“ಮಾಲ್ಗುಡಿ ಡೇಸ್ ಶೂಟಿಂಗ್ ಕಷ್ಟಗಳು”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 3

(ಮಾಲ್ಗುಡಿ ಡೇಸ್ ಪ್ರಾಜೆಕ್ಟಿನಲ್ಲಿ ಕೆಲಸ ಮಾಡಿದ್ದ “ಸಾವಂತ್” ಅವರ ನೆನಪುಗಳು)


ಸಾವಂತ್: ಶಂಕರ್ ಅವರ ಜೊತೆ ಎಲ್ಲಾದ್ರೂ ಹೋಗ್ತಾ ಇರ್ಬೇಕಾದ್ರೆ ಯಾರಾದ್ರೂ ಕಾರು ಓಡಿಸ್ತಾ ಇದ್ರೆ ಏನೇನೊ ಬರೀತಾ ಕೂತ್ಕೊಂಡ್ ಇರೋರು. ಕಾರ್ ಸೀಟಲ್ಲೇ ಏನೇನೋ ಮಾಡೋರು. ಆಮೇಲೆ ಮಾರುತಿ ವ್ಯಾನ್ ತಗೊಂಡ್ರು. ಅದಕ್ಕಿಂತ ಮುಂಚೆ ಮೆಟಡೋರ್ ಒಂದಿತ್ತು, ಅದರಲ್ಲಿ ನಾವೆಲ್ಲ ಕೂತ್ಕೊಂಡು ಹೋಗ್ತಿದ್ವಿ. ಚೆನ್ನಾಗಿತ್ತು ಅದು.


ಪರಮ್: ಶಂಕರ್ ದು ಟೈಪಿಂಗ್ ಮಿಶಿನೆಲ್ಲಾ ಇತ್ತು ಅದ್ರಲ್ಲಿ. ಬಟ್ ನಾನು ಕೇಳಿರೋ ಪ್ರಕಾರ ಅವ್ರು ಬೇರೆ ಎಲ್ಲಾ ಪ್ರಾಜೆಕ್ಟ್ ಗಳಿಗಿಂತ ಹೆಚ್ಚು ಸಮಯ ಸ್ಪೆಂಡ್ ಮಾಡಿರೋದು “ಮಾಲ್ಗುಡಿ ಡೇಸ್” ಗೆನೇ ಶೂಟಿಂಗಲ್ಲಿ ಕೂಡ ಅಷ್ಟೇನಾ?


ಸಾವಂತ್: ಅದೇ ಸರ್ ಅವ್ರು, ನಿದ್ರೆ ಮಾಡ್ತಿದ್ರೋ ಇಲ್ವೋ ಗೊತ್ತಿಲ್ಲ. ಕೆಲವೊಂದ್ಸಲ ಈಟ್ರಾವ್ಲಿಂಗ್ ಟೈಮಲ್ಲಿ ನ್ಯಾಪ್ ತಗೊಂಡ್ರೆ, ಅಷ್ಟರಲ್ಲೇ ರೀಚಾರ್ಜ್ ಆಗ್ತಿದ್ದರೇನೋ ಗೊತ್ತಿಲ್ಲ. ಅವ್ರು ಹೆಂಗೆ ಅವ್ರನ್ನ ಚಾರ್ಜ್ ಮಾಡ್ತಿದ್ರೇನೋ ಗೊತ್ತಿಲ್ಲ. ಅವ್ರು ನ್ಯೂಸ್ ಕೂಡ ಕೂತ್ಕೊಂಡು ಸುಮ್ಮನೆ ಓದೋರಲ್ಲ. ಟಾಯಿಲೇಟಲ್ಲಿ ಕೂತ್ಕೊಂಡು ಓದುತ್ತಾ ಇದ್ದರು. ಟೈಮ್ ವೇಸ್ಟ್ ಅನ್ನೊದೇ ಇಲ್ಲರೀ.
ಪರಮ್: ಸಾವಂತ್ ಅವ್ರು ಪರ್ಸನಲ್ ಆಗಿ ಶಂಕರ್ ಇಂದ ಕಲ್ತದ್ದು ಏನು ಸರ್?


ಸಾವಂತ್: ನಾವು ಶಿಸ್ತು ಕಲ್ತದ್ದು ಆಮೇಲೆ ನಮ್ಮ ಕೆಲ್ಸಕ್ಕೆ ನ್ಯಾಯ ಒದಗಿಸಿದ್ದು. ನಮಗೆ ಒಂದು ಕೆಲ್ಸ ಆಗ್ಬೇಕು ಅಂದ್ರೆ ಅದು ಆಗ್ಬೇಕು ಅಷ್ಟೇ. ಒಂದೆರಡು ಇನ್ಸಿಡೆಂಟ್ ಹೇಳ್ತೀನಿ ನಿಮಗೆ, ಒಂದ್ಸಲ ಅಮ್ಮ ಬಂದಿತ್ತು ಅವ್ರಿಗೆ. ಅಮ್ಮ ಅಂದ್ರೆ ಮೈಯಯಲ್ಲೆಲ್ಲಾ ಗುಳ್ಳೆ ಬರುತ್ತಲ್ವಾ? ಕಾವ್ಯ ಚಿಕ್ಕವಳಾಗಿದ್ಳು ಅವಾಗ ಅವಳಿಗೂ ಬಂದಿತ್ತು ಅದು ಸ್ಪ್ರೆಡ್ ಆಗುತ್ತೆ. ಶಂಕರ್ ಅವ್ರಿಗೂ ಸ್ವಲ್ಪ ಸ್ವಲ್ಪ ಬಂದಿತ್ತು. ಮೂರು ದಿನ ಡಾಕ್ಟರ್ ರೆಸ್ಟ್ ತೆಗೊಳಕ್ಕೆ ಹೇಳಿದ್ರು, ಬೇರೆಯವರಿಗೆ ಸ್ಪ್ರೆಡ್ ಆಗೊದು ಬೇಡಾಂತ ಪಿಂಟಿಯವರಿಗೆ ಮತ್ತೆ ರಮೇಶ್ ಭಟ್ರಿಗೆ ಶೂಟ್ ನೋಡ್ಕೊಳಿ ಅಂತ ಹೇಳಿ ಶಂಕರ್ ಅವ್ರು ರೆಸ್ಟಲ್ಲಿದ್ರು.


