“ಲಾಕಪ್‌ ಡೆತ್‌ ನಡೆದರೆ ಪೋಲಿಸಿನವರು ಎದುರಿಸೋ ಪ್ರಾಬ್ಲಮ್‌ ಏನೇನು ಗೊತ್ತ ”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 5


ಮನುಷ್ಯತ್ವ ಇರುವ ಯಾರೂ ಕೋಮು ಗಲಭೆ ಮಾಡುವುದಿಲ್ಲ. ಆ ತರಹದ ಪರಿಸ್ಥಿತಿಯಲ್ಲಿ ಒಂದು ಮುಸ್ಲಿಂ ಅಜ್ಜಿಗೂ ನನಗೂ ಮಾತುಕತೆ ಆಗುತ್ತದೆ. ಪೊಲೀಸ್‌ ಅಧಿಕಾರಿಯ ಸೇವೆಯಲ್ಲಿ ಮೂರು ಆಗಬಾರದು. ಆ ಮೂರು ಅವನಿಗೆ ಗಲ್ಲು ಶಿಕ್ಷೆ ಕೊಟ್ಟ ಹಾಗೆ. ಒಂದನೇಯದು ಕೋಮು ಗಲಭೆ. ಈ ವೇಳೆ ಪೊಲೀಸ್‌ ಅಧಿಕಾರಿ ಹೈರಾಣ ಆಗಿ ಬಿಡುತ್ತಾನೆ. ಅವನು ಕೆಲಸ ಮಾಡ್ಲಿ ಮಾಡದೇ ಇರ್ಲಿ, ಅವನಿಗೆ ಮನೆಗೇ ಹೋಗಲು ಆಗುವುದಿಲ್ಲ. ಯೂನಿಫಾರಂ ಕೂಡ ಚೇಂಜ್‌ ಮಾಡೋಕೆ ಆಗುವುದಿಲ್ಲ. ಇನ್ನೊಂದು ಲಾಕಪ್‌ಡೆತ್‌ ಆಗಬಾರದು. ಹಾಗೇನಾದ್ರು ಆದ್ರೆ ಕೊಲೆ ಮಾಡಿದ ಅಪರಾಧದ ಹಾಗೆ ಹಿಂಡಿ ಬಿಡುತ್ತಾರೆ. ಮೂರನೇಯದು, ಪೊಲೀಸ್‌ ಅಧಿಕಾರಿಯ ಜೊತೆಗೆ ಸರ್ಕಾರಿ ಅಧಿಕಾರಿಗಳಿಗೂ ಅನ್ವಯಿಸುತ್ತದೆ, ಲಂಚ ತೆಗೆದುಕೊಂಡು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಹಾಕಿಕೊಂಡರೆ ಅವರ ಜೀವನವನೇ ನಾಶವಾಗಿಬಿಡುತ್ತದೆ. ಈ ಮೂರು ಆಗದ ಹಾಗೆ ನೋಡಿಕೊಳ್ಳಿ ಎಂದು ಅಧಿಕಾರಿಗಳು ಎಚ್ಚರಿಸುತ್ತಿದ್ದರು.


