“ಮಾಸ್ಟರ್ ಮಂಜುನಾಥ್ ಕಂಡ ಶಂಕರ್ ನಾಗ್”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 10

(ಸ್ವಾಮಿ ಆಂಡ್ ಫ್ರಂಡ್ಸ್ ಸ್ವಾಮಿ, ಅಥವಾ ಮಾಸ್ಟರ್ ಮಂಜುನಾಥ್ ಅವರ ನೆನಪುಗಳು)


ಪರಮ್: ನಮಸ್ಕಾರ ಸರ್, ಇದು ನನಗೆ ಪರ್ಸನಲ್ ಆಗಿ ಒಂದು ಥ್ರಿಲ್ಲಿಂಗ್ ಮೂವ್ಮೆಂಟ್. ಯಾಕಂದ್ರೆ ಇಷ್ಟು ದಿವ್ಸ ನಾವು ಸ್ಕ್ರೀನ್ನಲ್ಲಿ ನೋಡ್ತಿದ್ದ, ಸ್ವಾಮಿ ಯವರ ಮುಂದೆ ನಾನು ಕೂತ್ಕೊಂಡಿದೀನಿ, ಬಿಫೋರ್ ಗೋಯಿಂಗ್ ಟು ಮಾಲ್ಗುಡಿ, ಸ್ವಾಮಿಯವರು 3 ನೇ ವಯಸ್ಸಿಗೆ ಆಕ್ಟ್ ಮಾಡಕ್ಕೆ ಶುರು ಮಾಡಿದ್ರು ಅಂತ ಕೇಳ್ಪಟ್ಟಿದೀನಿ. ಈಸ್ ಇಟ್ ಟ್ರೂ? ಹವ್ ಯುವರ್ ಜರ್ನಿ ಸ್ಟಾರ್ಟಡ್?
ಮಂಜುನಾಥ್: ನನ್ನ ಮೊದಲನೇ ಚಿತ್ರ ‘ಅಜಿತ್’ಅಂತ. 79-80 ರಲ್ಲಿ ಬಂದದ್ದು. ನನ್ನ ತಂದೆ ತಾಯಿ ಇಬ್ರುನೂ ಬಿ.ಎಚ್.ಇ.ಎಲ್. ನಲ್ಲಿ ಕೆಲ್ಸ ಮಾಡ್ತಿದ್ರು. ಅವ್ರು ಯಾರೂ ರಂಗಭೂಮಿ ಅಥವಾ ಸಿನಿಮಾದವರಲ್ಲ. ಅವರ ಕೊಲೀಗ್ ಒಬ್ರು ಪಾರ್ಟೈಮ್ ಪ್ರೊಡಕ್ಷನ್ ಮ್ಯಾನೇಜರ್. ಒಂದು ಸಣ್ಣ ಪಾತ್ರ ಇತ್ತು ಅಜಿತ್ ಸಿನಿಮಾದಲ್ಲಿ ‘ಮುಸರೆ ಕೃಷ್ಣಮೂರ್ತಿ’ಯವರ ಮಗನಾಗಿ, ಜಯಮಾಲ ಅವ್ರು ಆ ಮಗನ ಕಿಡ್ನಾಪ್ ಮಾಡ್ತಾರೆ, ಅಂಬರೀಷ್ ಅವ್ರು ಸೇವ್ ಮಾಡ್ತಾರೆ. ಆ ಸಣ್ಣ ಪಾತ್ರದಿಂದ ನನ್ನ ಒಂದು ಪರಿಚಯ ಕನ್ನಡ ಚಿತ್ರ ರಂಗಕ್ಕೆ. ಬಟ್ ಅದರಲ್ಲಿ ಅಂಬರೀಷ್ ಅವ್ರು ನನ್ನ ಆಕ್ಟಿಂಗ್, ಚುರುಕುತನ, ಅಥವಾ ತುಂಟತನ ನೋಡಿ ನನಗೆ ಇನ್ನೂ ನಾಲ್ಕು ಸಿನಿಮಾಗಳಲ್ಲಿ ಅವಕಾಶ ಕೊಡ್ಸಿದ್ರು. ಆ ತರ ‘ಹೊಸ ತೀರ್ಪು’ಅನ್ನೋ ಸಿನಿಮಾದ ಮೂಲಕ ನನ್ನ ಮತ್ತೆ ಅವರ ಪರಿಚಯ ಆಗಿದ್ದು. ನಾನು ಸಿನಿಮಾದಲ್ಲಿ ಎಂಟ್ರಿ ಆಗಿದ್ದು ಆಕಸ್ಮಿಕ, ಥಾಂಕ್ಸ್ ಟು ಅಂಬರೀಷ್ ಹಾಗೂ ಶಂಕರ್ ನಾಗ್. ಅವ್ರಿಂದ ನನ್ನ ಆ ಗ್ರೋತ್ ಹಾಗೆ ಮುಂದುವರೆಯಿತು.


ಪರಮ್: ನೇರವಾಗಿ ಶಂಕರ್ ಅವರ ವಿಷಯಕ್ಕೆ ಬರೋಣ ಸರ್. ಯಾಕಂದ್ರೆ ನಿಮ್ಮ ಹಾಗೂ ಶಂಕರ್ ನಾಗ್ ಅವರ ಸಂಬಂಧ ಒಂದು ರೀತಿ ಬಿಡಿಸಲಾಗದ ಅನುಬಂಧ. ಶಂಕರಣ್ಣ ಅವ್ರ ಜೊತೆ ‘ಹೊಸತೀರ್ಪು’ ಇಂದ ಶುರುವಾಯ್ತು ಅಂದ್ರಿ. ಅದರ ನಂತರ ಸುಮಾರು ಸಿನಿಮಾಗಳು ಮಾಡಿದ್ರಿ. ಮಾಲ್ಗುಡಿ ಮಾಡಿದ್ರಿ ಮುಖ್ಯವಾಗಿ. ಶಂಕರ್ ಹಾಗೂ ನಿಮ್ಮ ಒಡನಾಟದ ಬಗ್ಗೆ ಒಂದಿಷ್ಟು ಮಾತನಾಡೋಣ ಸರ್’?