ಪರಮ್: ಶಂಕರ್ ಫ್ಯಾಮಿಲಿ ಎಲ್ಲರೂ ಅಲ್ಲೇ ಇದ್ರಾ?


ಸಾವಂತ್: ಅವ್ರು ಅವಾಗವಾಗ ಬಂದು ಹೋಗ್ತಾ ಇದ್ರು ಅಲ್ಲಿಗೆ. ಕಾವ್ಯ ಚಿಕ್ಕವಳಲ್ಲ ಪಾಪ, ನಾನೊಂದು ಮೂರು ದಿವ್ಸ ಆದ್ಮೇಲೆ ಸರ್ ನ ನೋಡ್ಬೇಕು ಅಂತ ಹೋದೆ. ಶೂಟಿಂಗ್ 8 ಗಂಟೆಗೆ ಶುರುವಾಗೋದು, ನಾನೂ ಅದಕ್ಕೆ ಮುಂಚೆ ಹೋಗಿದ್ದೆ. ಆಗ “ಸಾವಂತ್ ನೀನು ಏನು ಯೋಚ್ನೆ ಮಾಡ್ಬೇಡ ಎಲ್ಲಾ ಸರಿಯಾಗುತ್ತೆ”ಅಂದ್ರು. “ಏನು ಸಾರ್” ಅಂದೆ. ಅದಕ್ಕೆ “ ಕಾಸ್ಟ್ಯೂಮರ್ ಅಲ್ಲೇ ಸ್ಪಾಟಲ್ಲೇ ಬಂದ್ಬಿಡ್ತಾನೆ”ಅಂದ್ರು. ಅದೇನಂದ್ರೆ, ಒಬ್ಬ ಟೈಲರ್ ಇದ್ದ ಅವ್ನಿಗೆ “ನೀನು ಸೆಟ್ ಅಲ್ಲೇ ಬಂದ್ಬಿಡು ಯಾಕಂದ್ರೆ, ಏನಾದ್ರೂ ಪ್ರಾಬ್ಲಮ್ ಇದ್ರೆ ನಾವು ಅಲ್ಲಿಂದ ತಂದ್ಕೊಡ್ಬೇಕು. ನೀನು ಅಲ್ಲೇ ಇದ್ರೆ ಕೂಡಲೇ ರೆಡಿ ಮಾಡ್ಬೋದು”ಅಂದಿದ್ದೆ. ಅದಕ್ಕೆ ಅವ್ನು “ಇಲ್ಲ ಸಾರ್ ನನಗೆ ಬರಕ್ಕಾಗಲ್ಲ” ಅಂತ ಹೇಳಿದ್ದ, ಅದನ್ನ ನಾನು ನಮ್ಮ ಪ್ರೊಡಕ್ಷನ್ ಮ್ಯಾನೇಜರ್ ‘ಜಗ್ಗನ’ ಹತ್ರ ಹೇಳಿದ್ದೆ.


ಪರಮ್: ಜಗ್ಗ ಪ್ರೊಡಕ್ಷನ್ ಮ್ಯಾನೇಜರಾ?


ಸಾವಂತ್: ಹೌದು ಜಗ್ಗ ಒಬ್ಬ ಒಳ್ಲೆ ಪ್ರೊಡಕ್ಷನ್ ಮ್ಯಾನೇಜರ್. ಅಂತಾ ಮ್ಯಾನೇಜರ್ ನ ನಾನು ಇದುವರೆಗೂ ನೋಡಿಲ್ಲ. ಅವರ ಬಗ್ಗೆ ಆಮೇಲೆ ಹೇಳ್ತೀನಿ. ಮೊದ್ಲು ಇದನ್ನ ಹೇಳಿ ಮುಗಿಸ್ತೀನಿ. “ಸಾರ್ ಈ ಮಾತು ಹೇಳಿದ್ರು”ಅಂತ ನಾನು ಯೊಚಿಸಿ, ನಾನು ಹೇಳ್ದೆ “ಇಲ್ಲ ಸರ್ ನಾನು ಅದಕ್ಕೆ ಬಂದಿದ್ದಲ್ಲ, ನಿಮ್ಮ ಆರೋಗ್ಯ ವಿಚಾರಿಸೊಕ್ಕೆ ಬಂದೆ” ಅದಕ್ಕೆ “ಡೋಂಟ್ ವರಿ” ಅಂದ್ರು. ನಾನು ಸರ್ ಏನಪ್ಪಾ ಹೀಗಂದ್ರು ಅಂತ ಯೋಚ್ನೆ ಮಾಡಿ, ಇನ್ನೊಬ್ಬರ ಹತ್ರ ಅದನ್ನ ಡಿಸ್ಕಸ್ ಮಾಡ್ದೆ. “ನಿನಗೆ ಅದರ ಕಥೆ ಗೊತ್ತಿಲ್ಲ. ಮೂರು ರೌಂಡ್ ಹೊಡ್ದಿದ್ದಾರೆ ಶಂಕರ ಸರ್, ಅಲ್ಲಿ ಸೆಟ್ಟಲ್ಲಿ ಏನೇನು ಕೆಲ್ಸ ಮಾಡ್ತಿದ್ದಾರೆ ಅಂತ ನೋಡ್ಕೊಂಡು, ಟೈಲರ್ ಹತ್ರ ಹೋಗಿ “ನೀನು, ನಿನ್ನ ಮೆಷಿನ್ ನಾಳೆಯಿಂದ ಸೆಟ್ ಗೇ ಬರ್ಬೇಕು” ಅಂತ ಹೇಳಿದ್ದಾರೆ. ಅವ್ರು ಸುಮ್ಮನೆ ಕೂತ್ಕೊತಾ ಇರ್ಲಿಲ್ಲ, ಅವ್ರು ಅಮ್ಮ ಬಂದೂ ಸುಮ್ಮನೆ ಕೂತ್ಕೊಂಡಿಲ್ಲ. ಏನಾದ್ರು ಕೆಲ್ಸ ಮಾಡ್ತನೇ ಇರ್ತಿದ್ರು.


