“ರಜನಿಕಾಂತ್‌ ಕೈ ತಪ್ಪಿದ ಗಿರಿ ಕನ್ಯೆ ಅವಕಾಶ”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 15


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)

ಸಾಹಸ ದೃಶ್ಯಗಳಲ್ಲಿ ಅಭಿನಯಿಸುವಾಗ ಕಲಾವಿದರ ಜೀವ ಆಪತ್ತಿನಲ್ಲಿ ಇರುತ್ತದೆ. ಇತ್ತೀಚೆಗೆ ತಿಪ್ಪಗೊಂಡನಹಳ್ಳಿಯಲ್ಲಿ ಜೀವ ಕಳೆದುಕೊಂಡ ಕಲಾವಿದರಾದ ಉದಯ್‌, ಅನಿಲ್‌ ಇದಕ್ಕೆ ಜೀವಂತ ಸಾಕ್ಷಿ. ಆಪರೇಷನ್‌ ಜ್ಯಾಕ್‌ ಪಾಟ್‌ ಚಿತ್ರೀಕರಣದ ಸಂದರ್ಭದಲ್ಲಿ ರಾಜ್‌ಕುಮಾರ್‌ ಅವರ ಜೀವಕ್ಕೂ ಆಪತ್ತು ಎದುರಾಗಿತ್ತು. ಅವರನ್ನು ಅಂದು ಕಳೆದುಕೊಳ್ಳುವ ಸಂದರ್ಭ ಬಂದಿತ್ತು. ಆ ಸಾಹಸ ದೃಶ್ಯವನ್ನು ಜೋಗದಲ್ಲಿ ಚಿತ್ರೀಕರಿಸುತ್ತಿದ್ದೆವು.


