“ಶಕ್ತಿಧಾಮ”ಕ್ಕೆ ಫಂಡಿಗ್‌ ಎಲ್ಲೆಲ್ಲಿಂದ ಬರುತ್ತದೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 62


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಈಗ ಶಿವರಾಜ್‌ಕುಮಾರ್‌ ಅವರ ಪತ್ನಿ ಗೀತಾ ಅದರ ಅಧ್ಯಕ್ಷೆ. 160 ಅನಾಥ ಮಕ್ಕಳು, 26 ನಿರಾಶ್ರಿತ ಮಹಿಳೆಯರು ಈ ವರ್ಷ ಅಲ್ಲಿ ಇದ್ದಾರೆ. ನಾವು ಅವರ ಜಾತಿ, ಊರು ಯಾವುದು ಕೇಳುವುದಿಲ್ಲ. ಮಕ್ಕಳಿಗೆ ಎಲ್‌.ಕೆ.ಜಿ.ಯಿಂದ ಪಿ.ಜಿ.ವರೆಗೂ ಶಿಕ್ಷಣ ಕೊಡುತ್ತೇವೆ. ಅನಾಥ ಮಕ್ಕಳನ್ನು ನಾವು ದತ್ತು ತೆಗೆದುಕೊಳ್ಳುತ್ತೇವೆ. ಅವರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇವೆ. ರಾಜಾಶ್ರಯದಲ್ಲಿ ಇರುವ ಮಕ್ಕಳಿಗೂ ಅಷ್ಟು ಅನುಕೂಲ, ಸೌಕರ್ಯಗಳು ದೊರಕುವುದಿಲ್ಲ. ಆ ಮಟ್ಟಿಗೆ ನೋಡಿಕೊಳ್ಳುತ್ತೇವೆ.

ನಮಗೆ ವಿದೇಶದಿಂದಲೂ ಫಂಡ್‌ ಬರುತ್ತದೆ. ಅಲ್ಲದೇ ನಮ್ಮ ಸರ್ಕಾರಕ್ಕೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. 6 ಕೋಟಿ ದಾನ ಮತ್ತು ನಾಲ್ಕು ಎಕರೆ ಜಾಗವನ್ನು ನೀಡಿದೆ. ಕೆಂಪಯ್ಯ ಅವರು ಪೊಲೀಸ್‌ ವೃತ್ತಿಯಿಂದ ನಿವೃತ್ತಿ ಹೊಂದಿದ್ದು, ಶಕ್ತಿಧಾಮದ ಉಪಾಧ್ಯಕ್ಷರಾಗಿದ್ದಾರೆ. ಅವರಿಗೆ ಅಲ್ಲಿ ಅನಾಥ ಮಕ್ಕಳ ಶಾಲೆಯನ್ನು ಪ್ರಾರಂಭಿಸಬೇಕು ಎಂಬ ಯೋಚನೆ ಮೂಡಿದ್ದು, ಯೋಜನೆ ಪ್ರಾರಂಭಕ್ಕೆ ಈಗಾಗಲೇ ಕೆಲಸ ಮಾಡುತ್ತಿದ್ದೇವೆ. ರಾಜ್‌ಕುಮಾರ್‌ ಅವರು ಸಮಾಜಕ್ಕೆ ಏನು ಮಾಡಿಲ್ಲ ಎಂದು ಕೆಲವೆಡೆ ಕೂಗಿದೆ. ಆದರೆ, ಅವರು ಮಾಡಿರುವುದು ಹಲವರಿಗೆ ತಿಳಿದೇ ಇಲ್ಲ. ಇದಕ್ಕಿಂತ ಉತ್ತಮವಾದ ಕಾರ್ಯ ಬೇರೊಂದು ಇದೆಯೇ?.


ಮೊದಲು ನಮ್ಮ ಬಳಿ ದುಡ್ಡು ಇರಲಿಲ್ಲ. ಇತ್ತೀಚೆಗೆ ಇಷ್ಟೆಲ್ಲ ಸೌಕರ್ಯಗಳು ದೊರಕಿದ್ದು. ಪಾರ್ವತಮ್ಮ ಅವರು ಇರುವಾಗಲೇ ಸರ್ಕಾರ 4 ಎಕರೆ ಜಾಗ ಕೊಟ್ಟಿತ್ತು. ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬ ಐಡಿಯಾ ನಮಗೆ ಇರಲಿಲ್ಲ. ಕೆಂಪಯ್ಯ ಅವರಿಂದಾಗಿ ಹೊಸ ಆಲೋಚನೆಗಳು ಬರುತ್ತಿವೆ. ರಾಜ್‌ಕುಮಾರ್‌ ಅವರು ಅಂದು ಆ ಮಹಿಳೆಯರಿಗಾಗಿ ಬೇರೆ ದಾರಿಯಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ರೂಪುಗೊಂಡಿದ್ದೇ ಶಕ್ತಿಧಾಮ.


‘ಒಡಹುಟ್ಟಿದವರು’ ಆದ ಮೇಲೆ ರಾಜ್‌ಕುಮಾರ್‌ ಅವರು ಎರಡು, ಮೂರು ವರ್ಷಗಳಿಗೊಮ್ಮೆ ಸಿನಿಮಾ ಮಾಡುತ್ತಿದ್ರು. ಉದಯ್‌ಶಂಕರ್‌ ತೀರಿ ಹೋದ ಮೇಲೆ ಅವರಿಗೆ ಸಿನಿಮಾ ಮಾಡುವ ಮನಸ್ಸೇ ಇರಲಿಲ್ಲ. ಒಡಹುಟ್ಟಿದವರು 18 ಸೀನ್ ಬರೆದಿದ್ದ, ಆ ವೇಳೆಗಾಗಲೇ ಹೋಗಿಬಿಟ್ಟ. ಉಳಿದಿದ್ದನ್ನು ನಾನು ಬರೆದೆ. ನಾನು ಕುಲವಧು ಸಿನಿಮಾದ ನಂತರದಿಂದ ಎಷ್ಟೋ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದೇನೆ.
ಮುಂದುವರಿಯುವುದು...

16 views