“ವಸಂತ ಗೀತಾ ಶೂಟಿಂಗ್‌ನಲ್ಲಿ ನಡೆದ ರಾಯರ ಪವಾಡ”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 17


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


ಕ್ಯಾಮೆರಾವನ್ನು ಯಶಸ್ಸೆಂದು ಪರಿಗಣಿಸುವುದಾದರೆ, ಅದು ನಿಂತಿರುವ ಟ್ರೈಪಾಡ್‌ನ ಮೂರು ಕಂಬಗಳು ಒಂದೊಂದು ಸೂಚಕಗಳು. ಒಂದನೇ ಕಂಬ ಉತ್ತಮವಾದ ಕಥೆ. ಎರಡನೆಯದು ಸಿನಿಮಾದಲ್ಲಿರುವ ಪಾತ್ರಕ್ಕೆ ಹೊಂದುವಂತಹ ಪಾತ್ರಧಾರಿಗಳು. ಮೂರನೇಯದು ನಿರೂಪಣೆಯ ಸಮರ್ಥತೆ. ಈ ಮೂರು ಅಂಶಗಳು ಚೆನ್ನಾಗಿದ್ರೆ ಸಿನಿಮಾಕ್ಕೆ ಯಶಸ್ಸು ಖಂಡಿತ. ಈ ಮೂರು ಕಂಬಗಳಲ್ಲಿ ಒಂದು ಕುಂಟಿದರೂ, ಕ್ಯಾಮೆರಾ ಬೀಳುತ್ತದೆ.


ಹಾಡುಗಳು ನಿರೂಪಣೆಯ ಸಾಲಿಗೆ ಸೇರುತ್ತದೆ. ಸನ್ನಿವೇಶಗಳಿಗೆ ತಕ್ಕಂತೆ ಹಾಡುಗಳನ್ನು ಆಯ್ಕೆ ಮಾಡುವ ಜಾಣ್ಮೆ ಆಗಿನ ನಿರ್ದೇಶಕರಲ್ಲಿ ಇತ್ತು. ಒಂದು ಸನ್ನಿವೇಶಕ್ಕೆ ಮ್ಯೂಸಿಕ್‌ ಡೈರೆಕ್ಟರ್‌ ಮೂರು ಟ್ಯೂನ್‌ ಕೊಡುತ್ತಿದ್ರು. ಅದರಲ್ಲಿ ಒಂದನ್ನು ಆರಿಸಿಕೊಳ್ಳಬೇಕಿತ್ತು. ಮೂರು ಚೆನ್ನಾಗಿರದಿದ್ರೆ, ಇನ್ನು ಮೂರು ಮಾಡುತ್ತಿದ್ರು. ಈಗ ಹಾಗಿಲ್ಲ. ಹದಿನೈದು ದಿನ, ಸಮಯದಲ್ಲಿ ಟ್ಯೂನ್‌ ರೆಡಿ ಮಾಡ್ತಾರೆ. ಅದು ಚೆನ್ನಾಗಿಲ್ಲ ಅಂದ್ರೆ ಮತ್ತೆ ಹದಿನೈದು ದಿನ ಸಮಯ ಕೊಡಬೇಕು. ಒಂದು ಹಾಡಿಗೆ ಒಂದು ತಿಂಗಳು ತೆಗೆದುಕೊಂಡ್ರೆ ಗತಿ ಏನು ಹೇಳಿ. ಆರು ಹಾಡಿಗೆ ಆರು ತಿಂಗಳಾಗುತ್ತದೆ. ಆಗ ಆರು ದಿವಸದಲ್ಲಿ ಹಾಡು ತಯಾರಿಸುತ್ತಿದ್ರು. ಒಳ್ಳೆಯ ಕಥೆ, ಆ ಪಾತ್ರಕ್ಕೆ ತಕ್ಕ ಕಲಾವಿದರು ಸಿನಿಮಾದ ಯಶಸ್ಸಿಗೆ ಕಾರಣವಾಗುತ್ತಾರೆ. ಹೊಸ ಅಥವಾ ಹಳೆಯ ಕಲಾವಿದ ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ.
ಗೋವಿಂದರಾಜ್‌ ಅವರಿಗೆ ಒಂದು ಸಿನಿಮಾ ನಿರ್ದೇಶನ ಮಾಡಿಕೊಡುವಂತೆ ಪಾರ್ವತಮ್ಮ ಅವರು ಕೇಳಿದ್ರು. ಗೋವಿಂದರಾಜ್‌ ಅವರು ಪಾರ್ವತಮ್ಮ ಅವರ ಸಹೋದರ. ಕಥೆ ಯಾವುದಾದ್ರು ಇದೆಯಾ ನಿಮ್ಮ ಹತ್ತಿರ ಅತ್ತಿಗೆ ಎಂದೆವು. ಈಗ ನನಗೆ ಯಾವುದು ಹೊಳೆಯುತ್ತಿಲ್ಲ ಅಂದ್ರು. ಆ ಸಮಯಕ್ಕೆ ಸರಿಯಾಗಿ ದೆಹಲಿಯಲ್ಲಿ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ನಡೆಯುತ್ತಿತ್ತು. ನಾನು, ದೊರೆ ಸಿನಿಮೋತ್ಸವವನ್ನು ತಪ್ಪಿಸುತ್ತಿರಲಿಲ್ಲ., ಬೇರೆ, ಬೇರೆ ಭಾಷೆಯ ಕಥೆ ಕದಿಯುವ ಸಲುವಾಗಿಯೇ ಬಹುತೇಕರು ಅಲ್ಲಿಗೆ ಹೋಗುತ್ತಿದ್ರು. ಜಪಾನ್‌, ಚೈನಾ, ಅರ್ಜೆಂಟೈನಾ, ಇರಾನಿಯನ್‌ ಕಥೆಗಳು ನಮ್ಮ ನೆಟಿವಿಟಿಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತದೆ.


