“ಶಂಕರ್ ನಾಗ್ ಕೊಡುತ್ತಿದ್ದ ಪೇಮೆಂಟ್ ಎಷ್ಟು?”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 1

(ಮಾಲ್ಗುಡಿ ಡೇಸ್ ಪ್ರಾಜೆಕ್ಟಿನಲ್ಲಿ ಕೆಲಸ ಮಾಡಿದ್ದ “ಸಾವಂತ್”ಅವರ ನೆನಪುಗಳು)


ಪರಮ್: ನಮಸ್ಕಾರ ಸರ್. ನಿಮ್ಮ ಪುಟ್ಟದೊಂದು ಇಂಟ್ರಡಕ್ಷನ್ ಆಮೇಲೆ ಮುಂದಕ್ಕೆ ಹೋಗೊಣ ಸರ್.


ಸಾವಂತ್; ನಮಸ್ಕಾರ ನನ್ನ ಹೆಸರು ಸಾವಂತ್ ಸಂಪೂಜಿ. ನಾನು ಬೆಳಗಾವಿ ಡಿಸ್ಟ್ರಿಕ್ಟ್, ಸವದತ್ತಿ ತಾಲೂಕ್, ಶಿವಾಪುರದವನು. ನಾನು ಬೆಂಗಳೂರಿಗೆ 1983-84ನಲ್ಲಿ ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ acting ಕೋರ್ಸಿಗೆ ಬಂದು ಸೇರ್ಕೊಂಡೆ. ಒಂದು ವರ್ಷ Acting ಕೋರ್ಸ್ ಮುಗಿಸಿದೆ. ನಂತರ Asusual ಸ್ಟ್ರಗಲಿಂಗ್ ಇದ್ದೇ ಇರುತ್ತಲ್ಲ. Actor ಆಗಿ ಗಾಂಧಿನಗರದಲ್ಲಿ ಆ ಡೈರೆಕ್ಟರ್ ಈ ಡೈರೆಕ್ಟರ್ ಅಂತ ಎಲ್ಲಾ ಕಡೆ ಸುತ್ತಾಡ್ದೆ. ಆದ್ರೆ ಏನೂ ಆಗ್ಲಿಲ್ಲ. ಬಿ. ಜಯಶ್ರೀ ಮೇಡಂ ನಮಗೆ ಟೀಚರ್ ಆಗಿದ್ರು ‘ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ. ಅವ್ರಿಗೆ ಹೇಳ್ದೆ “ಮೇಡಮ್ ಇಲ್ಲಿ ಏನೂ ಆಗ್ತಿಲ್ಲ ನಾನು ಊರಿಗೆ ಹೊರ್ಟೋಗ್ತಿನಿ. ಅವ್ರು “ಸರಿ, ಇವತ್ತು ಹೊಗ್ಬೇಡಿ ನಾಳೆ ಹೋಗಿ. ನಾಳೆ ಬೆಳಗ್ಗೆ ಆಫೀಸಿಗೆ ಬನ್ನಿ” ಅಂದ್ರು, ಆಫೀಸಿಗೆ ಹೋಗಿದ್ದೆ. “ನಾನು ಶಂಕರ್ ನಾಗ್ ಅವರ ಜೊತೆ ಮಾತಾಡಿದ್ದೀನಿ, ನೀವು ಹೋಗಿ ಅವರನ್ನ ಕಾಂಟ್ಯಾಕ್ಟ್ ಮಾಡಿ”ಅಂದ್ರು.ನಾನು ಶಂಕರ್ ಸರ್ ಅವರನ್ನ ಕಾಂಟ್ಯಾಕ್ಟ್ ಮಾಡಕ್ಕೆ ಹೋಗಿದ್ದೆ. ಅವ್ರು ಇರ್ಲಿಲ್ಲ ಅಲ್ಲಿ. ನಮ್ಮ ಚಾಮುಂಡೇಶ್ವರಿ ಸ್ಟುಡಿಯೋ ಅವಾಗ ಬಹಳ ದೊಡ್ಡದು. ಫ್ಲೋರಲ್ಲೆಲ್ಲಾ ಶೂಟಿಂಗ್ ಆಗ್ತಿತ್ತು ಅವಾಗ. ಚಾಮುಂಡೇಶ್ವರಿ ಸ್ಟುಡಿಯೋನ ನೋಡೊದೇ ಚಂದ. ಎಲ್ಲಾ Actors, ಡೈರಕ್ಟರ್ಸ್, ಟೆಕ್ನಿಶಿಯನ್ಸ್ ಎಲ್ಲಾ ಬರೋರು. ಶಂಕರ್ ಸರ್ ಇರ್ಲಿಲ್ಲ. ನಾನು ಫೋನ್ ನಂಬರ್ ತಗೊಂಡು ಪೋನ್ ಮಾಡ್ದೆ. ಅವರ ಪರ್ಸನಲ್ ಅಸಿಸ್ಟೆಂಟ್ ಅನ್ನಬಹುದು, ಅಥವಾ ಫ್ರೆಂಡ್ ಅನ್ನಬಹುದು ಅಥವಾ ಕಲೀಗ್ ಅನ್ನಬಹುದು, ಜಗದೀಶ್ ಮಲ್ನಾಡ್ ನಮ್ಮ ಆತ್ಮೀಯ ಜಗ್ಗಣ್ಣ ಅವ್ರು ಫೋನ್ ತಗೊಂಡ್ರು, “ಸರ್ ನಾನು ಸಾವಂತ್ ಅಂತ ಜಯಶ್ರೀ ಮೇಡಂ ಸರ್ ನ ಕಾಂಟ್ಯಾಕ್ಟ್ ಮಾಡೊಕ್ಕೆ ಹೇಳಿದ್ರು ಕಾಂಟ್ಯಾಕ್ಟ್ ಮಾಡ್ಬಹುದಾ?” ಅಂದೆ. ಅವ್ರು “ಈಗ ಸಿಗಲ್ಲ ಶೂಟಿಂಗಿನಲ್ಲಿ ಬ್ಯುಸಿ ಇದ್ದಾರೆ. ನಾಳೆ ಬೆಳಗ್ಗೆ ಬಂದ್ರೆ ಸಿಗ್ಬಹುದು ಅಂದ್ರು. “ಎಷ್ಟು ಗಂಟೆಗೆ ಬರ್ಲಿ ಸರ್?” ಅಂದೆ. “ಬೆಳಿಗ್ಗೆ ಆರು ಗಂಟೆ ಒಳಗೆ ಬರ್ಬೇಕು” ಅಂದ್ರು. ನಾನು ಅವಾಗ ಬೆಳಗ್ಗೆ ಆರು ಗಂಟೆಗೆ ಹೋಗೊದು ಹೆಂಗೆ?..


