ರಾಜ್‌ ಕುಟುಂಬಕ್ಕೆ ಅಂಬರೀಷ್‌ ಮಾಡಿದ ಸಹಾಯಗಳು!

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 40


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಗೋವಿಂದರಾಜ್ ಅವರ ಮಗನಿಗೆ ಸೀಳು ಬಾಯಿ ಇತ್ತು. ಅದಕ್ಕೆ ಆಗಿನ ಕಾಲದಲ್ಲಿ ಭಾರತದಲ್ಲಿ ಆ‍ಪರೇಷನ್‌ ಮಾಡುವುದು ಕಷ್ಟವಿತ್ತು. ಆಪರೇಷನ್‌ ಮಾಡಿದ್ರು ಗುರುತು ಹಾಗೆ ಇರುತ್ತಿತ್ತು. ಹಾಗಾಗಿ, ಅಮೆರಿಕದ ಡಾಕ್ಟರ್‌ ಬಳಿ ಹೋಗುವಂತೆ ಅವರ ಫ್ಯಾಮಿಲಿ ಡಾಕ್ಟರ್‌ ಅಲ್ಲಿಯ ಡಾಕ್ಟರ್‌ನ ನಂಬರ್‌ ಎಲ್ಲ ಕೊಟ್ಟಿದ್ರು. ಪಾರ್ವತಮ್ಮ, ರಾಜ್‌ಕುಮಾರ್‌ ಮತ್ತು ಗೋವಿಂದರಾಜ್‌ ಅವರು ಮಗನನ್ನು ಕರೆದುಕೊಂಡು ಅಮೆರಿಕಕ್ಕೆ ಹೋದರು. ಇವರು ತೆಗೆದುಕೊಂಡ ಹೋದ ದುಡ್ಡು ಕಡಿಮೆ ಆಗಿತ್ತು. ಹಣ ಕೊಡದೇ ಮಗುವನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡುವುದಿಲ್ಲ ಎಂದು ಆಸ್ಪತ್ರೆಯವರು ಹೇಳಿದ್ರು.


1,300 ಡಾಲರ್‌ ಕಡಿಮೆ ಇತ್ತು. ಇವರಿಗೆ ಏನು ಮಾಡುವುದು ಎಂಬುದೇ ಗೊತ್ತಾಗಲಿಲ್ಲ. ಆಗ ಪಾರ್ವತಮ್ಮನವರು, ‘ಗೋವಿಂದು ಅಂಬರೀಷ್‌ಗೆ ಫೋನ್‌ ಮಾಡಿ ನಮ್ಮ ಸ್ಥಿತಿಯನ್ನು ವಿವರಿಸು ಅವನೇನಾದ್ರೂ ಸಹಾಯ ಮಾಡ್ತಾನಾ ಕೇಳು’ ಅಂದ್ರು. ಗೋವಿಂದು ಅವರು ಅಂಬರೀಷ್‌ಗೆ ಫೋನ್‌ ಮಾಡಿದ್ರು. ನೀವು ಯೋಚನೆ ಮಾಡಬೇಡಿ. ನಾನು ಏರ್ಪಾಡು ಮಾಡುತ್ತೇನೆ ಎಂದು ಅಂಬರೀಷ್‌ ಹೇಳಿದ. ಇವರೆಲ್ಲ ಕಾಯುತ್ತ ಕೂತಿದ್ರು. ಒಂದು ಗಂಟೆಯೊಳಗೆ ಒಬ್ಬ ಮನುಷ್ಯ ಅಲ್ಲಿಗೆ ಬಂದು, ಮಗುವನ್ನು ಡಿಸ್‌ಚಾರ್ಜ್‌ ಮಾಡಿಸಿದ್ದೇನೆ. ನೀವು ಕರೆದುಕೊಂಡು ಹೋಗಿ ಅಂದಿದ್ದಾನೆ. ಅಮೆರಿಕದಲ್ಲಿ ಅಂಬರೀಷ್‌ ಫ್ರೆಂಡ್‌ ಬಿಲ್‌ ಪೇ ಮಾಡಿ ಡಿಸ್‌ಚಾರ್ಜ್‌ ಲೆಟರ್‌ ಕೂಡ ತಂದುಬಿಟ್ಟಿದ್ದ. ಒಂದು ಸಾವಿರ ಡಾಲರ್‌ ಇವರ ಕೈಗೆ ಕೊಟ್ಟು ಖರ್ಚಿಗೆ ಇಟ್ಟುಕೊಳ್ಳಿ. ಇನ್ನೂ ಬೇಕಾದ್ರೆ ಕೇಳಿ ನನಗೆ. ನಿಮಗೆ ಸಕಲ ನೆರವು ನೀಡುವಂತೆ ಅಂಬರೀಷ್‌ ನನಗೆ ಹೇಳಿದ್ದಾನೆ ಎಂದು ಹೇಳಿದ್ದನಂತೆ.