ರೇಖಾ ಆ ಸಿನಿಮಾದ ಹೀರೊಯಿನ್‌. ಹಾಡಿನ ಚಿತ್ರೀಕರಣ ಇತ್ತು. ರೇಖಾ ಅವರು ರಾತ್ರಿ 2.30 ಗಂಟೆಯಾದರೂ, ಬೆಂಚ್‌ ಮೇಲೆ ಕೂತಿದ್ದಾರೆ ನೋಡಿ ಸರ್‌ ಎಂದು ಮಲಗಿದ್ದ ನನ್ನನ್ನು ಏಳಿಸಿ, ನಮ್ಮ ಪ್ರೊಡಕ್ಷನ್‌ ಮ್ಯಾನೇಜರ್‌ ಹೇಳಿದ. ನಾನು ತಕ್ಷಣ ಎದ್ದು ಹೋದೆ. ಏನಮ್ಮ ರೇಖಾ ಹೀಗೆ ಕೂತಿದ್ದೀಯ ಎಂದೆ. ಅವತ್ತು ಬೆಳದಿಂಗಳು ಇತ್ತು. ನಾನು ಜೋಗ್‌ ಫಾಲ್ಸ್‌ನ ಚಂದ್ರನ ಬೆಳಕನ್ನು ಆನಂದಿಸುತ್ತಿದ್ದೇನೆ. ನನಗೆ ಎದ್ದು ಹೋಗಕ್ಕೆ ಮನಸ್ಸಾಗುತ್ತಿಲ್ಲ ಎಂದಳು. ನಾಳೆ ಫೈಟ್‌ ಸೀನ್‌ ಇದೆ ರೆಸ್ಟ್‌ ತಗೋ ಎಂದೆ. ನನಗೆ ಮನಸ್ಸಿಗೆ ತೃಪ್ತಿ ಆಗುವವರೆಗೂ ಕೂತಿದ್ದು ಹೋಗುತ್ತೇನೆ. ನನ್ನ ಬಗ್ಗೆ ಚಿಂತೆ ಮಾಡಬೇಡಿ ಎಂದಳು. ಆಗ ನನಗೆ ಸಮಾಧಾನ ಆಯ್ತು. ಎಲ್ಲಿ ಜೀವ ಕಳೆದುಕೊಂಡು ಬಿಡ್ತಾಳೋ ಎಂಬ ಹೆದರಿಕೆ ಇತ್ತು. ಆಯ್ತು ನಿನಗಿಷ್ಟ ಬಂದಾಗ ಹೋಗು ಎಂದೆ. ಪ್ರೊಡಕ್ಷನ್‌ ಮ್ಯಾನೇಜರನ್ನು ಕರೆದು ಆಕೆ ಹೋಗುವವರೆಗೂ ಅಲ್ಲೇ ಕುಳಿತಿರುವಂತೆ ಹೇಳಿದೆ.
ಮರುದಿನ ಫೈಟಿಂಗ್ ಶೂಟಿಂಗ್‌ ಮಾಡುತ್ತಿದೆವು. ಸಾಹಸ ಕಲಾವಿದರಾದ ಶಿವಯ್ಯ ಮತ್ತು ಜೂಡೋ ರತ್ನಂ ಇದ್ರು. ಎಲ್ಲರೂ ಜೋಶ್‌ನಲ್ಲಿದ್ದೆವು. ಫಾಲ್ಸ್‌ ಕಾಣುತ್ತಿದ್ದ ಸ್ಥಳದಲ್ಲಿಯೇ ಶೂಟಿಂಗ್ ಮಾಡುತ್ತಿದ್ವಿ. ಐದನೇ ಶಾಟ್‌ಗೆ ತೂದಿಗೆ ಹೋಗಿದ್ವಿ. ಅಲ್ಲಿ ಪಾಚಿ ಕಟ್ಟಿತ್ತು. ಅದರ ಮೇಲೆ ರಾಜ್‌ಕುಮಾರ್‌ ಕಾಲಿಟ್ಟಿದ್ರು ಜಾರಿಬಿಟ್ರು. ತಕ್ಷಣವೇ ಜುಡೋ ರತ್ನಂ ಕೈಹಿಡಿದು ಎಳೆದುಬಿಟ್ಟ. ರಾಜ್‌ಕುಮಾರ್‌ ಅವರನ್ನು ಬದುಕಿಸಿಬಿಟ್ಟ. ನಮ್ಮೆಲ್ಲರಿಗೂ ನಡುಕ ಬಂದಿತ್ತು. ಈ ಜಾಗದಲ್ಲಿ ಶೂಟಿಂಗ್‌ ಮಾಡುವುದೇ ಬೇಡ ಅನಿಸಿಬಿಡ್ತು. ಶಿವಯ್ಯ ಏನೇ ಮಾಡು, ಕಲಾವಿದರಿಗೆ ಸುರಕ್ಷತೆ ಇರಬೇಕು. ಹಾಗೆ ತುದಿಗೆ ಕರೆದುಕೊಂಡು ಹೋಗಬೇಡ. ಹತ್ತಡಿ ಹಿಂದೆ ಶೂಟಿಂಗ್ ಮಾಡು ಎಂದೆ. ಇಲ್ಲಿಂದ ಜಾರಿಕೊಂಡು ಹೋಗಲ್ವಾ ಅವರು, ಇಲ್ಲಿ ಮಾಡಿದ್ರು ಒಂದೇ, ಅಲ್ಲಿ ಮಾಡಿದ್ರು ಒಂದೇ ಎಂದ. ಅದೆಲ್ಲ ನನಗೆ ಗೊತ್ತಿ‌ಲ್ಲ, ನೀನು ಬೇಕಿದ್ರೆ ಅಲ್ಲಿ ನಾಲ್ಕು ಜನರನ್ನು ನಿಲ್ಲಿಸು, ಇಲ್ಲಿ ಶೂಟ್‌ ಮಾಡು ಎಂದು ನಿರ್ದೇಶಿಸಿದೆ. ರಾಜ್‌ಕುಮಾರ್‌ ಅವರೇನು ಭಯ ಬೀಳಲಿಲ್ಲ. ನೀವ್ಯಾಕೆ ಭಯ ಪಡ್ತೀರಾ, ಇದೆಲ್ಲ ಫೈಟಿಂಗ್‌ನಲ್ಲಿ ಸಹಜ ಎಂದುಬಿಟ್ರು. ನನ್ನ ಜೀವ ಹೋಗಬೇಕು ಎಂದ್ರೆ ಹೋಗಿ ಬಿಡುತ್ತಿತ್ತು ಅಷ್ಟೇ ಅಂದ್ರು. ಜುಡೋ ರತ್ನಂ ಅವರನ್ನು ಅಭಿನಂದಿಸಲೇಬೇಕು. ದೇವರು ಅವನಿಗೆ ಏನು ಬುದ್ಧಿ ಕೊಟ್ಟನೋ ಗೊತ್ತಿಲ್ಲ ತಕ್ಷಣವೇ ರಕ್ಷಿಸಿದ ಎಂದರು. ಅವರು ಡ್ಯೂಪ್‌ ಬಳಸುತ್ತಿರಲಿಲ್ಲ. ಜುಡೋ ರತ್ನಂ ಅವರಿಗೆ 1 ಸಾವಿರ ಬಹುಮಾನದ ತರಹ ಕೊಟ್ಟೆ. ಅದು ಯಾರಿಗೂ ಗೊತ್ತಿರಲಿಲ್ಲ.

