ರಾಜ್‌ ಕುಮಾರ್‌ ಮೂರ್ಚೆ ಹೋಗಲು ಕಾರಣವಾದ ಆ ಹತ್ತು ತಲೆ ಸೀನ್

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 31


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ರಾಜ್‌ಕುಮಾರ್‌ ಅವರ ಮನೋಸ್ಥೈರ್ಯಕ್ಕೆ ದಶವಾತಾರ ಉತ್ತಮ ಉದಾಹರಣೆ. ರಾವಣನ ಪಾತ್ರವನ್ನು ರಾಜ್‌ಕುಮಾರ್‌ ಅಭಿನಯಿಸಿದ್ರು. ಅದರಲ್ಲಿ ಹತ್ತು ತಲೆ ಬೇಕಿತ್ತು. ಬೊಂಬೆ ಇಟ್ಟು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಿದ್ರು. ಆ ರೀತಿ ಬೇಡ ಹತ್ತು ತಲೆಯಲ್ಲೂ ಜೀವ ಇರುವಂತೆ ಮಾಡೋಣ ಎಂದು ದೊರೆ ಹೇಳಿದ್ರು. ರೆಹಮಾನ್‌ ಎಂಬ ದೊಡ್ಡ ಕ್ಯಾಮೆರಾಮೆನ್‌ ಅವರ ಬಳಿ ಹೋಗಿ ದೊರೆ ಏನು ಮಾಡುವುದು ಎಂದು ಕೇಳಿದ್ರು. ಅವರು ಯಾವ ಐಡಿಯಾ ಕೊಟ್ರು ಎಂಬುದು ನನಗೆ ಗೊತ್ತಿಲ್ಲ. ಕ್ಯಾಮೆರಾ ವುಡ್‌ಗೆ ಗೆರೆಗಳನ್ನು ಹಾಕಿ, ಕಪ್ಪು ಹಾಳೆಯನ್ನು ಕಟ್‌ ಮಾಡಿದ್ರು. ಕ್ಯಾಮೆರಾವನ್ನು ಒಂದು ಕಡೆ ನಿಲ್ಲಿಸಿದ್ರು. ರಾಜ್‌ಕುಮಾರ್‌ ಹಿಂದೆ ಕಪ್ಪು ಬಣ್ಣದ ಕರ್ಟನ್ ಹಾಕಿಸಿದ್ರು. ಕಪ್ಪು ಬಣ್ಣದ ದಾರ ತೆಗೆದುಕೊಂಡು ಬಂದ್ರು. ಈ ಗೆರೆಗಳಿಗೆ ಸರಿಯಾಗಿ, ಅವರ ಹತ್ತು ತಲೆಗಳು ಕಾಣುವಂತೆ ಮಾಡಲಾಯ್ತು. ಎರಡು ಬದಿಗೆ ಸ್ಟ್ಯಾಂಡ್‌ಗಳನ್ನು ಇಟ್ಟು ಅದಕ್ಕೆ ದಾರಗಳನ್ನು ಕಟ್ಟಿದ್ದೆವು. ಕೆಳಗೆ ಮತ್ತೇ ಮೇಲೆ ದಾರ ಕಟ್ಟಿ ಅಲ್ಲಿಗೊಂದು ಗ್ರಾಫ್‌ ಮಾಡಿದೆವು. ಹತ್ತನೇ ತಲೆ ಬಂದಾಗ ಕ್ಯಾಮೆರಾದ ಹತ್ತನೇ ಮಾಸ್ಕ್‌ ತೆಗೆಯುತ್ತಿದೆವು. ಒಂಬತ್ತನೇ ತಲೆ ಕಂಡಾಗ ಇಲ್ಲಿ ಮಾಸ್ಕ್‌ ಓಪನ್‌ ಮಾಡುತ್ತಿದೆವು. ಚೌಕಟ್ಟಿನಲ್ಲಿಯೇ ರಾಜ್‌ಕುಮಾರ್‌ ಅವರ ತಲೆ ಇರಬೇಕಿತ್ತು ಕ್ಯಾಮೆರಾವನ್ನು ಒಂದೇ ಕಡೆ ನಿಲ್ಲಿಸಲಾಗಿತ್ತು. ಅಲ್ಲಾಡುವಂತಿರುವಂತಿರಲಿಲ್ಲ. ಒಂದು ತಲೆ ಮಾತಾಡುವಾಗ ಎಲ್ಲ ತಲೆಗಳು ಅದನ್ನೇ ನೋಡಬೇಕಿತ್ತು. ರಾತ್ರಿ 10 ಗಂಟೆಗೆ ಶೂಟಿಂಗ್‌ ಶುರು ಮಾಡಿದೆವು. ಮುಗಿಯುವಾಗ ಬೆಳಿಗ್ಗೆ ಆರು ಗಂಟೆ ಆಯ್ತು. ದೊರೆಯವರು ಶಾಟ್‌ ಓಕೆ ಅಂದ್ರು. ರಾಜ್‌ಕುಮಾರ್‌ ದಢಾರ್‌ ಎಂದು ಕೆಳಗೆ ಬಿದ್ದು ಮೂರ್ಛೆ ಹೋಗಿ ಬಿಟ್ರು.