ನಂದು ಒಂದು ಸೈಕಲ್ ಇತ್ತು. ಬೆಳಗ್ಗೆ ನಾಲ್ಕು ಗಂಟೆಗೆ ಮನೆಬಿಟ್ಟೆ ಬೆಂಗಳೂರಿಂದ. ಅವ್ರು ಸಿಂಗ್ಸಂದ್ರ ಕಂಟ್ರಿ ಕ್ಲಬ್ ನಲ್ಲಿದ್ರು.


ಪರಮ್: ಅವಾಗ ಅದು ಔಟ್ ಸ್ಕರ್ಟ್?


ಸಾವಂತ್; ಹೌದು ಹೌದು ಸುಮಾರು 30-40 ಕಿಲೋಮೀಟರ್ ಇದೆ. ಬೆಳಗ್ಗೆ ಆರು ಗಂಟೆಗೆ ಹೋದೆ ಶಂಕರ್ ಸರ್ ಡೋರ್ ಓಪನ್ ಮಾಡಿದ್ರು. “ಸರ್ ಜಯಶ್ರೀ ಮೇಡಂ ಕಳ್ಸಿದ್ದಾರೆ ನನ್ನ ಅಂದೆ. “ಆ ಸಾವಂತ್?” ಅಂದ್ರು. “ಹ ಸರ್” ಅಂದೆ. ಬಹಳ ಆತ್ಮೀಯತೆಯಿಂದ ಒಳಗಡೆ ಕರ್ಕೊಂಡು ಕೂರ್ಸಿದ್ರು. ಅವರೇ ಫ್ಲಾಸ್ಕಿನಲ್ಲಿದ್ದ ಟೀ ತಂದ್ಕೊಟ್ರು. ಅವ್ರಿಗೆ ಹೊರಡ್ಬೇಕಾಗಿತ್ತೇನೊ, ಚಳಿ ಬೇರೆ ಅವಾಗ ನಾನು ಟೀ ಕುಡಿದೆ. ನನ್ಬಗ್ಗೆ ಎಲ್ಲಾ ಕೇಳಿದ್ರು “ಏನೇನೆಲ್ಲಾ ಮಾಡ್ತೀರ? ಏನ್ಮಾಡ್ಬೇಕು ಅನ್ಸುತ್ತೆ ನಿಮ್ಗೆ?” ನಾನು “ಈಗ ಸದ್ಯಕ್ಕೆ acting ಕೋರ್ಸ್ ಮುಗ್ಸಿದ್ದೀನಿ ಸರ್ acting ಕೊಟ್ರೆ ಬಹಳ ಒಳ್ಳೆದು ಅಂದೆ. ಅವಾಗ ಮಾಲ್ಗುಡಿ ಡೇಸ್ ದು ಕೆಲ್ಸ ಶರುವಾಗಿತ್ತು ಅಷ್ಟೆ. ಇನ್ನು ಶೂಟಿಂಗ್ ಶುರುವಾಗಿರ್ಲಿಲ್ಲ.


ಪರಮ್: ಪ್ರೀ ಪ್ರೊಡಕ್ಷನ್?


