ರಾಜಕುಮಾರ್‌ ಜೊತೆ ಕುಳಿತುಕೊಂಡ ಆ ದಿನ ನನ್ನನ್ನೇ ಮರೆತಿದ್ದೆ

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 11
ರವೀಂದ್ರ ಕಲಾಕ್ಷೇತ್ರದಲ್ಲಿ ನಾನು ನಾಟಕ ಮಾಡುತ್ತಿದ್ದೆ. ಬೀದಿ ನಾಟಕಗಳನ್ನು ಮಾಡುತ್ತಿದ್ದೆ. ಹಾಗಾಗಿ ನಾಗೇಶ್‌ ಅವರ ಪರಿಚಯವಿತ್ತು. ಅವರು ಕಂಠೀರವ ಸ್ಟುಡಿಯೊದಲ್ಲಿದ್ದರು. ನನ್ನನ್ನು ನೋಡಿದ ಅವರು ಸಿನಿಮಾ ಮಾಡುತ್ತೀರಾ ಎಂದ್ರು. ಹೌದು ಎಂದೆ. ನಾಳೆ ಬನ್ನಿ ಇನ್‌ಸ್ಪೆಕ್ಟರ್‌ ಪಾತ್ರವಿದೆ ಎಂದ್ರು. ವೀರ ಸಿಂಧೂರ ಲಕ್ಷ್ಮಣ ನಾಟಕಕ್ಕೋಸ್ಕರ ಹೊಲಿಸಿದ ಪೊಲೀಸ್‌ ಸಮವಸ್ತ್ರ ನನ್ನ ಬಳಿ ತಯಾರಿತ್ತು. ಮರುದಿನ ಹೋದೆ, ರಾಜ್‌ಕುಮಾರ್‌ ಸಿನಿಮಾದಲ್ಲಿ ನಾನು ಮಾಡ್ತೇನೆ ಆದ್ರೆ ರಾಜ್‌ಕುಮಾರ್‌ ನನ್ನನ್ನು ನೋಡ್ತಾರೋ, ಇಲ್ವೋ ಎಂಬ ತಳಮಳ ಇತ್ತು. ನಾನು ಹೋದಾಗ ಮೇಕಪ್‌ಮ್ಯಾನ್‌ ಇನ್‌ಸ್ಪೆಕ್ಟರ್‌ ಪಾತ್ರಕ್ಕೆ ಬಂದಿದ್ದೀರಾ ಶೇವಿಂಗೇ ಮಾಡಿಲ್ಲ ಅಲ್ವಾ ಅಂದ್ರು. ಗಾಬರಿಯಲ್ಲಿ ನನಗೆ ಮರೆತೇ ಹೋಗಿತ್ತು. ಲೇಜರ್‌ ಕೊಟ್ಟ, ಇನ್ನೊಬ್ಬ ನೀರು, ಸೋಪ್‌ ಇಲ್ಲದೇ ಪರ ಪರ ಎಂದು ಎಳೆದು ಕ್ಲೀನ್ ಮಾಡಿದ. ಬಟ್ಟೆ ಎಂದ್ರು, ನಂದೇ ಇದೆ ಎಂದೆ. ಹಾಕಿಕೊಂಡೆ. ಮೇಕಪ್‌ ಬೇಡ ಹೋಗು ಅಂದ್ರು. ಹೋದ್ರೆ ಅಲ್ಲಿ ನನ್ನ ಜೀವನದ ದೊಡ್ಡ ಶಾಕ್‌ ಕಾದಿತ್ತು.


ರಾಜ್‌ಕುಮಾರ್ ಅವರು ಕುರ್ಚಿಯಲ್ಲಿ ಕುಳಿತಿದ್ರು. ನೆಲದಲ್ಲಿ ಹೊನ್ನಾಳಿ ಕೃಷ್ಣ, ಬುಲೆಟ್‌ ನಾಗರಾಜ್‌, ನಿಗ್ರೋ ಜಾನಿ ಎಲ್ಲ ಕೂತಿದ್ರು. ರಾಜ್‌ಕುಮಾರ್‌ ಅವರು ಚಿತ್ರೀಕರಣಕ್ಕಾಗಿ ಉಡುಪು ಹಾಕಿಕೊಂಡಿದ್ದರಿಂದ ಕುರ್ಚಿಯ ಮೇಲೆ ಕೂತಿದ್ರು. ನಾನು ಪೊಲೀಸ್‌ ವಸ್ತ್ರದಲ್ಲಿ ಹೋದಾಗ, ರಾಜ್‌ಕುಮಾರ್‌ ಅವರು ಬನ್ನಿ, ಬನ್ನಿ ಅಂದ್ರು. ನಾನು ನಮಸ್ಕಾರ ಮಾಡಿ, ಕೆಳಗೆ ಕೂರಲು ಹೋದೆ. ಅವರ ಪಕ್ಕದಲ್ಲಿ ಕುರ್ಚಿ ಖಾಲಿಯಿತ್ತು. ಬನ್ನಿ ಇಲ್ಲಿ ಕೂತುಕೊಳ್ಳಿ ಅಂದ್ರು. ಬೇಡ ಅಣ್ಣ ಅಂದೆ. ಬಟ್ಟೆ ಹಾಳಾಗುತ್ತದೆ ಬನ್ನಿ ಇಲ್ಲಿ ಕೂತುಕೊಳ್ಳಿ ಎಂದ್ರು. ಕುಳಿತುಕೊಂಡೆ. ಐದು ನಿಮಿಷ ಅವರ ಜೊತೆ ಮಾತಾಡಿದ್ದೇನೆ. ಅವರು ರಾಜ್‌ಕುಮಾರ್‌ ಎಂಬುದನ್ನೇ ಮರೆತು ಹೋದೆ. ಅಷ್ಟು ಸರಳ ವ್ಯಕ್ತಿ. ಅವರು ಬಹಳ ವರ್ಷದಿಂದ ಗೊತ್ತಿರುವಂತಹ ಅನುಭವ ಆಯಿತು ನನಗೆ. ಅವರ ಮಾತಿನಲ್ಲಿ ಅಷ್ಟೊಂದು ಆತ್ಮೀಯತೆ ಇತ್ತು. ಅಷ್ಟು ಹೊತ್ತಿಗೆ ಇನ್ನೊಬ್ಬರು ಬಂದು, ಅಣ್ಣಾ ಶಾಟ್‌ ರೆಡಿ ಅಂದ್ರು. ಅದಕ್ಕವರು ನನ್ನ ಬಳಿ ಶಾಟ್‌ ರೆಡಿ ಅಂತೆ. ಒಳಗೆ ಚಿತ್ರೀಕರಣ ನಡೆಯುತ್ತಿದೆ. ನೀವು ಒಳಗಡೆ ಬರಬಹುದು ಎಂದು ಹೇಳಿ ಹೋದ್ರು. ನಾನು ಅಣ್ಣವ್ರನ್ನು ಮೈಸೂರಿನಲ್ಲಿ ಮೆರವಣಿಗೆಯಲ್ಲೆಲ್ಲ ನೋಡಿದ್ದೆ. ಆದರೆ, ಅಷ್ಟು ಹತ್ತಿರದಿಂದ ಅಣ್ಣವ್ರನ್ನು ನೋಡಿದ್ದು ಅಂದೆ ಮೊದಲು.ಮುಂದುವರೆಯುವುದು...

14 views