"ಶಕ್ತಿ ಧಾಮ" ಹುಟ್ಟಿದ್ದರ ಹಿಂದಿನ ಕಥೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 61


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
‘ಒಡಹುಟ್ಟಿದವರು’ ಮುಗಿಸಿ ಮೈಸೂರಿಗೆ ಹೋಗಿದ್ದೆವು. ಆಗ ಮೈಸೂರಿನಲ್ಲಿ ಕೆಂಪಯ್ಯ ಅವರು ಡೆಪ್ಯುಟಿ ಕಮಿಷನರ್‌ ಆಗಿದ್ರು. ನಮ್ಮ ಆಫೀಸ್‌ನೋಡಿ ಬನ್ನಿ ಎಂದು ಅವರು ಕರೆದ್ರು. ನಾನು, ಪಾರ್ವತಮ್ಮ, ರಾಜ್‌ಕುಮಾರ್‌, ಗೋವಿಂದರಾಜ್‌ ಎಲ್ಲ ಹೋದೆವು. ಆಫೀಸ್ ಮುಂದೆ 10–15 ಕೊಳಕಾದ ಉಡುಗೆ ತೊಟ್ಟಿದ್ದ, ಸ್ನಾನ ಮಾಡದೆ ಎಷ್ಟೋ ದಿನ ಆದ್ದಂತಿದ್ದ ಹೆಂಗಸರು ಸರತಿಯಲ್ಲಿ ಕೂತಿದ್ರು. ಕೂತಿದ್ದವರೆಲ್ಲ ಯಾರು ಎಂದು ರಾಜ್‌ಕುಮಾರ್‌ ಅವರು ಕೇಳಿದ್ರು. ಅದಕ್ಕೆ ಕೆಂಪಯ್ಯ ಅವರು, ಅವರೆಲ್ಲ ಮೈ ಮಾರಿ ಜೀವನ ನಡೆಸುವವರು. ಅವರಿಗೆ ಈ ವೃತ್ತಿ ಬಿಟ್ರೆ ಬೇರೆ ಗತಿ ಇಲ್ಲ. ನಾವು ಪೊಲೀಸ್‌ನವರು ನಮ್ಮ ಕರ್ತವ್ಯ ನಾವು ಮಾಡಲೇಬೇಕು. ಅವರನ್ನೆಲ್ಲ ಕೋರ್ಟ್‌ಗೆ ಕಳುಹಿಸಬೇಕು. ವ್ಯಾನ್‌ಗಾಗಿ ಕಾಯುತ್ತಿದ್ದೇವೆ ಅಂದ್ರು.


ರಾಜ್‌ಕುಮಾರ್‌ ಅವರು ಐದು ನಿಮಿಷ ಯೋಚನೆ ಮಾಡಿದ್ರು. ನಂತರ ಇದಕ್ಕೆ ಏನು ಮಾಡುವುದಕ್ಕೆ ಆಗುವುದಿಲ್ವಾ ಕೆಂಪಯ್ಯನವರೇ ಎಂದು ಕೇಳಿದ್ರು. ಅದಕ್ಕವರು ಏನು ಮಾಡಲು ಆಗುತ್ತೆ? ನಿಮ್ಮಂಥವರು ಮನಸ್ಸು ಮಾಡಿದ್ರೆ ಆಗುತ್ತೇ ಅಂದ್ರು. ಸರ್ಕಾರದ ಅಧಿಕಾರಿಗಳಾಗಿ ನಮ್ಮ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ. ಕೋರ್ಟ್‌ಗೆ ಪ್ರೊಡ್ಯೂಸ್‌ ಮಾಡುವುದಷ್ಟೇ ನಮ್ಮ ಕೆಲಸ. ಅಲ್ಲಿ ಇವರಿಗೆಲ್ಲ 300 ದಂಡ ಹಾಕುತ್ತಾರೆ. ಅದನ್ನು ಕೊಡಲು ಇವರಿಗೆ ಸಾಧ್ಯವಿಲ್ಲ. ಆ ಹಣವನ್ನು ಕೊಡಲು ಪಿಂಪ್‌ ಕಾಯುತ್ತಿರುತ್ತಾನೆ. ಅವನು ನಂತರ ಇವರನ್ನು ಕರೆದುಕೊಂಡು ಹೋಗುತ್ತಾನೆ. ಅವನು ಕೊಟ್ಟ 300ಕ್ಕೆ ಇವರೆಲ್ಲ ತಲಾ 3 ಸಾವಿರ ಸಂಪಾದನೆ ಮಾಡಿ ಕೊಡಬೇಕು. ಇಂತಹ ಪರಿಸ್ಥಿತಿ ಆ ಹೆಂಗಸರದು. ಏನು ಮಾಡ್ತೀರಾ ಎಂದು ಕರುಣಾಪೂರಿತವಾಗಿ ಹೇಳಿದ್ರು. ಆಗ ರಾಜ್‌ಕುಮಾರ್‌ ಅವರಿಗೆ ಯೋಚನೆ ಶುರುವಾಯ್ತು.


