
ರಥಸಪ್ತಮಿ, ಮನಮೆಚ್ಚಿದ ಹುಡುಗಿ ಕಥೆಯ ಆಯ್ಕೆ
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 30
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ರಾಜ್ಕುಮಾರ್ ಅವರ ಮೂವರು ಮಕ್ಕಳ ಸಿನಿಮಾದ ಕಥೆ ತಯಾರಿಗೆ ನಾನು ಹೋಗಿಲ್ಲ. ಆದರೆ, ‘ರಥಸಪ್ತಮಿ’ ಸಿನಿಮಾದ ರೈಟ್ಸ್ ನಮ್ಮ ಬಳಿ ಇತ್ತು. ಅವರು ಕೇಳಿದರು ಹಾಗಾಗಿ ಅವರಿಗೆ ಕೊಟ್ಟೆವು. ಕುಂ.ವೀರಭದ್ರಪ್ಪ ಅವರ ಬೇಟೆ ಕಾದಂಬರಿಯ ಹಕ್ಕನ್ನು ಅವರಿಗೆ ನೀಡಿದೆವು. ಆ ಕಾದಂಬರಿ ಆಧಾರಿತ ಸಿನಿಮಾವೇ ‘ಮನ ಮೆಚ್ಚಿದ ಹುಡುಗಿ’. ಅವುಗಳು ನಮ್ಮ ಆಯ್ದ ಕಥೆಗಳಾಗಿದ್ದವು. ಪಾರ್ವತಮ್ಮ ಅವರು ಕೇಳಿದ ಕಾರಣ ಕೊಡಬೇಕಾಯಿತು. ಅವರು ಪ್ರಾಣ ಕೇಳಿದ್ರು ಕೊಟ್ಟುಬಿಡುತ್ತಿದ್ದೆವು.
ನಾದಮಯ ಹಾಡಿನ ಬಗ್ಗೆ ಇದ್ದ ಭಯ
‘ನಾದಮಯ’ ಶೂಟಿಂಗ್ ಮುಗಿಸಿಕೊಂಡು ಬಂದೆವು. ಹೆಚ್ಚುಕಮ್ಮಿ ಹತ್ತು ರೋಲ್ ಇತ್ತು. ಹಾಗಾಗಿ ಎಡಿಟ್ ಮಾಡಲು ನಾಲ್ಕು ದಿನವಾಯ್ತು. ಭಕ್ತ ವತ್ಸಲಾ ಅದರ ಎಡಿಟರ್. ಕನ್ನಡ ಸಿನಿಮಾ ರಂಗ ಕಂಡ ಅತ್ಯುತ್ತಮ ಎಡಿಟರ್ ಅವರು. ಎಡಿಟಿಂಗ್ ಮುಗಿದ ನಾಲ್ಕನೇ ದಿನಕ್ಕೆ ಹಾಡನ್ನು ನೋಡಿದೆ. ನನಗೆ ಓಕೆ ಅನಿಸಿತು. ಭಕ್ತ ಅವರನ್ನು ಚೆನ್ನಾಗಿದ್ದೀಯ ಎಂದು ಕೇಳಿದೆ. ಎಡಿಟ್ ಮಾಡಿದ್ದೇನೆ. ಬೇರೇನು ಗೊತ್ತಿಲ್ಲ ಎಂದ್ರು. ಎಡಿಟ್ ಆಗಿದ್ರೆ ನಾನ್ನೊಮ್ಮೆ ಹಾಡನ್ನು ನೋಡಬೇಕು ಎಂದು ರಾಜ್ಕುಮಾರ್ ಹೇಳಿದ್ರು. ಹಾಡು ತಯಾರಾಗಿದೆ ಬಂದು ನೋಡಿ ಎಂದೆ. ಮರುದಿನ ಅವರು ಮತ್ತು ವರದಪ್ಪ ಬಂದ್ರು. ಆಗ ಅವರು, ತುಂಬಾ ಉದ್ದ ಇದೆ ಎಂದು ಅನಿಸುತ್ತಿದೆ. ನನಗೆ ಸ್ವಲ್ಪ ಬೋರ್ ಆಯ್ತು ಎಂದರು. ನಾನು ಪಾತಾಳಕ್ಕಿಂತಲೂ ತಳಕ್ಕೆ ಇಳಿದೆ. ಆಗ, ಭಕ್ತ ಅವರ ಬಳಿ ಹಾಡನ್ನು ಇನ್ನು ಸ್ವಲ್ಪ ಕಡಿಮೆ ಮಾಡಲು ಸಾಧ್ಯವೇ ಎಂದೆ. ಭಕ್ತ ಅವರು ಹಾಡನ್ನು ಪದೇ ಪದೇ ಕೇಳಿ ಒಂದೂವರೆ ನಿಮಿಷ ಕಟ್ ಮಾಡಿದ್ರು. 7.30 ನಿಮಿಷಕ್ಕೆ ಬಂದು ನಿಲ್ತು. ಇದಕ್ಕೂ ಮೇಲೆ ಕಟ್ ಮಾಡಲು ಸಾಧ್ಯವಿಲ್ಲ ಅಂದ್ರು. ರಾಜ್ಕುಮಾರ್ ಅವರು ಮತ್ತೊಮ್ಮೆ ಹಾಡನ್ನು ಕೇಳಿ ಈಗ ಚೆನ್ನಾಗಿದೆ ಅಂದ್ರು. ನನಗೆ ಪಾತಾಳದಿಂದ ಎದ್ದು ಭೂಮಿ ಮೇಲೆ ಬಂದಂತಾಯ್ತು. ದೊರೆಯವರು, ‘ನೀವು ತೆಗೆದಿದ್ದೀರಾ ನೀವೇ ಮಾಡಿಕೊಳ್ಳಿ’ ಎಂದುಬಿಟ್ರು. ಆ ಸಿನಿಮಾ ಹಾಡಿನಿಂದಲೇ ಯಶಸ್ವಿಯಾಯಿತೆಂದು ಹಲವರು ಹೇಳುತ್ತಾರೆ.