ಕೋಮುಗಲಭೆ ಸಂದರ್ಭದಲ್ಲಿ ದಂಧೆ ನಡೆಯುತ್ತಿದ್ದ ಮನೆಯಲ್ಲಿದ್ದ ವೇಶ್ಯೆ ಪೊಲೀಸರೊಬ್ಬರನ್ನು ರಕ್ಷಣೆ ಮಾಡುತ್ತಾಳೆ. ಪೊಲೀಸ್‌ನವರು ರೇಡ್‌ ಮಾಡಿ ಅವಳನ್ನು ಹಿಂಡಿಬಿಟ್ಟಿರುತ್ತಾರೆ. ಆದರೂ, ಮುಸ್ಲಿಂ ಮಹಿಳೆ ರಕ್ಷಿಸುತ್ತಾಳೆ. ಗುಂಪೊಂದು ಪೊಲೀಸ್‌ನವರನ್ನು ಓಡಿಸಿಕೊಂಡು ಹೋಗುತ್ತದೆ. ಆಗ ಅವರು ದಂಧೆ ನಡೆಯುತ್ತಿದ್ದ ಮನೆಯೊಳಗೆ ಹೋಗುತ್ತಾರೆ. ಅವಳೊಬ್ಬಳ ಮನೆ ಮಾತ್ರ ತೆರೆದಿರುತ್ತದೆ. ಆ ದಂಧೆ ಮಾಡುವವರು, ಕಳ್ಳಭಟ್ಟಿ ಮಾಡುವವರು ಸ್ವಲ್ಪ ಜೋರಾಗೇ ಇರುತ್ತಾರೆ. ಅವರು ಯಾರಿಗೂ ಹೆದರುವುದಿಲ್ಲ. ಅವಳು ಒಂದೇ ಕೂಗಾಕಿ ಬಿಟ್ಟಿದ್ರೆ ಇವನದೊಂದು ಪೀಸ್‌ ಸಿಗುತ್ತಿರಲಿಲ್ಲ. ಆ ಅಧಿಕಾರಿ ಯೂನಿಫಾರಂನಲ್ಲಿದ್ದರು. ಆದರೆ ಅವಳು ಅವನನ್ನು ಬೆಡ್‌ಮೇಲೆ ಮಲಗು ಎಂದು ಹೇಳಿ ಕಂಬಳಿ ಹೊದಿಸುತ್ತಾಳೆ. ಕಂಬಳಿ ಮೇಲೆಲ್ಲ ಅಮೃತಾಂಜನ್‌ ತಿಕ್ಕುತ್ತಾಳೆ. ಆ ಗುಂಪಿನವರು ಬಂದಾಗ ಅಲ್ಲಿ ನೋಡು, ಸ್ಮಶಾನವನ್ನು ಎಗರಿ ಅವನು ಓಡಿಹೋದ ಎನ್ನುತ್ತಾಳೆ. ಅಲ್ಯಾರು ಮಲಗಿರುವುದು ಎಂದು ಅವರು ಕೇಳಿದಾಗ, ನಮ್ಮ ನೆಂಟ್ರು ಬಂದಿದ್ದಾರೆ, ತಲೆನೋವು ಎಂದು ಮಲಗಿದ್ದಾರೆ, ಗೊತ್ತಾಗಲ್ವ ನಿಮ್ಗೆ ಅಮೃತಾಂಜನ್ ಪರಿಮಳ ಬರ್ತಿಲ್ವಾ ಎಂದು ಭಾಗೋ, ಜಾವೋ ಎಂದು ಎಲ್ಲರಿಗೂ ಜೋರು ಮಾಡುತ್ತಾಳೆ.ಎಲ್ಲ ಹೋಗಬೇಕಾದ್ರೆ ಕಡೆಯಲ್ಲಿ ಹೋಗುವವನು ಬಗ್ಗಿ ನೋಡುತ್ತಾನೆ. ಅವನಿಗೆ ಕೆಂಪು ಶೂ ಕಾಣುತ್ತದೆ. ಪೊಲೀಸ್‌ನವರಿಗೆ ರಕ್ಷಣೆ ಮಾಡ್ತೀಯಾ ಎನ್ನುತ್ತಾನೆ. ಆ ಗುಂಪಿನವರೆಲ್ಲ ಅವಳ ಮೇಲೆ ಎಗರುತ್ತಾರೆ. ಅಷ್ಟರಲ್ಲಿ ಪೊಲೀಸರ ತಂಡ ಅಲ್ಲಿಗೆ ಹೋಗಿ ಅಧಿಕಾರಿಯನ್ನು ರಕ್ಷಣೆ ಮಾಡುತ್ತದೆ.