ಭಾಷೆ ಬರದ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡ ಜಾಣ ಬಾಲಕ

ಮಂಜುನಾಥ್: ತುಂಬಾ ಯುನೀಕ್ ರಿಲೇಶನ್ಶೀಪ್ ನಂದು ಮತ್ತೆ ಅವ್ರದ್ದು. ಎಲ್ಲ ಹೇಳ್ತಾರೆ ಫಾತರ್ ಫಿಗರ್ ಅಥವಾ ಎಲ್ಡರ್ಲಿ ಅಂತ. ಬಟ್ ಆಥರ ಇರ್ಲಿಲ್ಲ. ಅವರ ಒಂದು ಎಕ್ಸ್ಟ್ರಾರ್ಡಿನರಿ ಗುಣ ಏನಂದ್ರೆ, ನಾನು ಚಿಕ್ಕ ವಯಸ್ಸಿನ ಹುಡುಗ ಆದ್ರುನೂ, ನನಗೆ ಅರ್ಥ ಆಗುವ ಭಾಷೆ, ಅಥವಾ ರೀತಿಯಲ್ಲಿ, ಅವ್ರು ನನ್ನಲ್ಲಿ ಒಬ್ಬರಾಗಿ, ಅಷ್ಟು ಸರಳವಾಗಿ ಎಕ್ಸಪ್ಲೇನ್ ಮಾಡ್ತಾ ಇದ್ರು. ಪ್ಲಸ್ ನಾನೂ ಅದೇ ತರ ಸ್ಪಂದಿಸ್ತಾ ಇದ್ದೆ ಅನ್ಸುತ್ತೆ. ಯಾಕಂದ್ರೆ ಆ ಸಿನಿಮಾ ಆದ್ಮೇಲೆ ‘ನೋಡಿಸ್ವಾಮಿ ನಾವಿರೋದೆ ಹೀಗೆ’ಸಿನಿಮಾ ಆಯ್ತು. ಅದ್ರಲ್ಲಿ ನನ್ನ ಮತ್ತೆ ಅವರ ಕೆಮೆಸ್ಟ್ರಿ ತುಂಬಾ ಚೆನ್ನಾಗಿ ವರ್ಕೌಟ್ ಆಯ್ತು. ಮತ್ತೆ ಜನಗಳಿಗೂ ತುಂಬಾ ಇಷ್ಟ ಆಯ್ತು. ನಮಗೂ ಬಹಳ ಇಷ್ಟ ಆಯ್ತು, ನಂತರ ನನಗೆ ಅವರ ಟೀಮಲ್ಲಿ ಹೊಸ ಎಂಟ್ರಿ ಸಿಕ್ತು.


ಸೋ ಅವರಿಗೆ ಮಾಲ್ಗುಡಿ ಡೇಸ್ ಬಂದಾಗ ನನಗೆ ಟಿ.ವಿ. ಸೀರಿಯಲ್, ಅಥವಾ ನ್ಯಾಷನಲ್ ಅವಾರ್ಡ್, ಅದ್ಯಾವುದೂ ಐಡಿಯಾನೇ ಇರ್ಲಿಲ್ಲ. ಏನೂ ಗೊತ್ತಿರ್ಲಿಲ್ಲ, ಶಂಕರಣ್ಣಂದು ಒಂದು ಪ್ರಾಜೆಕ್ಟ್ ಇದೆ. ಹೋಗಿ ಮಾಡ್ಬೇಕು ಅಷ್ಟೆ. ನಾವು ಪೂರ್ತಿ ಶೂಟ್ ಮಾಡಿರೋದು ಸಿನಿಮಾ ಕ್ಯಾಮರಾದಲ್ಲಿ, ಆ ಹಳೇ 1940 ದು ಫೀಲ್ ಕೊಡ್ಬೇಕೂಂತ. ಟೆಲಿವಿಷನ್ ಕ್ಯಾಮರಾ ಅವ್ರಿಗೆ ಇಷ್ಟ ಆಗ್ಲಿಲ್ಲ. ಸೋ ಸಿನಿಮಾ ಕ್ಯಾಮರಾದಲ್ಲೇ ಸಿನಿಮಾ ರೀತಿಯಲ್ಲೇ ನಾವು ಶೂಟ್ ಮಾಡಿರೋದು. ಸೋ ನನಗೆ ತುಂಬಾ ಜನ ಕೇಳ್ತಾರೆ, “ಅದು ನಿನ್ನ ಮೊದಲನೇ ಟಿ.ವಿ. ಸೀರಿಯಲ್ ಹೇಗನ್ನಿಸ್ತು?” ಅಂತ. ಆದ್ರೆ ನನಗೆ ಯಾವಾಗ್ಲೂ ಗೊತ್ತಾಗ್ಲೇ ಇಲ್ಲ, ಅದು ಸೀರಿಯಲ್ ಅಂತ. ಬಟ್ ನನ್ನ ಬಿಗ್ಗೆಸ್ಟ್ ಛಾಲೆಂಜ್ ಇದ್ದದ್ದು, ನನಗೆ ಹಿಂದಿ ಬರ್ತಿರ್ಲಿಲ್ಲ. ಆಂಡ್ ಇಂಗ್ಲೀಷ್, ನಮ್ಮ ಬೆಂಗ್ಳೂರು ಇಂಗ್ಲೀಷ್ ತರ ಒಂದು ಪದ ಆ ಕಡೆ ಈಕಡೆ ಹಾಕ್ಕೊಂಡು ಮಾತಾಡ್ತಾ ಇದ್ದೆ.


