ರಾಜ್‌ ಕುಮಾರ್‌ ನೇತೃತ್ವದಲ್ಲಿ ಆರಂಭವಾದ “ಶಕ್ತಿ ಧಾಮ”ದಲ್ಲಿ ನಡೆಯುವ ಕೆಲಸಗಳು ಏನೇನು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 63


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಮೈಸೂರಿನ ಕಲಾಮಂದಿರದಲ್ಲಿ ಒಂದು ಮ್ಯೂಸಿಕಲ್‌ ನೈಟ್ಸ್‌ ಮಾಡಿದೆವು. ಅದರಲ್ಲಿ 56 ಲಕ್ಷ ಸಂಗ್ರಹವಾಯ್ತು. ಹಾಗಿತ್ತು ರಾಜ್‌ಕುಮಾರ್‌ ಅವರ ಜನಪ್ರಿಯತೆ. ಪಾರ್ವತಮ್ಮ ಅವರನ್ನು ಸಂಘದ ಗೌರವಾಧ್ಯಕ್ಷರನ್ನಾಗಿ ಮಾಡಲಾಯಿತು. ನಾವೆಲ್ಲ ಸ್ಥಾಪಕ ಸದಸ್ಯರು. ಉಪಾಧ್ಯಕ್ಷೆಯಾಗಿ ಜಯಮಾಲ ಅವರನ್ನು ಆಯ್ಕೆಮಾಡಲಾಯಿತು. ರಿಜಿಸ್ಟ್ರೇಷನ್‌ ಎಲ್ಲಾ ಆಯ್ತು. ಕಟ್ಟಡ ನಿರ್ಮಾಣಕ್ಕೆ 56 ಲಕ್ಷ ಸಾಕಾಗುತ್ತಿರಲಿಲ್ಲ. ಗುತ್ತಿಗೆದಾರರು 1 ಕೋಟಿ ಕೇಳಿದ್ರು. ಇನ್ನೊಂದು ಮ್ಯೂಸಿಕಲ್‌ ನೈಟ್‌ ಮಾಡಿದೆವು. ಅದರಲ್ಲಿ 45 ಲಕ್ಷ ಸಂಗ್ರಹವಾಯ್ತು. 1 ಕೋಟಿಗಿಂತ ಹೆಚ್ಚು ಹಣ ನಮಗೆ ಬಂದಿತ್ತು. ಆ ಹಣದಿಂದ ಕಟ್ಟಡ ನಿರ್ಮಿಸಿದೆವು. ಒಂದೊಂದು ಕೋಣೆಯಲ್ಲಿ ಮೂರು ಜನರಂತೆ ನಲವತ್ತು ಮಂದಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಯಿತು.


ಪೊಲೀಸ್‌ನವರು ವಶಕ್ಕೆ ಪಡೆದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಅವರಿಗೆ ಎಚ್‌ಐವಿ ಇಲ್ಲದಿದ್ರೆ ಇಲ್ಲಿಗೆ ಕರೆದುಕೊಂಡು ಬರಲಾಗುತ್ತದೆ. ನೀನು ಇಲ್ಲಿ ಇರುತ್ತೀಯಾ, ಇರುವುದಾದ್ರೆ, ಊಟ, ವಸತಿ, ಕೆಲಸ... ಒಳ್ಳೆಯ ಜೀವನ ಕೊಡಿಸುತ್ತೇವೆ. ನಾಲ್ಕು ದಿನ ಇದ್ದು ಹೋಗುವುದಾದರೆ ಇರಲು ಅವಕಾಶ ಕೊಡುವುದಿಲ್ಲ ಎಂದು ಮೊದಲೇ ಮಹಿಳೆಯರಿಗೆ ಹೇಳಿ ಬಿಡುತ್ತೇವೆ. ನಮ್ಮ ಮಾತಿಗೆ ಸಮ್ಮತಿ ಸೂಚಿಸುವವರಿಗೆ ಇರಲು ಅವಕಾಶ ಕೊಡುತ್ತೇವೆ. 1997ನಲ್ಲಿ ಶಕ್ತಿಧಾಮ ಪ್ರಾರಂಭವಾಯ್ತು. ಇದುವರೆಗೆ 400–500 ಹೆಂಗಸರಿಗೆ ಪುನರ್ವಸತಿ ಕಲ್ಪಿಸಿದ್ದೇವೆ. ಕಾರ್ಡ್‌, ಬ್ಯಾಗ್‌ ಮೇಕಿಂಗ್‌, ಕಸೂತಿ, ಬ್ಯೂಟಿಷಿಯನ್‌, ಟೈಲರಿಂಗ್‌ ತರಬೇತಿ ಕೊಡಿಸುತ್ತೇವೆ. ಶಿಕ್ಷಿತರಾಗಿದ್ರೆ ಅವರಿಗೆ ಮುಂದಿನ ಓದಿಗೂ ಸಹಾಯ ಮಾಡುತ್ತೇವೆ. ತರಬೇತಿ ಪಡೆದು ಇಲ್ಲಿಂದ ಹೋಗಿ ಹೊಸ ಜೀವನ ಮಾಡಲು ಬಯಸುವವರನ್ನು ಕಳುಹಿಸುತ್ತಿದ್ದೆವು.


ನಮ್ಮ ಕಚೇರಿಯಲ್ಲಿ ಮಾನಿಟರ್‌ ಆಫೀಸರ್‌ ಕೂಡ ಇದ್ರು. ಇಲ್ಲಿಂದ ತರಬೇತಿ ಪಡೆದು ಹೋದವರು ಮತ್ತೆ ಕಸುಬಿಗೆ ಇಳಿದರೆ ಅವರನ್ನು ಪೊಲೀಸರಿಗೆ ಹೇಳಿ ಅರೆಸ್ಟ್‌ ಮಾಡಿಸುತ್ತಿದೆವು. ಪುನಃ ದಂಧೆಗೆ ಇಳಿದರೆ, ಜಾಮೀನು ರಹಿತ ವಾರಂಟ್‌ನಲ್ಲಿ ಬಂಧಿಸುವಂತೆ ಪೊಲೀಸರಿಗೆ ಹೇಳುತ್ತೇವೆ ಎಂದು ಅವರಿಗೆ ಮೊದಲೇ ಹೇಳುತ್ತಿದೆವು. ಅವರ ಬಳಿ ಮುಚ್ಚಳಿಕೆಯನ್ನು ಬರೆಸಿಕೊಳ್ಳುತ್ತಿದ್ವಿ. ಅವರ ಸುರಕ್ಷತೆಗಾಗಿಯೇ ನಾವು ಹೀಗೆ ಮಾಡುತ್ತಿದುದ್ದು.
ಮುಂದುವರೆಯುವುದು...

12 views