ಪರಮ್: ಹೀಗೆ ಒಂಥರಾ ದೂರದ ಕಣ್ಣಲ್ಲಿ ನೋಡೊದು?


ಸಾವಂತ್: ಇನ್ನೊಂದು ಹೇಳ್ತೀನಿ ಜಗ್ಗನ ಬಗ್ಗೆ. ಆ ಜಾತ್ರೆಗೆ ಆನೆ ಬರ್ಬೇಕಾಗಿತ್ತು. ಯಾಕಂದ್ರೆ ಆರೋಡ್ ರೋಲರ್ ನಎಳೆಯ ಬೇಕಾಗಿತ್ತು. ಬಿಕಾಸ್ ಎಲ್ಲರೂ ಸೇರ್ಕೊಂಡು ಎಳೆದ್ರೂ ಬರ್ತಿರ್ಲಿಲ್ಲ ಅದು. ‘ಇಂಜಿನ್ ಟ್ರಬಲ್’ ಅಂತ ಎಪಿಸೋಡ್ ಶೂಟ್ ಆಗ್ತಿತ್ತು. ಅವ್ರು ಒಂದು ಅರ್ಧ ಗಂಟೆಗೆ ಆನೆ ಬೇಕು. ಕೊಟೇಶನ್ ಕೇಳು ಅಂತ ಹೇಳಿದ್ರು. ಯಾರಿಗೆ ಫೋನ್ ಮಾಡಿದ್ರೋ, ಏನು ಮಾಡಿದ್ರೋ ಗೊತ್ತಿಲ್ಲ, ಅದು ಆಗಿದ್ದು ಸಾಯಂಕಾಲ, ಮಾರನೇ ದಿನ ಐದು ಗಂಟೆಗೆ ಆನೆ ರೆಡಿ ಇತ್ತು.


ಪರಮ್: ಅಂದ್ರೆ ಹಿ ವಾಸ್ ಸೋ ಎಫಿಶಿಯಂಟ್? ‘ಜಗದೀಶ್ ಮಲ್ನಾಡ್’


ಸಾವಂತ್: ಹೌದು, ನಾನು ಹೇಳಿದ್ನಲ್ಲ, ಅಲ್ಲಿ ಎಸಿಸ್ಟಂಟ್ ಡೈರಕ್ಟರ್ ಗಳಾಗಿದ್ದವ್ರಿಗೆಲ್ಲಾ ಒಂದು ಡೈರೆಕ್ಟರ್ ಕ್ಯಪ್ಯಾಸಿಟಿನೇ ಇತ್ತು. ಕಾಶಿ, ಭಟ್ರು ಎಲ್ಲಾರಿಗೂ.


ಪರಮ್: ಮೂರು ಘಟನೆ ಹೇಳ್ತಿನಿ ಅಂದ್ರಿ ಒಂದೇ ಹೇಳಿದ್ದು ನೀವು….


