
ಲಂಡನ್ನಲ್ಲಿ ಡಾ. ರಾಜ್ಗೆ ಹಣ ಸಹಾಯ ಮಾಡಿದ ಆತ ಯಾರು?
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 21
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)
ಲಾಸ್ ಏಂಜಲೀಸ್ನಲ್ಲಿ ಯೂನಿವರ್ಸಲ್ ಸ್ಟುಡಿಯೊಗೆ ಹೋದೆವು. ಹಾಲಿವುಡ್ ಶೂಟಿಂಗ್ಗಳೆಲ್ಲ ನಡೆಯುವುದು ಅಲ್ಲಿಯೇ. ಪ್ರವೇಶದ್ವಾರದಲ್ಲಿಯೇ ಹಾಲಿವುಡ್ ಎಂಬ ಬೋರ್ಡ್ ಇದೆ. ಚಿತ್ರೀಕರಣದ ಸೆಟ್ಗಳನ್ನೆಲ್ಲ ನೋಡಿದೆವು. ಲಾಸ್ ಏಂಜಲೀಸ್ ಸ್ಟುಡಿಯೊವನ್ನು ನೋಡಿಯೇ ಹೈದ್ರಾಬಾದ್ನಲ್ಲಿ ರಾಮೋಜಿ ರಾವ್ ಸ್ಟುಡಿಯೊ ನಿರ್ಮಿಸಿದ್ದು.

ಯೂನಿವರ್ಸಲ್ ಸ್ಟಡಿಯೋ ಒಳಗೆ ಏನೆಲ್ಲಾ ಇದೆ ಗೊತ್ತಾ?
ಯೂನಿವರ್ಸಲ್ ಸ್ಟೂಡಿಯೊದಲ್ಲಿ ಎಲ್ಲವೂ ಇದೆ. ಬಿಲ್ಡಿಂಗ್ ಒಳಗಡೆ ಪ್ರತಿ ಜನಪ್ರಿಯ ಕಲಾವಿದನಿಗೂ ಒಂದೊಂದು ಮನೆ ಇತ್ತು. ಆ ಕಾಲದಲ್ಲಿ ನಮ್ಮಂತೆ ಅಲ್ಲಿಯೂ ಬೆರಳೆಣಿಕೆಯ ಕಲಾವಿದರು ಇದ್ದರು. ಸ್ಟುಡಿಯೊ ಒಳಗಡೆ ಹಾರರ್ ಸಿನಿಮಾ, ಜೇಮ್ಸ್ ಬಾಂಡ್ ಚಿತ್ರೀಕರಣ ಸೆಟ್ಗಳನ್ನು ನೋಡಿದೆವು. ಆ ಸೆಟ್ನಲ್ಲಿ ಜೇಮ್ಸ್ ಬಾಂಡ್ ಬಂದು ಶೂಟ್ ಮಾಡುತ್ತಾನೆ. ನಿಜವಾಗಿಯೂ ಶೂಟ್ ಮಾಡುತ್ತಿದ್ದಾನೆ ಎಂಬಂತೆ ಭಾಸವಾಗುತ್ತದೆ. ಹಾರರ್ ಕಾರ್ನರ್ ಎಂದು ಮಾಡಿದ್ದಾರೆ. ಅಲ್ಲಿರುವ ಭೂತ, ಪ್ರೇತ, ಅಸ್ಥಿಪಂಜರಗಳೆಲ್ಲ ಭಯ ಹುಟ್ಟಿಸುತ್ತದೆ. 10 ಕಮಾಂಡ್ಮೆಂಟ್ ಸೆಟ್ ಒಳಗೆ ಹೋಗುತ್ತಿದ್ದಂತೆ ಸಮುದ್ರದೊಳಗೆ ಹೋಗಿ ಬಿಡುತ್ತೇವೆಯೋ ಎನ್ನುವಷ್ಟರಲ್ಲಿ ನೀರು ಸರಿದು ಮಧ್ಯೆ ಸಾಗಲು ದಾರಿ ಕಾಣಿಸುತ್ತದೆ. ಮಳೆ, ಗುಡುಗು ಬರುತ್ತಿರುತ್ತದೆ. ಮಳೆ ನಿಜವಾಗಿಯೂ ಬಂದಂತೆ ಅನಿಸಿದರೂ, ನಾವು ನೆನೆಯುವುದಿಲ್ಲ. ಸೌಂಡ್, ವಿಶುವಲ್ ಎಫೆಕ್ಟ್ ಅಷ್ಟು ಅದ್ಭುತವಾಗಿರುತ್ತದೆ.
