ಶಂಕರ್‌ ತುಂಬಾ ಕೂಲ್‌ ಮನುಷ್ಯ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 55

(ಮಾಲ್ಗುಡಿ ಡೇಸ್ ಕಾಸ್ಟ್ಯೂಮ್ ಮುಖ್ಯಸ್ಥೆ, ಸುಂದರಶ್ರೀ ಅವರ ನೆನಪುಗಳು)ಮಾಲ್ಗುಡಿಲಿ ಜನರೇಟರ್ ಅಸಿಸ್ಟೆಂಟ್ ಒಬ್ಬ ಇದ್ದ. ಆ ದುರಂತ ಅಂತೂ ನನಗೆ ನೆನೆಸ್ಕೊಳಕ್ಕಾಗಲ್ಲ. ನಾವು ಚೌಟ್ರಿ ಯಲ್ಲಿ ಊಟ ಮಾಡಕ್ಕೆ ಕೂತಿದ್ವಿ. ಆಗ ಜನರೇಟರ್ ಹುಡುಗ, ಜನರೇಟರ್ ನ ಕ್ಲೀನ್ ಮಾಡಕ್ಕೆ ಹೋಗಿ, ಗಾಡಿ ಸ್ಟಾರ್ಟ್ ಮಾಡಿ ಬಿಟ್ಟಿದ್ದಾನೆ, ನಾವೆಲ್ಲಾ ಊಟ ಮಾಡ್ತಾ ಕೂತಿದ್ವಿ. ಅಲ್ಲಿ ಬಂದು ಗಾಡಿ ಹೊಡೆದ್ಬಿಡ್ತು. ಲಕ್ಷ್ಮೀ ಚಂದ್ರಶೇಕರ್ ಅವ್ರಿಗೆ, ಅವ್ರ ಮಗಳಿಗೆ ಮತ್ತೆ ಇಬ್ಬರು ಹುಡುಗ್ರಿಗೆ ಪೆಟ್ಟಾಗಿ, ಅವ್ರನ್ನ ಮಣಿಪಾಲಿಗೆ ಕರ್ಕೊಂಡು ಹೋಗಿ, ಟ್ರೀಟ್ಮೆಂಟ್ ಮಾಡ್ಸಿದ್ವಿ. ಅದೊಂದು ನಿಜವಾಗ್ಲೂ ಮರೆಯಕ್ಕೆ ಆಗದ ದುರ್ಘಟನೆ. ಕಾರ್ಯ ಪ್ರಜ್ಞೆ ಅನ್ನೊದು ಶಂಕರ್ ಗೆ ಎಷ್ಟಿತ್ತು ಅಂದ್ರೆ, ಯಾವುದಕ್ಕೂ ಯಾವತ್ತೂ ಕೊರತೆ ಮಾಡ್ತಿರ್ಲಿಲ್ಲ.


ಪರಮ್: ಶಂಕರ್ ಗೆ, ಮೈಂಡ್ ಡಿಸ್ಟರ್ಬ್ ಆಗ್ತಿರ್ಲಿಲ್ವಾ? ಟೆನ್ಶನ್ ಆಗ್ತಿದ್ರಾ? ಕೂಗಾಡ್ತಿದ್ರಾ?


ಸುಂದರಶ್ರೀ: ನಾನು ಶಂಕರ್ ಕೂಗಾಡೋದನ್ನ ನೋಡ್ಲೇ ಇಲ್ಲ. ಹಿ ಈಸ್ ವೆರಿ ಕೂಲ್. ಈಗ ಏನೋ ಒಂದು ಆಗ್ಲಿಲ್ಲ ಅಂದ್ರೆ, “ಸರಿ ಆಗ್ಲಿಲ್ವಾ, ಏನಾದ್ರೂ ಆಲ್ಟರ್ನೇಟಿವ್ ಮಾಡೋಣ. ಯೋಚ್ನೆ ಮಾಡಿ” ಅನ್ನೋರು. ಅವರ ಟೀಮೂ ಹಾಗೇ ಇತ್ತು. ಯಾಕಂದ್ರೆ ಇಂಗ್ಲೀಷ್ ಮೂವಿನಲ್ಲಿ, ಏನು ಪಾಸಿಂಗ್ ಶಾಟ್ ಕಂಟಿನ್ಯುವಿಟಿ ಇರುತ್ತೋ, ಆತರ ಇದ್ರಲ್ಲೂ ಇದೆ. ಸಿನಿಮಾ ಕ್ವಾಲಿಟಿನೂ ಚೆನ್ನಾಗಿದೆ. ಯಾಕಂದ್ರೆ, ಸಿನಿಮಾ ಕ್ಯಾಮರಾದಿಂದ ಶೂಟ್ ಮಾಡಿರೋದು. ನಾವು ಸಂಕೇತ್ ಸ್ಟುಡಿಯೊದಲ್ಲೇ ಡಬ್ಬಿಂಗ್ ಮಾಡ್ತಿದ್ವಿ.