ಸಿನಿಮೋತ್ಸವದಲ್ಲಿ ಇರಾನಿಯನ್‌ ಸಿನಿಮಾವೊಂದನ್ನು ನೋಡಿದೆವು. ಅದರಲ್ಲಿ ಗಂಡ, ಹೆಂಡತಿ ಬಹಳ ಪ್ರೀತಿಸಿ ಮದುವೆಯಾಗ್ತಾರೆ. ಆದರೆ, ಇಬ್ಬರಿಗೂ ಭಿನ್ನಾಭಿಪ್ರಾಯ ಬಂದು ಅವರು ವಿಚ್ಛೇದನ ತೆಗೆದುಕೊಳ್ತಾರೆ. ಅವರಿಗೆ ಒಂದು ಮಗುವಿರುತ್ತದೆ. ಆ ಮಗು ಅಪ್ಪ, ಅಮ್ಮನನ್ನು ಒಂದು ಮಾಡಬೇಕು ಎಂದು ತುಂಬಾ ಪ್ರಯತ್ನ ಮಾಡುತ್ತದೆ. ಕಷ್ಟಪಟ್ಟು ಕೊನೆಗೆ ಅವರನ್ನು ಒಂದು ಮಾಡಿ, ಅವರೆಲ್ಲ ಸಂತೋಷವಾಗಿರುತ್ತಾರೆ. ಇದನ್ನು ನಾವ್ಯಾಕೆ ಸಿನಿಮಾ ಮಾಡಬಾರದು ಎಂಬ ಯೋಚನೆ ಬಂತು. ಆ ಸಿನಿಮಾವನ್ನೇ ಪ್ರೇರಣೆಯಾಗಿಟ್ಟುಕೊಂಡು ಕನ್ನಡದ ನೆಲ, ಸಂಸ್ಕೃತಿ, ಸಂಪ್ರದಾಯಕ್ಕೆ ತಕ್ಕಂತೆ ಕಥೆ ರೂಪಿಸಿ, ‘ವಸಂತ ಗೀತಾ’ ಸಿನಿಮಾ ಮಾಡಿದೆವು.


