ರಾಜ್-ವರದಣ್ಣ ಎಂಬ ರಾಮ ಲಕ್ಷ್ಮಣರು!

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 43


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ರಾಜ್‌ಕುಮಾರ್‌ ಅವರು ತಮ್ಮನ ಮನೆಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಹೋದರೆ, ರಾತ್ರಿ 7 ಗಂಟೆಗೆ ಬರುತ್ತಿದ್ರು. ಪಾರ್ವತಮ್ಮ ಅವರಿಗೆ ಯಾಕಾದ್ರೂ ಈ ಮನೆ ಮಾಡಿಕೊಟ್ನೋ, ಒಂದು ನಿಮಿಷವೂ ಮನೆಯಲ್ಲಿ ಇರುವುದಿಲ್ಲ ಎಂದು ಬೇಸರವಾಗಿತ್ತು. ರಾಜ್‌ಕುಮಾರ್‌ಗೆ ತಮ್ಮನ ಜೊತೆಯೇ ಇರಬೇಕೆಂಬ ಆಸೆ. ಒಂದು ದಿನ ಪಾರ್ವತಮ್ಮ ನವರು ಯಾವಾಗಲೂ ಆ ಮನೆಯಲ್ಲಿಯೇ ಇದ್ರೆ ನಾನೇನು ಮಾಡಲಿ. ಈ ಮನೆಯಲ್ಲಿಯೂ ಇರಬೇಕಲ್ವಾ ನೀವು ಎಂದ್ರು. ಅದಕ್ಕವರು ಇರುತ್ತೇನೆ ಬಿಡು. ನಿನ್ನ ಆಸೆಗೆ ನಾನೇಕೆ ತಣ್ಣೀರು ಎರಚಲಿ ಎಂದರು.


ನಂತರದಲ್ಲಿ ಬೆಳಿಗ್ಗೆ ಹೋದರೆ ಮಧ್ಯಾಹ್ನದೊಳಗೆ, ಮಧ್ಯಾಹ್ನ ಹೋದರೆ ಸಂಜೆಯೊಳಗೆ ಬಂದು ಬಿಡುತ್ತಿದ್ರು. ವರದಪ್ಪ ಒಳ್ಳೆಯ ಸಂಗೀತ ವಿದ್ಯಾವಂತ. ಹಾಗಾಗಿ ಇಬ್ಬರೂ ಮಾತನಾಡುತ್ತಿದ್ದು ಸಂಗೀತದ ವಿಷಯವೇ. ಕ್ಯಾಸೆಟ್‌ ಹಾಕಿಕೊಂಡು ಸಂಗೀತದ ಬಗ್ಗೆ ಚರ್ಚೆ ಮಾಡುತ್ತಿದ್ರು. ಹಿಂದೂಸ್ಥಾನಿ, ಕರ್ನಾಟಕ ಸಂಗೀತದಲ್ಲಿ ಇಬ್ಬರಿಗೂ ಜ್ಞಾನ ಇತ್ತು. ವರದಪ್ಪನಿಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿತ್ತು. ಒಂದು ತಿಂಗಳು ನಾನೇ ನೋಡಿಕೊಂಡಿದ್ದೆ. ರಾಜ್‌ಕುಮಾರ್‌ ಜೊತೆ ದಿನ ವಾಕಿಂಗ್‌ ಮಾಡುತ್ತಿದ್ದ. ನಾನೊಮ್ಮೆ ನೋಡಿ, ನೀನು ವಾಕಿಂಗ್‌ ಹೋಗಬೇಡ. ಇಷ್ಟು ವೇಗವಾಗಿ ಹೋಗುವುದರಿಂದ ನಿನಗೆ ಸಮಸ್ಯೆಯಾಗುತ್ತದೆ ಎಂದೆ. ನಂತರ ಅವನು ವಾಕಿಂಗ್‌ ಹೋಗುವುದು ಬಿಟ್ಟುಬಿಟ್ಟ. ರಾಜ್‌ಕುಮಾರ್‌ ಅವರಿಗೂ 40 ನಿಮಿಷಕ್ಕಿಂತ ಹೆಚ್ಚು ವಾಕಿಂಗ್‌ ಮಾಡದಂತೆ ಹೇಳಿದ್ದೆ. ವರದಪ್ಪ ಹೋದ ಮೇಲೆ ರಾಜ್‌ಕುಮಾರ್‌ ಅವರ ಮನಸ್ಸಿಗೆ ತುಂಬಾ ನೋವಾಗಿತ್ತು. ಆತ ಹೋದ ಮೂರೇ ತಿಂಗಳಿಗೆ ಇವರು ಹೋದರು. ರಾಮಾಯಣದಲ್ಲಿ ರಾಮ, ಲಕ್ಷ್ಮಣ, ಮಹಾಭಾರತದಲ್ಲಿ ಕೃಷ್ಣ, ಬಲರಾಮರಿದ್ದಂತೆ, ನಮ್ಮ ಕಲಿಯುಗದಲ್ಲಿ ರಾಜ್‌ಕುಮಾರ್‌ ವರದಪ್ಪ. ಅಣ್ಣ, ತಮ್ಮನ ವಿಶಿಷ್ಟ ಸಂಬಂಧದ ಕುರಿತು ನಾನು ನೀಡಬಹುದಾದ ವಿವರಣೆ ಇದು. ಇವರಿಬ್ಬರ ನಡುವಿನ ಬಾಂಧವ್ಯವನ್ನು ವರ್ಣಿಸಲು ಸಾಧ್ಯವಿಲ್ಲ. ವರದಪ್ಪ ಹಾಕಿದ ರೇಖೆಯನ್ನು ರಾಜ್‌ಕುಮಾರ್‌ ದಾಟಿ ಹೋಗುತ್ತಿರಲಿಲ್ಲ. ಸ್ವರ್ಗವನ್ನು ಕಂಡಂತಹ ಅಣ್ಣ–ತಮ್ಮಂದಿರಗೆ ನಮಸ್ಕಾರ.
ಮುಂದುವರೆಯುವುದು...

27 views