ಸಾವಂತ್: ಒಂದು ಆಯ್ತು. ಇನ್ನೊಂದು, ಅರಸಾಳುನಲ್ಲಿ ಒಂದು ಶೂಟ್ ನಡಿತಾ ಇತ್ತು. ಒಂದು ಸ್ವಾತಂತ್ರ ಹೋರಾಟಗಾರರ ಮೀಟಿಂಗ್ ಇರುತ್ತೆ, ಅದ್ರಲ್ಲಿ ಸುಮಾರು ಆರು ಏಳು ಸಾವಿರ ಜನ ಸೇರಿದಾರೆ. ಎಲ್ಲ ವೈಟ್ ಆಂಡ್ ವೈಟ್ ಖಾದಿ ಹಾಕಿದಾರೆ. ಅಲ್ಲಿ ಒಂದು ಬ್ರಿಡ್ಜ್ ಇದೆ ಬ್ರಿಡ್ಜ್ ಕೆಳಗೆ ಒಂದು ದೇವಸ್ಥಾನ, ಒಂದು ನದಿ ಇದೆ. ಮೇಲ್ಗಡೆ ಬ್ರಿಡ್ಜಲ್ಲಿ ಒಂದು ದೊಡ್ಡ ಟ್ರಾಲಿ ಒಂದು ಇನ್ನೂರು ಮುನ್ನೂರು ಫೀಟ್ ಹಾಕಿದಾರೆ, ಅಲ್ಲಿ ಶೂಟಿಂಗ್ ಶುರುವಾಯ್ತು, ನಾನು ಕೂಡ ಆಕ್ಟ್ ಮಾಡ್ತಿದ್ದೆ ಅದ್ರಲ್ಲಿ. ಇದ್ದಕ್ಕಿದ್ದಂತೆ ಜೇನು ನೊಣಗಳು ಅಟ್ಯಾಕ್ ಮಾಡ್ತು, ಎಲ್ಲಿಂದ ಬಂತು ಗೊತ್ತಿಲ್ಲ. ಮೋಸ್ಟ್ಲಿ ಅಲ್ಲಿ ಜನರೇಟರ್ ಇಟ್ಟಲ್ಲಿ ಮೇಲೆನೇ ಜೇನು ಗೂಡು ಇತ್ತು. ಜೇನು ನೊಣ ಅಟ್ಯಾಕ್ ಮಾಡಿದ ತಕ್ಷಣ ಎಲ್ಲಾ ಜನ ಚೆಲ್ಲಾಪಿಲ್ಲಿಯಾಗಿ ಓಡಕ್ಕೆ ಶುರು ಮಾಡಿದ್ರು. ನಾವು ಶಂಕರ್ ಸರ್ ಗೆ ಏನಾದ್ರೂ ಹೆಚ್ಚುಕಮ್ಮಿ ಆಗತ್ತೆ ಅಂತ ಅವ್ರನ್ನ ನೋಡಕ್ಕೆ ಹೋದ್ವಿ. ಅವ್ರು ಅಲ್ಲಿದ್ದ ಕೋಟ್ ತಗೊಂಡು ಮೈಯೆಲ್ಲಾ ಮುಚ್ಕೊಂಡು ಕೂತಿದ್ರು. ನಾವು ಇದ್ದ ಬಟ್ಟೆಗಳನ್ನೆಲ್ಲಾ ತಗೊಂಡು ಅವ್ರ ಮೇಲೆ ಹಾಕಿ ಅವ್ರನ್ನ ಕವರ್ ಮಾಡಿ ಹಂಗೆ ಒಳಗೆ ಕರ್ಕೊಂಡ್ಹೋಗಿ ಬಿಟ್ವಿ. ನಾನು ಮತ್ತೆ ಸೋಮು “ಇನ್ನಿಲ್ಲಿರೋದು ಪ್ರಾಬ್ಲಮ್ ಆಗುತ್ತೆ, ನಾವು ಹೋಗಿ ಕಾರ್ ಸೇರ್ಕೊಬಿಡೋದು ಒಳ್ಳೆಯದು” ಅಂತ ನಿಧಾನಕ್ಕೆ ಹೋಗಿ ಕಾರಲ್ಲಿ ಕೂತಿದ್ವಿ. ಅಲ್ಲಿ ನರಸಿಂಹ ಅಂತ ಮೇಕಪ್ ಮ್ಯಾನ್ ಹೇಳ್ದ “ನಿಮಗೆಲ್ಲಾ ತಲೆ ಇಲ್ಲ, ಹೀಗೆ ಬರೋದಾ? ನಾನು ಬರ್ತೀನಿ ನೋಡಿ, ನನಿಗೆ ಯಾವ ಜೇನು ಕೂಡ ಕಚ್ಚಲ್ಲ” ಅಂತ ಹೇಳಿ ನಾವು “ಬೇಡ ನರಸಿಂಹ ಕಚ್ಚುತ್ತೆ ಜೇನು ನೊಣ ಅಂದ್ರೆ ನಮ್ಮ ಮಾತೇ ಕೇಳಿಲ್ಲ ಆವ್ರು. ನಾವು ಕಾರ್ ವಿಂಡೋದಿಂದ ನೋಡ್ತಿದ್ವಿ ಆಯಪ್ಪ ಕಾರಿಂದ ಸ್ವಲ್ಪ ಮುಂದೆ ಹೋದ್ರು ಕೈ ಯಿಂದ ಮುಖದ ಹತ್ತಿರ ಇದ್ದ ಜೇನು ನೊಣಗಳನ್ನು ಓಡಿಸುತ್ತಾ ಮುಖವನ್ನು ಕೈಯಿಂದ ಮುಚ್ಕೊಂಡು ಅಲ್ಲೇ ನೆಲದಲ್ಲಿ ಕೂತ್ಕೊಬಿಟ್ರು. ಸುಮಾರು ಅರವತೈದರಷ್ಟು ಜೇನು ನೊಣ ಕಚ್ಚಿತ್ತು ರೀ ಅವ್ರಿಗೆ. ಅವ್ರನ್ನ ಕರ್ಕೊಂಡು ಹೋಗಿ ಹಾಸ್ಪಿಟಲಲ್ಲಿ ಅಡ್ಮಿಟ್ ಮಾಡಿದ್ವಿ. ಆಟೈಮಲ್ಲಿ ಜೇನು ಹೆಂಗೆ ಅಟ್ಯಾಕ್ ಮಾಡಿತ್ತು ಅಂದ್ರೆ ಜಟಕಾ ಗಾಡಿಯ ಕುದುರೆ ಬಿದ್ದು ಹೊರಳಾಡ್ತಾ ಇತ್ತಂತೆ. ಕುದುರೆದು ಲಗಾಮು ಕಟ್ ಮಾಡ್ದಾಗ ಕುದುರೆ ಓಡಿ ಹೋಗಿ. ಎರಡು ದಿನಗಳವರೆಗೂ ಸಿಕ್ಕಿರ್ಲಿಲ್ಲ.


ಪರಮ್: ತುಂಬಾ ಚಾಲೆಂಜಿಂಗಾಗಿ ಇತ್ತು. ಇವತ್ತಿನ ತರ ಮಾರ್ಡನ್ ಅಕ್ಯುಪ್ಮೆಂಟ್ ಏನೂ ಇರ್ಲಿಲ್ಲ ಅಲ್ವಾ?


ಸಾವಂತ್: ಅಯ್ಯೋ ಏನಂದ್ರೆ ಅವಾಗ ಕ್ರೇನ್ ಏನೂ ಇರ್ತಿರ್ಲಿಲ್ಲ ಅಲ್ವಾ. ಅವಾಗ ಎತ್ತಿನ ಗಾಡಿ ಮುಂದೆ ನೊಗ ಇರುತ್ತೆ ನೋಡಿ, ಅಲ್ಲಿಗೆ ಕಟ್ಬಿಡೋದು ಕ್ಯಾಮೆರಾನ. ಆಮೇಲೆ ಮೂರು ನಾಲ್ಕು ಜನ ಎತ್ತಿನಗಾಡಿಯನ್ನ ಹಿಂದೆಯಿಂದ ಕೆಳಗಡೆಗೆ ಪುಶ್ ಮಾಡಿದ್ರೆ, ಕ್ಯಾಮರಾ ಮೆಲ್ಲಗೆ ಮೇಲಕ್ಕೆ ಏಳ್ತಾ ಇತ್ತು. ಅದೇ ಕ್ರೇನ್.