ನನಗೆ ನಿಜವಾದ ಛಾಲೆಂಜ್ ಇದ್ದದ್ದು ಅದೇ. ಪಾತ್ರ ಗೊತ್ತಿರ್ಲಿಲ್ಲ, ಇಡೀ ಸೆಂಟ್ರಲ್ ಕ್ಯಾರೆಕ್ಟರ್ ಅದೇಂತ ಗೊತ್ತಿರ್ಲಿಲ್ಲ. ಪಾತ್ರದ ಹೆಸರು ಸ್ವಾಮಿಂತ ಗೊತ್ತಿತ್ತು ಅಷ್ಟೇ. “ಶಂಕರ್ ಅಂಕಲ್ ಹೇಳಿದಾರೆ. ಮಾಡೊದು”ಅಷ್ಟೇ. ಇಷ್ಟೇ ಇದ್ದದ್ದು. ಭಯ ಏನು ಅಂದ್ರೆ ಗೊತ್ತಿಲ್ಲದ ಭಾಷೆಯಲ್ಲಿ ಹೇಗಪ್ಪಾ ಮಾಡೊದೂಂತ. ಯಾಕಂದ್ರೆ ನಾನು 23 ಸಿನಿಮಾ ಮಾಡಿದ್ದೆ. ಆಲ್ರಡಿ ಆಕ್ಟಿಂಗ್ ನ ಛಾಲೆಂಜಿಂಗಾಗಿ ತೆಗೊಳೊದರ ಬಗ್ಗೆ ಭಯ ಇರ್ಲಿಲ್ಲ. ಆದ್ರೆ ಅದೆಲ್ಲಾ ಯಾವುದೇ ರೀತಿ ತೊಂದರೆಯಾಗದ ಹಾಗೆ ಎಕ್ಸಟ್ರಾ ಎಫರ್ಟ್ ಹಾಕಿ ಅರುಂಧತಿ ನಾಗ್, ಅವ್ರು ಪದ್ಮಾವತಿ ರಾವ್ ಅವ್ರು, ಪಿಂಟಿ, ಸೋಮು ಅವ್ರು ಜಗ್ಗಣ್ಣ, ಹಲವಾರು ಜನ ಅದನ್ನ ನನಗೆ ಹೇಳ್ಕೊಟ್ಟು, ಅದರ ಕನ್ನಡ ಅರ್ಥ ಹೇಳ್ಕೊಟ್ಟು, ಬ್ಯಾಕ್ಟುಬ್ಯಾಕ್ ಅದನ್ನ ಇಂಗ್ಲೀಷಲ್ಲಿ ಬೇರೆ ಶೂಟ್ ಮಾಡೋದು. ಆ ಮಾಡುವ ರೀತಿ ಸ್ವಲ್ಪ ಕಷ್ಟ ಆಗ್ತಾ ಇತ್ತು.ಅದು ಬಿಟ್ರೆ, ಒಂದು ಪಿಕ್ನಿಕ್ ತರ ಇರ್ತಿತ್ತು.


ಆಗುಂಬೆಯಲ್ಲಿ ಶೂಟ್ ಮಾಡಿದ್ದು ನಾವು. ನಿಮಗೆ ಗೊತ್ತೋ ಇಲ್ವೋ ಗೊತ್ತಿಲ್ಲ, ಮಾಲ್ಗುಡಿ ಅಂದ್ರೆ ಆಗುಂಬೆ ಆಗುಂಬೆ ಅಂದ್ರೆ ಮಾಲ್ಗುಡಿ. ಇವತ್ತಿಗೂ ಆ ಬುಕ್ ತೆಗೆದು ನಾಲ್ಕು ಪೇಜ್ ಓದಿದ್ರೆ, ನನ್ನ ಮನಸ್ಸು ಮಾಲ್ಗುಡಿಗೆ ಹೊರ್ಟೋಗ್ಬಿಡುತ್ತೆ. ಅಷ್ಟು ಮುಗ್ಧತೆ ಆಗುಂಬೆಯಲ್ಲಿತ್ತು. ಅಲ್ಲಿ ಯಾವುದೇ ಹೊಟೇಲ್ ಇರ್ತಿರ್ಲಿಲ್ಲ. ನಾವು ಬಾಡಿಗೆ ಮನೆಯಲ್ಲಿರ್ತಿದ್ವಿ. ನಾವು ಕೂಡ ಆಗುಂಬೆಯ ನಿವಾಸಿಯಾಗಿ ಇರ್ತಾ ಇದ್ವಿ, ಎರಡು ಮೂರು ತಿಂಗಳು.


ಆ ಖುಷಿ ಏನಿದೆ, ನಾವು ಸಂಜೆ ಕ್ಯಾಂಪ್ ಫಯರ್ ಹಾಕ್ಕೊಂಡು ಮಾತಾಡ್ತಾ ಇದ್ದದ್ದು. ಕೆಲವರು ಹಾಡು ಶುರು ಮಾಡ್ತಿದ್ರು. ಶಂಕರ್ ನಾಗ್ ಅವ್ರು ಮೃದಂಗ ಬಹಳ ಚೆನ್ನಾಗಿ ನುಡಿಸ್ತಾ ಇದ್ರು. ಇದೆಲ್ಲಾ ನನಿಗೆ ಲೈಫಲ್ಲಿ ಮರೆಯಲಾಗದ ಎಕ್ಸ್ಪೀರಿಯನ್ಸ್. ಸೊ ವಂಡರ್ಫುಲ್ ಆಗಿತ್ತು ‘ಮಾಲ್ಗುಡಿ ಡೇಸ್’.


ಪರಮ್: ಶಂಕರ್ ಅವರ ವರ್ಕಿಂಗ್ ಪ್ಯಾಟರ್ನ್ ಹೇಗಿತ್ತು? ಅದನ್ನೆಲ್ಲಾ ಗಮನಿಸಕ್ಕೆ ಆಗ್ತಿತ್ತಾ?


