ರಾಜ್‌ ಅಪಹರಣ ರೋಚಕ ಕಥೆಗಳು!ಕಾಡಿನ ಪ್ರಾಣಿಗಳೂ ಕೂಡ ವೀರಪ್ಪನ್ ಮಾತು ಕೇಳೋಹಾಗೆ ಮಾಡ್ಕೊಂಡಿದ್ನಂತೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 45


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಕಾಡುಗಳ್ಳ ವೀರಪ್ಪನ್‌ ರಾಜ್‌ಕುಮಾರ್‌ ಅವರನ್ನು ಅಪಹರಣ ಮಾಡಿಬಿಟ್ಟ. ರಾಜ್‌ಕುಮಾರ್‌ ಸಂಸಾರವನ್ನು ಬಿಟ್ಟು ಇರುತ್ತಿರಲಿಲ್ಲ. ಅವರಿಗೆ ಸಂಸಾರ ಎಂದರೆ ಮಡದಿ, ಮಕ್ಕಳು ಅಷ್ಟೇ ಆಗಿರಲಿಲ್ಲ. ತಮ್ಮ, ತಂಗಿಯರು ಎಲ್ಲರೂ ಅವರಿಗೆ ಬೇಕಿತ್ತು. ವರದಪ್ಪ, ಅವರ ಹೆಂಡತಿ, ಮಕ್ಕಳು, ತಂಗಿ ನಾಗಮ್ಮ ಅವರ ಸಂಸಾರ, ತಂಗಿ ಶಾರದಮ್ಮ ಅವರ ಸಂಸಾರ ಎಲ್ಲರೂ ಜೊತೆಯಾಗಿ ಇದ್ದರು. ಅವರ ಮನೆಯಲ್ಲಿ 22 ಜನ ಒಟ್ಟಿಗೆ ಊಟ ಮಾಡುತ್ತಿದ್ರು. ಗಾಜನೂರು ಎಸ್ಟೇಟನ್ನು ನಾಗಮ್ಮ ಅವರ ಪತಿಯೇ ನೋಡಿಕೊಳ್ಳುತ್ತಿದ್ದರು. ಅವರು ಹೋದ ಮೇಲೆ ಅವರ ಮಗ ಗೋಪಾಲ್‌ ನೋಡಿಕೊಳ್ಳುತ್ತಿದ್ದಾನೆ. ಅವರನ್ನೆಲ್ಲ ಬಿಟ್ಟು ಒಂಟಿಯಾಗಿ ಇರಬೇಕಲ್ಲಾ ಎಂಬುದೇ ಅವರಿಗೆ ಯೋಚನೆಯಾಗಿತ್ತು.


ವೀರಪ್ಪನ್‌ ಒಡಾಡುವ ಕಡೆಯೆಲ್ಲ ಇವರು ಒಡಾಡಬೇಕಿತ್ತು. ರಾತ್ರಿ ಪೊಲೀಸ್‌ ಬಂದರೆಂದರೆ, ನಿದ್ದೆ ಬಿಟ್ಟು ಓಡಬೇಕಿತ್ತು. ಇವರಿಗೆ ಮೊದಲೇ ಮಂಡಿ ನೋವು ಬೇರೆ ಇತ್ತು. ‘ಅಯ್ಯ, ನೀನು ನನಗೆ ಇಷ್ಟು ಹಿಂಸೆ ಕೊಡುತ್ತಿದ್ದೀಯಾ, ನಿನ್ನ ಕೈಯಲ್ಲಿ ಬಂದೂಕಿದೆ, ನನ್ನನ್ನು ಶೂಟ್‌ ಮಾಡಿ ಸಾಯಿಸಿಬಿಡು’ ಎಂದು ರಾಜ್‌ಕುಮಾರ್‌ ಆತನಿಗೆ ಹೇಳಿದ್ದರಂತೆ. ಅಯ್ಯಯ್ಯೋ, ನಿಮ್ಮನ್ನು ಕರೆದುಕೊಂಡು ಬಂದಿರುವುದು ಸಾಯಿಸಲು ಅಲ್ಲ. ನಿಮ್ಮನ್ನು ಇರಿಸಿಕೊಂಡು ಆದಷ್ಟು ಉಪಯೋಗ ಪಡೆಯುವ ಉದ್ದೇಶ ನನ್ನದು. ನಿಮ್ಮನ್ನು ಸಾಯಿಸಿದ್ರೆ ನನ್ನ ಉದ್ದೇಶನೇ ಸತ್ತು ಹೋಗುತ್ತದೆ ಅಂದಿದ್ದನಂತೆ. ಅವನು ದುಡ್ಡಿಗೋಸ್ಕರವೇ ಅವರನ್ನು ಅಪಹರಿಸಿದ್ದು.


ವೀರಪ್ಪನ್‌ ಎಂಥಹ ಕಾಡು ಪ್ರಾಣಿಯಾಗಿದ್ದ ಎಂದ್ರೆ, ಆನೆ ಆ ಕಡೆಯಿಂದ ಬರುತ್ತಿತ್ತು ಎಂದ್ರೆ, ಇವನು, ಗಣೇಶ ನಿಲ್ಲು ಎಂದ್ರೆ ಆನೆ ನಿಲ್ಲುತ್ತಿತಂತೆ. ಟೆಂಟ್‌ ಒಳಗೆ ಹಾವು, ಚೇಳು ಬರಬಾರದೆಂದು ಅದೇನೋ ಸೊಪ್ಪು ತಂದು ಟೆಂಟ್‌ ಸುತ್ತ ಇಟ್ಟು ಬಿಡುತ್ತಿದ್ದ. ಅದನ್ನು ಹಾಕಿಬಿಟ್ರೆ ಯಾವ ಪ್ರಾಣಿಗಳು ಬರುತ್ತಿರಲಿಲ್ಲವಂತೆ. ಆದರೆ, 50 ಸಾವಿರ ಬಗೆಯ ಕ್ರೀಮಿ ಕೀಟಗಳು, ಸೊಳ್ಳೆ ಇದ್ದಿರಬಹುದು ಅನಿಸುತ್ತದೆ. ಬೆಡ್‌ಶೀಟ್‌ ಹಾಕಿಕೊಂಡ್ರು ಬಂದು ಕಚ್ಚುತ್ತಿತ್ತು. ಅದನ್ನು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ ಎಂದು ರಾಜ್‌ಕುಮಾರ್‌ ಹೇಳುತ್ತಿದ್ರು.


ಮುಂದುವರೆಯುವುದು...21 views