ರಾಜ್‌ ಸಾವಿನ ಕೆಲವೇ ಕ್ಷಣಗಳ ಮುಂಚೆ ನಡೆದ ಘಟನೆಗಳು!

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 55


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ರಾಜ್‌ಕುಮಾರ್‌ ಸಾವು ದೊಡ್ಡ ದುರಂತ. ಊಟ ಮಾಡಿ ಬಂದು ಎಲೆ ಅಡಿಕೆ ಹಾಕಿಕೊಂಡಿದ್ರು. ಅದನ್ನು ತಿನ್ನುವುದರಲ್ಲಿ ಬಹಳ ರಸಿಕ ಅವರು. ಎಲೆಯನ್ನು ಟವೆಲ್‌ನಲ್ಲಿ ಒರೆಸಿ, ತೊಟ್ಟನ್ನು ತೆಗೆದು, ಅದಕ್ಕೆ ಸುಣ್ಣ ಹಚ್ಚಿ, ಗೋಟು ಅಡಿಕೆಯನ್ನು ಸೇರಿಸಿ ಬಾಯಲ್ಲಿ ಹಾಕಿಕೊಂಡು ಅಗೆಯುವುದೆಂದರೆ ಅವರಿಗೆ ತುಂಬಾ ಸಂತೋಷ. ಎಲೆ ಅಡಿಕೆ ಹಾಕಿ ಹಾಲ್‌ನಲ್ಲಿದ್ದ ದಿವಾನ್‌ಮೇಲೆ ಮಲಗಿದ್ರು. ಮಧ್ಯಾಹ್ನದ ಹೊತ್ತು ಅರ್ಧ ಗಂಟೆಯ ಹಾಗೆ ಮಲಗುತ್ತಿದ್ರು. ಶೂಟಿಂಗ್‌ಸಮಯದಲ್ಲಿ ಹತ್ತು ನಿಮಿಷ ಮಲಗುತ್ತೇನೆ ಎಂದರೆ ಹತ್ತೇ ನಿಮಿಷಕ್ಕೆ ಸರಿಯಾಗಿ ಎದ್ದು ಬಿಡುತ್ತಿದ್ರು.


ಅಷ್ಟು ಕಡಿಮೆ ಅವಧಿಗೆ ಮಧ್ಯಾಹ್ನ ನಿದ್ದೆ ಮಾಡುತ್ತಿದ್ದರು. ಅಂದು ಮಧ್ಯಾಹ್ನವೂ 20 ನಿಮಿಷ ಮಲಗುತ್ತೇನೆ ಎಂದು ಮಲಗಿಕೊಂಡಿದ್ರು. ಅಡುಗೆ ಮನೆ ಕಡೆಯಿಂದ ರೂಮಿಗೆ ಹೋಗುತ್ತಿದ್ದ ಪೂರ್ಣಿಮಾಳ ಬಳಿ ಫ್ಯಾನ್‌ಸ್ವಲ್ಪ ಕಡಿಮೆ ಮಾಡು ಎಂದರಂತೆ. ಫ್ಯಾನ್‌ಸ್ವಿಚ್‌ಗೆ ಕೈ ಹಾಕಿ ಕಡಿಮೆ ಮಾಡುವ ವೇಳೆ ಏನೋ ಒಂದು ರೀತಿ ಶಬ್ದ ಕೇಳಿದೆ. ತಿರುಗಿ ನೋಡಿದ್ರೆ ರಾಜ್‌ಕುಮಾರ್‌ಒದ್ದಾಡುತ್ತಿದ್ರು. ಅಕೆ ಓಡಿ ಹೋಗಿ ಅಮ್ಮ, ಅಮ್ಮ ಎಂದು ಕರೆದಿದ್ದಾಳೆ. ಪಾರ್ವತಮ್ಮ ಅವರು ಓಡಿ ಬಂದು, ಮಾತನಾಡಿಲು ಪ್ರಯತ್ನಪಟ್ಟರೂ ಆಗಲಿಲ್ಲ. ತಕ್ಷಣ ಡಾಕ್ಟರನ್ನು ಕರೆಸಿದ್ರು. ಅವರು ಶಾಕ್‌ಟ್ರೀಟ್‌ಮೆಂಟ್‌ಎಲ್ಲ ಕೊಟ್ಟು, ಎಷ್ಟೇ ಪ್ರಯತ್ನ ಪಟ್ಟರೂ, ಫಲಿಸಲಿಲ್ಲ. ಮಧ್ಯಾಹ್ನ 1.31 ಕ್ಕೆ ರಾಜ್‌ಕುಮಾರ್ ಮೃತಪಟ್ಟರು. ಯಾವುದೇ ನರಳಾಟವಿಲ್ಲದ ಉತ್ತಮ ಸಾವನ್ನು ಅವರು ಕಂಡರು. ಇದು ಅವರ ಕೊನೆಯ ಕ್ಷಣ.


ಮುಂದುವರಿಯುವುದು...

27 views