ಇನ್ನೊಂದು ಘಟನೆಯಲ್ಲಿ ‘ಒಂದು ಮುತ್ತಿನ ಕಥೆ’ ಸಿನಿಮಾದ ಶೂಟಿಂಗ್‌ಗೆಂದು ರಾಜ್‌ಕುಮಾರ್‌ ಅವರೆಲ್ಲ ಮಾಲ್ಡೀವ್ಸ್‌ಗೆ ಹೋಗಿದ್ರು. ಪ್ರೊಡ್ಯೂಸರ್ ಬಳಿ ಹಣ ಖಾಲಿಯಾಗಿ ಬಿಟ್ಟಿತ್ತು. ಅಷ್ಟು ದುಡ್ಡು ಖರ್ಚಾಗುತ್ತದೆ ಎಂದು ಅವನು ಎಂದುಕೊಂಡಿರಲಿಲ್ಲ. ಅವರು ಉಳಿದುಕೊಂಡ ಹೋಟೆಲ್‌ ಬಿಲ್‌ ಕೊಡಲು ಪ್ರೊಡ್ಯೂಸರ್‌ ಪರದಾಡುವಂತಹ ಸ್ಥಿತಿ ಎದುರಾಗಿತ್ತು. ಪಾರ್ವತಮ್ಮ ಅವರು ಮಾಂಗಲ್ಯ ಸರವನ್ನು ಬಿಟ್ಟು ಉಳಿದ ಚಿನ್ನವನ್ನೆಲ್ಲ ಹೋಟೆಲ್‌ನವನಿಗೆ ಕೊಟ್ಟು, ಇದನ್ನು ಬಳಸಿಕೊಂಡು ನಮ್ಮನ್ನೆಲ್ಲ ಇಲ್ಲಿಂದ ಕಳುಹಿಸಿ. ನಾವು ಭಾರತಕ್ಕೆ ಹೋಗಿ ನಿಮಗೆ ದುಡ್ಡು ಕಳುಹಿಸುತ್ತೇವೆ. ಆಮೇಲೆ ಯಾರ ಬಳಿಯಾದರೂ ಈ ಒಡವೆಗಳನ್ನು ಕಳುಹಿಸಿ ಎಂದು ಹೇಳಿದ್ರು. ಅವನು ಸರಿ ಎಂದು ಚಿನ್ನವನ್ನು ಇಟ್ಟುಕೊಂಡ. ರಾಜ್‌ಕುಮಾರ್‌ ಒಬ್ಬರನ್ನು ಬಿಟ್ಟು ಉಳಿದವರು ಹೋಗುವಂತೆ ಹೇಳಿದೆ. ಅವರನ್ನು ಬಿಟ್ಟು ನಾನ್ಯಾಕೆ ಹೋಗಲಿ ಎಂದು ಪಾರ್ವತಮ್ಮನವರು ಕೇಳಿದ್ರು. ಆಗ ಪ್ರೊಡ್ಯೂಸರ್‌, ನಾನಿರುತ್ತೇನೆ. ರಾಜ್‌ಕುಮಾರ್‌ ಅವರನ್ನು ಬಿಡಿ ಎಂದು ಕೇಳಿದ್ರು. ನಂತರ ಅವರೆಲ್ಲ ಇಲ್ಲಿಗೆ ಬಂದು ದುಡ್ಡು ಕಳುಹಿಸಿದ್ರು. ನಂತರ ಪ್ರೊಡ್ಯೂಸರ್‌ ಅವರು ಭಾರತಕ್ಕೆ ಬಂದರು. ದ್ವಾರಕನಾಥ ಈ ಸಿನಿಮಾದ ಪ್ರೊಡ್ಯೂಸರ್‌.


ಈ ವಿಷಯ ಅಂಬರೀಷ್‌ಗೆ ಗೊತ್ತಾಯಿತು. ಮನೆಗೆ ಬಂದ ಅವನು, ಏನ್‌, ಪಾರ್ವತಕ್ಕ ಹೀಗೆ ಮಾಡಿದ್ರಿ. ನನಗೆ ಫೋನ್‌ ಮಾಡಲು ಆಗಲಿಲ್ವಾ. ನಿಮಗೆ ಎಷ್ಟು ಡಾಲರ್‌ ಬೇಕಿದ್ರು ಕಳುಹಿಸುತ್ತಿದ್ದೆ. ಹೋಟೆಲನ್ನೇ ಕೊಂಡುಕೊಳ್ಳುತ್ತಿದ್ದೆ. ನನ್ನ ಜ್ಞಾಪಕ ಬರಲಿಲ್ವಾ ಎಂದ. ಅಂತಹ ವ್ಯಕ್ತಿತ್ವ ಅಂಬರೀಷ್‌ ಅವನದು. ಅವರಿಗೆ ಪ್ರಪಂಚದಾದ್ಯಂತ ಸಂಪರ್ಕ ಇತ್ತು. ಎಲ್ಲಿ, ಯಾರಿಗೆ ಕಷ್ಟ ಅಂದ್ರು ನೆರವಿಗೆ ಬರುತ್ತಿದ್ದ. ವ್ಯಕ್ತಿತ್ವದಲ್ಲಿ ಕರ್ಣನೇ ಅವನು. ಅದೇ ರೀತಿಯ ಅದಕ್ಕಿಂತ ಹೆಚ್ಚಿನ ವ್ಯಕ್ತಿತ್ವ ರಾಜ್‌ಕುಮಾರ್‌ ಅವರದು.
ಮುಂದುವರಿಯುವುದು...

35 views