ಇದೇ ಸಿನಿಮಾದಲ್ಲಿ ಇನ್ನೊಂದು ಫೈಟಿಂಗ್ ದೃಶ್ಯವನ್ನು ಮಡಿಕೇರಿಯ ಕಾಫಿ ಯಾರ್ಡ್‌ನಲ್ಲಿ ಶೂಟ್‌ ಮಾಡುತ್ತಿದ್ವಿ. ಆಗ, ರಾಜ್‌ಕುಮಾರ್‌ ಅವರು, ದೊರೆ ಅವರೇ ಈ ಫೈಟಿಂಗ್‌ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ತೆಗೆಯೋದಕ್ಕೆ ಆಗುತ್ತಾ ಎಂದು ಬಂದು ಕೇಳಿದ್ರು. ನಾಲ್ಕೂವರೆ ನಿಮಿಷದ ಫೈಟಿಂಗ್ ಅದು. ಸರ್‌, ನೀವು ಫೈಟ್‌ ಮಾಡಿದ್ರೆ ನಾನು ತೆಗೆಯುತ್ತೇನೆ ಎಂದೆ. ಸರಿ ಅಂದ್ರು. ನನಗೆ ಫುಲ್‌ ರಿಹರ್ಸಲ್‌ ಬೇಕು. ಕ್ಯಾಮೆರಾ ಎಲ್ಲೆಲ್ಲಿ ಹೋಗುತ್ತೆ, ನೀವು ಎಲ್ಲೆಲ್ಲಿ ಹೋಗ್ತೀರಾ ಎನ್ನುವುದು ನನಗೆ ಗೊತ್ತಾಗಬೇಕು ಎಂದ್ರು. ರಿಹರ್ಸಲ್‌ ಮುಗಿದ ಮೇಲೆ, ಒಂದೇ ಶಾಟ್‌ನಲ್ಲಿ ಫುಲ್‌ ಫೈಟಿಂಗ್‌ ಮಾಡಿ ಮುಗಿಸಿದ್ರು. 450 ಅಡಿಯ ಶಾಟ್ ಆಗ ಯಾರೂ ತೆಗೆಯುತ್ತಿರಲಿಲ್ಲ. ಈಗ ಡಿಜಿಟಲ್‌ ಬಂದಿರುವುದರಿಂದ 4 ಸಾವಿರ ಅಡಿವರೆಗೂ ತೆಗೆಯಬಹುದು. ರಾಜ್‌ಕುಮಾರ್‌ ಅವರು ನನಗೆ ಉತ್ಸಾ