ಸಾವಂತ್: ಹೌದು “ಈಗ ಎಲ್ಲಾ ಟೆಕ್ನಿಶಿಯನ್ ಎಲ್ಲಾ ಫೈನಲ್ ಆಗಿದೆ. ಇನ್ಕೇಸ್ ಏನಾದ್ರೂ ಬೇಕಾದಾಗ ಹೇಳ್ತಿನಿ”ಅಂತ ಹೇಳಿದ್ರು, ಆಮೇಲೆ ಜಗ್ಗ ಬಂದ್ರು “ನಾನು ನಿಮ್ಮನ್ನ ಡ್ರಾಪ್ ಮಾಡ್ತೀನಿ ಹೆಂಗ್ ಬಂದಿದ್ದೀರ?” ಅಂದ್ರು. “ಇಲ್ಲಾ ಸರ್ ನನ್ನ ಸೈಕಲ್ ಇದೆ ನಾನ್ಹೊಗ್ತೀನಿ” ಅಂದೆ. ಹಾಗೆ ನಾನು ಹೋಗ್ಬಂದೆ. ಅದು ನನ್ನ ಇನ್ಸ್ಟಿಟ್ಯೂಟ್ ಮುಗಿದ ಮೇಲೆ.


ಪರಮ್: ಸೊ ಅದು ನಿಮ್ಮ ಮೊದಲ ಭೇಟಿ?


ಸಾವಂತ್: ಹೌದು ಮೊದಲ ಭೇಟಿ. ಅವ್ರು ಎಷ್ಟು ಪ್ರೀತಿಯಿಂದ ನನಗೆ ಟೀ ಕೊಟ್ರು ಅಂದ್ರೆ ತುಂಬಾ ಸಂತೋಷ ಆಯ್ತು ನನಗೆ. ಬೆಂಗ್ಳೂರಿಗೆ ಬಂದ್ಮೇಲೆ ಕಾಸರವಳ್ಳಿ ಸರ್ ಸಿನಿಮಾ ಮಾಡ್ತಿದ್ರು ‘ತಬರನ ಕತೆ’ಅಂತ. ಅವ್ರು ನಮ್ಮ ಪ್ರಿನ್ಸಿಪಲ್ ಆಗಿದ್ರು ಆದರ್ಶ ಇನ್ಸ್ಟಿಟ್ಯೂಟ್ನಲ್ಲಿ. “ಸರ್ ನನಿಗೆ ಒಂದು ರೋಲ್ ಕೊಡಿ ನಿಮ್ಮ ಸಿನಿಮಾದಲ್ಲಿ ಅಂದೆ. “ರೋಲ್ ಕೊಡ್ತಿನಿ ಅಸಿಸ್ಟಂಟ್ ಆಗಿ ವರ್ಕ್ ಮಾಡ್ತಿಯಾ?” ಅಂತ ಕೇಳಿದ್ರು. ಸರ್ ಅಸಿಸ್ಟೆಂಟಾಗಿ ವರ್ಕ್ ಮಾಡ್ತೀಯಾ ಅಂದ್ರೆ ನಾನು ಖುಷಿಯಿಂದ. ನಾನು “ಮಾಡ್ತೀನಿ ಸರ್” ಅಂದೆ. ಅದ್ರಲ್ಲಿ ಒಂದು ಚಿಕ್ಕ ರೋಲ್ ಮಾಡ್ದೆ ‘ಟೈಪಿಸ್ಟ್’ ಆಗಿ. ಆಮೇಲೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲ್ಸ ಮಾಡ್ದೆ. ಅಲ್ಲಿಂದ ನನ್ನ ಫಿಲ್ಮ್ ಜರ್ನಿ ಶುರುವಾಯ್ತು.


ಆ ಸಿನಿಮಾ ಕಂಪ್ಲೀಟ್ ಆಯ್ತು. ಆಗಿ ಪೋಸ್ಟ್ ವರ್ಕ್ ಎಲ್ಲಾ ನಡಿತಾ ಇತ್ತು. ಆ ಟೈಮಿನಲ್ಲಿ ‘ಲಕ್ಷಾಪತಿ ರಾಜನ ಕತೆ’ ಜಯಶ್ರೀ ಮೇಡಮ್ ತಗೊಂಡಿದ್ರು. ಆ ನಾಟಕದಲ್ಲಿ ನಾನು act ಮಾಡ್ತಾ ಇದ್ದೆ. ಸೊ ಇಲ್ಲಿ ಶೂಟಿಂಗ್ ಇಲ್ಲಾಂತಂದ್ರೆ ನಾನು ನಾಟಕದಲ್ಲಿ ಬ್ಯುಸಿಯಾಗಿರ್ತಿದ್ದೆ. ಬೇರೆ ಕಡೆ ಶೋಗಳಿರೋದು. ಅದು ಒಂದು ಶೋ ಆಯ್ತು. ಒಂದೆರಡ್ಮೂರು ಶೋ ಆದ್ಮೇಲೆ ಶಂಕರ್ ಸರ್ ಬಂದಿದ್ರು. ನಮಿಗೆ ಗೊತ್ತಿರ್ಲಿಲ್ಲ. ನೋಡ್ಕೊಂಡು ಹೋಗಿ ಒಂದಿಬ್ಬರನ್ನ ಚ್ಯೂಸ್ ಮಾಡಿದ್ರಂತೆ. ಯಾಕಂತಂದ್ರೆ ಹಿಂದಿ ಮಾತಾಡೋರು ಬೇಕು. ನನಗೆ ಹಿಂದಿ, ಮರಾಠಿ, ಕನ್ನಡ ಮೂರು ಲಾಂಗ್ವೇಜ್ ಚೆನ್ನಾಗಿ ಬರುತ್ತೆ.