ಲಾಕ್‌ಅಪ್‌ ಡೆತ್‌ ಬಹಳ ಸೂಕ್ಷ್ಮವಾದ ವಿಷಯ. ಮಾನವ ಹಕ್ಕುಗಳ ಉಲ್ಲಂಘನೆ ಅದು. ಕಸ್ಟೋಡಿಯಲ್‌ ಡೆತ್‌ ಅಂತಾರೆ. ಲಾಕ್‌ಅಪ್‌ ಡೆತ್‌ ಎಂದು ಆಡು ಭಾಷೆಯಲ್ಲಿ ಹೇಳುವುದು. ಡೆಡ್‌ಬಾಡಿಗೆ ಇನ್‌ಕ್ವೆಸ್ಟ್‌ ಎಂದು ಮಾಡುತ್ತಾರೆ. ಅದನ್ನು ಎಕ್ಸಿಕ್ಯೂಟಿವ್‌ ಮ್ಯಾಜಿಸ್ಟ್ರೇಟ್‌ ಮಾಡಬೇಕು. ಕರ್ನಾಟಕದಲ್ಲಿ ಎಕ್ಸಿಕ್ಯೂಟಿವ್‌ ಮ್ಯಾಜಿಸ್ಟ್ರೇಟ್‌ ತಹಶೀಲ್ದಾರ್‌ ಮತ್ತು ಅಸಿಸ್ಟೆಂಟ್‌ ಕಮಿಷನರ್‌ ಮಾತ್ರ. ಬಾಕಿ ಎಲ್ಲವನ್ನು ಪೊಲೀಸ್‌ ಮಾಡುತ್ತಾರೆ. ಬೆಂಗಳೂರು ಪೊಲೀಸ್‌ ಕಮಿಷನರ್‌ ಕರ್ಫ್ಯೂ ಹಾಕಬಹುದು. ಕರ್ನಾಟಕ ಪೊಲೀಸ್‌ ಆ್ಯಕ್ಟ್‌ ಸೆಕ್ಷನ್‌ 35 ಹಾಕಬಹುದು. ಜಿಲ್ಲಾ ಎಸ್ಪಿ, ಐಜಿಗಳಿಗೆ ಆ ಪವರ್ಸ್‌ ಇಲ್ಲ. ಈಗೇನು ಮಾಡಿದಾರೋ ಗೊತ್ತಿಲ್ಲ. ಗನ್‌ ಲೈಸೆನ್ಸ್‌ ಬೇರೆ ಕಡೆ ಎಲ್ಲ ಡಿಸಿಗಳೇ ಕೊಡುವುದು. ಬೆಂಗಳೂರು ನಗರದಲ್ಲಿ ಪೊಲೀಸ್ ಕಮಿಷನರ್‌ ಕೊಡುತ್ತಾರೆ.