ಎರಡು ಕನಸು ಆದ ಮೇಲೆ ರಾಜ್‌ಕುಮಾರ್ ಕಾಲ್‌ಶೀಟ್‌ ಇರಲಿಲ್ಲ. ಬಯಲುದಾರಿ ಮಾಡಿದ್ವಿ. ನಂತರ ಅವರ ಕಾಲ್‌ಶೀಟ್ ಸಿಕ್ತು. ಆಗ ಅಶ್ವತ್ಥ ಅವರ ಕಾದಂಬರಿ ‘ಗಿರಿಕನ್ಯೆ’ಯನ್ನು ತೆಗೆದುಕೊಂಡೆವು. ಜಯಮಾಲಾ ಹಿರೋಯಿನ್‌, ರಾಜನ್‌–ನಾಗೇಂದ್ರ ಮ್ಯೂಸಿಕ್‌ ಡೈರೆಕ್ಟರ್‌. ಆ ಸಿನಿಮಾದಲ್ಲಿಯೂ ಎಲ್ಲಾ ಹಾಡುಗಳು ಹಿಟ್‌ ಆಯ್ತು. ಎರಡು ಸೀನ್‌ ಚಿತ್ರೀಕರಣ ಮಾಡಿದ್ವಿ. ಫೈಟಿಂಗ್‌ ದೃಶ್ಯಕ್ಕೆ ಹಾರೋಹಳ್ಳಿ ಸಾತನೂರು ಡ್ಯಾಮ್‌ ಬಳಿ ಹೋಗಿದ್ವಿ. ನಮ್ಮ ಚಿತ್ರಕ್ಕೆ ವಿಲನ್‌ ರಜನೀಕಾಂತ್‌. ಅವರು ಅಲ್ಲಿಗೆ ಬಂದಿದ್ರು. ಅಲ್ಲಿ ಆಗ ಒಂದು ಆಂಜನೇಯ ದೇವಸ್ಥಾನ ಮತ್ತು ಉಳಿಯಲು ಚಿಕ್ಕದೊಂದು ಐಬಿ ಇತ್ತು. ಧಾರಾಕಾರವಾದ ಮಳೆ. ಎರಡು ದಿನ ಕಾದರೂ, ಶೂಟಿಂಗ್ ಮಾಡಲು ಆಗಲಿಲ್ಲ. ಇದ್ದ ಒಂದು ಕೋಣೆಯನ್ನು ಜಯಮಾಲಾಗೆ ಬಿಟ್ಟು ಕೊಟ್ಟಿದ್ವಿ. ರಾಜ್‌ಕುಮಾರ್‌ ಅವರನ್ನು ಸ್ಥಳೀಯರು ಕರೆದುಕೊಂಡು ಹೋಗಿದ್ರು. ಅವರ ಪರಿಚಯದವರು. ಆ ರೂಂ ಮುಂದಿನ ಜಗಲಿಯ ಮೇಲೆ ನಾನು, ದೊರೆ, ಚಿಟ್ಟಿಬಾಬು, ರಜನೀಕಾಂತ್‌ ಜಮಖಾನ ಹಾಸಿಕೊಂಡು ಮಲಗಿದ್ವಿ. ಎರಡು ದಿವಸ ಅಲ್ಲಿ ಇದ್ವಿ. ಮೂರನೇ ದಿವಸ ಮಳೆ ನಿಲ್ಲುವುದಿಲ್ಲ ಎಂದು ಪ್ಯಾಕ್‌ಅಪ್‌ ಮಾಡಿದೆವು. ರಜನೀಕಾಂತ್‌ ಕಾಲ್‌ ಶೀಟ್‌ ಬೇರೆ ಇರಲಿಲ್ಲ. ನಾನು ಹೋಗಬೇಕು ತಮಿಳುನಾಡಿನಲ್ಲಿ ಶೂಟಿಂಗ್‌ ಇದೆ ಎಂದು ಹೇಳಿದ್ರು. ಸರಿ ಅಂಥ ಹೊರಟು ಬಿಟ್ಟೆವು.