ಎಲ್ಲ ಅವರ ಹತ್ತಿರ ಓಡಿ ಹೋದೆವು. ಮೊದಲು ನನ್ನನ್ನು ಟಾಯ್ಲೆಟ್‌ಗೆ ಕರೆದುಕೊಂಡು ಹೋಗಿ ಅಂದ್ರು. ಟಾಯ್ಲೆಟ್‌ಗೆ ಹೋಗಿ ಬಂದ ಮೇಲೆ ಆರಾಮಾಗಿ ಕೂತರು. ಯಾಕೆ ಬಿದ್ರಿ ಎಂದು ಕೇಳಿದ್ರೆ, ನನಗೆ ಅರ್ಜೆಂಡಾಗಿತ್ತು. ತಡೆದುಕೊಂಡು, ತಡೆದುಕೊಂಡು ಕಷ್ಟವಾಗಿ ಹೋಗಿಬಿಟ್ಟಿತ್ತು. ನೀವು ಆಚೆ, ಈಚೆ ಹೋಗಬಾರದು ಅಂದಿದ್ರಿ, ಒಂದು ತಲೆ ಆದ ಮೇಲೆ ಇನ್ನೊಂದು ಬರಬೇಕು ಎಂದೂ ಹೇಳಿದ್ರಿ. ನನಗೆ ತಡೆದುಕೊಳ್ಳಲು ಸಾಧ್ಯವಾಗದೇ ಹೀಗಾಯ್ತು ಅಂದ್ರು. ಪರ್ವಾಗಿಲ್ಲ. ಈಗ ಚೆನ್ನಾಗಿದ್ದೇನೆ. ಶಾಟ್‌ ಓಕೆ ಆಯ್ತಾ ನೋಡಿ. ಆಗದಿದ್ದರೆ ಇವತ್ತು ರಾತ್ರಿ ಮತ್ತೆ ಮಾಡೋಣ ಅಂದ್ರು. ಶಾಟ್‌ ಚೆನ್ನಾಗಿ ಬಂದಿದೆ ಎಂದು ದೊರೆಯವರು ಹೇಳಿದ್ರು. ಇದನ್ನು ತಕ್ಷಣವೇ ಲ್ಯಾಬ್‌ಗೆ ಕಳುಹಿಸಿ, ಇದನ್ನು ಡೆವಲಪ್‌ ಮಾಡಿ, ಪ್ರಿಂಟ್‌ ತೆಗೆದುಕೊಳ್ಳಿ. ಪ್ರಿಂಟ್‌ ಚೆನ್ನಾಗಿ ಬರದಿದ್ರೆ ನಿಮಗೆ ಯಾವತ್ತು ಬೇಕು ಹೇಳಿ ಅವತ್ತು ಬಂದು ಚಿತ್ರೀಕರಣ ಮಾಡಲು ನಾನು ತಯಾರಿದ್ದೇನೆ ಎಂದರು. ನಾವು ಪ್ರಿಂಟ್‌ ನೋಡಿದೆವು. ದೃಶ್ಯ ಪರ್ಫೆಕ್ಟ್‌ ಆಗಿತ್ತು.


ಜೀವನ ಚೈತ್ರ ಸಿನಿಮಾ ತೆಗೆದ ವೇಳೆ ಅಂದರೆ 1958ರಲ್ಲಿ ಇದ್ದ ರಾಜ್‌ಕುಮಾರ್‌ ಅವರ ಮನೋಸ್ಥೈರ್ಯ 1992ರಲ್ಲಿಯೂ ಹಾಗೆಯೇ ಇತ್ತು. ಅದನ್ನು ಯಾರ ಕೈಯಲ್ಲಿಯೂ ಬದಲಾಯಿಸಲು ಸಾಧ್ಯವಿರಲಿಲ್ಲ. ಯಾವ ಕಲಾವಿದರಲ್ಲಿಯೂ ಅಂತಹ ಮನೋಸ್ಥೈರ್ಯವನ್ನು ನಾನು ಕಂಡಿಲ್ಲ.


ಮುಂದುವರಿಯುವುದು...

26 views