ಮಂಜುನಾಥ್: ಯಸ್ ಅಫ್ಕೋರ್ಸ್. ಅಂದ್ರೆ ವರ್ಕ್ ಯಾವತ್ತೂ ನಿಲ್ತಾ ಇರ್ಲಿಲ್ಲ. ಅಂದ್ರೆ 24/7 ವರ್ಕಿಂಗೇ ಅವ್ರದ್ದು. ಮಲಗುವಾಗ ಡೀಪ್ ಸ್ಲೀಪ್ ಗೆ ಹೋದ್ರೆ ಮಾತ್ರ ಏನೂ ಇರ್ತಿರ್ಲಿಲ್ಲ. ಅವ್ರಿಗೆ ನಮ್ಮ ಥರ ಸೆಟ್ ಟೈಮ್ ಅಂದ್ರೆ ಇದು, ಸಂಜೆ ಪ್ಯಾಕ್ಅಪ್ ಆದ್ಮೇಲೆ ಮುಗಿತು, ಅಂತದ್ದೇನೂ ಇರ್ತಿರ್ಲಿಲ್ಲ. ಯಾವಾಗ್ಲೂ ಕೆಲ್ಸ, ಕೆಲ್ಸ ಕೆಲ್ಸ, ಯಾವುದೋ ಒಂದು ರೀತಿಯಲ್ಲಿ, ಅವ್ರಿಗೆ ಗೊತ್ತಿತ್ತೋ ಏನೋ “ನನಗೆ ಟೈಮ್ ಕಡಿಮೆ ಇದೆ, ಏನೇನು ಸಾಧನೆ ಮಾಡ್ಬೇಕು ಅದೆಲ್ಲ ಬೇಗ್ಬೇಗ ಮಾಡ್ಬೇಕೂಂತ”. ಯಾವಾಗ್ಲೂ ಬ್ಯುಸಿ ಇರ್ತಿದ್ರು. ಆಮೇಲೆ, ಅವ್ರಿಗೆ ಭೇದಭಾವ ಇರ್ತಿರ್ಲಿಲ್ಲ. ಚಿಕ್ಕ ಹುಡುಗ, ವಯಸ್ಸಾದವ್ರು, ಸೆಟ್ ಹುಡುಗ, ಪ್ರೊಡಕ್ಷನ್ ಬಾಯ್ ಯಾವುದೇ ಭೇದಭಾವ ಇರ್ತಿರ್ಲಿಲ್ಲ. ಒಬ್ಬ ಪ್ರೊಡಕ್ಷನ್ ಹುಡುಗ ಕೂಡ ಫ್ರೇಮ್ನಲ್ಲಿ ಏನಾದ್ರೂ ತಪ್ಪು ಕಂಡ್ರೆ, ಬಂದು ಹೇಳುವವ್ರು. ಅವ್ರನ್ನ ಅಪ್ರಿಸಿಯೇಟ್ ಮಾಡ್ತಿದ್ರು. ಅದನ್ನ ಆಕ್ಸಪ್ಟ್ ಮಾಡಿ ನಾವು ರೀ ಶೂಟ್ ಮಾಡ್ತಾ ಇದ್ವಿ. ನಮ್ದೇನು? ಅವ್ರದ್ದೇನು? ಅಂತ ಇರ್ಲಿಲ್ಲ.


ಭೇದಭಾವ ಮಾಡದ ಶಂಕರ್‌ ದೊಡ್ಡವ್ಯಕ್ತಿ ಆಗಿದ್ದು ಹೀಗೆ

ನಮ್ಮೆಲ್ಲರ ಜೊತೆ ಒಂದಾಗಿ ಕೆಲ್ಸ ಮಾಡ್ತಿದ್ರು. ಆಮೇಲೆ ಇದನ್ನ ರಿಪಿಟಡ್ಲೀ ಹೇಳಕ್ಕೆ ಬಯಸ್ತೀನಿ. ನಮ್ಮ ಸೆಂಟರ್ ಆಫ್ ಗ್ರಾವಿಟಿ ಅವ್ರು. ಮಾಲ್ಗುಡಿ ಡೇಸ್ ಆಗ್ಬೇಕುಂತಂದ್ರೆ ಶಂಕರ್ ನಾಗ್ ಕಾರಣ. ಆರ್.ಕೆ ನಾರಾಯಣ್ ಅವ್ರು ಎಷ್ಟು ಅದ್ಭುತವಾಗಿ ಬುಕ್ ಬರ್ದಿದ್ದಾರೆ ಅಂದ್ರೆ, ಜಗತ್ಪ್ರಸಿದ್ದ ಅವ್ರು. ಬಟ್ ಅದಕ್ಕೆ ಫುಲ್ ಫ್ಲೆಡ್ಜ್ ಜೀವ ತುಂಬಿದ್ದಾರೆ. ಪುಸ್ತಕದ್ಮೇಲೆ ಸಿನಿಮಾ ಮಾಡಿದಾಗ ಯಾವುದೋ ಒಂದು ಕಂಪ್ಲೇಂಟ್ ಅಥವಾ ಯಾವುದೊ ಒಂದು ಕಂಪಾರಿಷನ್ ಇದ್ದೇ ಇರುತ್ತೆ. ಇದ್ರಲ್ಲಿ ಕಂಪಾರಿಷನ್ ಹಾಗು ಕಂಪ್ಲೇಂಟ್ ಎರಡೂ ಇಲ್ಲ. ಆ ಬುಕ್ ಗೆ ಕಂಪ್ಲೀಟ್ ಜಸ್ಟೀಸ್ ಮಾಡಿದ್ದಕ್ಕೆ ಕಾರಣ ಶಂಕರ್ ನಾಗ್. ಅವ್ರು ಸಿಂಗಲ್ ಹ್ಯಾಂಡಡ್, ನಾವೆಲ್ಲ ಅವ್ರ ಸುತ್ತ ಓಡಾಡ್ತಾ ಇದ್ವಿ. ಆದ್ರೆ ಅವ್ರು ಸೆಂಟರಲ್ಲಿ ಗಟ್ಟಿಯಾಗಿ ನಿಂತ್ಕೊಂಡು ಆ ಕಥೆಗೆ ಸಂಪೂರ್ಣವಾಗಿ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.


ಪರಮ್: ಇನ್ನು ಟೈಮ್, ಸ್ಕೂಲ್ ಎಲ್ಲ ಹೇಗೆ ಮ್ಯಾನೇಜ್ ಮಾಡ್ತಾ ಇದ್ರಿ?


