"ರಾಜ್ ಕುಮಾರ್ ಸ್ನೇಹ ಸಿಕ್ಕಿದ್ದು ನನ್ನ ಈ ಜನ್ಮದ ಪುಣ್ಯ"

ದೊರೆ-ಭಗವಾನ್‌ ಲೈಫ್‌ ಸ್ಟೋರಿ- ಭಾಗ 1

(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


ನಾನು ಹುಟ್ಟಿದ್ದು ಮೈಸೂರು. ನನ್ನ ತಂದೆ ಕೊರ್ಟ್‌ಗೆ ಸಂಬಂಧಪಟ್ಟ ಪತ್ರಗಳನ್ನು ಬರೆದುಕೊಡುತ್ತಿದ್ರು. ಸ್ಟ್ಯಾಂಪ್‌ ಪೇಪರ್‌ ಮಾರುತ್ತಿದ್ರು. ಆಗ ಇದಿದ್ದು ಒಂದೇ ಕೋರ್ಟ್‌. ಮೈಸೂರು ರಾಜಧಾನಿಯಾಗಿತ್ತು. ಅವರಿಗೆ ವೆಂಡರ್‌ ಎಂದು ಹೆಸರು ಇತ್ತು. ವೆಂಡರ್‌ ಕೃಷ್ಣಸ್ವಾಮಿ ಅಯ್ಯಂಗಾರ್‌ ಎಂದೇ ಕರೆಯುತ್ತಿದ್ರು. ನನ್ನ ತಂದೆಯ ಅಕ್ಷರ ಬಹಳ ಮುದ್ದು. ಪ್ರಿಂಟ್‌ ಇದ್ದ ಹಾಗೆ ಇತ್ತು. ಹಾಗಾಗಿ ನ್ಯಾಯಧೀಶರು, ಪತ್ರ ಬರೆಸಿಕೊಂಡು ಬರುವುದಾದರೆ, ವೆಂಡರ್‌ ಹತ್ತಿರ ಬರೆಸಿಕೊಂಡು ಬನ್ನಿ ಅನ್ನುತ್ತಿದ್ರು. ಅಪ್ಪನಿಗೆ ಬೇಡಿಕೆ ಹೆಚ್ಚಿತ್ತು. ನಾಲ್ಕು ಪತ್ರ ಬರೆದರೆ ಒಂದು ರೂಪಾಯಿ ಸಿಗುತ್ತಿತ್ತು. ₹30 ರೂಪಾಯಿ ಸಂಪಾದನೆ ಆಗುತ್ತಿತ್ತು. ರಂಗಸ್ವಾಮಿ ಬಂಗಲೆ ಎಂದಿತ್ತು. ಅಲ್ಲಿಯೇ ಕ್ವಾರ್ಟಸ್‌ ನೀಡಿದ್ದರು. ಎರಡು ಕೋಣೆ ಚಿಕ್ಕ ಮನೆಯನ್ನು ಉಚಿತವಾಗಿ ಮಹಾರಾಜರು ಕೊಟ್ಟಿದ್ರು. ನಾನು ಹುಟ್ಟಿದ್ದು ಅಲ್ಲಿಯೇ. ನನಗೆ ಒಂದರಿಂದ ಎರಡು ವರ್ಷ ಇರಬಹುದು ಆಗ ಮಹಾರಾಜರು ಅದನ್ನು ಮಾರಿಬಿಟ್ರು. ಆಗ ನಮ್ಮನ್ನು ಒಕ್ಕಲೆಬ್ಬಿಸಿದರು. ನಂತರ ತಂದೆ ಹಳ್ಳದಕರೆಗೆ ಬಂದು, ಚಿಕ್ಕ ಮನೆ ಮಾಡಿದ್ರು. ₹4.50 ರೂಪಾಯಿಯ ಎರಡು ಕೋಣೆ ಮನೆ ಅದು. ಕರೆಂಟ್‌ ಇರಲಿಲ್ಲ. ಸೀಮೆಎಣ್ಣೆ ದೀಪ, ಕಾವೇರಿ ನೀರು ಬರುತ್ತಿತ್ತು.

ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಕಲಿತೆ. ಮೂವರು ಅಣ್ಣಂದಿರು, ಇಬ್ಬರು ತಂಗಿಯರು ನನಗೆ. ಅಕ್ಕನ್ನೂ ಇದ್ದರಂತೆ ಬಾಲ್ಯದಲ್ಲಿಯೇ ಅವರು ತೀರಿಕೊಂಡಿದ್ದರು. ಶ್ರೀರಂಗಮ್ಮ ಎಂದು ಅವರ ಹೆಸರು. ನನಗೆ ಅವರನ್ನು ನೋಡಿದ ಜ್ಞಾಪಕವಿಲ್ಲ. ನನ್ನ ತಾಯಿಯ ತಮ್ಮನಿಗೆ ಕೊಟ್ಟು ಅವರನ್ನು ಮದುವೆ ಮಾಡಿದ್ರು. ಇದು ನಮ್ಮ ಪುಟ್ಟ ಸಂಸಾರ.

ಮೈಸೂರಿನ ಬಹುತೇಕ ಕಲಾವಿದರು ಹುಟ್ಟಿದ್ದು, ಹಳ್ಳದಕೆರೆಯಲ್ಲಿಯೇ. ಹುಣಸೂರು ಕೃಷ್ಣಮೂರ್ತಿ, ದ್ವಾರಕೀಶ್‌, ಎಚ್‌.ಎಸ್‌.ಕೃಷ್ಣಸ್ವಾಮಿ, ಕೆ.ಎಸ್‌.ಎಲ್‌ ಸ್ವಾಮಿ, ಪಿಟೀಲು ದೇವೇಂದ್ರಪ್ಪನವರು ಅಲ್ಲಿದ್ರು.. ಹೀಗೆ ಅನೇಕ ಕಲಾವಿದರ ತವರು ಮನೆ ಹಳ್ಳದ ಕೆರೆ. ಮೂರನೇ ತರಗತಿಯವರಿಗೂ ನಾನು ಅಲ್ಲಿಯೇ ಓದಿದೆ.
ನಮ್ಮ ದೊಡ್ಡಣ್ಣನವರು ಬಿ.ಎ.,ಬಿಟಿ, ಎಂಆರ್‌ಎಸ್‌ಟಿ ಮಾಡಿದ್ರು. ಮೈಸೂರಿನಲ್ಲಿ ಮಂಡಿಪೇಟೆ ಸರ್ಕಾರಿ ಶಾಲೆಯಿತ್ತು. ಅಲ್ಲಿ ಅವರು ಹೆಡ್‌ಮಾಸ್ಟರ್‌ ಆಗಿದ್ರು. ಕೃಷ್ಣರಾಜೇಂದ್ರ ಮಿಲ್ಸ್‌ ಎಂದು ಮಹಾರಾಜ ಅವರ ಮಿಲ್ಸ್‌ ಇತ್ತು, ಅಲ್ಲಿ ಎರಡನೇ ಅಣ್ಣ ಕೆಲಸ ಮಾಡುತ್ತಿದ್ದ. ಯುದ್ಧದ ಸಮಯ ಅದು, ಆಗ ಯುವಕರಿಗೆ ಬರುವಂತೆ ಕರೆ ನೀಡಿದ್ದರು. ತರಬೇತಿಯೂ ಕೊಡುತ್ತಿದ್ದರು. ಅವನು ಹೋದ. ನಂತರ ಅವನು ಪೈಲಟ್ ಆದ. ಅವನು ಆಗ್ರಾದಿಂದ ಅಮ್ಮನನ್ನು ನೋಡುವ ಆಸೆಯಿಂದ ಬೆಂಗಳೂರಿಗೆ ಹೊರಟ್ಟಿದ್ದ, ವಿಮಾನ ದುರಂತಕ್ಕೀಡಾಗಿ ಅವನು ತೀರಿಹೋದ. ಇದು ನಮ್ಮ ಕುಟುಂಬಕ್ಕೆ ಬಹಳ ದುಃಖದ ಸಂಗತಿ. ವಿಧಿ ಹೇಗೆ ಆಟ ಆಡುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಆ ವಿಮಾನದಲ್ಲಿ ಬೇರೆಯವರು ಬರಬೇಕಿತ್ತು. ಇವನಿಗೆ ಅಮ್ಮನನ್ನು ನೋಡುವ ಖುಷಿ. ಹಾಗಾಗಿ, ಅವರಿಗೆ ಹುಷಾರಿಲ್ಲ ಅಂಥ ರಜೆ ಹಾಕು ನಾನು ಹೋಗುತ್ತೇನೆ ಎಂದು ಇನ್ನೊಬ್ಬ ಪೈಲಟ್‌ಗೆ ಹೇಳಿದ ಅವನು ರಜೆ ತೆಗೆದುಕೊಂಡು, ಇವನು ಹೊರಟು ಬಂದ. ಆಗ ಈ ದುರಂತವಾಯ್ತು. ಹೈದರಾಬಾದ್‌ ಬಳಿ ಸಿಡಿಲಿಗೆ ಹೊಡೆದು ಈ ದುರ್ಘಟನೆ ಸಂಭವಿಸಿತ್ತು.