ದ್ವಾರಕನಾಥ್‌ ಎಂಬುವವರು ಆ ಸಿನಿಮಾದ ಪ್ರೊಡ್ಯೂಸರ್‌. ನಾನು, ದೊರೆ ಮತ್ತು ದ್ವಾರಕನಾಥ್‌ ಮದ್ರಾಸ್‌ಗೆ ಕಾರಿನಲ್ಲಿ ಹೋಗುತ್ತಿದೆವು. ಭಗವಾನ್‌, ಯಾವತ್ತೂ ನಾವು ಶೂಟಿಂಗ್‌ ಪ್ರಾರಂಭಿಸಿದ ಮೇಲೆ ನಿಲ್ಲಿಸಿರಲಿಲ್ಲ. ಇದು ಯಾಕೋ ನನಗೆ ಅಪಶಕುನದ ತರಹ ಕಾಣುತ್ತಿದೆ. ಈ ಪಿಕ್ಚರ್‌ ಮಾಡುವುದೇ ಬೇಡ ಎಂದು ದೊರೆ ಹೇಳಿದ್ರು. ಆಗ ನಾನು, ರಾಜ್‌ಕುಮಾರ್‌ ಅವರ ಕಾಲ್‌ಶೀಟ್‌ ಸಿಗದೇ, ಈಗ ಸಿಕ್ಕಿದೆ ಮಾಡದೇ ಇರೋದಕ್ಕೆ ಆಗುತ್ತಾ ಎಂದೆ. ಇಲ್ಲ, ಭಗವಾನ್‌ ನನಗೆ ಇಷ್ಟ ಇಲ್ಲ ಅಂದ್ರು. ಪಕ್ಕದಲ್ಲೇ ಕೂತಿದ್ದ ದ್ವಾರಕನಾಥ್‌ ನೀವ್ಯಾಕೆ ಇಷ್ಟು ಒದ್ದಾಡುತ್ತಿದ್ದೀರಾ ನಿಮಗೆ ಬೇಡ ಎಂದ್ರೆ ಕೊಡಿ, ನಾನು ಮಾಡಿ ಬಿಡ್ತೇನೆ ಎಂದ. ಆಗ ದೊರೆಯವರು, ಎಷ್ಟು ಖರ್ಚಾಗಿದೆ ಅಂಥ ನೋಡಿ, ಅವರು ಕೊಟ್ರೆ ಅವರಿಗೆ ಕೊಟ್ಟುಬಿಡಿ ಅಂದ್ರು. ದೊರೆಯವರು ಹೇಳಿದ್ದಕ್ಕೆ ನಾನು ಎದುರು ಮಾತಾಡುವ ಹಾಗಿರಲಿಲ್ಲ. ಒಂದೇ ಒಂದು ಸಲ ಮಾತಾಡಿದ್ದೆ ಅದು ಯಾವಾಗ ಎಂದು ಮುಂದೊಮ್ಮೆ ಹೇಳ್ತೇನೆ.


ಅಲ್ಲಿವರೆಗೆ 63 ಸಾವಿರ ಖರ್ಚಾಗಿತ್ತು. ಇಷ್ಟು ಖರ್ಚಾಗಿದೆ ಅದರ ಲೆಕ್ಕ ಕೊಡುತ್ತೇನೆ. ಅಷ್ಟು ದುಡ್ಡು ಕೊಟ್ರೆ ನಿನಗೆ ಪಿಕ್ಚರ್‌ ಬರೆದು ಕೊಡ್ತೇನೆ ಅಂದ್ವಿ. ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ಅವರಿಗೂ ಕೇಳಿದ್ವಿ. ನಮಗೇನು ಇಲ್ಲ ಕೊಡಿ, ಮತ್ತೊಂದು ಸಿನಿಮಾ ಮಾಡ್ರಿ ಅಂದ್ರು. ನನ್ನ ಕಾಲ್‌ಶೀಟ್‌ ನಿಮಗೆ ಇದ್ದೇ ಇರುತ್ತೆ ಅಂದ್ರು.


ಗಿರಿಕನ್ಯೆಯನ್ನು ದ್ವಾರಕನಾಥ್‌ಗೆ ಬರೆದು ಕೊಟ್ವಿ. ಮಳೆ ಎಲ್ಲ ನಿಂತು, ಬಿಸಿಲು ಬಂತು ಪುನಃ ಶೂಟಿಂಗ್ ಶುರುವಾಯ್ತು. ಆಗ ದ್ವಾರಕನಾಥ್‌ ಅವರಿಗೆ ರಜನೀಕಾಂತ್‌ ಅವರನ್ನು ಕರೆಸುವಂತೆ ಹೇಳಿದಾಗ, ಅವರು, ವಜ್ರಮುನಿ ನನ್ನ ಹತ್ತಿರ 25 ಸಾವಿರ ಸಾಲ ತೆಗೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಅವರನ್ನೇ ಹಾಕಿಕೊಂಡು, ಆ ದುಡ್ಡನ್ನು ಇಲ್ಲಿ ಹೊಂದಿಸುತ್ತೇನೆ ಎಂದ್ರು. ಅವರು ಪ್ರೊಡ್ಯುಸರ್‌, ನಾವು ನಿರ್ದೇಶಕರು ಏನು ಹೇಳುವ ಹಾಗಿರಲಿಲ್ಲ. ನಮ್ಮ ನಿರ್ದೇಶನಕ್ಕೆ ಎರಡು ಲಕ್ಷ ಕೊಡುವಂತೆ ಮೊದಲೇ ಮಾತನ್ನಾಡಿಕೊಂಡಿದ್ದೆವು.


