ವೀರಪ್ಪನ್‌ ಅಣ್ಣಾವ್ರಿಗೆ ಮಾಡಿಕೊಡುತ್ತಿದ್ದ ಅಡುಗೆಗಳು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 46


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಸಂಜೆ ಏಳುಗಂಟೆಗೆ ಊಟ ಹಾಕಿಬಿಡುತ್ತಿದ್ದನಂತೆ. ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿದ್ರೆ ಹೊಗೆ ಬರುತ್ತಿದೆಂದು ಸೀಮೆಎಣ್ಣೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದನಂತೆ. ರಾತ್ರಿ ಹೊತ್ತು ಅಡುಗೆ ಮಾಡುತ್ತಿರಲಿಲ್ಲ ಅವನು. ಪೊಲೀಸರಿಗೆ ಕುರುಹು ಸಿಗಬಾರದು ಎಂಬುದು ಅವನ ಉದ್ದೇಶವಾಗಿತ್ತು. ರಾತ್ರಿ ಯಾರಾದ್ರೂ ಬಂದ್ರೆ ಹಕ್ಕಿಗಳ ಚಿಲಿಪಿಲಿ ಶಬ್ದದಿಂದಲೇ ಅದನ್ನು ಅರಿತುಕೊಳ್ಳುತ್ತಿದ್ದನಂತೆ. ಅವನು ಇರುತ್ತಿದ್ದ ಸ್ಥಳದ ಸುತ್ತ ಕಾವಲುಗಾರರು ಇರುತ್ತಿದ್ರು. ಗಾಢ ನಿದ್ದೆಯಲ್ಲಿದ್ರೂ, ಪೊಲೀಸರು ಬಂದ್ರೂ ಎದ್ದೇಳಿ ಎಂದು ಕರೆದುಕೊಂಡು ಹೋಗುತ್ತಿದ್ದನಂತೆ. ಅವನು ಕೋತಿ ರೀತಿ ಓಡುತ್ತಿದ್ದನಂತೆ. ಅವನ ವೇಗಕ್ಕೆ ಓಡಲು ರಾಜ್‌ಕುಮಾರ್‌ ಅವರಿಗೆ ಸಾಧ್ಯವೇ ಆಗುತ್ತಿರಲಿಲ್ಲವಂತೆ. ನಿನ್ನ ವೇಗಕ್ಕೆ ನನಗೆ ಓಡಲು ಆಗುವುದಿಲ್ಲ ಎಂದು ಒಂದು ದಿನ ಹೇಳಿಬಿಟ್ಟಿದ್ದರಂತೆ. ಹಾಗಾಗಿ ಸ್ವಲ್ಪ ನಿಧಾನವಾಗಿ ಹೋಗುತ್ತಿದ್ದನಂತೆ.


ಕೋತಿ ಮಾಂಸ ಬೇಕಾ ಎಂದು ರಾಜ್‌ಕುಮಾರ್‌ ಅವರನ್ನು ಕೇಳಿದ್ದನಂತೆ. ಅಯ್ಯೋ, ಅದು ನನ್ನ ದೇವರು. ಅದಕ್ಕೆ ಹಿಂಸೆ ಕೊಡಬೇಡ ಎಂದು ಇವರು ಕೈಮುಗಿದಿದ್ದರಂತೆ. ನಿಮಗೆ ಸಿಹಿ ತಿನ್ನುವ ಆಸೆ ಆಗಿದೇಯಾ ಎಂದು ಕೇಳಿದನಂತೆ. ಇವರು ಹೌದು ಹೇಗೆ ಮಾಡ್ತೀಯಾ ಎಂದು ಕೇಳಿದ್ದಕ್ಕೆ, ತಟ್ಟೆಗೆ ನೀರು ಹಾಕಿ, ಯಾವುದೋ ಎಲೆ ತಂದು ಅದರ ರಸ ತೆಗೆದನಂತೆ. ಅದನ್ನು ಚೆನ್ನಾಗಿ ಬಿಸಿ ಮಾಡಿ, ಅದನ್ನು ಮೂರು ಗಂಟೆ ಬಿಸಿಲಲ್ಲಿ ಇಟ್ಟನಂತೆ. ನಂತರ ನೋಡಿದ್ರೆ ಅದು ಹಲ್ವಾ ರೀತಿಯಲ್ಲಿಯೇ ಆಗಿತ್ತಂತೆ. ಅದನ್ನು ತಿಂದಾಗ ರುಚಿಯಾಗಿತ್ತು ಭಗವಾನ್‌ ಎಂದು ರಾಜ್‌ಕುಮಾರ್‌ ಹೇಳಿದ್ರು. ಅವನು ಕಾಡುಪ್ರಾಣಿನೇ ಆಗಿಬಿಟ್ಟಿದ್ದ.
ಮುಂದುವರೆಯುವುದು...

35 views