ರಾಜ್‌ಕುಮಾರ್‌ ಸಿನಿಮಾ ಬಂದ್ರೆ ನಾನೇನು ಮಾಡ್ತಿದ್ದೆ ಅಂದ್ರೆ...

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ - 5ಮಲ್ಲಿಕಾರ್ಜುನ ಟ್ಯಾಕೀಸಲ್ಲಿ ಕೆಲ್ಸ ಬಿಟ್ಟಿರ್ಲಿಲ್ಲ. ನಾಲ್ಕೈದು ದಿವ್ಸ ನಾಟಕ ಆಗುತ್ತೆ. ಬೇರೆ ದಿವ್ಸ ಟ್ಯಾಕೀಸ್‍ಗೆ ಹೋಗ್ತಾ ಇದ್ದೆ. ಅದರಲ್ಲೂ ರಾಜ್ ಕುಮಾರ್ ಪಿಚ್ಚರ್ ಬಂತು ಅಂದ್ರೆ ಪಬ್ಲಿಸಿಟಿಗೆ ನಾನೇ ಹೋಗ್ತಿದ್ದೆ, ಮೈಕಲ್ಲಿ ರಾಜ್ ಕುಮಾರ್ ಅವರ ಹಿಂದೆಂದೂ ನೋಡದ, ಮುಂದೆಂದೂ ನೋಡಲಾಗದ ಕನ್ನಡ ಚಿತ್ರ, ನಟಸರ್ವಭೌಮ ರಾಜ್ ಕುಮಾರ್ ನಟಿಸಿರುವ ಚಿತ್ರ ಮರೆಯದೇ ಬಂದು ನೊಡಿ” ಅಂತ ಜಟಕಾ ಗಾಡಿಯಲ್ಲಿ ಅನೌಂಸ್ಮೆಂಟ್ ಮಾಡ್ತಿದ್ದೆ.


ಪರಮ್: ನೀವೇ?


ಬ್ಯಾಂಕ್ ಜನಾರ್ಧನ್: ನಾನೇ. ಎರಡು ಪೋಸ್ಟರ್ ಕಟ್ಕೊಂಡು ಎಲ್ಲಾ ಮಾಡ್ತಿದ್ದೆ. ರಾಜ್ ಕುಮಾರ್ ಅಂದ್ರೆ ಅಷ್ಟು ಅಭಿಮಾನ ನಂಗೆ. ರಾಜ್ ಕುಮಾರ್ ಪಿಚ್ಚರ್ ನೋಡೋದಕ್ಕೆ ಹೊಳಲ್ಕೆರೆಯಿಂದ ಚಿತ್ರದುರ್ಗಕ್ಕೆ ಸೈಕಲಲ್ಲಿ ಮೂವತ್ತು ಕಿಲೋಮೀಟರ್ ಹೋಗ್ತಾ ಇದ್ವಿ. ಹಣ್ಣೆಲೆ ಚಿಗುರಿದಾಗ ಈ ಸಿನಿಮಾಗಳೆಲ್ಲಾ ರಿಲೀಸ್ ಆದಾಗ. ರಾತ್ರಿ ಏಳು ಗಂಟೆಗೆ ಹೊರಟು ಸೆಕೆಂಡ್ ಶೋಗೆ ಹೋಗ್ತಾ ಇದ್ವಿ. ಸೆಕೆಂಡ್ ಶೋ ಮುಗಿಸ್ಕೊಂಡು ಒಂದು ಗಂಟೆಗೆ ವಾಪಸ್ ಬರ್ತಾ ಇದ್ವಿ. ಅವಾಗ ಮಧ್ಯದಲ್ಲಿ ಕರಡಿ ಕಾಟ ಇತ್ತು. ಬರ್ಬೇಕಾದ್ರೆ ಕಣಿವೆ ಅಂತ ಇದೆ, ಅಲ್ಲಿ ಕರಡಿ ಕಾಟ ಜಾಸ್ತಿ. ನಾವು ನಾಲ್ಕೈದು ಜನ ಹುಡುಗರು ಸೈಕಲಲ್ಲಿ ಬರ್ತಾ ಇದ್ರೆ ರಸ್ತೆ ಮಧ್ಯದಲ್ಲಿ ಕರಡಿ ಕುಂತಿರೋದು. ತನ್ನ ಮಕ್ಕಳ ಜೊತೆ ಅಥವಾ ನಾಲ್ಕೈದು ಕರಡಿಗಳು ಸೇರ್ಕೊಂಡು ಕೂತಿರೋದು.


ಪರಮ್: ಗುಂಪು ಕಟ್ಕೊಂಡು?


ಬ್ಯಾಂಕ್ ಜನಾರ್ಧನ್: ನಮಗೆ ಹೆದರಿಕೆ. ಅಷ್ಟು ದೂರದಲ್ಲೇ ನಿಂತು ಅಲ್ಲಿ ತೆಂಗಿನಗರಿ ಏನಾದ್ರೂ ಬಿದ್ದಿದ್ರೆ, ಅದಕ್ಕೆ ಬೆಂಕಿ ಹಚ್ಚಿಸ್ಕೊಂಡು ಕೂಗ್ಕೊಂಡು ಬರೋದು. “ಹಾ! ಹೋ!” ಅಂತ ಕೂಗ್ಕೊಂಡು ಬಂದ್ರೆ ಕರಡಿ ಓಡೋಗ್ಬಿಡೋದು. ಹೀಗೆ ರಾಜ್ ಕುಮಾರ್ ಮೇಲಿನ ಅಭಿಮಾನ ಇನ್ನೂ ಜಾಸ್ತಿ ಆಗ್ಬಿಡ್ತು. ಏನಾದ್ರೂ ಪ್ರಯತ್ನ ಮಾಡಿ ಸಿನಿಮಾ ನಟ ಆಗ್ಬೇಕಲ್ಲಾ ಅಂತ ಬಹಳ ಆಸೆ ಆಗ್ತಿತ್ತು.ಮುಂದುವರೆಯುವುದು…

27 views