
ಲೀಲಾವತಿ ಗುಡಿಸಲಿನಂತ ಮನೆಯಲ್ಲಿ ವಾಸಮಾಡುತ್ತಿದ್ದರಂತೆ

ಆಕೆಗೆ ಮಣ್ಣಿನ ಬಗ್ಗೆ ತುಂಬಾ ಪ್ರೀತಿ. ಮಣ್ಣಿನ ಮಗಳು ಎಂದರೆ ಅದು ಲೀಲಾವತಿನೇ. ತಾನು ಸಂಪಾದನೆ ಮಾಡಿದ ದುಡ್ಡಿನಲ್ಲಿ ಊಟ, ತಿಂಡಿಯಲ್ಲಿ ಮಿಕ್ಕಿಸಿ ಜಮೀನು ತೆಗೆದುಕೊಳ್ಳುತ್ತಿದ್ರು. ಹೀರೊಯಿನ್ ಆಗಿದ್ದರಿಂದ ಕೈತುಂಬ ದುಡ್ಡು ಸಿಗುತ್ತಿತ್ತು. ಅದನ್ನು ಸುಖಾಸುಮ್ಮನೆ ವ್ಯಯ ಮಾಡುತ್ತಿರಲಿಲ್ಲ. ಹೀರೊಯಿನ್ ಆದರೂ, ಮದ್ರಾಸ್ನಲ್ಲಿ ಗುಡಿಸಲಿನಂತಿರುವ ಮನೆಯಲ್ಲಿ ವಾಸ ಮಾಡುತ್ತಿದ್ರು. ಮದ್ರಾಸ್ನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಮಹಾಬಲಿಪುರಂನಲ್ಲಿ ನಾಲ್ಕು ಎಕರೆ ಎಸ್ಟೇಟ್ ತೆಗೆದುಕೊಂಡಿದ್ದರು. ಆ ಕಾಲದಲ್ಲಿ ಅಲ್ಲೆಲ್ಲ ಜನ ಜಾಸ್ತಿ ಇರಲಿಲ್ಲ. ಹಾಗಾಗಿ ಕಡಿಮೆ ಬೆಲೆಗೆ ಸಿಕ್ತು ಅವರಿಗೆ. ಈ ಗುಡಿಸಲನ್ನು ಬಿಟ್ಟು, ಅಲ್ಲಿಯೇ ವಾಸ ಮಾಡಲು ಶುರು ಮಾಡಿದ್ರು. ಹೀರೊಯಿನ್ ಆಗಿದ್ರೂ ಉಳುಮೆ ಮಾಡುತ್ತಿದ್ರು.
ಕೊನೆಗೆ ಮದ್ರಾಸ್ನಿಂದ ಎಲ್ಲರೂ ಬೆಂಗಳೂರಿಗೆ ಶಿಫ್ಟ್ ಆದ ನಂತರ, ಅಲ್ಲಿರುವುದನ್ನು ಮಾರಿ, ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ತೆಗೆದುಕೊಂಡರು. ಇವತ್ತಿಗೂ ಬೇಸಾಯ ಮಾಡುತ್ತಾರೆ. ಬೆಳಿಗ್ಗೆ ಹೊತ್ತು ನೆಲಮಂಗಲಕ್ಕೆ ಹೋದರೆ ಅವರು ಹೊಲದಲ್ಲಿ ಕೆಲಸ ಮಾಡುವುದನ್ನು ನೋಡಬಹುದು. ಮಗನನ್ನು ದೊಡ್ಡ ಕೃಷಿಕನನ್ನಾಗಿ ಮಾಡಿದ್ದಾರೆ. ಆತನು ಬೆಳಿಗ್ಗೆಯಿಂದ ಸಂಜೆಯವರೆಗೂ ಹೊಲದಲ್ಲಿಯೇ ಓಡಾಡುತ್ತಿರುತ್ತಾನೆ. ಇತ್ತೀಚೆಗೆ ಯಾರೋ ಕಿಡಿಗೇಡಿಗಳು ಅವರ ಹೊಲಕ್ಕೆ ಬೆಂಕಿ ಹಚ್ಚಿದಾಗ ಲೀಲಾವತಿ ಅವರ ಗೋಳನ್ನು ನೋಡಲು ಆಗುತ್ತಿರಲಿಲ್ಲ. ಹೆಂಗಸೊಬ್ಬಳು, ಗಂಡ, ಮಗ, ಮಗಳನ್ನು ಕಳೆದುಕೊಂಡಾಗ ಗೋಳಾಡುವ ರೀತಿಗಿಂತ ಹೆಚ್ಚಾಗಿ ಅವರು ಸಂಕಟ ಅನುಭವಿಸಿದ್ದರು. ಎಲ್ಲವನ್ನೂ ತಾನೇ ತಿನ್ನಬೇಕು ಎಂಬುದು ಆಕೆಗಿಲ್ಲ. ದಾನವನ್ನು ಕೊಟ್ಟಿದ್ದಾರೆ. 20–30 ಜನ ಅವರ ತೋಟದಲ್ಲಿ ಕೆಲಸ ಮಾಡುತ್ತಾರೆ. ಎಲ್ಲವನ್ನೂ ಅವರಿಗೆ ಕೊಡುತ್ತಾರೆ. ಲೀಲಾವತಿ ಅವರು ನಿರಾಡಂಬರವಾಗಿ ಜೀವನ ಸಾಗಿಸುತ್ತಿದ್ದಾರೆ.
ಮುಂದುವರಿಯುವುದು...