ಪರಮ್: ಯಾಕಂದ್ರೆ ನೀವು ಬೆಳಗಾವಿಯವರು...


ಸಾವಂತ್: ಹೌದು ಆಮೇಲೆ ನನ್ನ ಮತ್ತೆ ಲಂಬು ನಾಗೇಶ್ ನ ಸೆಲೆಕ್ಟ್ ಮಾಡಿದ್ರು. ಸೆಲೆಕ್ಟ್ ಮಾಡಿ ನನಗೆ ಜಗ್ಗಣ್ಣ ಫೋನ್ ಮಾಡಿದ್ರು ಜಯಶ್ರೀ ಮೇಡಂಗೆ, ಅವಾಗ ಫೋನ್ ಗೀನ್ ಇರ್ಲಿಲ್ಲ. “ಜಯಶ್ರಿ ಮೇಡಂ ಹೇಳಿದ್ರು ನೀನು ಬರ್ಬೇಕಂತೆ ಕಣೊ, ಅಲ್ಲಿಗೆ ಹೋಗ್ಬೇಕಂತೆ ಅಂತಂದ್ರು. ಆಯ್ತು ಮೇಡಂ ಅಂತಂದು ನಾನು ಜಗ್ಗಣ್ಣನ ಕಾಂಟ್ಯಾಕ್ಟ್ ಮಾಡಿ ಒಂದು ಡೇಟ್ ಇತ್ತು. ಅದ್ಯಾವುದೋ ನನಗೆ ನೆನಪಿಲ್ಲ. ಆ ಡೇಟಿಗೆ ಹೋದೆ. ಅದರಲ್ಲಿ ಒಂದು ಚಿಕ್ಕ ಕ್ಯಾರಕ್ಟರ್ ಇತ್ತು. ಏನಂದ್ರೆ ಒಂದು ಕ್ರೌಡಲ್ಲಿ ನಮ್ಮ… ಹೆಸರು ಮರೆತೋಯ್ತು. ಅಂಕಲ್ ಅಂತ ಕರೀತಿವಿ ಅವ್ರನ್ನ


ಪರಮೇಶ್; ಅಂಕಲ್ ಲೋಕನಾಥ್


ಸಾವಂತ್: ಲೋಕನಾಥ್ ಅಂಕಲ್ ಅವ್ರು. ‘ಸ್ವೀಟ್ಸ್ ಫಾರ್ ಏಂಜಲ್ಸ್ʼ ಅಂತ ಆ ಎಪಿಸೋಡ್ ಹೆಸರು. ಅದ್ರಲ್ಲಿ ಅವ್ರಿಗೆ ಮಕ್ಕಳು ಅಂದ್ರೆ ಇಷ್ಟ. ಅವ್ರು ಸ್ವೀಟ್ ಕೊಡ್ತಾ ಇರ್ತಾರೆ, ಸ್ಕೂಲ್ ಮಕ್ಕಳಿಗೆಲ್ಲಾ, ನಾನು ಅದನ್ನ ನೋಡ್ಬಿಟ್ಟು ಅದ್ರಲ್ಲಿ ವಿಷ ಬೆರ್ಸಿದ್ದಾರೆ ಅಂತ ಗಾಸಿಪ್ ಹೇಳಿ ಅವ್ರನ್ನ ಚೇಸ್ ಮಾಡಿ ಅವ್ರನ್ನ ಹೊಡಿಯೋದು. ನಾನು ನೋಡಿದ್ರೆ ಸಣಕಲ. ಬಲಾಡ್ಯ ದೇಹ ಅವ್ರದ್ದು. ನಾನು ಹೊಡಿಯೋದಂದ್ರೆ ನನಿಗೆ ಒಂಥರಾ ಅಯ್ಯಯ್ಯಪ್ಪಾ ಅಂತ ಬೆಟ್ಟದ್ಮೇಲೆ ಹೊಡಿಯೋದುಂತಂದ್ರೆ ಹೇಗೆ? ಬಟ್ ಅವ್ರೆಲ್ಲಾ ನನಿಗೆ ಏನು… ತುಂಬಾ ಸಪೋರ್ಟ್ ಮಾಡೋರು, ಲೋಕನಾಥ್ ಅಂಕಲ್ ಅವ್ರು. ಬಿಕಾಸ್ ನಾನು ಒಂದು ಸಿನಿಮಾ ಮಾಡಿದ್ದೆ ಸರ್ ಜೊತೆ.