‘ವಸಂತ ಗೀತಾ’ಕ್ಕೆ ರಂಗರಾವ್‌ ಅವರು ಮ್ಯೂಸಿಕ್‌ ಡೈರೆಕ್ಟರ್. ಅವರು ಕವಿರತ್ನ ಕಾಳಿದಾಸ ಸಿನಿಮಾದಿಂದ ನನಗೆ ಪರಿಚಿತರು. ಆ ಸಿನಿಮಾದ ನಿರ್ದೇಶಕ ರೇಣುಕಾಶರ್ಮ ನನ್ನ ಜೊತೆಗೆ ಕೆಲಸ ಮಾಡಿದ್ದ. ಭಗವಾನ್‌ಗೆ ರೆಕಾರ್ಡಿಂಗ್‌ ಸೆನ್ಸ್ ಚೆನ್ನಾಗಿದೆ. ಕಾಳಿದಾಸದಲ್ಲಿ ಮಾಡುವ ಹಾಡುಗಳನ್ನೆಲ್ಲ ಭಗವಾನ್‌ ವಾಯ್ಸ್‌ ಮಿಕ್ಸ್‌ ಮಾಡಲಿ ಎಂದು ರಾಜ್‌ಕುಮಾರ್‌ ಅವರು ಹೇಳಿದ್ರು. ರೇಣುಕಾಶರ್ಮ ಅವರು ಬಂದು ಹೀಗೆ ರಾಜ್‌ಕುಮಾರ್‌ ಅವರು ಹೇಳುತ್ತಿದ್ದಾರೆ ನಿಮ್ಮನ್ನು ಕರೆದುಕೊಂಡು ಹೋಗಬೇಕಂತೆ ಎಂದ್ರು. ಆಯ್ತು ಎಂದೆ. ರಾಜ್‌ಕುಮಾರ್‌ ಅವರು ರೆಕಾರ್ಡ್‌ ಮಾಡಿದ್ದನ್ನೆಲ್ಲ ನಾನು ಬ್ಯಾಲೆನ್ಸ್‌ ಮಾಡುತ್ತಿದ್ದೆ. ಆ ಸಿನಿಮಾಕ್ಕೂ ರಂಗರಾವ್‌ ಮ್ಯೂಸಿಕ್‌ ಡೈರೆಕ್ಟರ್‌ ಆಗಿದ್ದರಿಂದ ಅವರು ನನ್ನ ಜೊತೆಗಿರುತ್ತಿದ್ರು. ಅಲ್ಲಿಂದಲೇ ಪರಿಚಯವಿತ್ತು. ಕಾಳಿದಾಸದಲ್ಲಿ ಅಷ್ಟು ಒಳ್ಳೊಳ್ಳೆ ಹಾಡುಗಳನ್ನು ಕೊಟ್ಟಿರುವುದರಿಂದ ಅವರೇ ಸರಿಯಾದ ವ್ಯಕ್ತಿಯೆಂದು ವಸಂತ ಗೀತ ಸಿನಿಮಾಕ್ಕೆ ಅವರನ್ನು ಕರೆಸಿದೆವು. ಒಳ್ಳೊಳ್ಳೆ ಹಾಡುಗಳನ್ನು ಕೊಟ್ಟರು ಅವರು. ನಮ್ಮ ಅಭಿರುಚಿ ಅಥವಾ ನಮ್ಮ ಅದೃಷ್ಟವೋ ಗೊತ್ತಿಲ್ಲ ನಾವು ಮಾಡುವ ಹಾಡುಗಳೆಲ್ಲ ಜನಪ್ರಿಯವಾಗುತ್ತಿತ್ತು.


ರಾಜ್‌ಕುಮಾರ್‌ ಅವರು ವಾರದಲ್ಲಿ ಮೂರು ದಿವಸ ಮಾಂಸಾಹಾರ ತಿನ್ನುತ್ತಿರಲಿಲ್ಲ. ನಂಜುಡೇಶ್ವರನಿಗಾಗಿ ಸೋಮವಾರ, ಗುರುವಾರ ರಾಘವೇಂದ್ರ ಸ್ವಾಮಿಗಳಿಗಾಗಿ, ವೆಂಕಟೇಶ್ವರ ಸ್ವಾಮಿ ಅವರ ಮನೆ ದೇವರು ಹಾಗಾಗಿ ಶನಿವಾರ ಅವರು ಮಾಂಸ ಸೇವಿಸುತ್ತಿರಲಿಲ್ಲ.