ನನ್ನ ತಂದೆಯವರು ತೀರಿ ಹೋದರು. ಆಮೇಲೆ ಮನೆಯಲ್ಲಿ ಕಷ್ಟವಿತ್ತು. ನನ್ನ ಅಣ್ಣ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ. ಎಚ್‌ಎಎಲ್‌ನಲ್ಲಿ ಏರೋಡ್ರಮ್‌ ಕನ್‌ಸ್ಟ್ರಕ್ಷನ್‌ ಆಗುತ್ತಿತ್ತು. ಅಲ್ಲಿ ಸೂಪರ್‌ವೈಸರ್‌ ಕೆಲಸ ಸಿಕ್ಕಿತು ಅವನಿಗೆ. ನನ್ನ ದೊಡ್ಡಣ್ಣ ನಂತರ ಕೆಜಿಎಫ್‌ ಹೈಸ್ಕೂಲ್‌ನಲ್ಲಿ ಹೆಡ್‌ಮಾಸ್ಟರ್‌ ಆದ್ರು. ನಂತರದಲ್ಲಿ ಬೆಂಗಳೂರಿನ ಕಂಟೋನ್ಮೆಂಟ್‌ ಸಮೀಪದ ಹೈಸ್ಕೂಲ್‌ನಲ್ಲಿ ಪ್ರಿನ್ಸಿಪಲ್‌ ಆದರು. ಅವರು ಇಲ್ಲಿ ವೃತ್ತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ರು. ಆಗ ನಾನು ಮೈಸೂರಿನಲ್ಲಿ 3 ನೇ ತರಗತಿ ಓದುತ್ತಿದ್ದೆ. ನನ್ನ ಒಬ್ಬ ತಂಗಿಯನ್ನು ನನ್ನ ಮಾವ ದತ್ತು ತೆಗೆದುಕೊಂಡರು. ಮುಂದಿನ ವಿದ್ಯಾಭ್ಯಾಸ ಕೊಡಿಸುತ್ತೇನೆ ಇಲ್ಲಿಗೆ ಬಾ ಎಂದು ಅಣ್ಣ ಕರೆದರು. ಹಾಗಾಗಿ ನಾನು ಬೆಂಗಳೂರಿಗೆ ಬಂದೆ. ಶಂಕರಪುರದಲ್ಲಿ ದೊಡ್ಡಣ್ಣ ಅವರ ಮನೆ ಇತ್ತು. ಮನೆ ಹತ್ತಿರವೇ ಫೋರ್ಟ್‌ ಸ್ಕೂಲ್‌ನಲ್ಲಿ ನಾಲ್ಕನೇ ತರಗತಿಗೆ ಸೇರಿದೆ. ನಂತರ ಬೆಂಗಳೂರನಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಿದೆ. ಮನೆ ಎದುರಿಗೆ ಇದ್ದ ಬೆಂಗಳೂರು ಹೈಸ್ಕೂಲ್‌ಗೆ ಸೇರಿಸಿದ್ರು. ಅವರಿಗೆ ನ್ಯಾಷನಲ್‌ ಹೈಸ್ಕೂಲ್‌ನಿಗೆ ಸೂಪರಿಂಟೆಂಡ್‌ ಆಗಿ ವರ್ಗಾವಣೆ ಆಯ್ತು. ಆಗ ಸದಾಶಿವಯ್ಯ ಅವರು ನ್ಯಾಷನಲ್‌ ಹೈಸ್ಕೂಲ್‌ನಲ್ಲಿ ಇದ್ರು. ನನ್ನ ಅಣ್ಣ ಇತಿಹಾಸ ಮತ್ತು ಇಂಗ್ಲಿಷ್‌ನಲ್ಲಿ ಬಹಳ ಜ್ಞಾನ ಹೊಂದಿದ್ದರು. ಹಾಗಾಗಿ ಸದಾಶಿವಯ್ಯ ಅವರು ಅಲ್ಲಿಗೆ ಕರೆಸಿಕೊಂಡ್ರು.