ಡಾನ್ಸ್ ತೆಗೆಯುವಾಗ ಹಾಗೆ ಹಾಡನ್ನು ತೆಗೆಯುತ್ತಿದ್ದೀರಾ ಎಂದು ರಾಜ್ಕುಮಾರ್ ಅವರು ಹೇಳಿದಾಗಲೇ ನಾನು, ‘ಮುತ್ತುರಾಜಣ್ಣ ಇದು ಒಂಬತ್ತು ನಿಮಿಷದ ಹಾಡಿದು. ಈ ಸಿನಿಮಾದ ಶಕ್ತಿಯೇ ಈ ಹಾಡು. ಸಿನಿಮಾ ಈ ಹಾಡಿನಿಂದಾಗಿಯೇ ಯಶಸ್ಸುಗಳಿಸಬಹುದು ಅಥವಾ ವಿಫಲವಾಗಬಹುದು. ಈಗ ಭವಿಷ್ಯ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದ್ದೆ. ಈ ಹಾಡನ್ನು ನೋಡುವ ಸಲುವಾಗಿಯೇ ಅಂಗವಿಲಕರು, ನಡೆಯಲು ಸಾಧ್ಯವಾಗದೇ ಇರುವ ವಯಸ್ಸಾದವರು ಬಂದು ಕುಳಿತುಕೊಳ್ಳುತ್ತಿದ್ದರು. ಈ ಸಿನಿಮಾ 10 ವಾರ ಹೌಸ್ಫುಲ್ ಆಗಿತ್ತು. ಯಾರನ್ನು ಕೇಳಿದ್ರು ನಾದಮಯ ಹಾಡು ಫಸ್ಟ್ಕ್ಲಾಸ್ ಆಗಿದೆ ಎನ್ನುತ್ತಿದ್ರು. ರಾಜ್ಕುಮಾರ್ ಅವರು ಆ ಹಾಡಿನಲ್ಲಿ ಆಕಾಶ ತೋರಿಸುವಾಗ ಕೃಷ್ಣ ಮತ್ತು ಸರಸ್ವತಿಯನ್ನು ತೋರಿಸಲು ಸಾಧ್ಯವೇ ಎಂದು ಕೇಳಿದ್ರು. ನಾನು ತಕ್ಷಣ ಚಾಮರಾಜ್ಪೇಟೆಯ ಪ್ರಭಾತ್ ಸ್ಟುಡಿಯೊಗೆ ಹೋದೆ. ಅಲ್ಲಿದ್ದ ಹುಡುಗ, ಹುಡುಗಿಗೆ ಕೃಷ್ಣ, ಸರಸ್ವತಿ ವೇಷ ಹಾಕಿ ಆ ಸ್ಟುಡಿಯೊದಲ್ಲಿಯೇ ಶೂಟ್ ಮಾಡಿದೆವು. ಆಗಿನ ಕಾಲದಲ್ಲಿ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ನಾವು ಸೂಪರ್ ಇಂಪೊಸಿಂಗ್ ಮಾಡಿದೆವು. ಒಂದು ರೋಲ್ ಫಿಲ್ಮ್ಗೆ 35 ಸಾವಿರ ಆಗಿತ್ತು. ಈಗಿನ ಗ್ರಾಫಿಕ್ಸ್ ಇದಿದ್ರೆ ಹತ್ತು ತಲೆಯನ್ನು ಆರಾಮಾಗಿ ಹಾಕಿಬಿಡಬಹುದಿತ್ತು.
ಮುಂದುವರೆಯುವುದು...