ಕರ್ಫ್ಯೂ ಎಂದಾಕ್ಷಣ ಕಂಡಲ್ಲಿ ಗುಂಡು ಆದೇಶ ಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದು ಬಿಡುತ್ತದೆ. ಬರೆಯುವವನು ಮೂರ್ಖ. ಓದುವವನು ಮೂರ್ಖ. ನಾವು ನಗುವವರು ಮೂರ್ಖರು. ಹಾಗೆ ಆದೇಶ ಕೊಡಲು ಹೇಗೆ ಸಾಧ್ಯ. ಕಂಡಲ್ಲಿ ಗುಂಡು ಆದೇಶ ಕೊಟ್ಟರೆ ಅವರ ಮೇಲೆ ಕೊಲೆ ಪ್ರಯತ್ನ ಪ್ರಕರಣ ದಾಖಲಿಸಬಹುದು. ಹಾಗೊಂದು ಆದೇಶ ಕೊಡಲು ಬರುವುದೇ ಇಲ್ಲ. ಸಿಆರ್‌ಪಿಸಿಯಲ್ಲಿ ಪ್ರಾವಿಜನ್‌ಇದೆ. ಪೊಲೀಸ್‌ ಆಫೀಸರ್‌ ಕನಿಷ್ಠ ಫೋರ್ಸ್‌ ಬಳಸಬಹುದು ಎಂಬ ಅನುಕೂಲಗಳಿವೆ. ಅದರಲ್ಲಿ ನಾವಿದನ್ನು ಬಳಸುವುದು, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದೀವಿ ಎಂದು. ಗುಂಡನ್ನು ಗಾಳಿಯಲ್ಲಿ ಹೊಡೆಯುವುದು. ಕಾಲಿಗೆ ಹೊಡೆಯಲು ಅವಕಾಶವೇ ಇಲ್ಲ. ಬಹಳ ಜಾಗರೂಕತೆಯಿಂದ ವರ್ತಿಸಬೇಕೆಂದು ಇದೆ. ಲಾಠಿ ಚಾರ್ಜ್‌, ಟಿಯರ್‌ ಗ್ಯಾಸ್‌, ಮುಗಿದ ಮೇಲೆ ಫೈರಿಂಗ್‌ ಮಾಡಲು ಅವಕಾಶವಿದೆ. ಏಕಾಏಕಿ ಫೈರಿಂಗ್‌ ಮಾಡುವಂತಿಲ್ಲ. ಕೆಲವು ಪೊಲೀಸರು ಗುಂಡು ಹೊಡೆದು ಹಾಕ್ಬಿಡ್ತೀವಿ ಎಂದೆಲ್ಲ ಹೇಳುತ್ತಾರೆ. ಆದ್ರೆ ಅವೆಲ್ಲ ಸಾಧ್ಯವೇ ಇಲ್ಲ.

ಮೊನ್ನೆ ಡಿ.ಜೆ ಹಳ್ಳಿಯಲ್ಲಿ ಆದ ಹಾಗೆಯೇ 1984ರಲ್ಲಿ ಮಾರ್ಚ್‌10ನೇ ತಾರೀಕಿನಲ್ಲಿ ಬೆಂಗಳೂರಿನಲ್ಲಿ ಕೋಮು ಗಲಭೆ ಶುರುವಾಗುತ್ತದೆ. ಶಿವಾಜಿನಗರ ಹೊತ್ತಿ ಉರಿಯುತ್ತದೆ. ಈ ವೇಳೆ ಒಬ್ಬ ಕಸ್ಟೋಡಿಯಲ್‌ ಡೆತ್‌ ಆಗುತ್ತಾನೆ. ಮುನ್ನಾ ಎಂದು ಅವನ ಹೆಸರು. ಶಿವಾಜಿನಗರಿಂದ ಕೆ.