ನನಗೆ ಕನ್ನಡ ಮೀಡಿಯಂ ಬೇಕಾದ್ರೆ ನಮ್ಮ ಸ್ಕೂಲ್‌ಗೆ ಬಾ. ಇಂಗ್ಲಿಷ್‌ ಮೀಡಿಯಂ ಬೇಕಾದ್ರೆ ಬೆಂಗಳೂರು ಹೈಸ್ಕೂಲ್‌ಗೆ ಹೋಗು ಅಂದ್ರು ಅಣ್ಣ. ಆದರೆ, ಇಂಗ್ಲಿಷ್‌ ಮೀಡಿಯಂ ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದರು. ನನ್ನಲ್ಲಿದ್ದ ಕನ್ನಡ ಅಭಿಮಾನವನ್ನು ಪ್ರೋತ್ಸಾಹಿಸಿದವರು ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು. ಅವರೇ ನನಗೆ ಕನ್ನಡ ಉಪನ್ಯಾಸಕರಾಗಿದ್ದರು. ವಿ.ಟಿ ಶ್ರೀನಿವಾಸನ್‌ ಇಂಗ್ಲಿಷ್‌ ಕಲಿಸುತ್ತಿದ್ರು. ಅವರಿಬ್ಬರೂ ಎಷ್ಟು ವಿದ್ಯಾವಂತರೆಂದರೆ ಅವರ ವಿದ್ಯೆಯನ್ನು ವಿದ್ಯಾರ್ಥಿಗಳಿಗೆ ಧಾರಾಳವಾಗಿ ಹಂಚಿಬಿಟ್ಟರು. ವಿ.ಎನ್‌.ಸುಬ್ಬರಾವ್‌ ನನ್ನ ಕ್ಲಾಸ್‌ಮೆಟ್‌. ಒಳ್ಳೆಯ ವಾತಾವರಣದಲ್ಲಿ ಶಿಕ್ಷಣ ಮುಗಿಯಿತು.

ಮಾಸ್ಟರ್‌ ಹಿರಣಯ್ಯ ಅವರು ಹಳ್ಳದಕೆರೆಯವರು. ಅವನು ನಾನು ಚಿಕ್ಕ ಹುಡುಗರಾಗಿದ್ದಾಗ ದೇವದಾಸಿ ನಾಟಕವನ್ನು ಅವರ ಮನೆಯಲ್ಲಿ ಮಾಡುತ್ತಿದೆವು. ನಾನು ಸಾಕಾರಮ್ಮ, ಅವರು ನಾಜುಕಯ್ಯ ಪಾತ್ರ ಮಾಡುತ್ತಿದ್ವಿ. ಕಾಲೇಜಿನಲ್ಲಿ ಓದುವಾಗ ನಾಟಕಗಳನ್ನು ಮಾಡಬೇಕಾಯಿತು. ವೆಂಕಟಸುಬ್ಬಯ್ಯ ಅವರು ಕೈಲಾಸಂ ನಾಟಕ ಆರಿಸಿಕೊಂಡ್ರು. ಹೆಣ್ಣು ಪಾತ್ರಧಾರಿ ಬೇಕಿತ್ತು. ಆದ್ರೆ ಯಾರೂ ಸಿಕ್ಕಿರಲಿಲ್ಲ. ನಾನು ರೂಪದಲ್ಲಿ ಚೆನ್ನಾಗಿ ಇದಿದ್ದರಿಂದ ನೀನು ಮಾಡ್ತೀಯಾ ಎಂದು ಕೇಳಿದ್ರು. ಮಾಡ್ತೇನೆ ಎಂದೆ. ಪ್ರಾಕ್ಟೀಸ್‌ ಶುರುವಾಯ್ತು. ಚೆನ್ನಾಗಿ ಮಾಡಿದೆನೆಂದು ವೆರಿ ಗುಡ್‌ ಅಂದ್ರು. ಆಮೇಲೆ ನಾನು ನಾಟಕಗಳಲ್ಲಿ ಹೆಣ್ಣುಮಕ್ಕಳ ಪಾತ್ರ ಮಾಡುವುದನ್ನು ಮುಂದುವರಿಸಿದೆ. ಆಗೆಲ್ಲ ಹೆಣ್ಣುಮಕ್ಕಳು ನಾಟಕ ಮಾಡುವುದು ಕಡಿಮೆ. ಈಗ ತಾಮುಂದು, ನಾಮುಂದು ಎಂದು ಬರುತ್ತಾರೆ. ಆಗ ಹಾಗೆ ಇರಲಿಲ್ಲ. ಈಗ ಒಂದೊಂದು ಪಿಕ್ಚರ್‌ಗೆ ಒಬ್ಬೊಬ್ಬ ಹೀರೊಯಿನ್‌ ಬರುತ್ತಾರೆ. ಸುಂದರವಾದ ಹುಡುಗಿಯರು ನಾನು ನಟಿಯಾಗಬೇಕೆಂದು ಯೋಚಿಸುವ ಕಾಲ ಇದು. ಗ್ಲಾಮರಸ್‌ ಫೀಲ್ಡ್‌ ಇದು. ಯಶಸ್ಸು ದೊರಕಿದರೆ ಸಾಮಾಜಿಕ ಜೀವನದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಮೇಲೆ ಹೋಗುವಂತಹ ಅಂತಹ ಪರಿಸ್ಥಿತಿ ಈಗಿದೆ. 1940–50 ರಲ್ಲಿ ಹೆಣ್ಣುಮಕ್ಕಳು ನಾಟಕಕ್ಕೆ ಬರುವುದೇ ಕಡಿಮೆ.

