ಬಿಟ್ಟಿದ್ದೆ. ರಾತ್ರಿ ಫೋನ್ ಮಾಡಿ ಹೇಳ್ದೆ “ನಾನು ಬೆಂಗ್ಳೂರಿಗೆ ಬಂದಿದ್ದೀನಿ” ಅಂತ. ನನಗೆ ಕ್ಯಾಮರಾ ಹಾಳಾಗಿದ್ದೆಲ್ಲಾ ಗೊತ್ತಿರ್ಲಿಲ್ಲ, ಶಂಕರ್ ನಾಗ್ ಬೆಂಗ್ಳೂರಿಂದ ರಾತ್ರಿ ಹೊರಟೋದ್ರು. ಅಲ್ಲಿರೋರು ಯಾರೂ ಇನ್ಫರ್ಮೇಶನ್ ಕೊಡ್ಲಿಲ್ಲ. ಇನ್ಫರ್ಮೇಶನ್ ಹೋಗಿದ್ರೆ, ಅವರು ಹೊರಡ್ತಾ ಇದ್ರೋ ಇಲ್ವೋ? ಆ ವಿಷಯ ಬೇರೆ. ನಾನು ಎರಡು ಗಂಟೆಗೆಲ್ಲಾ ಮಲ್ಕೊಂಡೆ. ಐದು ಗಂಟೆಗೆ ನ್ಯೂಸ್ ಬಂತು. “ಶಂಕರ್ ನಾಗ್ ಗೆ ಆಕ್ಸಿಡೆಂಟ್ ಆಗ್ಬಿಟ್ಟಿದೆ, ಹೋಗ್ಬಿಟ್ರು”ಅಂತ. ನಂಬಕ್ಕಾಗ್ದೇ ಇರೋ ವಿಷಯಗಳು. ಅದು ಅಲ್ಲಿ ಲೋಕಾಪುರದಲ್ಲಿ ಎಲ್ಲಾ ರಡಿ ಮಾಡ್ಕೊಂಡಿದ್ವಿ. ಇನ್ನೇನು ಶೂಟಿಂಗ್ ಶುರುವಾಗ್ಬೇಕಿತ್ತು ಅಷ್ಟರೊಳಗೆ ಹೀಗಾಗ್ಬಿಡ್ತು. ಒಬ್ಬ ಒಳ್ಳೆ ವ್ಯಕ್ತಿನ ಕಳ್ಕೊಂಡ್ವಿ.


ಪರಮ್: ಅವ್ರು ಡೈರೆಕ್ಟರ್ ಆಕ್ಟರ್ ಎಲ್ಲಾ ಸೆಕೆಂಡರಿ. ನಿಮ್ಮ ಕ್ಲೋಸ್ ಫ್ರೆಂಡ್ ನ ಎಷ್ಟು ಮಿಸ್ ಮಾಡ್ಕೋತೀರ?


ಜಗದೀಶ್: ತುಂಬಾನೆ ಮಿಸ್ ಆಗುತ್ತೆ. ಏನಾಗುತ್ತೆ? ಮನುಷ್ಯನಿಗೆ ದೇವರು ಕೊಟ್ಟಿರೋದು ಒಂದಿರುತ್ತೆ, ಕಾಲ ಕ್ರಮೇಣ ನೆನಪುಗಳೆಲ್ಲಾ ಮಾಸುತ್ತೆ. ಎಲ್ಲೋ ಒಂದ್ಕಡೆ ಮರುಕಳಿಸ್ತಾ ಇರುತ್ತೆ. ಜೊತಯಲ್ಲಿದ್ದವ್ರು, ಓಡಾಡ್ತಾ ಇದ್ವಿ, ಹೀಗೆಲ್ಲಾ ನೆನಪಿಗೆ ಬರ್ತನೇ ಇರುತ್ತೆ. ಆದ್ರೆ ಏನೂ ಉಪಯೋಗನೇ ಇಲ್ವೆ, ನೆನಪುಗಳು ನೆನಪುಗಳಾಗೇ ಉಳಿಯುತ್ತೆ.


ಪರಮ್: ನಿಮಗೂ ಶಂಕರ್ ಗೂ ಎಷ್ಟು ಏಜ್ ಡಿಫ್ರೆನ್ಸ್?


ಜಗದೀಶ್: ಅವ್ನದ್ದು ನವೆಂಬರ್ 9 ಬರ್ಥ್ ಡೇ, ನನ್ದು ಅಕ್ಟೋಬರ್ 10 ಬರ್ಥ್ ಡೇ. ಸೇಮ್ ಯಿಯರ್. ಅಂದ್ರೆ 19 ದಿನಕ್ಕೆ ನಾನು ದೊಡ್ಡವ್ನು.


ಪರಮ್: ಶಂಕರ್ ನಿಂದ ನೀವು ಕಲ್ತಿದ್ದು, ಅಡಾಪ್ಟ್ ಮಾಡ್ಕೊಂಡಿದ್ದು ಏನೇನು?