ಗುರುವಾರ ಶೂಟಿಂಗ್‌ ಇತ್ತು. ನಾವೆಲ್ಲ ಸಸ್ಯಹಾರ ಊಟ ಮಾಡುತ್ತಿದೆವು. ರಾಜ್‌ಕುಮಾರ್‌ ನನ್ನ ಪಕ್ಕದಲ್ಲಿಯೇ ಕೂತಿದ್ರು. ಅವತ್ತು ರಾಜ್‌ಕುಮಾರ್‌ ಅವರ ಅಭಿಮಾನಿಗಳೊಬ್ಬರು ಅವರಿಗಾಗಿ ಮಾಂಸಹಾರ ತಂದಿದ್ರು. ಅವರಿಗೆ ರಾಜ್‌ಕುಮಾರ್‌ ಅವರು ತಿನ್ನಲ್ಲ ಅಂಥ ಗೊತ್ತಿತ್ತು. ಫೈಟರ್ಸ್‌ಗಳಿಗೆ ಕೊಟ್ಟರು. ಫೈಟರ್ಸ್‌ಗಳು ಮಾಂಸಾಹಾರ ಇಲ್ಲದೆ ಬದುಕಿಯೇ ಇರುವುದಿಲ್ಲ. ಅಲ್ಲಿರುವ ಪ್ರತಿಯೊಬ್ಬನು ಭೀಮನೇ. ಒಬ್ಬೊಬ್ಬ ಮೂರು ಪ್ಯಾಕೇಟ್‌ ಬಿರಿಯಾನಿ ತರಿಸಿಕೊಳ್ಳುತ್ತಿದ್ದ. ಫೈಟ್‌ ಮಾಸ್ಟರ್‌ ಶಿವಯ್ಯ, ರಾಜ್‌ಕುಮಾರ್‌ ಅವರು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಬಂದು, ಅಣ್ಣಾ ಈ ತರಹದ ಮಾಂಸ ನನ್ನ ಲೈಫಲ್ಲಿ ತಿಂದೇ ಇಲ್ಲ. ಇವತ್ತು ನೀವು ರುಚಿ ನೋಡಲೇಬೇಕು, ಹೇಗಿದೇ ಅಂತಿರಾ...ನೀವೀಗ ತಿನ್ನಲೇ ಬೇಕು, ಇಲ್ಲದಿದ್ರೆ ನಾವು ಊಟವನ್ನೇ ಬಿಟ್ಟುಬಿಡ್ತೇವೆ ಎಂದು ಒತ್ತಾಯಿಸಿದ. ಆತನ ಜೊತೆಗಿದ್ದ ಆರು ಫೈಟರ್ಸ್‌ಗಳು ಊಟ ಬಿಟ್ಟುಬಿಟ್ರು. ಅಣ್ಣಾ ತಿನ್ನುವವರೆಗೂ ನಾವು ತಿನ್ನುವುದಿಲ್ಲ ಎಂದು ಹಟ ಹಿಡಿದ್ರು.


ಈ ಬಲವಂತಕ್ಕೆ ರಾಜ್‌ಕುಮಾರ್‌ ಅವರು, ಸರಿ ನಗೊಂದು ಪೀಸ್‌ ಹಾಕಿ ಅಂದ್ರು. ತಿನ್ನಿ ಅಣ್ಣ ನನ್ನ ಮುಂದೆ ಎಂದ ಶಿವಣ್ಣ. ನಾನು ತಿನ್ನುತ್ತೇನೆ ನೀನು ಹೋಗು ಅಂದ್ರು ರಾಜ್‌ಕುಮಾರ್‌. ದೂರ ಹೋಗಿಯೂ ಅವರು ತಿನ್ನುತ್ತಾರೋ, ಇಲ್ವೋ ಎಂಬುದನ್ನು ಆತ ನೋಡುತ್ತಿದ್ದ. ರಾಜ್‌ಕುಮಾರ್‌ ಅವರು ತಿನ್ನದೇ ಇರುವುದಕ್ಕೂ ಪ್ರಯತ್ನಿಸಿದರೂ ಅವನು ಬಿಡಲಿಲ್ಲ. ರಾಜ್‌ಕುಮಾರ್‌ ಅವರು ಬಾಯಿಗೆ ಹಾಕಿಕೊಂಡು, ತಕ್ಷಣವೇ ತೆಗೆದು ಬದಿಗೆ ಇಟ್ರು. ಹೇಗಿದೆ ಅಣ್ಣಾ ಎಂದ. ಫಸ್ಟ್‌ಕ್ಲಾಸ್‌ ಇತ್ತು ಅಂದ್ರು.