ಜಿ ಹಳ್ಳಿ ಟ್ಯಾನ್‌ ರೋಡ್‌ನಲ್ಲಿ ಗಲಭೆ ಶುರುವಾಗುತ್ತದೆ. ಆ ಗಲಭೆಗೂ ಇತ್ತೀಚೆಗೆ ನಡೆದ ಗಲಭೆಗೂ ಸಾಮ್ಯತೆ ಹೇಗಿದೆ ಅಂದ್ರೆ, ರಾಮಕೃಷ್ಣ ಹೆಗಡೆ ಸರ್ಕಾರ ಇರುತ್ತದೆ. ಈಗಿನ ಯಡಿಯೂರಪ್ಪ ಸರ್ಕಾರದಂತೆ ಥಿನ್‌ ಮೆಜಾರಿಟಿ ಸರ್ಕಾರ ಅದಾಗಿರುತ್ತದೆ. ಆ ಸರ್ಕಾರದಲ್ಲಿ ಬಿಜೆಪಿಯೂ ಪಾಲುದಾರ ಪಕ್ಷವಾಗಿರುತ್ತದೆ.. ಆ ಎಂಎಲ್‌ಎ ಹೆಸರು ಶ್ರೀನಿವಾಸನ್ ಎಂದು. ಗುಂಪು ಅವರ ಮನೆಗೆ ನುಗ್ಗುತ್ತಿರುತ್ತಾರೆ. ಅಲ್ಲಿಂದ ಕಾನ್‌ಸ್ಟೆಬಲ್‌ ನನಗೆ ಫೋನ್‌ ಮಾಡ್ತಾರೆ. ಮನೆಯಲ್ಲಿದ್ದ ನಾನು ತಕ್ಷಣ ಪಿಸ್ತೂಲ್‌ ತೆಗೆದುಕೊಂಡು, ಮೂವರು ಕಾನ್‌ಸ್ಟೆಬಲ್‌ಗಳನ್ನು ಕರೆದುಕೊಂಡು ಹೋದೆ. ಮೊದಲ ಮಹಡಿಯಲ್ಲಿದ್ದ ಕಾರಣಕ್ಕೆ ಆ ಶಾಸಕನ ಕುಟುಂಬ ಉಳಿಯಿತು ಅನಿಸುತ್ತದೆ. ನೂರು ಜನ ಮನೆಯೊಳಗೆ ಇದ್ರು. ಕೆಲವರ ಕೈಯಲ್ಲಿ ತಲವಾರು ಗಳಿದ್ದವು. ನನ್ನ ಜೊತೆಗಿದ್ದ ಕಾನ್‌ಸ್ಟೆಬಲ್‌ಗಳ ಬಳಿಯಿದ್ದುದು ಕೇವಲ ಲಾಠಿ. ನನ್ನ ಒಬ್ಬನ ಹತ್ತಿರ ಮಾತ್ರವೇ ಪಿಸ್ತೂಲ್‌ ಇತ್ತು. ಇನ್ನೊಬ್ಬ ಕಾನ್‌ಸ್ಟೆಬಲ್‌ ಬಳಿ ರೈಫಲ್‌ ಇತ್ತು. ಅಷ್ಟು ಜನರನ್ನು ಹೊರಗೆ ಹಾಕಿದ್ವಿ. 14 ರೋಲ್‌ ಇದೆ. 14 ಜನರನ್ನು ತೆಗೆದೇ ಈಚೆ ಹೋಗುವುದು ಎಂದು ಹೇಳಿದೆ. ಬೇಡ ಬೇಡ ಎಂದು ಮುಖಂಡರೆಲ್ಲ ಅವರನ್ನು ಕರೆದುಕೊಂಡು ಬಂದ್ರು. ಎಂಎಲ್‌ಎ ಮನೆಯೊಳಗೆ ಒಂದೆರಡು ಗ್ಲಾಸ್‌ ಒಡೆದು ಹಾಕಿರಬಹುದು ಅಷ್ಟೆ. ಈ ಗಲಭೆಗಿಂತ ಅದು ಭಯಾನಕವಾಗಿತ್ತು.