ಮತ್ತೆ ಇನ್ನೊಂದು ವಿಷಯ “ಸ್ವಾಮಿ ಆಂಡ್ ಫ್ರೆಂಡ್ಸ್” ಅಲ್ಲಿ ಎರಡು ಪೋಲ್ ಕಟ್ಕೊಂಡು, ಜೋಕಾಲಿ ತರ ಮಾಡಿ ಮೇಲೆ ಪುಲ್ಲಿ ಕಟ್ಟಿ, ಸ್ವಾಮಿಯಿಂದ ಶಾಟ್ ಸ್ಟಾರ್ಟ್ ಆದ್ರೆ, ಅವ್ನು ನಡ್ಕೊಂಡು ಸಕೆಂಡ್ ಫ್ಲೋರ್ ಗೆ ಹೋಗ್ತಾನೆ. ಕ್ಯಾಮರಾ ಅವನನ್ನೇ ಫಾಲೋ ಮಾಡೊದು. ಜಿಮ್ಮಿಜಿಪ್ ಇವಾಗೆಲ್ಲಾ ಬರುತ್ತೆ ಅಲ್ವಾ? ಹಾಗೆ. ನಾನು ಮೊದ್ಲೇ ಹೇಳಿದ್ದೆ, ಶಂಕರ್ ಅವ್ರು ಏನಾದ್ರೂ ಕೆಲ್ಸ ವಹಿಸಿದ್ರೆ ಫುಲ್ ನಂಬಿ ಬಿಡೋರು.


ಕ್ಯಾಮರಾದಲ್ಲೇ ಫೇಡಿನ್ ಫೇಡೌಟ್ ಮಾಡ್ತಾ ಇದ್ವಿ, ಒಂದು ಕಾಸ್ಟ್ಯೂಮಿನಿಂದ ಇನ್ನೊಂದು ಕಾಸ್ಟ್ಯೂಮಿಗೆ ಹೋಗ್ಬೇಕಾಗಿತ್ತು. ಆಶಾಟ್ ತಗೊತಾ ಇದ್ವಿ ಆಗ ನಾನು ಸರ್ ಗೆ ಹೇಳ್ದೆ “ಸರ್ ಈ ಕಾಸ್ಟ್ಯೂಮ್ ಬೇರೆ ಆಗ್ಬೇಕಾಗಿತ್ತು. ಯಾಕಂದ್ರೆ, ಇದು ಬೇರೆ ಸೀನ್ ಅಲ್ವ ಇದಕ್ಕೆ ಕಾಸ್ಟ್ಯೂಮ್ ಬೇರೆ ಆಗ್ಬೇಕು. ಬೇರೆ ಸೀನ್ ಕಾಸ್ಟ್ಯೂಮ್ ಕೊಟ್ಟಿದಾರೆ ಅಂದೆ.”ಇಮೀಡಿಯಟ್ ಚೇಂಜ್ ಮಾಡ್ಸಿದ್ರು. ಯಾರೋ ಹೇಳಿದ್ರು “ಇಲ್ಲ ಕರಕ್ಟ್ ಇದೆ”ಅಂತ. ಆಗ ”ಸಾವಂತ್ ಹೇಳಿದ್ರು ತಾನೆ? ಯು ಆರ್ ಶೋರ್ ಅಬೌಟ್ ದಟ್ ಸಾವಂತ್?” ಅಂದ್ರು. ನಾನು ‘ಹಾ ಸರ್” ಅಂದೆ. ಅದನ್ನ ತುಂಬಾ ಅಪ್ರಿಸಿಯೇಟ್ ಮಾಡಿದ್ರು.


ನಾವು ಸ್ಪಾಟ್ ಇಂಪ್ರಾಯಿಸೇಶನ್ ಏನಾದ್ರು ಮಾಡಿದ್ರೆ, ಸರ್ ಎಷ್ಟು ಅಪ್ರಿಸಿಯೇಟ್ ಮಾಡ್ತಿದ್ರು ಗೊತ್ತಾ?. ಬೇರೆಯವರಿಗೆ ಹೇಳ್ತಿದ್ರು, “ಅಣ್ಣಾ ನೋಡ್ದಾ? ಎಷ್ಟು ಬೇಗ ಮಾಡ್ದ…”ಆ ತರ ಅಪ್ರಿಸಿಯೇಟ್ ಮಾಡ್ತಿದ್ರು.

ಪರಮ್: ಅಣ್ಣ ತಮ್ಮನ ಮಾತುಕತೆ ಒಡನಾಟ ಹೇಗಿತ್ತು ಸರ್? ಶಂಕರ್ ಅವ್ರು ಬಹಳ ಕಾಳಜಿ ಅಣ್ಣನ ಬಗ್ಗೆ ಅಂತ ತುಂಬಾ ಕೇಳಿದ್ದೀನಿ…


ಸಾವಂತ್: ಚೆನ್ನಾಗೇ ಇತ್ತು. ನಾವು ಆ ವಿಷಯದಲ್ಲೇನೂ ಜಾಸ್ತಿ ಇನ್ವಾಲ್ವ್ ಆಗ್ತಿರ್ಲಿಲ್ಲ. ಅಂತದ್ದೇನಾದ್ರು ಇದ್ರೆ ಜಗ್ಗಣ್ಣ, ಕಾಶಿ, ಭಟ್ರು ನೋಡ್ಕೋತಿದ್ರು. ರಮೇಶ್ ಭಟ್ರು ಅಂತೂ ಆಪತ್ಭಾಂದವ. ನಮಿಗೆ ಏನಾದ್ರೂ, ಏನಾದ್ರು ಹೆಚ್ಚು ಕಮ್ಮಿ ಆದ್ರೆ, ನಾವು “ಸರ್ ಹಿಂಗೆ ಪ್ರಾಬ್ಲಮ್ ಆಗಿದೆ” ಅಂತ ಹೇಳಿದ್ರೆ, ಅವ್ರು “ಸರಿ ಮಾಡೊಣಮ್ಮ,”ಅಂತ ಹೇಳೋರು. ನಿಜವಾಗ್ಲು ರೀ ಮಾಲ್ಗುಡಿ ಡೇಸ್ ಟೀಮ್ ಇದ್ಯಲ್ಲ ಫೆಂಟಾಸ್ಟಿಕ್ ಟೀಮ್ ಅದು.