ಮಂಜುನಾಥ್: ಇದಿಷ್ಟು ನಾವು ಶೂಟ್ ಮಾಡಿರೋದು ಸಮ್ಮರ್ ಹಾಲಿಡೇಸಲ್ಲಿ. ಯಾಕಂದ್ರೆ ನಾನೊಬ್ಬನೇ ಅಲ್ಲ ಇನ್ನಷ್ಟು ಮಕ್ಳೂ ಇದ್ರು. ನಾವು ಮೂರು ವರ್ಷ ಸಪರೇಟ್ ಸಪರೇಟಾಗಿ ಶೂಟ್ ಮಾಡಿದ್ವಿ. ಮೊದಲನೇ ವರ್ಷ ಆ ಎಪಿಸೋಡಲ್ಲಿ, ಹೀರೋ ಅಂತ ಒಂದೇ ಎಪಿಸೋಡ್ ಮಾಡಿದ್ದೆ ನಾನು. ಅದೂ ಸಮ್ಮರಲ್ಲೇ ಮಾಡಿದ್ದು. ನೆಕ್ಸ್ಟ್ ವರ್ಷ ಈ ‘ಸ್ವಾಮಿ ಆಂಡ್ ಫ್ರೆಂಡ್ಸ್’ಎಂಟು ಎಪಿಸೋಡ್ ಏನಿದೆ ಅದನ್ನ ಮಾಡಿದ್ವಿ. ಮತ್ತೆ ಎಗೇನ್ ಅದು ಸಮ್ಮರ್ ಹಾಲಿಡೇಸ್. ಮತ್ತೆ ಒಂದಷ್ಟು ಎಲ್ಲಾ ನಾವು ಬೆಂಗಳೂರು, ಬೇಗೂರ್ ಫೋರ್ಟ್ ಲ್ಲಿ ಶೂಟ್ ಮಾಡಿದ್ವಿ. ಟಿಗ್ಗುನಹಳ್ಳಿ ಟಿ.ಬಿ. ಇದೆ ಅಲ್ಲಿ ಶೂಟ್ ಮಾಡಿದ್ವಿ. ಅದೆಲ್ಲ ಸ್ವಲ್ಪ ಬಿಟ್ಟು ಬಿಟ್ಟು ಮಾಡಿದ್ದು. ಮತ್ತೆ ಥರ್ಡ್ ಸೀಸನ್ ‘ನಾಗ’ಅದ್ರಲ್ಲಿ ಶಂಕರ್ ನಾಗ್ ಅವ್ರು ನನ್ನ ಅಪ್ಪನ ಪಾತ್ರ ಮಾಡಿದ್ರು. ನಾವಿಬ್ರು ಹಾವಾಡಿಗರು ,ಜೊತೆಯಲ್ಲಿ ಒಂದು ಕೋತಿ ಇರುತ್ತೆ. ಅದು ಮುರನೇ ವರ್ಷ ಸಮ್ಮರ್ ಹಾಲಿಡೇಸ್. ಅದನ್ನ ಅವ್ರು ತುಂಬಾನೇ ಗಮನ ಇಟ್ಟು ಮಾಡ್ತಿದ್ರು. ಲಾಂಗ್ ಔಟ್ ಡೋರ್ ಶೂಟ್ ಏನಾದ್ರೂ ಇದ್ರೆ, ದಸರಾ ಹಾಲಿಡೇಸಲ್ಲಿ ಇನ್ಯಾವುದಾದ್ರೂ ಲಾಂಗ್ ಹಾಲಿಡೇಸಲ್ಲಿ ಇಟ್ಕೊತಿದ್ರು. ಅಫ್ಕೋರ್ಸ್ ಸ್ಕೂಲಿಗೆ ಎಫೆಕ್ಟ್ ಆಗ್ತಾ ಇತ್ತು. ಬೇರೆ ಕನ್ನಡ ಸಿನಿಮಾಗಳೂ ಮಾಡ್ತಿದ್ದೆ.


ಮತ್ತೆ ಒಂದು ಅಡ್ವಂಟೇಜಸ್ ಇದ್ದಿದ್ದು ನನ್ನ ಫ್ರೆಂಡ್ಸ್ ಹಾಗೂ ಟೀಚರ್ಸ್ ನನ್ನ ಛಾಲೆಂಜ್ ಗಳನ್ನೆಲ್ಲ ಅರ್ಥ ಮಾಡ್ಕೊಂಡು, ಎಕ್ಸಟ್ರಾ ಎಫರ್ಟ್ ಹಾಕಿ ಮಿಸ್ ಆಗಿದ್ದ ಚಾಪ್ಟರ್ ಗಳನ್ನೆಲ್ಲಾ ಹೇಳಿಕೊಟ್ಟು ಹೇಗೋ ನನ್ನ ಓದಿಸಿ ಬಿಟ್ಟಿದ್ದಾರೆ. ನಾನು ಯಾವಾಗ್ಲೂ ತಮಾಷೆಗೆ ಹೇಳ್ತಾ ಇರ್ತೀನಿ, ನಮ್ಮ ಏರಿಯಾ, ನಾನು ಹುಟ್ಟಿ ಬೆಳೆದದ್ದು ಯಶವಂತಪುರ, ಅಲ್ಲಿ ತ್ರಿವೇಣಿ ರೋಡಲ್ಲಿ. ಬೇರಯವರೆಲ್ಲಾ ಫಸ್ಟ್ ಕ್ಲಾಸ್ ಬಂದ್ರೆ, 80 ಪರ್ಸೆಂಟ್ ಬಂದ್ರೆ, ಸಲಬ್ರೇಟ್ ಮಾಡೋರು. ನಾನು ಪಾಸ್ ಆದ್ರೆ ಸಾಕು ಸಲಬ್ರೇಟ್ ಮಾಡೋರು. ಅಪ್ಪಿತಪ್ಪಿ ಸೆಕೆಂಡ್ ಕ್ಲಾಸ್ 50 ಪರ್ಸೆಂಟೇನಾದ್ರೂ ಬಂದ್ರೆ, ಅಕ್ಕ ಪಕ್ಕದ ಏರಿಯಾದವ್ರೆಲ್ಲರನ್ನ ಕರ್ಸಿ ಊಟ ಹಾಕ್ತಿದ್ರು. ಆತರ ಸಕೆಂಡ್ ಕ್ಲಾಸ್ ಬಂದ್ರೆ ಎಕ್ಸ್ಟ್ರಾರ್ಡಿನರಿ ಎಚಿವ್ಮೆಂಟ್. ಜೀನಿಯಸ್ ತರ ಫೀಲಿಂಗ್ ನನಗೆ.


ಪರಮ್: ಶಂಕರ್ ನಾಗ್ ಅಥವಾ ಮಾಲ್ಗುಡಿ ಡೇಸಲ್ಲಿ ಕೆಲವು ಮರೆಯಲಾಗದ ಅನುಭವಗಳನ್ನ ಹಂಚ್ಕೋ ಬಹುದಾ?