ಪರಮ್: ತುಂಬಾ ರೆಸ್ಟ್ ಲೆಸ್, ಟೈಮ್ ಸ್ಕೆಡ್ಯೂಲ್ ಜಾಸ್ತಿ ಇರ್ತಿತ್ತು. ಶಂಕರ್ ಜೊತೆ ವರ್ಕ್ ಮಾಡೂದು ಅಂದ್ರೆ ತುಂಬಾ ಸವಾಲಿನ ಕೆಲ್ಸ. ಯಾಕಂದ್ರೆ, ನಿರಂತರವಾಗಿ ಕೆಲ್ಸ ಮಾಡ್ತಾರೆ ಅಂತೆಲ್ಲ ಸುದ್ದಿ. ಹೌದಾ?


ಸುಂದರಶ್ರೀ: ಇಲ್ಲಪ್ಪ. ನಮಗೆ ಯಾವತ್ತೂ ಸ್ಟ್ರೇನ್ ಅನ್ನೊದು ಆಗ್ಲೇ ಇಲ್ಲ. ಹೇಳ್ತೀನಲ್ಲ, ಬೆಳಗಿನ ಜಾವ ಮೂರುವರೆ, ನಾಲ್ಕು ಗಂಟೆವರೆಗೂ ಶೂಟ್ ಮಾಡ್ತಿದ್ವಿ. ಮತ್ತೆ ಆರು ಗಂಟೆ ಅಷ್ಟೊತ್ತಿಗೆ ಎಲ್ರೂ ರಡಿಯಾಗಿ, ಹೋಗ್ತಿದ್ವಿ. ಒಂದು ಹದಿನೈದು ನಿಮಿಷ ನಿದ್ರೆ ಮಾಡಿ, ಸ್ನಾನ ಮಾಡಿ ರಡಿಯಾಗ್ತಿದ್ವಿ. ಯಾರಿಗೂ ಬೇಜಾರಾಗ್ತಿರ್ಲಿಲ್ಲ. ಯಾರೂ ಬೇಜಾರು ಮಾಡ್ಕೊಂಡು ಶಂಕರ್ ಜೊತೆ ವರ್ಕ್ ಮಾಡ್ತರ್ಲಿಲ್ಲ. ಹಗಲು ರಾತ್ರಿ ವರ್ಕ್ ಮಾಡಿದೀವಿ, ಇಲ್ಲಾಂತಲ್ಲ.


ಆ ಮೇಲೆ ಅನಂತ್ ನಾಗ್ ಅವ್ರ, ಇನ್ನೊಂದು ಎಪಿಸೋಡ್ ಗೆ ಆನೆ ಬೇಕಾಗಿತ್ತು. ಆನೆ ಯಾರು ತಂದು ಕೊಡ್ತಾರೆ? ಜಗ್ಗ ಎಲ್ಲೋ ಹೋಗಿ ಅರೇಂಜ್ ಮಡ್ಕೊಂಡು ಬಂದ. ಜಗ್ಗನೂ ಹಾಗೇ ಇದ್ದ ಬಿಡಿ. ಶಂಕರ್ ಕೇಳಿದನ್ನ ಇಮೀಡಿಯಟ್ ಅರೇಂಜ್ ಮಾಡ್ತಿದ್ದ. ಯಾವತ್ತೂ ಇಲ್ಲ, ಅಂತಿರ್ಲಿಲ್ಲ. ಅವ್ನೇ ಪ್ರೊಡಕ್ಷನ್ ಮ್ಯಾನೇಜರ್. ಪ್ರೊಡ್ಯೂಸರ್ ಕೂಡ ಹಂಗೇ ಇದ್ರು. ಹೇಳಿದ್ನಲ್ಲಾ, ನಮ್ದು ಒಂದು ಫ್ಯಾಮಿಲಿನೇ. ನಾವು ಅವರ ಅಸಿಸ್ಟೆಂಟ್ ಗಳು ಹೇಗೆ ವರ್ಕ್ ಮಾಡ್ತಿದ್ದೀವಿ, ಅದೆಲ್ಲಾ ಶಂಕರ್ ಇಂದ ಕಲ್ತದ್ದು. ಈಗ ಅವ್ರು ಇದ್ದಿದ್ರೆ ನಿಜವಾಗ್ಲೂ ಕಥೆನೇ ಬೇರೆ ಆಗ್ಬಿಟ್ಟಿರೋದು ಬಿಡಿ.ಮುಂದುವರೆಯುವುದು…

23 views