ಸ್ಯಾನ್ಫ್ರಾನ್ಸಿಕೊನಿಂದ ಹವಾಯಿ ಐರ್ಲೆಂಡ್ಸ್ ಹೋಗಿ ಅಲ್ಲಿ ಒಂದು ದಿವಸ ಇದ್ದೆವು. ನಂತರ ಟೋಕಿಯೊಗೆ ಹೋಗಿ ಅಲ್ಲಿ ಮೂರು ದಿವಸ ಇದ್ದೆವು. ಜಪಾನ್ ಪ್ಯಾಲೇಸ್ ಮುಂದಿನ ಉದ್ಯಾನವನ್ನು ಕಣ್ತುಂಬಿಕೊಂಡೆವು.
ಮುತ್ತುರಾಜನ ಹೆತ್ತವ್ವ ತಲೆಸುತ್ತಿ ಬಿದ್ದಾಗ
ನ್ಯೂಯಾರ್ಕ್ನಲ್ಲಿ ಗ್ರ್ಯಾಂಡ್ ಒಪೆರಾ ಎಂಬ ಥಿಯೇಟರ್ ಇದೆ. ಅಲ್ಲಿ ನಾಟಕಗಳ ಪ್ರದರ್ಶನ ನಡೆಯುತ್ತದೆ. ನಮಗೆಲ್ಲ ನಾಟಕ ನೋಡಬೇಕೆಂಬ ಆಸೆ ಇತ್ತು. ರಾಜ್ಕುಮಾರ್ ಅವರಿಗೂ ಇಂಗ್ಲಿಷ್ನವರು ಹೇಗೆ ನಾಟಕ ಮಾಡುತ್ತಾರೆ ಎಂಬುದನ್ನು ನೋಡುವ ಆಸೆ ಇತ್ತು. ಟಿಕೆಟ್ಗೆ ಒಬ್ಬರಿಗೆ 11 ಡಾಲರ್. ಹನ್ನೊಂದು ಟಿಕೆಟ್ ತೆಗೆದುಕೊಂಡೆ. ನಿರ್ದೇಶಕ ರಮಾನಾಥನ್ ಅವರು ಬ್ಯುಸಿ ಎಂದು ನಾವು ಇಲ್ಲಿಂದ ಹೊರಡುವಾಗ ನಮ್ಮ ಜೊತೆಗೆ ಬಂದಿರಲಿಲ್ಲ. ನಂತರ ಅವರು ಬಂದು ಸೇರಿಕೊಂಡರು. ಟಿಕೆಟ್ ತೆಗೆದುಕೊಂಡು ಒಳಗೆ ಹೋಗಲು ರೆಡಿಯಾದೆವು. ರಾಜ್ಕುಮಾರ್ ಅವರ ತಾಯಿ ಪ್ರವೇಶದ್ವಾರದಲ್ಲೇ ಕೆಳಗೆ ಬಿದ್ದು ಬಿಟ್ರು. ಅವರಿಗೆ ತಲೆ ಸುತ್ತು ಬಂದಿತ್ತು. ಆಗ ಪಾರ್ವತಮ್ಮನವರು ಇವರನ್ನು ಕರೆದುಕೊಂಡು ನಾವು ಹೋಟೆಲ್ಗೆ ಹೋಗ್ತೇವೆ. ನೀವು ನಾಟಕ ನೋಡಿ ಬನ್ನಿ ಅಂದ್ರು. ಪಾರ್ವತಮ್ಮ, ಗೋವಿಂದ ರಾಜ್ ಅವರು ಹೋಟೆಲ್ಗೆ ಹೋಗಲು ತಯಾರಾದ್ರು. ಆಗ ರಾಜ್ಕುಮಾರ್ ಅವರು, ಅಮ್ಮನ ಆರೋಗ್ಯದ ಬಗ್ಗೆ ಯೋಚನೆ ಆಗುತ್ತಿದೆ. ನಾನು ಹೋಗ್ತೇನೆ ಎಂದ್ರು. ಅವರು ಬಾರದ ಮೇಲೆ ನಾವೇನು ಹೋಗುವುದೆಂದು ಎಲ್ಲರೂ ನಾವು ಹೋಟೆಲ್ ಹೋಗೋಣ ಎಂದು ಹೇಳತೊಡಗಿದ್ರು. ಟಿಕೆಟ್ಗೆ 110 ಡಾಲರ್ ಆಗಿತ್ತು.