ಅದು ರಜನೀಕಾಂತ್‌ ಅವರ ಮೇಲೆ ತುಂಬಾ ಪರಿಣಾಮ ಬೀರಿತು. ಅದರ ಆರೋಪ ನಮ್ಮ ಮೇಲೆ ಬಂತು. ದೊರೆ–ಭಗವಾನ್‌ ಅವರು ಪಿಕ್ಚರ್‌ಗೆ ಹಾಕಿಕೊಂಡು ನನಗೆ ಬೇಡ ಅಂದ್ರು. ನನ್ನ ಕೆರಿಯರ್‌ನಲ್ಲಿ ಆದ ಅವಮಾನ ಎಂದು ಅವರು ಬೇಸರ ಮಾಡಿಕೊಂಡ್ರು. ಆ ಫೀಲಿಂಗ್‌ ಇನ್ನು ಇದೆ. ಆದ್ರೆ ಅದು ನಮ್ಮ ತಪ್ಪಲ್ಲ. ನಮ್ಮ ಕೈಮೀರಿ ಆದ ತಪ್ಪು, ನಮ್ಮಿಂದ ಏನು ಮಾಡಲು ಆಗುವುದಿಲ್ಲ.

ಗಿರಿಕನ್ಯೆಯ ಹಾಡೊಂದರ ಶೂಟಿಂಗ್‌ ಬಂಡೀಪುರದಲ್ಲಿ ಇತ್ತು. ಅಲ್ಲಿ ರಾಜ್‌ಕುಮಾರ್‌ ಸಾಕು ಆನೆಯ ದಂತದ ಮೇಲೆ ಮಲಗಿಕೊಳ್ಳುತ್ತಾರೆ. ಅಷ್ಟು ಧೈರ್ಯ ಅವರಿಗೆ. ಆನೆ ಎತ್ತಿ ಹಾಕಿದ್ರೆ ಏನು ಮಾಡುವುದು ಎಂಬ ಚಿಂತೆ ನಮಗೆ. ಅವರು ಶೂಟ್‌ ಮಾಡಿ ಅಂತಿದ್ದಾರೆ. ಮಾವುತ ಅದೇನೂ ಮಾಡುವುದಿಲ್ಲ ಶೂಟಿಂಗ್‌ ಮಾಡಿ ಅಂದ. ಹಣೆಯಲ್ಲಿ ಬರೆದ ಹಾಗೆ ಆಗುತ್ತದೆ. ನೀವು ಶಾಟ್‌ ತೆಗೀರಿ ಚೆನ್ನಾಗಿ ಬರ್ಲಿ ಅಂದ್ರು ರಾಜ್‌ಕುಮಾರ್‌. ನಮ್ಮ ಹೃದಯ ಬಾಯಲ್ಲಿ ಇರಿಸಿಕೊಂಡು ಶೂಟ್ ಮಾಡಿದ್ವಿ. ನಿರ್ದೇಶಕರಿಗೆ ಬೇಕಾದ ಸ್ಫೂರ್ತಿಯನ್ನು ಅವರು ತುಂಬುತ್ತಿದ್ರು. ಎಷ್ಟೇ ಅಪಾಯಗಳು ಎದುರಾದರೂ ಪರ್ವಾಗಿಲ್ಲ. ಒಟ್ಟಿನಲ್ಲಿ ಅವರಿಗೆ ಪಿಕ್ಚರ್‌ ಚೆನ್ನಾಗಿ ಬರಬೇಕು ಅಷ್ಟೆ. ಆ ಧೈರ್ಯ, ಸ್ಥೈರ್ಯ, ಆತ್ಮಬಲ ಹೇಗೆ ತುಂಬಿಕೊಂಡಿದ್ದರೋ ಅದನ್ನು ಭಗವಂತನೇ ಬಲ್ಲ. ಯಾವ ಭಯವೂ ಇರಲಿಲ್ಲ ಅವರಿಗೆ. ಏನಾದರೂ ಮಾಡಬೇಕು ಎಂದಾದರೆ, ಅದಕ್ಕೆ ಬೇಕಾದ ತರಬೇತಿ, ತಯಾರಿ ಎಲ್ಲಾ ಮಾಡಿಕೊಳ್ಳುತ್ತಿದ್ರು.