ಪರಮ್: ಆಮೇಲೆ ಶಂಕರ್ ತೀರ್ಕೊಂಡ್ರು, ಅವಾಗ್ಲೂ ಕೂಡ ನೀವು ಇನ್ವಾಲ್ವ್ ಆಗಿದ್ರಿ. ಅದ್ರ ಬಗ್ಗೆ ಹೇಳಿ ಸರ್….?


ಸಾವಂತ್: ಇಲ್ಲಿ ಕಂಟ್ರಿ ಕ್ಲಬ್ ಓಪನಿಂಗ್ ಆದ್ಮೇಲೆ, ನಾವೆಲ್ಲಾ ಹೋಗಿದ್ವಿ ಆಊರ ಹೆಸರು ಮರೆತೋಯ್ತು. ಜೋಕುಮಾರ ಸ್ವಾಮಿ ಲೊಕೇಶನ್ ಗೆ ಹೋಗಿದ್ವಿ. ಅಲ್ಲಿ ಗಿರೀಶ್ ಕಾರ್ನಾಡ್ ಅವ್ರೂ ಇದ್ರು, ಬೆಳಗಾವಿ ಡಿಸ್ಟ್ರಿಕ್ಟ್, ಏನೊ ವಾಡಿ ಅಂತ ಆಊರಿನ ಹೆಸರು. ಎಲ್ಲಾ ಲೊಕೇಶನ್ ನೋಡ್ಕೊಂಡು ಅಲ್ಲಿಗೆ ಪ್ರಾಪರ್ಟೀಸ್ ಎಲ್ಲಾ ತಗೊಂಡು ಲೊಕೇಶನ್ ಗೆ ಹೋಗಿದ್ವಿ. ಶಂಕರ್ ಸರ್ ಬರ್ಬೇಕಾಗಿತ್ತು. ಎಲ್ಲರೂ ಕಾಸ್ಟ್ಯೂಮೆಲ್ಲ ಹಾಕೊಂಡು ರೆಡಿಯಾಗ್ತಾ ಇದ್ರು. ಇನ್ನೊಬ್ಬರು ನಮ್ ಆರ್ಟ್ ಡೈರೆಕ್ಟರ್ ಇದ್ರು ಚಿನ್ನಿ ಅಂತ ಅವ್ರು ಮಹಾರಾಷ್ಟ್ರದಿಂದ ಬಂದಿದ್ರು. ಚೈತನ್ಯ ಏನೋ ಇತ್ತು ಅವ್ರ ಹೆಸರು,


ಪಿಂಟಿ ಅವ್ರು ಒಬ್ಬ ಆರ್ಟಿಸ್ಟ್ ನ ಕರ್ಕೊಂಡು ಬಂದು “ಸಾವಂತ್, ಇವ್ರಿಗೆ ಏನೂ ಗೊತ್ತಾಗ್ತಾ ಇಲ್ಲ. ಹೇರ್ ಸ್ಟೈಲೂ ಗೊತ್ತಾಗ್ತಾ ಇಲ್ಲ. ಸ್ವಲ್ಪ ನೋಡ್ರೀ” ಅಂದ್ರು. ನಾನು ಅವನನ್ನ ಕರ್ಕೊಂಡು ಹೋಗಿ ಬಾರ್ಬರ್ ಶಾಪಲ್ಲಿ, ಈತರ ಕಟ್ ಮಾಡ್ರೀ ಅಂತೇಳ್ದೆ, ಮಾಡಿಸ್ತಾ ಇದ್ದೆ. ಅವನ ಹೆಸರು ಯೂನೂಸ್ ಬುಕಾರಿ ಅಂತ. ಬಸ್ಯನ ಕ್ಯಾರೆಕ್ಟರ್ ಮಾಡ್ತಿದ್ದ. ಅವ್ನು ಈಗ ಇಲ್ಲಿದ್ದಾನ ಬಾಂಬೇನಲ್ಲಿದ್ದಾನ ಗೊತ್ತಿಲ್ಲ. “ಸರ್ ಸ್ವಲ್ಪ ಕತೆ ಹೇಳಿ” ಅಂದ. ನಾನು ಅವ್ನ ಕ್ಯಾರೆಕ್ಟರ್ ಬಗ್ಗೆ ಹೇಳ್ತಾ ಕೂತಿದ್ದೆ, ಆಗ ಒಬ್ಬ ವ್ಯಕ್ತಿ ಅಲ್ಲಿಗೆ ಬಂದು “ನಮ್ಮೂರಲ್ಲಿ ಶೂಟಿಂಗ್ ಆಗಲ್ಲಂತಲ್ಲಾ ಏನ್ ಮಾಡೊದು?” ಅಂದ. ನಾನು “ಯಾಕ್ರೀ ಶೂಟಿಂಗ್ ಆಗಲ್ಲ? 9 ಗಂಟೆಗೆ ಮುಹೂರ್ತ ಇದೆ ಇವತ್ತು. ಶಂಕರ್ ಸರ್ ಬರ್ತಾ ಇದ್ದಾರೆ” ಅಂದೆ. “ಇಲ್ಲ ಸರ್ ಏನೋ ಆಕ್ಸಿಡೆಂಟ್ ಆಗಿದ್ಯಂತೆ” ಅಂದ್ರು. “ಯಾರ ಆಕ್ಸಿಡೆಂಟು”? “ಇಲ್ಲ ಶಂಕರ್ ಸರ್ ದು” ಅಂದ್ರು. “ಅಯ್ಯೋ ಆಕ್ಸಿಡೆಂಟಾದ್ರೂ ಬರ್ತಾರೆ ನೋಡಿ ಅವ್ರು ಬಿದ್ದು ಎದ್ದು ಬರ್ತಾರೆ” ಅಂದೆ ನಾನು. “ಇಲ್ಲ ಸರ್ ಮೇಜರ್ ಆಕ್ಸಿಡೆಂಟ್ ಆಗಿದ್ಯಂತೆ” ಅಂದ್ರು. “ಹೌದಾ? ಹಾಗಾದ್ರೆ ಬೇಗ ನಡಿ”ಅಂತ ಸೆಟ್ ಗೆ ಹೋದ್ರೆ, ಅಲ್ಲೆಲ್ಲರೂ ಕಾರು, ಬೇರೆ ಸಿಕ್ಕ ಸಿಕ್ಕ ವಾಹನದಲ್ಲೆಲ್ಲಾ ಹತ್ತಿ ಹೋಗ್ತಾ ಇದ್ರು. ನಾನು ನೋಡಿ “ಏನಾಯ್ತು?” ಅಂದೆ. “ಇಲ್ಲ!” ಅಂತೇಳಿ ಥಂಬ್ಸ್ ಡೌನ್ ತೋರ್ಸಿದ್ರು. ನನಗೆ ಎಷ್ಟು ಕೋಪ ಬಂತೂ ಅಂದ್ರೆ, “ಹೊಡ್ದು ಬಿಡ್ತೀನಿ ನೋಡು ನಿಂಗೆ” ಅಂದೆ. “ಇಲ್ಲ ನಿಜ ಸಾವಂತ್” ಅಂದ್ರು. ಆಮೇಲೆ ಕಾರ್ನಾಡ್ ಸರ್ ನ ಹೋಗಿ ಕೇಳ್ದೆ, “ಏನ್ಸಾರ್ ಆಯ್ತು?”“ಏನೋ ಮೇಜರ್ ಆಕ್ಸಿಡೆಂಟ್ ಆಗಿದ್ಯಂತೆ” ಅವ್ರು ಅವರ ಮಿಸಸ್ ಗೆ ಫೋನ್ ಮಾಡಿ ಕನ್ಫರ್ಮ್ ಮಾಡ್ಕೊಂಡಿದ್ರು. ಅವಾಗ ಮೊಬೈಲ್ ಇರ್ಲಿಲ್ಲ ಅಲ್ವ.