ಶೂಟಿಂಗ್‌ ಸಾಕಾಗಿ ಬೇಜಾರಾದಾಗ ಮಲ್ಪೆ ಬೀಚ್‌ ಅಲ್ಲಿ ಆಟ

ಮಂಜುನಾಥ್: ನಾವೆಲ್ಲಾ ಹುಡುಗರೆಲ್ಲಾ ಟಯರ್ಡ್ ಆಗಿದ್ವಿ. ನಾನಂತೂ ಸಿಕ್ಕಾಪಟ್ಟೆ ಸುಸ್ತಾಗಿದ್ದೆ. ಅವತ್ತು ಬೆಳಗ್ಗೆ “ಶಂಕರ್ ಅಂಕಲ್ ನನಿಗೆ ಒಂದು ಗಂಟೆ ಟೈಮ್ ಕೊಡಿ”ಅಂತ ಕೇಳ್ಕೊಂಡೆ. ಅವ್ರು ಒಂಥರಾ ಆಗಿ “ಛೆ”ಅಂತ ಹೇಳಿ, ಕೂಡಲೇ ಪ್ಯಾಕ್ಅಪ್ ಮಾಡಿ, ಎಲ್ಲರೂ ಮಲ್ಪೆಗೆ ಹೋಗಿ ಇಡೀ ದಿನ ಬೀಚಲ್ಲಿ ಆಟ ಆಡಿ, ಮಧ್ಯ ರಾತ್ರಿ ಎಲ್ಲೋ ಹೋಗಿ ಊಟ ಮಾಡಿ, ಹೋಗಿ ಮಲಗಿದ್ವಿ. ನೆಕ್ಸ್ಟ್ ಡೇ ಎಲ್ಲರೂ ಫ್ರೆಷ್ ಆಗಿ ಚೆನ್ನಾಗಿ ಶೂಟಿಂಗ್ ನಡೀತು. ಅದು ತುಂಬ ಸಲ ಹೇಳಿದ್ದೀನಿ.


ಆಗುಂಬೆಯಲ್ಲಿನ ಕಿಂಗ್‌ ಖೋಬ್ರಾ ಇಂದ ತಪ್ಪಿಸಿಕೊಳ್ಳೋದು ಹೀಗೆ….

ಆಗುಂಬೆಯಲ್ಲಿ ಕೆಲವೊಂದು ಛಾಲೆಂಜಸ್ ಇತ್ತು. ಆಗುಂಬೆ ಅಂದ್ರೆ ಕೆಲವೊಬ್ಬರಿಗೆ ಗೊತ್ತಿಲ್ದೇ ಇರಬಹುದು ಕಿಂಗ್ ಖೋಬ್ರಾ ಕ್ಯಾಪಿಟಲ್ ಆಫ್ ದ ವರ್ಲ್ಡ್. ಅಂದ್ರೆ ಪ್ರತಿ ಸ್ಕ್ವಾಯರ್ ಕಿಲೋಮೀಟರ್ಗೆ ಇರೋದು. ಖೋಬ್ರಾಗಳಲ್ಲ ಕಿಂಗ್ ಖೋಬ್ರಾಗಳು, ಅಲ್ಲಿ ಇರುವಷ್ಟು ಡೆನ್ಸಿಟಿ ಇಡೀ ವರ್ಲ್ಡಲ್ಲಿ ಎಲ್ಲೂ ಇಲ್ಲ. ಆಗುಂಬೆ ಆ ರೀಜನ್. ಅದು ಶೀಘ್ರದಲ್ಲಿ ಅಲ್ಲಿ ಕಲ್ತಿದ್ದೇನಂದ್ರೆ, ಈ ಕೆರೆ ಹಾವುಗಳು, ನೀರು ಹಾವುಗಳು, ಕಪ್ಪೆ ಹಾವುಗಳು ಏನಾದ್ರೂ ನಮ್ಮ ಹತ್ರ ಬಂದ್ರೆ, ಅದರ ಜೊತೆಗೆ ನಾವು ಓಡ್ಹೋಗ್ಬೇಕು ಅಂತ ಗೊತ್ತಾಯ್ತು. “ಅದು ನಿಮಗೆ ಏನೂ ಮಾಡಲ್ಲ. ಅದು ಅದರ ಜೀವ ಉಳಿಸಿಕೊಳ್ಳೋದಕ್ಕೆ ಓಡ್ತಾ ಇರುತ್ತೆ. ಆಗ ನೀವು ಅದು ಹೋಗುವ ಕಡೆಗೇ ಓಡ್ಹೋಗಿ”ಅಂತ ಸ್ಥಳೀಯರು ಹೇಳ್ಕೊಟ್ರು. ನಮಗೆ ತುಂಬಾ ಆಶ್ಚರ್ಯ ಆಗೋದು. “ಇದೇನಪ್ಪ ಹಾವು ಬರ್ತಿದ್ರೆ ಅಂದ್ರೆ, ಆ ಕಡೆ ಈಕಡೆ ಹೋಗ್ಬೇಡಿ, ಅದರ ಜೊತೆನೇ ಓಡ್ಹೋಗಿ”ಅಂತಿದ್ರು. ಆಮೇಲೆ ಕಿಂಗ್ ಕೋಬ್ರ ನೋಡಿದ್ಮೇಲೆ ಜೀವ ಭಯ ಬಂತಲ್ಲ ಅವಾಗ ನಮಿಗೆ ಗೊತ್ತಾಯ್ತು.


ಆಮೇಲೆ ಬಿಸಿಲು ಅಂದ್ರೆ ತುಂಬಾನೆ ಬಿಸಿಲು, ಮಳೆ ಬಂದ್ರೆ ಸಿಕ್ಕಾಪಟ್ಟೆ ಮಳೆ ಮೂರು ಮೂರು ದಿನ ಮಳೆ ಬರೋದು. ಆಗ ನಾವು ಇಂಡೋರ್ ಶೂಟಿಂಗ್ ಮಾಡೋದು. ಮಳೆ ಬಂದ್ಮೇಲೆ ಜಿಗಣೆ ಕಾಟ ಶುರುವಾಗೋದು. ಪ್ರತಿಯೊಬ್ಬರೂ ಎಕ್ಸ್ಪರ್ಟ್ ಆಗಿದ್ವಿ. ಎಲ್ಲರ ಜೇಬಲ್ಲೂ ಸ್ವಲ್ಪ ಸುಣ್ಣ, ನಶೆಪುಡಿ ಇರ್ತಿತ್ತು. ಉಪ್ಪು ಎಲ್ಲ ನಡೆಯಲ್ಲ ಆ ಜಿಗಣೆಗಳಿಗೆ. ಸಣ್ಣ ನಶೆ ಪುಡಿಯಲ್ಲಿ ಒಂದು ವಿಚಿತ್ರ ಸ್ಮೆಲ್ ಬರೋದು. ಅದನ್ನ ಹಿಡ್ಕೊಂಡು ಕಿತ್ರೆನೇ ಅದು ಬರೋದು. ಅದು ಸ್ವಲ್ಪ ದಿನ ಆದ್ಮೇಲೆ ಅದು ಕೂಡ ಅಭ್ಯಾಸ ಆಗ್ಹೋಯ್ತು ನಮಗೆ. ಕಿತ್ತು ಬಿಸಾಕಿ ಹೋಗ್ತಾ ಇದ್ವಿ ನಾವು ಅವಾಗ.


