ರಾಜ್‌ಕುಮಾರ ಜೀವನದಲ್ಲಿ ಇಬ್ಬರು ಅಪರೂಪದ ವ್ಯಕ್ತಿಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 94


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಆದಿಶೇಷನ ಅವತಾರವೇ ಲಕ್ಷ್ಮಣ. ವಿಷ್ಣು ರಾಮವತಾರ, ಕೃಷ್ಣವತಾರ ತಳೆದಾಗ ನಿನ್ನನ್ನು ಬಿಟ್ಟು ಹೇಗೆ ಇರಲಿ ಎಂದು ಆದಿಶೇಷ ಕೇಳುತ್ತಾನೆ. ನಿನ್ನನ್ನು ಬಿಟ್ಟು ಇರಲಿ ಸಾಧ್ಯವೇ ಇಲ್ಲ ಎನ್ನುತ್ತಾನೆ. ವಿಷ್ಣು ರಾಮವತಾರ ತಳೆದಾಗ ಲಕ್ಷ್ಮಣನಾಗಿ, ಕೃಷ್ಣವತಾರ ತಳೆದಾಗ ಬಲರಾಮನಾಗಿ ಆದಿಶೇಷ ಹುಟ್ಟುತ್ತಾನೆ. ಹೀಗೆ ರಾಜ್‌ಕುಮಾರ್‌ ಅವರ ಜೀವನದಲ್ಲಿ ಯುವರಾಜನಾಗಿ ಯಾರಾದರೋ ಹುಟ್ಟಿದ್ದಾರೆ ಎಂದಾದರೆ ಅದು ಚನ್ನ ಎಂಬ ವ್ಯಕ್ತಿ. ವಿಷ್ಣವನ್ನು ಆದಿಶೇಷ ಪ್ರತಿ ಅವತಾರದಲ್ಲಿಯೂ ಹಿಂಬಾಲಿಸಿದ್ದಂತೆಯೇ, ರಾಜ್‌ಕುಮಾರ್‌ ಹಿಂದೆಯೇ ಇರುತ್ತಿದ್ದವನು ಚನ್ನ.


ಅವರ ಆಹಾರ, ಊಟೋಪಚಾರ, ಉಡುಗೆ–ತೊಡುಗೆಗಳ ಬಗ್ಗೆ ಕಾಳಜಿ ವಹಿಸುತ್ತಿದ್ದ. ಆತನಿಗೆ ವಾರ್ತಾ ಇಲಾಖೆಯಲ್ಲಿ ಕೆಲಸ. ಇವತ್ತಿಗೂ ರಾಜ್‌ಕುಮಾರ್‌ ಅವರ ಮನೆಯಲ್ಲಿ ಅದೇ ಗೌರವ ಇದೆ ಅವನಿಗೆ. 24 ಗಂಟೆಯೂ ರಾಜ್‌ಕುಮಾರ್‌ ಜೊತೆಗೆ ಇರುತ್ತಿದ್ದ. ಈಗಲೂ ಬೆಳಿಗ್ಗೆದ್ದು ಅವರ ಮನೆಗೆ ಹೋಗಿ, ನಂತರ ಆಫೀಸ್‌ಗೆ ಹೋಗುತ್ತಾನೆ. ಸಂಜೆ ಕಚೇರಿ ಮುಗಿದ ಮೇಲೆ ಮತ್ತೆ ಅವರ ಮನೆಗೆ ಹೋಗುತ್ತಾನೆ. ರಾಜ್‌ಕುಮಾರ್‌ ಅವರ ದೇಹದ ಒಂದು ಭಾಗ ಎಂಬಂತೆಯೇ ಇದ್ದ ಅವನು. ಈ ಆತ್ಮೀಯತೆಯ ಸಂಬಂಧ ಹೃದಯಾಂತರಾಳದಿಂದ ಬಂದಿರುವಂತಹದ್ದು. ಒಂದು ಕಡೆ ಚನ್ನ ಇನ್ನೊಂದು ಕಡೆ ಹನುಮಂತ ಸದಾ ಇರುತ್ತಿದ್ದರು. ರಾಜ್‌ಕುಮಾರ್‌ ಜೊತೆಯಲ್ಲಿಯೇ ಇರಬೇಕೆಂಬ ಉದ್ದೇಶ ಅವನದು. ನನಗೆ ತಿಳಿದಿರುವ ಮಟ್ಟಿಗೆ ಚನ್ನ ಮದುವೆ ಆಗಿಲ್ಲ. ಹನುಮಂತು ಕೂಡ ಮದುವೆ ಆಗಿರಲಿಲ್ಲ. ಚನ್ನ, ಹನುಮಂತು ಇಬ್ಬರೂ ರಾಜ್‌ಕುಮಾರ್‌ ಅವರಿಗೆ ಅರ್ಪಿತರಾದ್ದಂತಹ ವ್ಯಕ್ತಿಗಳು.


ರಾಜ್‌ಕುಮಾರ್‌ ಅವರ ಹತ್ತಿರ ಬಂದುಬಿಟ್ಟರೆ ಅವರನ್ನು ಬಿಟ್ಟು ಹೋಗಲು ಮನಸ್ಸಾಗುತ್ತಿರಲಿಲ್ಲ. ಅಂತಹ ಆಕರ್ಷಣೀಯ ವ್ಯಕ್ತಿತ್ವ ಅವರದ್ದಾಗಿತ್ತು. ದೇವರ ಅಂಶ ಆ ಮನುಷ್ಯನ ರಕ್ತದ ಕಣದಲ್ಲಿ ಸೇರಿಕೊಂಡು ಬಿಟ್ಟಿತ್ತು ಅನಿಸುತ್ತದೆ. ಅವರೊಬ್ಬ ದೈವಾಂಶ ಸಂಭೂತ.ಮುಂದುವರೆಯುವುದು...

35 views