ಜಗದೀಶ್: ಏನಾಗುತ್ತೆ ಗೊತ್ತಾ? ಪ್ರತಿಯೊಬ್ಬರಿಗೂ ಒಂದು ಬೇಸಿಕ್ ನೇಚರ್ ಇರುತ್ತೆ. ಶಂಕರ್ ಜೊತೆ, ಹಾರ್ಡ್ ವರ್ಕ್ ಯಾರು ಮಾಡ್ತಿದ್ರೋ ಅವ್ರು ಮಾತ್ರ ಇರ್ತಿದ್ರು. ಮೈಗಳ್ಳತನ ತೋರ್ಸೋರು ಯಾರೂ ಇರ್ತಿರ್ಲಿಲ್ಲ. ನಮಗೆ ಒಂದು ಜವಾಬ್ದಾರಿ ಬಂತೂ ಅಂದ್ರೆ, ಅದನ್ನ ಶಿಸ್ತಾಗಿ ಮಾಡ್ಬೇಕೂಂತ ಹೇಳೋದು ಇನ್ಬಿಲ್ಟ್. ಶಂಕರ್ ನಾಗ್ ಬಂದಾಗ ತುಂಬಾ ಚಾಲೆಂಜಿಂಗಾಗಿ ಇರ್ತಿತ್ತು. ಏನು ರಿಕ್ವಾಯರ್ಮೆಂಟ್ ಬರುತ್ತೆ ಅಂತ ಗೊತ್ತಿರ್ತಿರ್ಲಿಲ್ಲ. ನಾವು ರೆಡಿಯಾಗಿರ್ತಿದ್ವಿ. ಟೈಮ್ ಸೆನ್ಸ್ ಡಿಸಿಪ್ಲೀನ್, ಅವೆಲ್ಲಾ ನಮ್ಮಲ್ಲೇ ಇತ್ತು. ಶಂಕರ್ ನಾಗ್ ಬಂದ್ಮೇಲೆ ಎಲ್ಲದಕ್ಕೂ ಸರಯಾದ ಒಂದು ರೂಪ ಬಂತು.


ಪರಮ್: ಕೊನೆದಾಗಿ ಶಂಕರ್ ನಾಗ್ ಮತ್ತು ಮಾಲ್ಗುಡಿ ಡೇಸ್ ಒಂದು ವಾಕ್ಯದಲ್ಲಿ ಏನು ಹೇಳ್ತೀರ ಸರ್?


ಜಗದೀಶ್: ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವಂತಹ ಒಂದು ಸೀರಿಯಲ್ ಸರಣಿನ, ಶಂಕರ್ ನಾಗ್ ಅವ್ರು ಡೈರೆಕ್ಟ್ ಮಾಡಿದ್ರು. ಅದು ನೀವು ಹೇಳಿದ ಹಾಗೆ, ಇನ್ನೊಂದು ನೂರು ವರ್ಷ ಆದ್ರೂ ಜನ ಅದನ್ನ ಮರೆಯೋದಿಲ್ಲ. ಆತರದ್ದೊಂದು ಒಳ್ಳೆ ಪ್ರಸಂಟೇಶನ್ ಮಾಡಿದ್ದಾರೆ. ‘ಮಾಲ್ಗುಡಿ ಡೇಸ್’ಭಾರತದ ಕಿರುತೆರೆನ ಬಹಳ ಮೇಲು ಸ್ಥರಕ್ಕೆ ತಗೊಂಡು ಹೋಗಿದೆ. ‘ಸ್ವಾಮಿ ಆಂಡ್ ಫ್ರೆಂಡ್ಸ್’ನ ಫೀಚರ್ ಫಿಲ್ಮೇ ಮಾಡಿದ್ರು. ಅದು ಅಂತ ದೊಡ್ಡ ಹಿಟ್ ಆಗ್ಲಿಲ್ಲ. ಆದ್ರೆ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ಗೆಲ್ಲಾ ಹೋಯ್ತು ಅದು. ಕಿರುತೆರೆಯ ಟಾಪ್ ಎಪಿಸೋಡ್ ಗಳು ಅಂತ ನೋಡಿದ್ರೆ ‘ಮಾಲ್ಗುಡಿ ಡೇಸ್’ ಒನ್ ಆಫ್ ದ ಟಾಪ್ ಲೀಸ್ಟಲ್ಲಿ ಬರುತ್ತೆ. ಅದು ಒಂದು ಪ್ರೌಡ್ ಫೀಲಿಂಗ್ ಅಲ್ವಾ?