ಆಮೇಲೆ ನಮ್ಮ ಎಸ್. ರಾಮಚಂದ್ರ ಸರ್ ಕ್ಯಾಮರಾಮೆನ್ ಅವ್ರು ತುಂಬಾ ಸಪೋರ್ಟ್ ಮಾಡಿದ್ರು. ಶಂಕರ್ ಸರ್ ಅಂತೂ, ಅವ್ರ ಬಗ್ಗೆ ಮಾತಾಡಕ್ಕೇ ಆಗಲ್ಲ. ಒಳ್ಳೇ ಹ್ಯೂಮನ್ ಬೀಯಿಂಗ್ ಅವ್ರು. ಮಾತ್ರ ಎಲ್ಲ ಅಂದುಕೊಂಡ ಹಾಗೆ ಮುಗಿತು. ಒಂದೇ ದಿನ ಇತ್ತು ಶೂಟಿಂಗ್ ಅದು, ಶೂಟಿಂಗ್ ಆದ ತಕ್ಷಣ ಜಗ್ಗಣ್ಣ ಒಂದು ಚೆಕ್ ಕೊಟ್ರು ನನಗೆ. ಅದು ಫಸ್ಟ್ ಚೆಕ್ ನನಗೆ. ಸಿನಿಮಾದಲ್ಲಿ ಅಕೌಂಟ್ ಓಪನ್ ಮಾಡಿಸಿದ್ದೇ ಮಾಲ್ಗುಡಿ ಡೇಸಲ್ಲಿ. ಅಲ್ಲಿವರೆಗೂ ನನ್ಹತ್ರ ಬ್ಯಾಂಕ್ ಅಕೌಂಟೇ ಇರ್ಲಿಲ್ಲ. ಅದನ್ನ ತಗೊಂಡ್ಹೋಗಿ ಚೆಕ್ ಡೆಪಾಸಿಟ್ ಮಾಡಿ, ಬ್ಯಾಂಕ್ ಅಕೌಂಟ್ ಓಪನೆ ಮಾಡ್ದೆ.

ಪರಮ್: ಎಷ್ಟು ರೂಪಾಯಿ ಸಿಕ್ಕಿತ್ತು ಅದ್ರಲ್ಲಿ?


ಸಾವಂತ್: ಐನೂರು ರೂಪಾಯಿ ಕೊಟ್ಟಿದ್ರು.


ಪರಮ್: ಒಂದು ದಿನಕ್ಕೆ ಐನೂರು ರೂಪಾಯಿ, 1986 ರಲ್ಲಿ? ವಾವ್!!

ಸಾವಂತ್: ಹೌದು! ಆಮೇಲೆ ಬಂದೆ ಒಂದು ತಿಂಗಳು ಆಗಿರಬಹುದೇನೊ. ಮಾಲ್ಗುಡಿ ಡೇಸ್ ಸ್ಟಾರ್ಟ್ ಆಗಿತ್ತು. ನಾಲಕ್ಕೈದು ಎಪಿಸೋಡ್ ಸ್ಟಾರ್ಟ್ ಆಗಿತ್ತು ಅವಾಗ. ಒಂದು ದಿವ್ಸ ಇದ್ದಕ್ಕಿದ್ಹಂಗೆ ಶಂಕರ್ ಸರ್ ಲೆಟರ್ ಬಂತು ನನಿಗೆ.


ಪರಮ್: ಲೆಟರ್?... ಅವಾಗ ಫೋನ್ ಇಲ್ಲ?