ಮಾಸ್ಟರ್‌ ಹಿರಣಯ್ಯ ಅವರ ಅಪ್ಪನ ಹತ್ತಿರ, ಭಗವಾನ್‌ ತುಂಬಾ ಚೆನ್ನಾಗಿ ನಾಟಕ ಮಾಡ್ತಾನೆ, ಹೆಣ್ಣಿನ ಪಾತ್ರ ಚೆನ್ನಾಗಿ ಮಾಡ್ತಾನೆ. ಕಾಲೇಜಿನಲ್ಲಿ ಒಳ್ಳೆಯ ಹೆಸರು ತೆಗೆದುಕೊಂಡಿದ್ದಾನೆ ಎಂದಿದ್ದ. ಹಾಗಾಗಿ, ಅವರು ನನಗೆ ನೀನು ಕಾಲೇಜು ಮುಗಿಸು, 5 ಗಂಟೆಗೆಲ್ಲ ನಿನ್ನ ಕಾಲೇಜು ಮುಗಿಯುತ್ತದೆ. 6.30 ಗಂಟೆಗೆ ನಾವು ನಾಟಕ ಮಾಡುವ ಸ್ಥಳಕ್ಕೆ ಬಾ. ಇಲ್ಲಿಗೆ ಬಂದು ಪಾತ್ರಗಳನ್ನೆಲ್ಲ ಗಮನಿಸು. ಕಾಲೇಜಿನಲ್ಲಿ ನಾಟಕ ಹೇಗೆ ಮಾಡಿದರೂ ನಡೆಯುತ್ತಿದೆ. ಇದು ವೃತ್ತಿ ರಂಗಭೂಮಿ. ಇಲ್ಲಿ ಎಲ್ಲ ವ್ಯವಸ್ಥಿತವಾಗಿರುತ್ತದೆ. ನೀನು ಇಲ್ಲಿ ಬಂದು ಕಲಿ ಎಂದ್ರು. ಸರಿ ಎಂದು, ನಾನು ಕಾಲೇಜು ಮುಗಿಸಿಕೊಂಡು, ಹಿರಣಯ್ಯ ಅವರ ಮಿತ್ರಮಂಡಳಿ ನಾಟಕಗಳನ್ನು ನೋಡಲು ಹೋಗುತ್ತಿದ್ದೆ. ನಾಟಕ ಮಾಡು ಎಂದು, ಜಡ್ಜ್‌ ಪಾತ್ರ ಕೊಟ್ಟರು. ಹೆಚ್ಚುಕಮ್ಮಿ ಒಂದು ತಿಂಗಳು ಜಡ್ಜ್‌ ಪಾತ್ರ ಮಾಡಿದೆ.ಮುಂದುವರೆಯುವುದು...


ಸಂದರ್ಶಕರು

ಕೆ.ಎಸ್‌ ಪರಮೇಶ್ವರ


982 views