ಸಾಮಾನ್ಯವಾಗಿ ಯಾವುದಾದರೊಂದು ಪ್ರಾಜೆಕ್ಟ್ ಮಾಡುವಾಗ ಒಂದು, ಎರಡು ತಿಂಗಳಾಗುವಾಗ, “ಸಾಕು ಮನೆಗೆ ಹೋಗೋಣ” ಅಂತೆಲ್ಲ ಜನರ ಮನಸ್ಸಲ್ಲಿ ಯೋಚನೆ ಶುರುವಾಗ್ಬಿಡುತ್ತೆ. ಯಾಕಂದ್ರೆ ಊರು ಬಿಟ್ಟು ಬಂದಿರ್ತಾರೆ ಅಲ್ವ, ಅದರಲ್ಲಿ ಮಕ್ಕಳಿಗೆ ಜಾಸ್ತಿ. ಮಾಸ್ಟರ್ ಮಂಜುನಾಥ್ ಗೆ ಒಂಥರಾ ಡಿಪ್ರೆಶನ್ ಲೆವೆಲ್ ಆಗಿತ್ತು. ಅಷ್ಟು ದಿನಗಳಿಂದ ಆಗುಂಬೆಯಲ್ಲೇ ಇದ್ದು, ಪರ್ಫಾಮ್ ಮಾಡಕ್ಕೇ ಆಗ್ತಿರ್ಲಿಲ್ಲ. “ವಾಪಸ್ ಹೋಗ್ತೀನಿ, ಮನೆಗೆ ಹೋಗೋಣ, ಸಾಕು ಶೂಟಿಂಗ್” ಹೀಗೆಲ್ಲಾ ಹೇಳ್ತಿದ್ದ. ಅವನಿಗೆ ಚಿಯರ್ ಅಪ್ ಮಾಡ್ಬೇಕಲ್ಲ, ಅದಕ್ಕೆ ನಾವೆಲ್ಲ ಉಡುಪಿ ಬೀಚ್ ಗೆ ಮಕ್ಕಳನ್ನೆಲ್ಲಾ ಕರ್ಕೊಂಡು ಹೊದ್ವಿ. ಅಲ್ಲಿ ಐಸ್ ಕ್ರೀಮ್ ಎಲ್ಲಾ ಕೊಡ್ಸಿ, ಇಡೀ ದಿನ ಮಕ್ಕಳ ಜೊತೆಯಲ್ಲೇ ಆಟ ಆಡಿ, ಅವನನ್ನ ರಡಿ ಮಾಡಿದ್ವಿ.


ಉಡುಪಿಯಿಂದ ವಾಪಸ್ ಬರ್ಬೇಕಾದ್ರೆ ಆಗುಂಬೆ ಘಾಟಿಯಲ್ಲಿ ಒಂದು ಬಸ್ ಗೆ ನಮ್ಮ ಜೀಪ್ ಆಕ್ಸಿಡೆಂಟ್ ಆಗ್ಬಿಟ್ಟು, ಜೀಪ್ ಮಗುಚಿ ಬಿತ್ತು. ಎಲ್ಲರನ್ನೂ ಮಣಿಪಾಲ್ ಹಾಸ್ಪಿಟಲ್ಗೆ ಅಡ್ಮಿಟ್ ಮಾಡಿದ್ವಿ. ಒಬ್ಬಿಬ್ಬರ ಪ್ರಾಣ ಹೋಗುವಂತಹ ಆಕ್ಸಿಡೆಂಟ್ ಅದು. ಆದ್ರೆ ಆತರ ಏನೂ ಆಗ್ಲಿಲ್ಲ. ಮೈನರ್ ಏಟುಗಳು ಆಗಿತ್ತು ಅಷ್ಟೆ. ಇಮೀಡಿಯಟ್ ಆಗಿ ಮಣಿಪಾಲ್ ಹಾಸ್ಪಿಟಲ್ ಗೆ ಶಿಫ್ಟ್ ಮಾಡಿದ್ವಿ ಎಲ್ಲರನ್ನ. ಆ ಶಾಕ್ ಗೆ ಮಕ್ಕಳೆಲ್ಲ ಸರಿ ಹೋಗ್ಬಿಟ್ರು. ಅದಾದ್ಮೇಲೆ ಹದಿನೈದು, ಇಪ್ಪತ್ತು ದಿವ್ಸದ ಶೂಟಿಂಗ್ ಮುಗಿಸ್ಕೊಂಡು ಮನೆಗೆ ವಾಪಸ್ ಹೋದ್ವಿ. ಯಾರಿಗೂ ಪ್ರಾಣ ಹಾನಿ ಏನೂ ಆಗ್ಲಿಲ್ಲ.(ಮಾಲ್ಗುಡಿ ಡೇಸ್ ಮೇಕಿಂಗ್ ಕುರಿತಂತೆ “ಶಂಕರ್ ನಾಗ್ ಆತ್ಮೀಯ ಗೆಳೆಯ ಜಗದೀಶ್ ಮಲ್ನಾಡ್ ಅವರ ನೆನಪುಗಳು ಇಲ್ಲಿಗೆ ಮುಕ್ತಾಯವಾಯಿತು. ಮಾಸ್ಟರ್ ಮಂಜುನಾಥ್ ಕಂಡ ಶಂಕರ್ ನಾಗ್ ಮುಂದಿನ ಸಂಚಿಕೆಯಲ್ಲಿ )


18 views