ಪ್ಯಾರಿಸ್ ನಲ್ಲಿ ನಿರ್ದೇಶಕ ದೊರೆಯವರು ಕಳೆದುಹೋದಾಗ
ರೋಮ್ನಿಂದ ಪ್ಯಾರಿಸ್ಗೆ ಬಂದೆವು. ಎಲ್ಲ ಸುಸೂತ್ರವಾಗಿಯೇ ನಡೆಯುತ್ತಿತ್ತು. ಎಲ್ಲಾ ಪ್ರದೇಶಗಳನ್ನು ಖುಷಿಯಾಗಿ ನೋಡಿಕೊಂಡು ಬರುತ್ತಿದ್ದೆವು. ಲಿಯನಾರ್ಡೊ ಡ ವಿಂಚಿ ಆರ್ಟ್ ಗ್ಯಾಲರಿನಲ್ಲಿ ಪೇಟಿಂಗ್ಸ್ಗಳೆಲ್ಲ ನೋಡಿ ಹೊರಗೆ ಬಂದೆವು. ಟೂರಿನ ಉಸ್ತುವಾರಿಯನ್ನು ನಾನೇ ವಹಿಸಿಕೊಂಡಿದ್ದೆ. ಟಿಕೆಟ್, ದುಡ್ಡು ನನ್ನ ಕೈಯಲ್ಲೇ ಇತ್ತು. ಅದನ್ನೆಲ್ಲ ಬಾಕ್ಸ್ನಲ್ಲಿ ಹಾಕಿಕೊಂಡು ಇಟ್ಟುಕೊಂಡಿದ್ದೆ. ನಮ್ಮ ಮುಂದಿನ ಕಾರು ನೋಡಿದೆ. ಅದರಲ್ಲಿ ಮೂರು ತಲೆ ಕಾಣಬೇಕು ಎರಡೇ ಕಾಣಿಸುತ್ತಿದೆ ಎಂದು ಗಮನಿಸಿದೆ. ನೋಡಿದ್ರೆ ದೊರೆಯವರೇ ಇರಲಿಲ್ಲ. ಕಾರನ್ನು ನಿಲ್ಲಿಸಿ ನೋಡಿದೆ. ಮೂರು ಕಾರನ್ನು ನೋಡಿದೆ ಎಲ್ಲೂ ಇರಲಿಲ್ಲ. ನನಗೆ ಭಯವಾಯ್ತು. ದೊರೆ ಇಲ್ಲ ಅಂದ್ರೆ ನಾನೇನು ಮಾಡಲಿ ಎಂಬ ಯೋಚನೆ ಬಂತು. ರಾಜ್ಕುಮಾರ್ ಮತ್ತು ಮಿಕ್ಕವರನ್ನೆಲ್ಲ ರೂಮ್ಗೆ ಕಳುಹಿಸಿದೆ. ದ್ವಾರಕನಾಥ್ ಅವರನ್ನು ಕರೆದುಕೊಂಡು ವಾಪಸ್ ಆರ್ಟ್ ಗ್ಯಾಲರಿಗೆ ಹೋದೆ. ದೊರೆಯವರಿಗೆ ಎಷ್ಟು ಆತ್ಮವಿಶ್ವಾಸ ಇತ್ತು