ಅವರಿಗೆಲ್ಲ ವಸತಿ ವ್ಯವಸ್ಥೆ ಕಲ್ಪಿಸುವ ಕುರಿತು ಯೋಚನೆ ಮಾಡಿದ್ರು. ಆದರೆ, ದುಡ್ಡು ಬೇಕಲ್ಲ ಏನು ಮಾಡುವುದು ಎಂಬುದು ಅವರ ಚಿಂತೆಯಾಗಿತ್ತು. ಅದಕ್ಕೆ ಕೆಂಪಯ್ಯ ಅವರು, ಜನರಿಂದ ದುಡ್ಡು ತೆಗೆದುಕೊಳ್ಳಲು ನಿಮ್ಮ ಬತ್ತಳಿಕೆಯಲ್ಲಿ ಬಾಣ ಇದ್ದೇ ಇದಿಯಲ್ಲಾ ಅಂದ್ರು. ಏನದು ಬಾಣ ಎಂದು ರಾಜ್‌ಕುಮಾರ್‌ ಕೇಳಿದ್ರು. ಅದಕ್ಕವರು ನಿಮ್ಮ ‘ಮ್ಯೂಸಿಕಲ್‌ನೈಟ್ಸ್’ ಎಂದರು.


ರಾಜ್‌ಕುಮಾರ್‌ ಅದಕ್ಕೆ ಒಪ್ಪಿ, ಮ್ಯೂಸಿಕಲ್‌ ನೈಟ್‌ ಪ್ರಾರಂಭಿಸೋಣ ಭಗವಾನ್‌. ಅದರಿಂದ ಇವರಿಗೆ ಸಹಾಯ ಮಾಡೋಣ ಅಂದರು. ನೀವು ಇವರಿಗೆ ದುಡ್ಡು ಹಂಚ್ಚಿದ್ರೆ ದಂಡ. ನನ್ನ ಜೊತೆಗೆ ಬನ್ನಿ ನಿಮಗೊಂದು ಐಡಿಯಾ ಕೊಡ್ತೇನೆ ಅಂದ್ರು ಕೆಂಪಯ್ಯ. ಮೈಸೂರಿನ ಶಿವರಾತ್ರಿ ಸ್ವಾಮಿ ಅವರ ಬಳಿ ಕರೆದುಕೊಂಡು ಹೋದ್ರು. ರಾಜ್‌ಕುಮಾರ್‌ ಅವರು ನಿರಾಶ್ರಿತರಿಗೆ ಆಶ್ರಯ ಕೊಡಲು ಯೋಚಿಸುತ್ತಿದ್ದಾರೆ. ವಸತಿ ಕಟ್ಟಲು ಜಾಗ ಬೇಕು. ನಿಮ್ಮ ಬಳಿ ಜಾಗ ಇದ್ರೆ ಕೊಡಿ ಎಂದು ಕೇಳಿದ್ರು. ಅದಕ್ಕವರು ಇಷ್ಟು ಒಳ್ಳೆಯ ಕೆಲಸಕ್ಕೆ ನಾವು ಕೊಡುವುದಿಲ್ಲವೇ ಎಂದು ಹೇಳಿ, ಜೆಎಸ್‌ಎಸ್‌ ಕಾಲೇಜಿನ ಪಕ್ಕದಲ್ಲಿ ಒಂದೂವರೆ ಎಕರೆ ಭೂಮಿಯನ್ನು ಬರೆದು ಕೊಟ್ರು. ಆಗ ಹುಟ್ಟಿದ್ದೇ ‘ಶಕ್ತಿ ಧಾಮ’.
ಮುಂದುವರೆಯುವುದು...

13 views