ಆ ಕೋಪದಲ್ಲಿ ಅವರು ಹೊರಗಡೆ ಇದ್ದ ಮೊಬೈಲ್‌ ವ್ಯಾನಿಗೆ ಬೆಂಕಿ ಹಚ್ಚಿದ್ರು. ಅದರಲ್ಲಿ 10 ಪೊಲೀಸರಿದ್ರು. ಒಳಗಡೆ ಪೊಲೀಸರಿಗೆ ಹೊರಗಡೆ ಇದ್ದ ಗುಂಪು ಪೆಟ್ರೋಲ್‌, ಡೀಸೆಲ್‌ ಮಿಕ್ಸ್‌ ಮಾಡಿ ಬಾಟಲಿಯಲ್ಲಿ ಬಟ್ಟೆ ಸುತ್ತಿ ಕಟ್ಟಿ ತಯಾರಾಗಿ ಹೊಡೆಯುತ್ತಿದ್ದಾರೆ. ಈಚೆ ಬಂದ್ರು ಸಾಯುತ್ತಾರೆ, ಸುಮ್ನೆ ಇದ್ರೂ ಸಾಯುತ್ತಾರೆ ಅಂಥ ಪರಿಸ್ಥಿತಿ. ನಮ್ಮ ಕಥೆ ಮುಗೀತು. ಪೊಲೀಸ್‌ನವರು ಭಸ್ಮ ಆದ್ರು ಅಂದುಕೊಂಡಿದ್ವಿ. ನಮ್ಮ ಎಸಿಪಿ ರಂಗೇಗೌಡ ಅಂಥ ಇದ್ರು. ಪಾಪ ತೀರಿಹೋದ್ರು. ಸಾಧು ಸ್ವಭಾವದ ಪೊಲೀಸ್‌ ಅಧಿಕಾರಿ. ಅಷ್ಟೇ ಫರ್ಮ್‌. ಅವರೇನು ಮಾಡಿದ್ರು ಅಂದ್ರೆ ಯಾವ ಪರ್ಮಿಷನ್‌ ಇಲ್ಲ ಏನಿಲ್ಲ. ರೈಫಲ್‌ನಲ್ಲಿ ಗುಂಡು ಹಾರಿಸಿಯೇ ಬಿಟ್ರು. ಒಂದು ಹೆಣ ಬಿತ್ತು. ಎಲ್ಲ ಚದುರಿ ಹೋದ್ರು. ಹತ್ತು ಪೊಲೀಸರನ್ನು ಕರೆದುಕೊಂಡು ಬಂದ್ರು. ಅದ್ರಲ್ಲಿ ಒಬ್ಬ ಪೊಲೀಸ್‌ ಓಡಿ ಹೋಗಿದ್ದು, ಆ ಮುಸ್ಲಿಂ ಮಹಿಳೆಯ ಮನೆಗೆ.


ಕಸ್ಟಡಿಯಲ್‌ ಡೆತ್‌ ಆದ್ರೆ ಮಾನವ ಹಕ್ಕುಗಳ ಆಯೋಗಕ್ಕೆ ಉತ್ತರ ಕೊಡಬೇಕು. ಎಕ್ಸಿಕ್ಯೂಟಿವ್‌ ಮ್ಯಾಜಿಸ್ಟ್ರೇಟ್‌ಗೆ ಉತ್ತರ ಕೊಡಬೇಕು. ನಮ್ಮದು ಜ್ಯುಡಿಷಿಯಲ್‌ ಎನ್‌ಕ್ವೈರಿ. ಆ ಗಲಾಟೆಯಲ್ಲೂ ತಮಾಷೆ ಗಿಮಾಷೆ ಆದ್ರೆ ಮಜಾ ತೆಗೆದುಕೊಳ್ಳುತ್ತಿದ್ವಿ. ಆ ಒತ್ತಡದಲ್ಲಿ ತಮಾಷೆ ಮಾಡಿಲ್ಲ ಅಂದ್ರೆ ನಾವು ಸತ್ತುಹೋಗಿ ಬಿಡ್ತೀವಿ. ಆ ರೀತಿಯ ಮಜಾ ಜಸ್ಟೀಸ್‌ ಪಿ.