ಸ್ವಲ್ಪ ಸಮಯದ ಬಳಿಕ ಹತ್ತಿರ ಬಂದ ಶಿವಯ್ಯ, ಹೇಗಿತ್ತಣ್ಣ ಚೆನ್ನಾಗಿತ್ತಲ್ವಾ ಎಂದ. ಏನು ಚೆನ್ನಾಗಿತ್ತು, ಕೊಳೆತ ಮಾಂಸ ತೆಗೆದುಕೊಂಡು ಬಂದು ಕೊಟ್ಟಿದ್ದಾರೆ. ನೀವು ನೋಡಿದ್ರೆ ತಿಂದ್ರಿ. ಬಾಯಿಗೆ ಇಟ್ಟ ತಕ್ಷಣ ಗೊತ್ತಾಯ್ತು ನನಗೆ. ವಾಸನೆ ಹೊಡೆಯುತ್ತಿತ್ತು. ಇಲ್ಲಾ ಅಣ್ಣ ನಮಗೆಲ್ಲ ಚೆನ್ನಾಗಿತ್ತು. ನಿಮಗ್ಯಾಕೆ ಹಾಗೆ ಅನಿಸಿತು ಅಂದ್ರು. ಏನೋ ನನ್ನ ಬಾಯಿಗೆ ಕೊಳೆತ ಮಾಂಸದ ರೀತಿ ಇತ್ತು. ಬಿಡಿ, ನಿಮಗೆಲ್ಲ ಚೆನ್ನಾಗಿತ್ತಲ್ಲ ಅಂದ್ರು.


ಅವರೆಲ್ಲ ಹೋದ ಮೇಲೆ ರಾಜ್‌ಕುಮಾರ್ ಅವರು, ಭಗವಾನ್‌ ಇದನ್ನು ರಾಯರ ಪವಾಡ ಅಂತೀರಾ. ಗುರುವಾರ ತಿನ್ನಬಾರದು ಎಂದು ನನ್ನ ಮನಸ್ಸಿನಲ್ಲಿದೆ. ಬಾಯಿಗೆ ಹಾಕಿಕೊಂಡ್ರೆ ಕೊಳೆತ ವಾಸನೆ ಬಂತು ನನಗೆ. ನೀನು ತಿನ್ನಬೇಡ ಎಂದು ರಾಯರು ನನಗೆ ಆದೇಶ ಕೊಡುತ್ತಿದ್ದಾರಾ? ಎಂದ್ರು. ಇರಬಹುದು ಮುತ್ತುರಾಜಣ್ಣ ನನಗೆ ಗೊತ್ತಿಲ್ಲ. ಅಥವಾ ನಿಮ್ಮ ಮನಸ್ಸಿನಲ್ಲಿ ರಾಯರ ಭಕ್ತಿ ಅಪರಿಮಿತವಾಗಿ ತುಂಬಿದೆಯಲ್ವಾ ಅದರ ಪರಿಣಾಮವೇನೋ ನನಗೆ ತಿಳಿಯುತ್ತಿಲ್ಲ. ನೀವು ತಿನ್ನದೇ ಇದ್ದಿದ್ದು ಒಳ್ಳೆಯ ಕೆಲಸ ಎಂದೆ. ಗುರುವಾರ ಏನೇ ಆದ್ರೂ ಮಾಂಸ ತಿನ್ನಲೇ ಬಾರದೆಂದು ಅಂದು ಅವರು ನಿರ್ಧಾರ ಮಾಡಿದ್ರು. ಆ ನಿರ್ಧಾರವನ್ನು ಮುರಿಯಲು ಕಾರಣವಾಗಿದ್ದು ಬೇರೊಬ್ಬ ಕಲಾವಿದ. ಅವರು ಪ್ರತಿಜ್ಞೆ ಮಾಡಿದ್ರು. ಅದನ್ನು ಆತ ಮುರಿದು ಹಾಕಿಬಿಟ್ಟ. ಅದನ್ನು ಇನ್ನೊಮ್ಮೆ ಹೇಳುತ್ತೇನೆ.


ವಸಂತ ಗೀತ ಕಥೆ ತುಂಬಾ ಚೆನ್ನಾಗಿತ್ತು. ಕಾದಂಬರಿ ಆಧಾರಿತ ಕಥೆ ಅಲ್ಲದಿದ್ದರೂ, ಕಾದಂಬರಿಯನ್ನು ಮೀರಿಸುವಂತಹ ಕಥೆ ಆಯ್ತು ಅದು. ಈಗ ಡೈವರ್ಸ್‌ ಎಂಬುದು ಸಾಮಾನ್ಯ. ಆಗಿನ ಕಾಲದಲ್ಲಿ ಸಮಾಜವೇ ಸಂಪ್ರದಾಯ, ಸಂಸ್ಕೃತಿ ಬದ್ಧವಾಗಿತ್ತು.


ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌. ಪರಮೇಶ್ವರ

47 views