ಸಾವಂತ್: ಒಂದು ಲೆಟರ್ ಬಂದಿತ್ತು ನನಿಗೆ, “ನೀನು ಸುಂದರಿಶ್ರೀಗೆ ಕಾಸ್ಟ್ಯೂಮ್ ಅಸಿಸ್ಟ್ ಮಾಡೋದಿದ್ರೆ ನಮ್ ಟೀಮಿಗೆ ಬಂದು ಸೇರು. ಪರಂ ಎಪಿಸೋಡ್ ಇಷ್ಟು ಅಂತ ಹೇಳಿ ಅಮೌಂಟ್ ಬರ್ದಿದ್ರು. ಮೂರು ದಿವಸಕ್ಕೆ ಒಂದು ಎಪಿಸೋಡ್ ಆಗೋದು. ಇಲ್ಲಾಂದ್ರೆ ನಾಲಕೈದು ದಿವಸಕ್ಕೆ ಒಂದು ಎಪಿಸೋಡ್ ಆಗೋದು. ಹಿಂದಿ ಮತ್ತೆ ಇಂಗ್ಲೀಷ್ ಎರಡರಲ್ಲೂ ಆಗೋದು. ಅವಾಗ ಏನೂಂತಂದ್ರೆ ಡಿಜಿಟಲ್ ಮೀಡಿಯಾ ಇರ್ಲಿಲ್ಲ. ಫಿಲ್ಮಲ್ಲಿ ಶೂಟ್ ಮಾಡುವ, 35 ಎಮ್.ಎಮ್. ಕ್ಯಾಮರಾದಲ್ಲಿ ಕಲರ್ ನಲ್ಲಿ ಶೂಟ್ ಮಾಡ್ತಿದ್ದಿದ್ದು. ಟೋಟಲ್ಲಿ ಫಿಲ್ಮ್ ತರಾನೇ ಶೂಟ್ ಮಾಡಿದ್ದು ಅದನ್ನ. ನನಗೆ ಕಾಸ್ಟ್ಯೂಮ್ ಬಗ್ಗೆ ಅಷ್ಟು ಗೊತ್ತಿರ್ಲಿಲ್ಲ. ಬಟ್ ಎಲ್ಲಾ ಡೀಟೈಲಾಗಿ ಹೇಳ್ಕೊಡವ್ರು, ಕಾಸ್ಟ್ಯೂಮ್ ಕಂಟಿನ್ಯುಟಿ ಎಲ್ಲ ನೋಡ್ಕೊತಿದ್ದೆ ನಾನು.


ಶಂಕರ್ ಸರ್ ಅಂತೂ ಅವ್ರು ಒಬ್ಬರ ಮೇಲೆ ನಂಬಿಕೆ ಬಂದ್ಬಿಟ್ರೆ, ಇವ್ನು ಮಾಡ್ತಾನೆ ಇವ್ನಿಗೆ ಗೊತ್ತು ಅಂದ್ರೆ, ಫುಲ್ ಫ್ರೀಡಂ ಕೊಡೋರು. ತಪ್ಪಿದ್ರೆ ಹೇಳೋರು. ಆಮೇಲೆ ಅಲ್ಲಿರೋರು ಅಸಿಸ್ಟೆಂಟು ಅಸೋಸಿಯೇಟ್ಸ್, ನಮ್ಮ ರಮೇಶ್ ಭಟ್ ಸರ್, ಪಿಂಟಿ ಆಮೇಲೆ ಸೋಮು, ಕಾಶಿ, ಜಗ್ಗಣ್ಣ, ಪ್ರಭಾಕರು, ಆಮೇಲೆ ನಮ್ಮ ಭದ್ರೇಶ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಮಗ ಅವ್ರೆಲ್ಲ ಅಸಿಸ್ಟೆಂಟ್ ಗಳು ಅಂತಲ್ಲ ಡೈರಕ್ಟರ್ ಗಳೇ ಅವ್ರೆಲ್ಲ. ಆರ್ಟ್ ಡೈರಕ್ಟರ್ ಜಾನ್ ದೇವರಾಜ್. ನಾವು ಶೂಟಿಂಗ್ ಮಾಡ್ಬೇಕಾದ್ರೆ 60-70 ಜನ ಜ್ಯೂನಿಯರ್ ಆರ್ಟಿಸ್ಟ್ಗಳು ಇರೋರು. ರೆಗ್ಯುಲರ್ ಅವ್ರದ್ದು. ಇವತ್ತು ಇರುತ್ತೋ ಬಿಡುತ್ತೋ ಸೆಕೆಂಡರಿ, ಬಟ್ ಟೋಟಲ್ ಅವ್ರಿರೋರು, ಡೈಲಿ ಸೆಟ್ಟಲ್ಲಿ ಅವ್ರು ಶೂಟಿಂಗ್ನಲ್ಲಿ ಇರ್ತಾ ಇದ್ರು.


ಪಾಸಿಂಗ್ ಶಾಟ್ಸ್ ಆಯ್ತು, ಸಿಂಗಲ್ ಡೈಲಾಗ್ ಆಯ್ತು, ಆಮೇಲೆ ಸುಮಾರು ಮೂರು ಸಾವಿರ ಮೇಲೆನೇ ಕಾಸ್ಟ್ಯೂಮ್ ಇರ್ಬೇಕು. ಅಷ್ಟೆಲ್ಲ ಲೀಸ್ಟ್ ಮಾಡಿದ್ರು. ನರಸಿಂಹನ್ ಸರ್ ಮಿಸ್ಸಸ್ ಪದ್ಮಾವತಿ ಅವ್ರು, ಬಹಳ ನೀಟಾಗಿ ಅವನ್ನೆಲ್ಲ ಮಾಡಿಟ್ಟಿರೋರು. ನಾವು ಎಲ್ಲ ತಗೊಂಡ್ಹೋಗಿ ಪ್ರಿಪೇರ್ ಮಾಡ್ತಾ ಇದ್ವಿ.

