“ಯಾಕೋ ಆಗಲ್ಲ? ನೋಡೇ ಬಿಡೋಣ ಅಂತಿದ್ರು ಶಂಕರ್”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 53

(ಮಾಲ್ಗುಡಿ ಡೇಸ್ ಕಾಸ್ಟ್ಯೂಮ್ ಮುಖ್ಯಸ್ಥೆ, ಸುಂದರಶ್ರೀ ಅವರ ನೆನಪುಗಳು)ಮತ್ತೆ ಅಲ್ಲಿ ಏನಂದ್ರೆ, ನಾನು ನಾಮಕಾವಸ್ಥೆಗೆ ಕಾಸ್ಟ್ಯೂಮ್ ಡಿಸೈನರ್. ನಾನೊಬ್ಬಳೇ ಅಲ್ಲ. ಪ್ರತಿಯೊಬ್ರುನೂ ಪ್ರತಿಯೊಂದು ಕೆಲ್ಸನೂ ಮಾಡ್ತಿದ್ರು. ಅದನ್ನ ನಮ್ದು ಅನ್ಕೊಂಡು ನಾವು ಮಾಡ್ತಿದ್ವಿ. ಆ ತರ ಕೆಲ್ಸ ಮಾಡಕ್ಕೆ ಅವಕಾಶ ಮಾಡ್ತಿದ್ರು ಶಂಕರ್. ಆ ವ್ಯಕ್ತಿತ್ವನೇ ಹಾಗೆ. ಶಂಕರ್ ಗೆ ಯಾರೂ ಸುಮ್ಮನೆ ಕೂರ್ಬಾರ್ದು. ಮತ್ತೆ ಇನ್ನೊಂದು ಏನಂದ್ರೆ ಅವರು “ಆಗಲ್ಲ” ಅನ್ನೋ ಮಾತು ಕೇಳಕ್ಕೆ ರಡಿ ಇಲ್ಲ. “ನಮ್ ಕೈಯಲ್ಲಿ ಇದು ಆಗಲ್ಲ” ಅಂದ್ರೆ, “ಯಾಕ್ರೀ ಆಗಲ್ಲ? ಮನಸ್ಸಿದ್ದರೆ ಮಾರ್ಗ. ನೀವು ಮನಸ್ಸು ಮಾಡಿದ್ರೆ ಆಗುತ್ತೆ” ಅಂತಿದ್ರು.


ಅದಕ್ಕೆ ಒಂದು ಇನ್ಸಿಡೆಂಟ್ ಹೇಳ್ತೀನಿ ನಾನು, ಎಲ್ಲಿ ಹೋದ್ರೂ ಈ ಇನ್ಸಿಡೆಂಟ್ ಹೇಳ್ತೀನಿ ನಾನು. ಆಗುಂಬೆ ಹತ್ರ ‘ಕೊಡಚಾದ್ರಿ’ ಅಂತ ಒಂದು ಬೆಟ್ಟ ಇದೆ. ಅಲ್ಲಿ ‘ರೋಮನ್ ಇಮೇಜ್’ ಅಂತ ಶೂಟಿಂಗ್ ಮಾಡ್ತಿದ್ವಿ. ಅನಂತ್ ನಾಗ್ ಮತ್ತೆ ಬಿ.ವಿ ಅಯ್ಯರ್ ಅವ್ರು ಆಕ್ಟ್ ಮಾಡ್ತಿದ್ರು. ಇಬ್ರೇ ಆರ್ಟಿಸ್ಟ್. ಬೆಟ್ಟದ ಮೇಲೆ ಜನರೇಟರ್ ಹೊಗಲ್ಲ. ಸೋ ಏನಾಯ್ತು? ಲೈಟ್ಸ್ ಬೇಕು, ರಿಫ್ಲೆಕ್ಟರ್ ಬೇಕು. ಶಂಕರ್ ಮತ್ತೆ ರಾಮು ಸರ್ ಟ್ರಾಲಿ-ಟ್ರಾಕ್ ಇಲ್ಲದೆ ಕೆಲ್ಸನೇ ಮಾಡಲ್ಲ. ‘ಮಿಠಾಯಿವಾಲ’ದಲ್ಲಿ ನೂರಿಪ್ಪತ್ತು ಅಡಿ ಟ್ರಾಲಿಟ್ರಾಕ್ ಹಾಕಿದ್ರು ಅವ್ರು. “ಶಂಕರಣ್ಣ ಅಷ್ಟು ಮೇಲೆ ತಗೊಂಡೋಗಕ್ಕೆ ಆಗಲ್ಲ” ಅಂತ ಲೈಟ್ ಹುಡುಗ್ರು ಅಂದ್ರು. “ಯಾಕ್ರೋ ಆಗಲ್ಲ? ನಾನು ತಗೊಂಡು ಹೋಗ್ತೀನಿ.” ಅಂತ ಹೇಳಿ, ಟ್ರಾಲಿ ಟ್ರಾಕ್ ಎತ್ತೇ ಬಿಟ್ರು ಅವ್ರು. ಅಷ್ಟರಲ್ಲಿ ಹುಡುಗ್ರು “ಅಯ್ಯೂ, ನೀವು ಯಾಕೆ ತಗಿತಿದ್ದೀರ” ಅಂತ ಹೇಳಿ, ಹುಡುಗ್ರೆಲ್ಲಾ ಎತ್ಕೊಂಡು ಹೋಗೇ ಬಿಟ್ರು. ಹಾಗೆ ಹೋಗಿ ಇಡೀ ದಿನ ಶೂಟಿಂಗ್ ಮಾಡಿದ್ರು ಅಲ್ಲಿ. ಶುಟಿಂಗ್ ಮುಗಿಸಿ, ಸಾಯಂಕಾಲ ವಾಪಸ್ ಬಂದ್ವಿ. ಯಾಕಂದ್ರೆ ಶಂಕರ್ ಹೇಳ್ತಿದ್ರು ನನ್ಹತ್ರ “ಆಗಲ್ಲ” ಅನ್ನೊದು ಹೇಳ್ಳೇ ಬೇಡಿ. ಮನಸ್ಸಿದ್ರೆ ಏನು ಬೇಕಾದ್ರೂ ಆಗುತ್ತೆ. ಅದನ್ನೇ ನಾವು ಇವಾಗ ಕಲ್ತಿರೋದು. ಈಗ ನಮಗೆ ಯಾರಾದ್ರೂ “ಆಗಲ್ಲ” ಅಂದ್ಬಿಟ್ರೆ, ನಮ್ಮ ಕೈಯಲ್ಲಿ ಕೇಳಕ್ಕೆ ಆಗಲ್ಲ. ಬಟ್ ಏನು ಮಾಡೋದು ಟ್ರೆಂಡ್ ಚೇಂಜ್ ಆಗಿದೆ.ಮುಂದುವರೆಯುವುದು…

52 views