ಎ. ಕುಲಕರ್ಣಿ ತೆಗೆದುಕೊಳ್ಳುತ್ತಿದ್ದರು. ಅವರು ಹೇಗೆ ಅಂದ್ರೆ, ಕೋರ್ಟ್‌ನಲ್ಲಿ ಯಾರು ಅಲ್ಲಾಡುವ ಹಾಗಿರಲಿಲ್ಲ. ವಕೀಲರು ಶಿಸ್ತಿನಿಂದ ಕೂರಬೇಕಿತ್ತು ಅವರಿಗೆ. ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಟಿಪ್‌ಟಾಪ್‌ ಆಗಿರಬೇಕಿತ್ತು ಅವರಿಗೆ. ಸೆಷನ್‌ ಕೋರ್ಟ್‌ನಲ್ಲೂ ಹೈಕೋರ್ಟ್‌ ತರಹ ಸೂಟ್‌ ಹಾಕಿಕೊಂಡು ಕೂರುತ್ತಿದ್ರು. ಉತ್ತರ ಕರ್ನಾಟಕವರು. ಎಂಥ ತಮಾಷೆ ಮಾಡುತ್ತಿದ್ರು ಅಂದ್ರೆ, ಏನೋ ಬಾ.. ಬಾ.. ನೋಡೋ ನೀನು ಅಂತಾ ಪ್ರಾಸಿಕ್ಯೂಟರ್‌ಗಳಿಗೆಲ್ಲ ಅನ್ನೋರು. ಸುಮ್ನೆ ಇಲ್ಲಿ ಬಂದು ಬೆಬೆಬೆ... ಅನ್ನುವ ಹಾಗಿಲ್ಲ ಎನ್ನುತ್ತಿದ್ದರು. ನಾವೆಲ್ಲ ಪಾರ್ಟಿಗಳು ಅದರಲ್ಲಿ.


ಮುಸ್ಲಿಮರ ಪರ ವಾದಿಸುತ್ತಿದ್ದ ವಕೀಲ, ಮಳೆ, ಮಳೆ ತರಹ ಬುಲೆಟ್‌ ಹೊಡೆದಿದ್ರು ಎಂದ್ರು. ಆಗ ಅವರು ಹೌದೇನೋ ಚಕ್ರಭಾವಿ ಎಂದು ನಮ್ಮ ವಕೀಲನಿಗೆ ಕೇಳ್ತಿದ್ರು. ‘ಹೌದೇನೋ, ಮಳೆ ಸುರ್ದಂಗ್ ಗುಂಡು ಹೊಡದ್ರೇನೋ ಎಂದು ಕೇಳುತ್ತಿದ್ದರು. ಆಗ ಅವರು ‘ಏ ಇಲ್ಲ ಸ್ವಾಮಿ, ನಮ್ಮ ಬಳಿ ಲೆಕ್ಕ ಇದೆ ಸರ್‌ ಎಂದ್ರು. ಅವರು ಮತ್ತೆ ಏನಾಯಿತು. ಷರೀಫ ಏನಾಯಿತು ಹೇಳು ಎಂದ್ರು. ಅವರು ಗುಂಡು ಸರ್‌ ಅಂದ್ರು. ಹು.. ಗುಂಡೇ ಹೆಂಗಾತು ಹೇಳು ಅಂದ್ರು. ರೈಫಲ್‌ನಲ್ಲಿ ಅವರು ಮರ್ಸಿಲೆಸ್‌ ಆಗಿ ಗುಂಡು ಹಾರಿಸಿದರು ಎಂದ. ಅಷ್ಟು ಸೀರಿಯಸ್‌ ಆಗಿ ಎನ್ಕೈರಿ ನಡೆಯುವಾಗ ಅವರು ಹಾ.. ಮರ್ಸಿಲೆಸ್‌ ಹಾಗಂದ್ರೆ ಏನು ಅಂದ್ರು. ಅವರಿಗೆ ಗೊತ್ತಿರುತ್ತೆ. ಸುಮ್ನೆ ಕೇಳುವುದು ಅವರು. ಮರ್ಸಿಲೆಸ್ಲಿ ಎಂದ್ರೆ ರಾಕ್ಷಸರ ತರಹ ಗುಂಡು ಹೊಡೆದ್ರು ಅನ್ನಪ್ಪ ಅಂದ್ರು. ಹೌದು ಸ್ವಾಮಿ ಎಂದ. ಹೌದು ಷರೀಫ ಗುಂಡು ಹೊಡೆದಾಗ ಏನಾಯ್ತು ಎಂದ್ರು. ಅವನು ಬಿದ್ದು ಹೋದ. ಅವರ ಪರವಾಗಿ ನಾವು ಅಫಿಡವೀಟ್‌ ಹಾಕಿರೋದು ಎಂದ. ಬಿದ್ದೋದ್ನೇನಾ , ರಕ್ತ ಎಲ್ಲ ಬಂತಾ ಎಂದ್ರು. ರಕ್ತ ಅಲ್ಲ ಸರ್‌ ಸತ್ತೇ ಹೋದ ಅಂದ. ರಕ್ತ ಬಂತಾ ಅದನ್ನ ಹೇಳು ಎಂದು ಮತ್ತೆ ಕೇಳಿದ್ರು. ಹೌದು ಸರ್‌ ರಕ್ತ ಬಂತು. ತೆಗೆದುಕೊಂಡು ಹೋದ್ವಿ, ಸತ್ತು ಹೋದ ಅಂದ. ಆಮೇಲೇನಾಯಿತು ಗಲಾಟೆ ನಿಲ್ತಾ ಅಂದ್ರು. ನಿಲ್ಲಲಿಲ್ಲ ಎಂದ. ಮತ್ತಿನ್ನೇನಪ್ಪ ಷರೀಫ, ಪೊಲೀಸ್‌ನವರು ಬಂದೂಕು ಇಟ್ಟುಕೊಂಡಿರುತ್ತಾರೆ. ಬಂದೂಕಿನಾಗ ಗುಂಡಿಟ್ಟು ಹೊಡಿಯುತ್ತಾರೆ. ಅವನು ಕುಸಿದು ಬಿದ್ದ. ರಕ್ತ ಬಂತು ಎಂದು ನೀನೆ ಹೇಳುತ್ತೀಯಾ. ಬಾಕಿಯವರು ಏನು ಮಾಡಬೇಕು. ಓಡಿ ಹೋಗಬೇಕು ತಾನೇ. ನೀವ್ಯಾಕೆ ಓಡಿ ಹೋಗಿಲ್ಲ. ಪೊಲೀಸ್‌ನವರು ಬಂದೂಕಿನಾಗ ಗುಂಡಿಡದೇ ಚಾಕಲೇಟ್‌ ಇಟ್ಟಿರ್ತಾರೇನ ಎಂದು ಸುಮ್ನೆ ಕೂತುಕೊಂಡ್ರು. ಇಡೀ ಕೋರ್ಟ್‌ನಗುತ್ತಿತ್ತು. ಅವನಿಗೆ ಎಂಥ ಅವಮಾನ. ಆ ಗಲಭೆಯಲ್ಲಿ ಬೆಂಗಳೂರಿನಲ್ಲಿ ಆಗ ಐದು ಸಾವಾಗಿತ್ತು. ಕಲಾಸಿಪಾಳ್ಯದಲ್ಲಿ 2, ಟ್ಯಾನ್‌ರೋಡ್‌ನಲ್ಲಿ ಮೂರಾಗಿತ್ತು. ಜಸ್ಟೀಸ್‌ ಕುಲಕರ್ಣಿ ಅವರು ‘ಆ್ಯಕ್ಷನ್‌ ಆಫ್‌ ಪೊಲೀಸ್‌ ಜಸ್ಟೀಸ್‌’ ಎಂದು ತೀರ್ಪು ಕೊಟ್ರು. ಇಲ್ಲದಿದ್ರೆ ಬಹಳ ತೊಂದರೆಯಾಗುತ್ತಿತ್ತು ಎಂದ್ರು.


ಮುಂದುವರೆಯುವುದು…


ಸಂದರ್ಶಕರು - ಕೆ.ಎಸ್. ಪರಮೇಶ್ವರ35 views