ಆವತ್ತು ಪೆಟ್ರೋಲ್ ಸ್ಟ್ರೈಕ್ ಬೇರೆ ಇತ್ತು. ಒಂದು ಕಾರಲ್ಲಿ ಪೆಟ್ರೋಲೆಲ್ಲ ಹಾಕಿ ಮೇಜರ್ ಆರ್ಟಿಸ್ಟ್ ಗಳನ್ನೆಲ್ಲ ಕಳ್ಸಿದ್ವಿ. ನಾವೆಲ್ಲ ಡೀಸಲ್ ವ್ಯಾನಲ್ಲಿ ಹೋದ್ವಿ. ಅವ್ರು ಹನ್ನೊಂದು ಗಂಟೆಗೆ ಹೊರಟ್ರು. ನಾವು ನೈಟೆಲ್ಲಾ ಟ್ರಾವಲ್ ಮಾಡಿದ್ವಿ. ನಾವು ಹೋಗ್ತಾ ಕಾರ್ ಆಕ್ಸಿಡೆಂಟ್ ಆಗಿದ್ದ ಜಾಗನ ನೋಡ್ಕೊಂಡು ಹೋದ್ವಿ. ಅಷ್ಟು ದೊಡ್ಡ 118 ಕಾರು ಚಿಕ್ಕ ಮುದ್ದೆ ಆಗಿತ್ತು. ಲಿಂಗಾನಂದ್ ಚಪ್ಲಿ ಎಲ್ಲಾ ಬಿದ್ದಿತ್ತು ಒಳಗಡೆ, ಅದನ್ನೆಲ್ಲಾ ನೋಡ್ಕೊಂಡು ನಾವು ಸಂಕೇತ್ ಗೆ ಬಂದ್ವಿ. ಅಷ್ಟೊತ್ತಿಗೆ ಕ್ರಿಮೇಶನ್ ಆಗೋಗಿತ್ತು. ಲೇಟಾಗಿ ಬಂದಿದ್ವಿ ನಾವು. ಯಾರ್ಯಾರ ಹತ್ರ ಎಲ್ಲಾ ಪೆಟ್ರೋಲ್ ಕೇಳ್ಕೊಂಡು ಬಂದಿದ್ದು.

ಪರಮ್: ಅಷ್ಟು…… ಅವ್ರಿಗೆ ಅವಾಗ ಏಜ್?


