ವರದಪ್ಪನವರಿಗೆ ರಾಜ್‌ಕುಮಾರ್‌ ಕೊಡಿಸಿದ ಮನೆಯ ಬೆಲೆ ಎಷ್ಟು?

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 42


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)

ರಾಮ, ಲಕ್ಷ್ಮಣರನ್ನು ನಾನು ಜೀವಂತವಾಗಿ ನೋಡಿದ್ದು ಇವರಿಬ್ಬರಲ್ಲಿಯೇ. ಒಂದು ದಿನ ಪಾರ್ವತಮ್ಮನ ಬಳಿ ರಾಜ್‌ಕುಮಾರ್‌, ವರದಪ್ಪನಿಗೆ ಬೇರೆ ಮನೆ ಮಾಡಿ ಕೊಡು, ಅವನು ಬಾಡಿಗೆ ಮನೆಯಲ್ಲಿದ್ದಾನೆ ಎಂದ್ರು. ಅಯ್ಯೋ ಮಾಡಿ ಕೊಡ್ತೇನೆ ಅದಕ್ಕೇನು ಅಂದ್ರು ಅತ್ತಿಗೆ. ಆರ್‌ಎಂವಿ ಲೇಔಟ್‌ ಸುತ್ತಮುತ್ತ ಮನೆ ಹುಡುಕಿ, ಇದಕ್ಕೆ ಏಳು ಲಕ್ಷ, ಎಂಟು ಲಕ್ಷ ಎಂದು ಪಾರ್ವತಮ್ಮನವರು ಹೇಳಿದ್ರೆ, ರಾಜ್‌ಕುಮಾರ್‌ ಅವರು ಮನೆ ನೋಡಿ ಈ ಮನೆ ಬೇಡ ಚೆನ್ನಾಗಿಲ್ಲ ಎಂದು ಹೇಳುತ್ತಿದ್ರು. ಹಲವು ಮನೆಗಳನ್ನು ತೋರಿಸಿದ್ರು ಅವರ ಉತ್ತರ ಅದೇ ಆಗಿತ್ತು. ಬ್ರೋಕರ್‌ಗೂ ಮನೆ ತೋರಿಸಿ, ತೋರಿಸಿ ಬೇಜಾರಾಗೋಯ್ತು. ಪಾರ್ವತಮ್ಮನವರು ಸುಸ್ತಾಗಿ ಆ ವಿಚಾರವನ್ನೇ ಬಿಟ್ಟುಬಿಟ್ರು. ಇನ್ನೊಂದು ದಿನ ರಾಜ್‌ಕುಮಾರ್‌ ಅವರು ಯಾಕೆ ಪಾರ್ವತಿ, ನಾನು ಹೇಳಿದ್ದು ಏನು ಮಾಡಿದೆ ಎಂದು ಕೇಳಿದ್ರು. ನೀವು ಎಷ್ಟು ಮನೆ ತೋರಿಸಿದ್ರು ಬೇಡ ಅಂತೀರಾ ನಾನೇನು ಮಾಡಲಿ ಅಂದರು.


ಅದಕ್ಕೆ ರಾಜ್‌ಕುಮಾರ್‌ ಅವರು, ನಿನಗೆ ಅಷ್ಟು ಗೊತ್ತಾಗೋದು ಬೇಡ್ವಾ. ನಾವು ಇಷ್ಟು ದೊಡ್ಡ ಮನೆಯಲ್ಲಿದ್ದೀವಿ. ನೀನು ವರದಪ್ಪನಿಗೆ ಆ ಚಿಕ್ಕ, ಚಿಕ್ಕ ಮನೆ ತೋರಿಸುತ್ತೀಯಾ, ಇದು ನ್ಯಾಯಾನ? ನೀನೇ ಯೋಚನೆ ಮಾಡು ಅಂದು ಬಿಟ್ಟರು. ಆಗ ಪಾರ್ವತಮ್ಮ ಅವರಿಗೆ ರಾಜ್‌ಕುಮಾರ್‌ ಅವರು ದೊಡ್ಡ ಮನೆ ಕೊಡಿಸುವ ಯೋಚನೆಯಲ್ಲಿದ್ದಾರೆ ಎಂಬುದು ಗೊತ್ತಾಯಿತು. ನಂತರ ಸದಾಶಿವ ನಗರದಲ್ಲಿ ಮನೆ ಹುಡುಕಲು ಶುರು ಮಾಡಿದ್ರು. 35 ಲಕ್ಷದ ಮನೆ ನೋಡಿದ್ರು. ಪಾರ್ವತಮ್ಮನವರಿಗೆ ಅದು ಇಷ್ಟವಾಯ್ತು. ಒಂದು ತಿಂಗಳಲ್ಲಿ ಆ ಮನೆ ಖಾಲಿಯಾಗುತ್ತಿತ್ತು. ಪಾರ್ವತಮ್ಮನವರು ಈ ವಿಷಯವನ್ನು ರಾಜ್‌ಕುಮಾರ್‌ಗೆ ಹೇಳುವುದಕ್ಕೆ ಹೋಗಲಿಲ್ಲ. ಬ್ರೋಕರ್‌ಗೆ ಈ ಮನೆ ನಾನು ತೆಗೆದುಕೊಳ್ಳುತ್ತೇನೆ ಯಾರಿಗೂ ತೋರಿಸಬೇಡ ಅಂದ್ರು. ನಂತರ ರಾಜ್‌ಕುಮಾರ್‌ ಅವರನ್ನು ಕರೆದುಕೊಂಡು ಹೋಗಿ ತೋರಿಸಿದ್ರು. ರಾಜ್‌ಕುಮಾರ್‌ ಮನೆ ಹಿಂದೆಯೇ ಆ ಮನೆ ಇತ್ತು. ರಾಜ್‌ಕುಮಾರ್‌ ಅವರಿಗೂ ಅದು ಇಷ್ಟವಾಯ್ತು. ಮರುದಿನವೇ 35 ಲಕ್ಷ ಕೊಟ್ಟು, ಆ ಮನೆಯನ್ನು ರಿಜಿಸ್ಟ್ರೇಷನ್‌ ಮಾಡಿಸಿದ್ರು.
ಮುಂದುವರೆಯುವುದು...

17 views