ಎಂದ್ರೆ, ನಾವು ಬಿಟ್ಟು ಬಂದ ಜಾಗದಲ್ಲಿಯೇ ಅವರು ನಿಂತಿದ್ರು. ಅಲ್ಲಿ, ಇಲ್ಲಿ ಹುಡುಕಲು ಹೋಗಿರಲಿಲ್ಲ. ಭಗವನ್ ವಾಪಸ್ ಈ ಜಾಗಕ್ಕೆ ಬಂದೇ ಬರುತ್ತಾನೆ ಎಂಬ ವಿಶ್ವಾಸ ಇತ್ತು ಅವರಿಗೆ. ಎಂದಿನಂತೆ ಅವರು ಬಿಳಿ ಶರ್ಟ್, ಬಿಳಿ ಪ್ಯಾಂಟ್ ಹಾಕಿಕೊಂಡಿದ್ರು. ಬೇರೆ ಕಡೆ ಹೋದ್ರೆ, ಹುಡುಕಲು ಆಗುವುದಿಲ್ಲ ಎಂದು ನಿಂತ ಜಾಗದಿಂದ ಅವರು ಕದಲಿರಲಿಲ್ಲ. ಹೋಗಿ ಕಾರು ನಿಲ್ಲಿಸಿದ ತಕ್ಷಣ, ನನಗೆ ಗೊತ್ತಿತ್ತು ಭಗವನ್ ನೀವು ಬಂದೇ ಬರ್ತೀರಾ ಅಂಥ ಅಂದ್ರು. ಯಾಕೆ ಕಾರಿನಲ್ಲಿ ಕುಳಿತುಕೊಂಡಿಲ್ಲ ಎಂದೆ. ಕಾರಿನಲ್ಲಿ ಕೂರಲು ಹೋಗುತ್ತಿದ್ದೆ. ಅಷ್ಟರಲ್ಲಿ ಡ್ರೈವರ್ ಸ್ಟಾರ್ಟ್ ಮಾಡಿಕೊಂಡು ಹೋಗಿಬಿಟ್ಟ ಎಂದ್ರು. ದೊರೆಯವರು ಸಿಕ್ಕ ಕಾರಣಕ್ಕೆ ಮನಸ್ಸಿನಲ್ಲಿಯೇ ದೇವರಿಗೆ ಸಾವಿರ ನಮಸ್ಕಾರ ಹಾಕಿದೆ. ಅಲ್ಲಿಂದ ಹೋಟೆಲ್ ಬಂದೆವು. ತಕ್ಷಣವೇ ಹೋಟೆಲ್ನ ವಿಸಿಟಿಂಗ್ ಕಾರ್ಡ್ ತೆಗೆದುಕೊಂಡು ಎಲ್ಲರ ಜೇಬಿನಲ್ಲೂ ಇಟ್ಟೆ. ಆಕಸ್ಮಾತ್ ಯಾರಾದ್ರು ತಪ್ಪಿಸಿಕೊಂಡರೆ, ಟ್ಯಾಕ್ಸಿ ಡ್ರೈವರ್ಗೆ ಈ ವಿಳಾಸ ತೋರಿಸಿ ಹೋಟೆಲ್ಗೆ ಬರುವಂತೆ ಎಲ್ಲರಿಗೂ ಸಲಹೆ ನೀಡಿದ್ದೆ.