ಒನ್‌ ಫಾರ್‌ ಆಲ್‌ ಕಟಿಂಗ್‌ ಶಾಪ್

ಅಲ್ಲಿ ಒಂದೇ ಸಣ್ಣ ಹೋಟೆಲ್ ಇತ್ತು. ಪಡಿಯಾರ್ ಮಾಮ ಅಂತ ಅದರ ಓನರ್. ಲಾಸ್ಟ್ ವರ್ಷ ತೀರ್ಕೊಂಡ್ಬಿಟ್ರು. ಒಂದೇ ಕಟಿಂಗ್ ಶಾಪ್, ಅವ್ನು ಮಾಡಿದ್ದೇ ಕಟಿಂಗ್. ಒಂದು ಟೈಮ್ನಲ್ಲಿ ಎಲ್ಲರೂ ಒಂದೇ ತರ ಕಾಣಿಸ್ತಾ ಇದ್ರು. ಅಲ್ಲಿ ಹೇರ್ ಕಟ್ ಮಾಡ್ಸಿದ್ರೆ ಎಲ್ಲಾ ಒಂದೇ ತರ ಕಾಣ್ತಾರೆರೀ, “ಓ ಅಲ್ಲೇ ಹೇರ್ ಕಟಿಂಗ್ ಗೆ ಹೋಗಿರ್ತಾರೆ”ಅಂತ. ಸ್ವಲ್ಪ ತಾಳ್ಮೆ, ಟೈಮ್ ಇರೋರು ಶೃಂಗೇರಿಗೆ ಹೋಗಿ ಕಟಿಂಗ್ ಮಾಡಿಸ್ಕೊಂಡು ಬರ್ತಿದ್ರು.


ಒಂದೇ ಪ್ರಾವಿಶನ್ ಸ್ಟೋರ್. ಒಂದೇ ಪೋಸ್ಟ್ ಆಫೀಸ್. ಅಲ್ಲಿ ಒಂದೇ ಫೋನ್. ಬೆಂಗಳೂರಿಗೆ ಏನಾದ್ರೂ ಕಾಲ್ ಮಾಡ್ಬೇಕು ಅಂದ್ರೆ, ಟ್ರಂಕ್ ಕಾಲ್. ಇದು ಇವತ್ತಿನ ಜನರೇಶನ್ನ ತುಂಬ ಹುಡುಗರಿಗೆ ಗೊತ್ತಿಲ್ಲ ಅನ್ಸುತ್ತೆ. ಸುಮ್ನೆ ಫೋನ್ ಎತ್ಕೊಂಡು ಡಯಲ್ ಮಾಡೋದಲ್ಲ, ಬೇರೆ ಕಡೆ ಫೋನ್ ಮಾಡಿ “ಅಲ್ಲಿಗೆ ಕನೆಕ್ಟ್ ಮಾಡಿ”ಅಂತ ಹೇಳ್ಬೇಕು ಅವ್ರಿಗೆ. ಎರಡು ಮೂರು ಗಂಟೆ ಆದ್ಮೇಲೆ ಕರಿತಾ ಅಥವಾ ಕಿರ್ಚ್ತಾ ಇದ್ರು. ಅದು ಹೇಗೆ ಕಿರ್ಚಿ ಮಾತಾಡ್ಬೇಕಿತ್ತು ಅಂದ್ರೆ, ಇಡೀ ಆಗುಂಬೆಗೆ ಗೊತ್ತಾಗ್ತಿತ್ತು. ನಾವು ಏನು ಮಾತಾಡ್ತಿರೋದು ಅಂತ. ಗುಟ್ಟೆಲ್ಲ ಇರ್ಲಿ ಬೇಸಿಕ್ ಹಲೋ ಅಂದ್ರೆ ಎಲ್ಲರಿಗೂ ಗೊತ್ತಾಗ್ಬಿಡೋದು, ಟ್ರಂಕ್ ಕಾಲ್ ಬುಕ್ ಮಾಡಿದಾರೆ ಅಂತ.


ಟೆಲಿಗ್ರಾಮ್ ಎಲ್ಲಾ ಕಳಿಸ್ತಾ ಇದ್ವಿ, ಟೆಲಿಗ್ರಾಮ್ ಅಂದ್ರೆ ಅದು ಒಂದು ಅ್ಯಪ್ ಅಲ್ಲ, ನೀವು ಗೂಗಲ್ ಮಾಡ್ನೋಡಿ ಏನೂಂತ. ಸೊ ಈ ಥರ ನಮ್ಮ ಕಮ್ಯೂನಿಕೇಶನ್ ಛಾಲೆಂಜಸ್ ಇರ್ತಿತ್ತು. ಆಮೇಲೆ ಸಡನ್ನಾಗಿ ಕ್ರೌಡ್ ಬೇಕು ಅಂದ್ರೆ, ಆಗುಂಬೆಯಲ್ಲಿ ಎಂತ ಯುನೀಕ್ ಜನಗಳು ಅಂದ್ರೆ, ಒಂದು ಎರಡು ದಿನ “ಏನೋ ಶೂಟಿಂಗ್ ಮಾಡ್ತಿದ್ದಾರೆ”ಅಂತ ಪಾಪ ನಿಂತು ನೋಡಿದ್ರು, ಆಮೇಲೆ ಬೋರ್ ಒಡ್ದೋಯ್ತು, “ಅದೇಕ್ಯಾಮರಾ, ಅದೇ ಮಾಡಿದ್ನೇ ಮಾಡ್ತಾರೆ”ಅಂತ ಅವ್ರ ಗದ್ದೆ ಕೆಲ್ಸ ಅಥವಾ ಇನ್ಯಾವುದೋ ಕೆಲ್ಸಕ್ಕೆ ಹೊರ್ಟೋದ್ರು.


ಖಾದಿ ಟೋಪಿ ಸ್ವತಂತ್ರ ಹೋರಾಟಗಾರರು ಮಾಲ್ಗುಡಿಯಲ್ಲಿ

ಒಂದು ನದಿ ಹತ್ರಶೂಟಿಂಗ್ ಗೆ ಮುನ್ನೂರು ಜನ ಬೇಕಿತ್ತು ನಮಿಗೆ. ಯಾರು ಮುನ್ನೂರು ಜನ? ಅವ್ರಿಗೆ ಹೋಗಿ ಕೇಳಿದ್ರೆ “ಏನು ಸಾರ್ ನಮಗೆ ಏನೂ ಕೆಲ್ಸ ಇಲ್ವ?” ಅಂತ ಹೇಳಿ ಬರ್ತನೇ ಇರ್ಲಿಲ್ಲ. ಆಮೇಲೆ ಒಂದು ನಾಲ್ಕು ಜನ ಒಂದು ಹಳೇ ಆಟೊ ತಂದು, ಅದ್ರಲ್ಲಿ ಲೌಡ್ ಸ್ಪೀಕರ್ ಹಾಕಿ “ನಾವು ಬ್ರಿಟೀಷರ ವಿರುದ್ದವಾಗಿ ಯಾವುದೋ ಚಿತ್ರ ಮಾಡ್ತಿದ್ದೀವಿ. ಅದಕ್ಕೆ ನೀವು ಖಾದಿ ಟೋಪಿ ಹಾಕ್ಕೊಂಡು ಬರ್ಬೇಕು, ರಾಷ್ಟ್ರಕ್ಕಾಗಿ”ಅಂತ ಅನೌನ್ಸ್ ಮಾಡಿದ್ರು. ಆಮೇಲೆ ಬಂದ್ರು ನೋಡಿ ಮುನ್ನೂರಲ್ಲ ಐನೂರು ಜನ ಬಂದ್ರು. 1980 ರಲ್ಲಿ ಮಾಡಿದ್ದು. ಅದು 1940 ರದ್ದು. ಅವ್ರ ಅಪ್ಪಂದು, ತಾತಂದು ಬಟ್ಟೆಗಳನ್ನೆಲ್ಲಾ ಹಾಕ್ಕೊಂಡು ಬಂದ್ರು. ಅವ್ರಿಗೆ ಏನೂ ಇಲ್ಲ, ಬರೀ ಊಟ ಅಷ್ಟೆ, “ಊಟ ಒಂದು ಕೊಡಿ ಸಾಕು”ಅಂತ ಎಲ್ಲಾ ಬಂದ್ರು. ಈಗ ಯೋಚ್ನೆ ಮಾಡಿದ್ರೂ ಮೈ ರೋಮಾಂಚನ ಆಗುತ್ತೆ. ಯಾಕಂದ್ರೆ ‘ಸಿ.ಆರ್. ಸಿಂಹ’ಅವ್ರು ಪೊಲ್ಯುಟೀಶಿಯನ್ ಅದ್ರಲ್ಲಿ, ಮೂರು ನಾಲ್ಕು ಪೇಜ್ ಡೈಲಾಗ್ ಅದು. ಅವ್ರು ಮಾತಾಡ್ತಿದ್ದಾರೆ, ನಾವು ನೋಡ್ತಿದ್ದೀವಿ, ಅಷ್ಟು ಜನ ಸಂಗ್ರಹಿಸಿದೀವಿ. ಜಗ್ಗಣ್ಣ ಆಲ್ರಡಿ ನಿಮ್ಮ ಚಾನೆಲಲ್ಲಿ ಹೇಳಿರ್ಬೋದು, ನಾನು ಒಂದು ಮಿನಿ ವರ್ಷನ್ ಹೇಳ್ತೀನಿ. ನಮ್ಮ ಜನರೇಟರ್ನವ್ನು ಮಹಾನುಭಾವ, ಜನರೇಟರ್ ನ ಹೆಜ್ಜೇನಿನ ಗೂಡು ಇರುವಲ್ಲಿ ಇಟ್ಟು, ಅದ್ರ ಹೊಗೆಯಿಂದ ಹೆಜ್ಜೇನು ಅಟ್ಯಾಕ್ ಮಾಡಿ, ನಾವೆಲ್ಲ ಓಡ್ಹೋಗಿ, ಪಾಪ ನಮ್ಮ ಮೇಕಪ್ ಮ್ಯಾನ್ಗೆ ತುಂಬಾ ಕಚ್ಚಿ, ಅವ್ರನ್ನ ಮಣಿಪಾಲ್ ಹಾಸ್ಪೆಟಲಲ್ಲಿ ಅಡ್ಮಿಟ್ ಮಾಡಿ, ಅವರ ಜೀವ ಉಳಿಸಿದ್ದು, ಈ ತರ ಎಲ್ಲಾ ವಿಚಿತ್ರವಾದ ಛಾಲೆಂಜಸ್.


ಸೊ ನಿಮ್ಮ ಕಣ್ಮುಂದೆ ಏನು ಕಾಣುತ್ತೆ, ಅದ್ರ ಹಿಂದೆ ಎಷ್ಟು ಕಷ್ಟ ಪಟ್ಟಿರ್ತೀವಿ? ಅದೆಲ್ಲಾ ಕೆಲವು ಜನರಿಗೆ ಗೊತ್ತಿಲ್ದೆನೂ ಇರ್ಬಹುದು, ಗೊತ್ತಾಗ್ದೇನೂ ಇರ್ಬಹುದು. ನನ್ನ ಪ್ರಕಾರ ಅದೆಲ್ಲ ಒಂದು ಮರೆಯಲಾಗದ ಇನ್ಸಿಡೆಂಟ್ಸ್.
ಮುಂದುವರೆಯುವುದು…

28 views