ಪರಮ್: ಸರ್ ಈಗ ಮಾಲ್ಗುಡಿ ಡೇಸ್ ಗೆ ನೀವು ಫಸ್ಟ್ ಡೇಯಿಂದ ಅದು ರಿಲೀಸ್ ಆಗಿ ಟೀವಿನಲ್ಲಿ ಬರೋವರೆಗೂ ಅದನ್ನ ನೊಡಿದ್ದೀರಿ. ಸೋ ನೀವು ಕಂಡ ಹಾಗೆ ಆ ಇಡೀ ಮಾಲ್ಗುಡಿ ಡೇಸ್ ಪ್ರಾಸೆಸ್ ಹೇಗಿತ್ತು?


ಸಾವಂತ್: ಎಲ್ಲಾ ಪ್ಲಾನ್ಡ್ ಆಗಿರ್ತಿತ್ತು. ನಮ್ಮ ಅಸೋಸಿಯೇಟ್ ಗಳು ಅಲ್ಲಿ ಶೂಟಿಂಗ್ ಮುಗಿದ ತಕ್ಷಣ ಇಲ್ಲಿ ಬಂದು ಎಲ್ಲಾ ಪ್ಲಾನಿಂಗ್ ಮಾಡಿಬಿಡೋರು. ಸ್ಕ್ರಿಪ್ಟ್ ವರ್ಕ್ ಬಾಂಬೆಯಿಂದ ಬರ್ತಿತ್ತು. ಸ್ಕ್ರಿಪ್ಟ್ ವರ್ಕಿಂದ ಹಿಡ್ದು ಡಬ್ಬಿಂಗ್ ವರೆಗೂ ಎಲ್ಲರೂ ರೆಸ್ಟೆಲೆಸ್ ಆಗಿ ಮಾಡ್ತಾ ಇದ್ರು. ಅಂದ್ರೆ ಟೈಮಿಂಗ್ ನೋಡ್ಕೊಂಡು ಯಾರಿಗೂ ತೊಂದರೆ ಕೊಡ್ಬೇಕು ಅಂತೇನೂ ಇರ್ಲಿಲ್ಲ. “ನೀನು ಬಂದು ಮಾಡು, ನಮಿಗೆ ವಿಧಿನೇ ಇಲ್ಲ”ಆ ತರಯೇನಿಲ್ಲ. ಶಂಕರ್ ಸರ್ ಅವರು ವರ್ಕೊಹಾಲಿಕ್, ಹಾಗೆನೇ ಒಂದು ಇನ್ಸಿಡೆಂಟ್ ಹೇಳ್ತೀನಿ ನಿಮಗೆ. ಆಗ ನಾವು ಕೆಲ್ಸ ಮಾಡ್ಬೇಕಾದ್ರೆ ಕಂಟಿನ್ಯೂಯಸ್ಸಾಗಿ ನಮಗೆ ಬೆಳಗ್ಗೆ ಐದು ಗಂಟೆಗೆ ಎಚ್ಚರ ಆಗ್ಬಿಡೋದು. ಈಗ್ಲೂ ಕೂಡ ಈಗ ನನಿಗೆ 60-61 ನಡಿತಾ ಇದೆ. ಆಗ ನನಿಗೆ 25 ವರ್ಷ. ನೈಟ್ ಎಷ್ಟು ಗಂಟೆಗಾದ್ರೂ, ಶೂಟಿಂಗ್ ಮಾಡಿ ಮಲ್ಕೊಂಡ್ರೂ ಬೆಳಗ್ಗೆ ಐದು ಗಂಟೆಗೆ ಎಚ್ಚರ ಆಗ್ಬಿಡೋದು ನಮಗೆ. ಐದು ಗಂಟೆಗೆ ಯಾರು ಎಚ್ಚರಿಸ್ಲಿ ಬಿಡ್ಲಿ ಎಚ್ಚರ ಆಗ್ಬಿಡೋದು ನಮಗೆ.