ಎರಡು ಕನಸು ಓಪನಿಂಗ್ ಶಾಟ್‌ನಲ್ಲಿ ರಾಜ್‌ಕುಮಾರ್ ಸ್ಕೂಟರ್‌ ಓಡಿಸಬೇಕಿತ್ತು. ಆದರೆ, ಅವರಿಗೆ ಬರುತ್ತಿರಲಿಲ್ಲ. ನನಗೆ ಕಲಿಸಿಕೊಡಿ, ಮಾಡ್ತೇನೆ. ಸಿನಿಮಾಕ್ಕೆ ಏನು ಅಗತ್ಯವೋ ಅದನ್ನು ನಾನು ಮಾಡ್ತೇನೆ ಅಂತಿದ್ರು. ನಮ್ಮ ಮನೆಯಲ್ಲಿ ಸ್ಕೂಟರ್‌ ಇದೆ ನೀವು ಕಲಿಯುವುದಾದ್ರೆ ಕಲೀರಿ ಎಂದೆ. ಬೆಳಿಗ್ಗೆ 6 ಗಂಟೆಗೆ ಬಂದು ಬಿಡುತ್ತಿದ್ರು ನಮ್ಮನೆಗೆ. ಕಲಿಯಲು ನನ್ನ ಬಾಮೈದನನ್ನು ಕರೆದುಕೊಂಡು ಹೋಗುತ್ತಿದ್ರು. ಎರಡು ದಿನದಲ್ಲಿ ಸ್ಕೂಟರ್‌ ಓಡಿಸುವುದನ್ನು ಕಲಿತರು. ಆ ಚಿತ್ರದಲ್ಲಿರುವ ಸ್ಕೂಟರನ್ನು ಯಾರೋ 1 ಲಕ್ಷಕ್ಕೆ ಖರೀದಿಸಿ ಇಟ್ಟುಕೊಂಡಿದ್ದಾರೆ. ಅದನ್ನು ಇನ್ಯಾರೋ 1.40 ಲಕ್ಷಕ್ಕೆ ಕೊಡಿ ಅಂದ್ರು ಅವರು ಕೊಡಲ್ಲ ಅಂದ್ರಂತೆ. ರಾಜ್‌ಕುಮಾರ್‌ ಅವರು ಓಡಿಸಿರುವ ಗಾಡಿ ಆದ್ದರಿಂದ ನಾನು ಯಾರಿಗೂ ಕೊಡುವುದಿಲ್ಲ. 10 ಲಕ್ಷ ಕೊಟ್ಟರೂ, ಕೊಡುವುದಿಲ್ಲ ಅಂದ್ರಂತೆ. ಅವರವರ ಅಭಿಮಾನ. ಅಂತಹ ಹಲವಾರು ಅಭಿಮಾನಿಗಳು ಇದ್ದಾರೆ ರಾಜ್‌ಕುಮಾರ್‌ಗೆ.


ಹಿಂದಿನ ಕಾಲದಲ್ಲಿ ಮನೆ ಲೂಟಿ ಮಾಡಲು ಎಣ್ಣೆ ಹಚ್ಚಿಕೊಂಡು ಬರುತ್ತಿದ್ರಂತೆ. ಅವರನ್ನು ಹಿಡಿದುಕೊಳ್ಳಲು ಹೋದ್ರೆ ಜಾರುತ್ತಿತಂತೆ. ಅವರಿಗೆ ಎಣ್ಣೆ ಕಳ್ಳರು ಎನ್ನುತ್ತಿದ್ರು. ಆ ಪಾತ್ರವನ್ನು ಗಿರಿಕನ್ಯೆಯಲ್ಲಿ ಹಾಕಿದ್ವಿ. ಆ ಪಾತ್ರ ಚೆನ್ನಾಗಿ ಮೂಡಿಬಂತು.


ಗಿರಿಕನ್ಯೆ ಆದ ಮೇಲೆ ಆಪರೇಷನ್‌ ಡೈಮಂಡ್‌ ರಾಕೆಟ್‌, ಆಮೇಲೆ ಚಂದನದ ಗೊಂಬೆ ಬಂತು.


ಮುಂದುವರೆಯುವುದು...

ಸಂದರ್ಶಕರು - ಕೆ.ಎಸ್‌ ಪರಮೇಶ್ವರ29 views