ಸಾವಂತ್: ನನಿಗೆ ಅವಾಗ 26. ಶಂಕರ್ ಸರ್ ಗೆ 37 ಇರ್ಬೇಕು ಅವಾಗ. ಸರ್ ಅವ್ರು ಹೇಗೆ ಅಂದ್ರೆ, ಜೋಕುಮಾರ ಸ್ವಾಮಿ ಸಮಯದಲ್ಲಿ, ಐದು ಲಕ್ಷ ರುಪಾಯಿ ಚೆಕ್ ಕೊಟ್ಟು “ಸಾವಂತ್ ನೀವು ಇದನ್ನ ಪ್ರಸಾದ್ ಲ್ಯಾಬ್ ಅವ್ರಿಗೆ ತಲುಪಿಸ್ಬಿಡಿ”ಅಂದ್ರು. “ಹೂ ಸರ್”ಅಂದೆ. ಅವಾಗ ಯಾರೋ ಬಂದ್ರು, ಏನೋ ಮಾತಾಡ್ಬೇಕಾದ್ರೆ “ಮಾಡಿದ್ರೆ ಆಯ್ತು ಬಿಡ್ರೀ, ಆಕ್ಟಿಂಗ್ ಏನು ಸಾಯೋ ವರೆಗೂ ಮಾಡೊದು ಇದ್ದೇ ಇದೆ”ಅಂತಂದ್ರು. ಅದಕ್ಕೆ ಕೆಲವೊಂದ್ಸಲ ನನಗೆ ಅನ್ಸುತ್ತೆ, ನೋಡಿ ಎಲ್ರಿಗೂ 60 ವರ್ಷ ಆದ್ಮೇಲೆ ರಿಟಾಯರ್ಮೆಂಟ್ ಆಗುತ್ತೆ. ಗವರ್ಮೆಂಟ್ ನವರು “60 ವರ್ಷ ಆಯ್ತಾ ಮನೇಲಿ ಕೂತ್ಕೊ” ಅಂತಾರೆ. ನಮ್ಮ ಇಂಡಸ್ಟ್ರೀ ಒಂದೇ ಫಿಲ್ಮ್ ಇಂಡಸ್ಟ್ರೀ, ಟಿವಿ ಇಂಡಸ್ಟ್ರೀ, ಕಲಾವಿದರು ಸಾಯೋವರೆಗೂ ಆಕ್ಟಿಂಗ್ ಮಾಡೊದೇ ಸಾಯೋವರೆಗೂ ಕೆಲ್ಸ ಮಾಡೊದೇನೆ. ಒಂಥರಾ ಗಾಡ್ ಗಿಫ್ಟ್ ಇದು.

ಐ ವಿಲ್ ನೆವರ್ ಫಾರ್ಗೆಟ್ ಇಟ್, ಆಂಡ್ ನೆವರ್ ಫಾರ್ಗೆಟ್ ಮಾಲ್ಗುಡಿ ಡೇಸ್, ಮತ್ತೆ ಶಂಕರ್ ಸರ್. ಅವ್ರು ಹೆಗಲ ಮೇಲೆ ಕೈ ಹಾಕೊಂಡು “ಇನ್ನು ಮೂರು ತಿಂಗಳು ಏನು ಮಾಡ್ತಿಯ ನೀನು?” ಅಂತ ಕೇಳಿದ್ರು. “ಯಾವುದೂ ಇಲ್ಲ”ಅಂದೆ. “ಸರಿ ಇನ್ನು ಮೂರು ತಿಂಗಳು ನನ್ನ ಜೊತೆ ಕೆಲ್ಸ ಮಾಡ್ತೀಯ ಅಷ್ಟೆ.”


ನನಗೆ ಕೇಳಿದ್ರು “ನೀನು ಏನು ಮಾಡ್ತಿದೀಯ ಈಗ?” “ಇಲ್ಲ ಸರ್ ಚಿಕ್ಕಪುಟ್ಟ ಡಾಕ್ಯುಮೆಂಟ್ರಿ ಇದೆ” ಅಂದೆ. “ನೀನು ಇಲ್ಲೇ ಇರು ಫಾರ್ಮ್ ಹೌಸಲ್ಲಿ, ನಾನು ಬೇಕಾದ್ರೆ ಹೇಳ್ತೀನಿ ಅವ್ರಿಗೆ”ಅಂದ್ರು. ನನಗೆ ಅಲ್ಲಿಂದ ಇಲ್ಲಿಗೆ ಬರೋದು ದೂರ ಆಗುತ್ತೆ ಅಲ್ವಾ? ಅದಕ್ಕೆ ನಾನು ಸುಮ್ಮನೆ ಬರ್ಡನ್ ಆಗೊದು ಬೇಡಾಂತ “ಬೇಡ ಸರ್ ನಾನು ಅಲ್ಲೇ ಇರ್ತೀನಿ”ಅಂದೆ. ನಾನು ಅವಾಗ ಬಸವನಗುಡಿಯಲ್ಲಿದ್ದೆ. ಅವ್ರು ಸಿಂಗಸಂದ್ರ ತೋಟದಲ್ಲಿದ್ರು.


ಒಂದೇ ಕಂಟ್ರಿ ಕ್ಲಬ್ ಇದ್ದದ್ದು, ಏನು ಕಂಟ್ರಿ ಕ್ಲಬ್ ರೀ ಅದು? ಅವನ್ನೆಲ್ಲಾ ನೆನೆಸ್ಕೊಂಡ್ರೆ ರೋಮಾಂಚನ ಆಗುತ್ತೆ. ಮತ್ತೆ ಶಂಕರ್ ಸಾರ್ ಬಾರಿ ಸ್ಪೀಡ್ ಮ್ಯಾನ್. ನಾನು ಹೇಳ್ದೆ ಅಲ್ವಾ, ಅವ್ರು ಒಂಥರಾ ಎಲೆಕ್ಟ್ರಿಸಿಟಿ, ಮಿಂಚು.


ಸಂದರ್ಶನ-ಕೆ.ಎಸ್ ಪರಮೇಶ್ವರ


(ಮಾಲ್ಗುಡಿ ಡೇಸ್ ಕುರಿತು ಸಾವಂತ್ ಅವರ ನೆನಪುಗಳು ಇಲ್ಲಿಗೆ ಮುಕ್ತಾಯವಾಯಿತು. ಮಾಲ್ಗುಡಿ ಡೇಸ್ ಮೇಕಿಂಗ್ ಕುರಿತಂತೆ “ಶಂಕರ್ ನಾಗ್ ಆತ್ಮೀಯ ಗೆಳೆಯ ಜಗದೀಶ್ ಮಲ್ನಾಡ್ ಅವರ ನೆನಪುಗಳು ಮುಂದಿನ ಸಂಚಿಕೆಯಲ್ಲಿ)

49 views