ವಿದೇಶದಲ್ಲಿ ಗಂಧರ್ವ ಗಾನ
ಪ್ಯಾರಿಸ್ನಿಂದ ಲಂಡನ್ನಿಗೆ ಬಂದೆವು. ಅಲ್ಲಿ ಸ್ವಲ್ಪ ದುಡ್ಡಿನ ಸಮಸ್ಯೆಯಾಯಿತು. ವೀರಪ್ಪನ್ ಎಂಬ ದೊಡ್ಡ ಡಾಕ್ಟರ್ ಇದ್ರು. ಅವರ ಬಳಿ ಬೇಕಾದಷ್ಟು ಹಣವಿತ್ತು. ಅವರಿಗೆ ಪಾರ್ವತಮ್ಮನವರು ಕರೆ ಮಾಡಿ, ಹೀಗೆ ದುಡ್ಡಿನ ಸಮಸ್ಯೆಯಾಗಿದೆ ಎಂದು ಹೇಳಿದ್ರು. ಅದಕ್ಕವರು ಲಂಡನ್ನಲ್ಲಿ ನನಗೆ ಬೇಕಾದ ಡಾಕ್ಟರಿದ್ದಾರೆ. ಅವರಿರುವ ಸ್ಥಳಕ್ಕೆ ಹೋಗಿ ಎಂದು ಊರಿನ ಹೆಸರೊಂದನ್ನು ಹೇಳಿದ್ರು. ಆ ಹೆಸರನ್ನು ಮರೆತಿದ್ದೇನೆ. ಅಲ್ಲಿಗೆ ಹೋಗಿ, ಅವರು ಬೆಂಗಳೂರಿನವರೇ. ಭಗವಾನ್ ಅವರಿಗೆ ಗೊತ್ತಿದೆ ಅನಿಸುತ್ತದೆ. ಅವರು ಭಗವಾನ್ ಎಂದು ಪ್ಲಕ್ ಕಾರ್ಡ್ ಹಿಡಿದುಕೊಂಡಿರುತ್ತಾರೆ. 550 ಪೌಂಡ್ ದುಡ್ಡು ಕೊಡುತ್ತಾರೆ. ಅಲ್ಲಿಗೆ ಹೋಗಿ ತೆಗೆದುಕೊಳ್ಳಿ ಅಂದ್ರು. ಇವರನ್ನೆಲ್ಲ ಟೂರ್ ಮಾಡಲು ಹೇಳಿ, ನಾನು ಲಂಡನ್ ನೋಡದೇ ಅವರು ಹೇಳಿದ ಸ್ಥಳಕ್ಕೆ ಹೋದೆ. 550 ಪೌಂಡ್ ಕಲೆಕ್ಟ್ ಮಾಡಿ ಸಂಜೆ ವಾಪಸ್ ಬಂದೆ. ಲಂಡನ್ನಿಂದ ಮೋನ್ಟ್ರಿಯಲ್ ಬಂದೆವು. ಅಲ್ಲಿ ಮ್ಯೂಸಿಕಲ್ ನೈಟ್ ನಡೆಸಿಕೊಟ್ಟೆವು.
ಜಪಾನ್ ಪ್ಯಾಲೇಸ್ ಮುಂದಿನ ಗಾರ್ಡನ್ನಲ್ಲಿ ಒಂದು ಕಡೆ ಏಳು ಗಿಡಗಳಿವೆ. ಅದಕ್ಕೆ ಹೊಡೆದರೆ ಶಬ್ದ ಬರುತ್ತದೆ. ಒಂದನೇ ಗಿಡದಲ್ಲಿ ಸ.. ಎರಡನೇ ಗಿಡದಲ್ಲಿ ರಿ..ಮೂರನೇ ಗಿಡದಲ್ಲಿ ಗ... ಹೀಗೆ ಏಳು ಗಿಡಗಳಲ್ಲಿ ಸಪ್ತ ಸ್ವರಗಳು ಹೊಮ್ಮುತ್ತವೆ. ಅದಾದ ಮೇಲೆ ಟೀ ಗಾರ್ಡನ್ಗೆ ಹೋದೆವು. ಅಲ್ಲಿ ಸಮುದ್ರದ ಒಳಗೆ ಇಳಿದು ಮುತ್ತನ್ನು ಹೇಗೆ ತೆಗೆಯುತ್ತಾರೆ ಎಂಬುದನ್ನು ತೋರಿಸುತ್ತಾರೆ. ಟೂರಿಸ್ಟ್ಗಳಿಗೆ ಅದ್ಭುತವಾದ ಗ್ರೀನ್ ಟೀ ಕೊಡುತ್ತಾರೆ. ಸಿಕ್ಕ ಮುತ್ತನ್ನು ತಂಡದಲ್ಲಿ ಯಾರಿಗಾದರೂ ಒಬ್ಬರಿಗೆ ಕೊಡುತ್ತಾರೆ. ಮುತ್ತು ತೆಗೆದವನು ರಾಜ್ಕುಮಾರ್ ತಾಯಿಯನ್ನು ಆಯ್ಕೆ ಮಾಡಿ, ಅವರಿಗೆ ಕೊಟ್ಟ. ನಾನು ರಾಜ್ಕುಮಾರ್ ಅವರ ಬಳಿ, ‘ಮುತ್ತುರಾಜ ಮುತ್ತು ಬಂತು’ ಎಂದೆ.
ಮುಂದುವರಿಯುವುದು...