
ರಾಜಕುಮಾರ ನಮ್ಮ 10x10 ಮನೆಗೆ ಬಂದ್ಬಿಟ್ಟಿದ್ರು
ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 11
( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)

ಮಾಲತಿ ಸುಧೀರ್: ರಾಮಲಕ್ಷ್ಮಣ ಪಿಚ್ಚರಿಂದ ಅವರು ಮತ್ತೆ ತಿರುಗಿ ಕೆಳಗಡೆ ನೋಡ್ಲೇ ಇಲ್ಲ. ರಾಮ ಲಕ್ಷ್ಮಣ ಸೂಪರ್ ಹಿಟ್ ಆಯ್ತು. ಅವರ ಹೆಸರು ತುಂಬಾ ಪ್ರಸಿದ್ದಿ ಆಯ್ತು. ಹಂಗೇ ಒಂದರ ಮೇಲೆ ಒಂದು ಪಿಚ್ಚರ್ ಬಂತು. ನಮಗೆ “ಎಲ್ಲರ ಪಿಚ್ಚರಲ್ಲೂ ಮಾಡ್ತಾ ಇದ್ದೀರಿ, ರಾಜ್ಕುಮಾರ್ ಅವರ ಪಿಚ್ಚರಲ್ಲಿ ಆಕ್ಟ್ ಮಾಡಿದ್ರೆ ಮಾತ್ರ ನೀವು ದೊಡ್ಡ ನಟ ಆಗ್ತೀರಿ”ಅಂತ ನಮ್ಮ ಭಾವನೆ. ಹಾಗಾಗಿ ಏನಾದ್ರೊಂದು ಮಾಡ್ಬೇಕಲ್ವಾ? ಅಂತ ಬೆಂಗಳೂರಿಗೆ ಬಂದು ಒಂದು ಸಣ್ಣ ಮನೆ ಮಾಡಿದ್ವಿ.
ಎಪ್ಪತ್ತೈದು ರೂಪಾಯಿ ಮನೆ ಬಾಡಿಗೆ. ಮಳೆ ಬಂದ್ರೆ ಮನೆಯಲ್ಲಿ ಛತ್ರಿ ಹಿಡ್ಕೊಂಡು ನಿಲ್ಬೇಕು. ಸಣ್ಣ 10x10 ಮನೆಯಲ್ಲಿದ್ವಿ. ಆ ದಿನಗಳು ನಮ್ಮ ಜೀವನದಲ್ಲಿ ನಾವು ಮರೆಯಕ್ಕೆ ಸಾಧ್ಯನೇ ಇಲ್ಲ. ನಮ್ಮ ಬಡತನದಲ್ಲೂ ನಾವು ಖುಷಿಯಾಗಿದ್ವಿ. “ರಾಜ್ಕುಮಾರ್ ಅವರ ಪಿಚ್ಚರಲ್ಲಿ ನೀವು ಬುಕ್ ಆಗಿದ್ರೆ ಚನ್ನಾಗಿರ್ತಿತ್ತು” ಅಂತ ಹೇಳ್ಕೊಳ್ತಾ ಇದ್ದೆ. “ಇದಾನೆ ಕಣೇ ರಾಘವೇಂದ್ರ ಸ್ವಾಮಿ ನಮ್ಮ ಕೈ ಬಿಡೋದಿಲ್ಲ”ಅಂತಿದ್ರು. ನಂಗೆ ಅಷ್ಟೊಂದೇನೂ ದೇವರ ಮೇಲೆ ಭಕ್ತಿ ಇರ್ಲಿಲ್ಲ. “ಏನು ರಾಘವೇಂದ್ರ ಸ್ವಾಮಿ ಬಂದು ರಾಜ್ಕುಮಾರ್ ಅವರನ್ನ ಕರ್ಕೊಂಡು ಬರ್ತಾರಾ ನಮ್ಮ ಮನೆಗೆ? ಹೋಗ್ರಿರೀ” ಅಂತ ಹೇಳ್ದೆ. ನಂತರ ಒಂದು ಗುರುವಾರ ದಿವ್ಸ ಕರಕ್ಟ್ ಹತ್ತು ಗಂಟೆಗೆ ನಮ್ಮ ಮನೆಗೆ ಒಂದು ಕಾರು ಬಂತು. ಸಣ್ಣ ಮನೆ ಅಂಗಡಿ ಮನೆ ನಮ್ದು.
ಪರಮ್: ಕಬ್ಬಿಣದ ಬಾಗ್ಲು?
ಮಾಲತಿ ಸುಧೀರ್: ಕಬ್ಬಿಣದ ಬಾಗ್ಲಿನ ಮನೆ. ನಾನು “ಯಾರು ಬೇಕು ನಿಮ್ಗೆ?” ಅಂತ ನೋಡ್ತೀನಿ ರಾಜ್ಕುಮಾರ್ ಅವರು ಹಾಗೂ ಪಾರ್ವತಮ್ಮನವರೂ ಕೂತಿದ್ದಾರೆ. ಆಮೇಲೆ ನಂಗೆ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ. “ಸುಧೀರ್ ಬೇಕಮ್ಮಾ”ಅಂದ್ರು. ನಮ್ಮ ಮನೆಯಿಂದ ಐದನೇ ಮನೆಯಲ್ಲಿ ವರದಣ್ಣ ಅವರು ಬಾಡಿಗೆಗೆ ಇದ್ರು. “ವರದಣ್ಣನ ಮನೆಯಲ್ಲಿರ್ತೀನಿ ಸುಧೀರ್ನ ಕಳ್ಸಿ ಕೊಡು” ಅಂದ್ರು. ಸುಧೀರ್ ಅವರು ಅವರ ಫ್ರೆಂಡ್ ಮನೆಯಲ್ಲಿ ಕೂತಿದ್ರು, ಓಡ್ಹೋಗಿ ಅವರನ್ನ ಕರ್ಕೊಂಡು ಬಂದೆ “ಯಾಕಿಂಗೆ ಓಡ್ಬಂದೆ?” ಅಂದ್ರೆ, “ಅಯ್ಯಯ್ಯೋ ರಾಜ್ಕುಮಾರ್ ಅವರು ಬಂದು ನಿಮ್ಮನ್ನ ಕರ್ದಿದ್ದಾರೆ ಬನ್ನಿ ಬನ್ನಿ” ಅಂದೆ. ಸೋ ವರದಣ್ಣ ಅವರ ಮನೆಗೆ ಹೋದ್ರು ಅಲ್ಲಿ ಮಾತಾಡ್ಕೊಂಡ್ರು. ಆಮೇಲೆ ಆಫೀಸ್ಗೆ ಬರಕ್ಕೆ ಹೇಳಿದ್ರು. ಹೋದ ತಕ್ಷಣ ಎರಡು ಪಿಚ್ಚರ್ ಅವರದ್ದು ನೀ ನನ್ನ ಗೆಲ್ಲಲಾರೆ ಎರಡು ಪಿಚ್ಚರ್. “ಓ ನೀವು ಈಎರಡು ಪಿಚ್ಚರಲ್ಲಿ ಮಾಡ್ಬಿಟ್ರೆ ದೊಡ್ಡ ಸ್ಟಾರ್ ಆಗ್ಬಿಡ್ತೀರಿ, ಪ್ರಭಾಕರ್ ಹಾಗೂ ತೂಗುದೀಪ್ ಶ್ರೀನಿವಾಸ್ ಅವರ ಲೆವೆಲ್ಗೆ ಬರ್ತೀರ ನೀವು”ಅಂತಿದ್ವಿ.
ಮುಂದುವರೆಯುವುದು…