ಒಂದಿವ್ಸ ಕಂಟಿನ್ಯೂಸ್ಸಾಗಿ ಶೂಟ್ ಮಾಡಿದ್ದೀವಿ ರಾತ್ರಿ 12.30ಕ್ಕೆ ಏನೋ ಶೂಟಿಂಗ್ ಮುಗಿದಿದೆ. ನಾವು ಬೆಳಗ್ಗೆ ‘ಅರಸಾಳುʼ ಗೆ ಹೋಗ್ಬೇಕಾಗಿತ್ತು. ಅಲ್ಲಿರೋದು ಒಂದೇ ರೈಲ್ವೇ ಸ್ಟೇಶನ್. ಆಗ 12.30ಕ್ಕೆ ಶೂಟಿಂಗ್ ಮುಗಿದಿದೆ. ನಾವು ರಾತ್ರಿ 2 ಗಂಟೆಗೆ ಅಲ್ಲೇ ಮಲ್ಕೊಂಡಿದ್ದೀವಿ. ಏನೋ ಶಬ್ದ ಕೇಳ್ತಿದೆ. “ಏ ಜಗ್ಗ ಹಾಕೋ, ಏ ಕಾಶಿ ಏನೋ ಮಾಡ್ತಿದ್ದೀಯ? ಹಾಕೊ ಎಲ್ಲೋ ಹಿಂಗೆ”… ಶಂಕರ್ ಸರ್ ವಾಯ್ಸ್ ಅದು. ನೋಡಿದ್ರೆ ಎಲ್ಲಾ ಟ್ರಕ್ಕಲ್ಲಿ ಲೋಡ್ ಆಗ್ತಿದೆ ಪ್ರಾಪರ್ಟೀಸ್, ಕಾಸ್ಟ್ಯೂಮ್ಸ್ ಎಲ್ಲಾ ಲೋಡ್ ಆಗ್ತಿದೆ. ಅವರೇ ಮುಂದೆ ನಿಂತ್ಕೊಂಡು ಎಲ್ಲ ಮಾಡಿಸ್ತಾ ಇದಾರೆ ಅಲ್ಲಿ. ಮೂರು ಗಂಟೆ ಅಷ್ಟೊತ್ತಿಗೆ ನಾವು ಎಲ್ಲಾ ಎದ್ದು, ಸರ್ ಎದ್ದಿದಾರೆ ಅಂತ್ಹೇಳಿ, ಎಲ್ಲಾ ಮಾಡ್ಕೊಂಡು ಆಗುಂಬೆಯಿಂದ ಅರಸಾಳುಗೆ ಹೊರಟ್ವಿ,


ಅರಸಾಳು ಇದ್ಯಲ್ಲ ಅಲ್ಲಿ ರೈಲ್ವೇ ಸ್ಟೇಶನಿಗೆ ಬೆಳಗ್ಗೆ ಆರು ಗಂಟೆಗೆ ಏನೋ ಟ್ರೇನ್ ಬರುತ್ತೆ. ಅದಕ್ಕಿಂತ ಮುಂಚೆ ನಾವು ಅಲ್ಲಿಗೆ ಹೋಗಿ ಎರಡು ಕ್ಯಾಮರಾಗಳನ್ನ ಫಿಕ್ಸ್ ಮಾಡಿಟ್ಕೊಂಡ್ವಿ ಫಸ್ಟ್. ಮಾನಿಟರ್ ಆಗೋದಿಕ್ಕಿಂತ ಮುಂಚೆ ಅದು ಟ್ರೇನ್ ಅಲ್ಲಿಂದ ಬರುತ್ತೆ. ಅದು ಟ್ರೇನ್ ಬರ್ಬೇಕಾದ್ರೆ ಅವಾಗ ವಾಕಿಟಾಕಿ ಬೇರೆ ಇರ್ಲಿಲ್ಲ ಇವಾಗಿನ್ತರ. ಮೊದ್ಲು ಅಲ್ಲೆಲ್ಲೋ ಕಾರ್ನರಲ್ಲಿ ಕ್ಯಾಮರಾ ಅವಾಯ್ಡ್ ಮಾಡಿ ಒಬ್ಬನ್ನ ಕೂರ್ಸೊದು, ಅವ್ನ ಕೈಯಲ್ಲಿ ಸಿಗ್ನಲ್ ಕೊಡಕ್ಕೆ. ಅವ್ನು ಹೀಗೆ ಟ್ರೇನ್ ಬರ್ತಾ ಇದೆ ಅಂತ ಸಿಗ್ನಲ್ ಕೊಡೋದು. ವಾಯ್ಸು ರೀಚ್ ಆಗಲ್ಲ ಅಲ್ವಾ. ಅದು ಬರ್ತಾ ಇದೆ ಅಂತಂದ್ರೆ, ಅದು ಬಂದ್ಮೇಲೆ ಎಷ್ಟು ದೂರ ಬರುತ್ತೆ? ಅದು ಬರುವಾಗ ಸ್ವಾಮಿ ಮತ್ತೆ ಅವ್ನ ಫ್ರೆಂಡ್ಸ್ ವಾಕಿಂಗ್ ರಿಹರ್ಸಲ್. ಅಷ್ಟೊತ್ತಿಗೆ ರಿಹರ್ಸಲೆಲ್ಲಾ ಮಾಡ್ಕೊಂಡು ಅದು ಟ್ರೇನ್ ಬಂತು ಅನ್ನುವಷ್ಟರಲ್ಲಿ ಇಲ್ಲಿ ಕ್ಯಾಮೆರಾ ಆನ್. ಎರಡು ಕ್ಯಾಮರಾ ತಗೊಂಡು ಒಂದನ್ನ ಇಂಜಿನ್ ಎಲ್ಲಿ ನಿಲ್ಲತ್ತೆ ಅಂತ ಮೊದಲೇ ತಿಳ್ಕೊಂಡು ಅದ್ರ ಹತ್ರ ಇಡೋದು. ಇನ್ನೊಂದು ಕ್ಯಾಮೆರಾ ಎಂಜಿನ್ ಶಾಟ್ಸ್ ಗಳು, ವೀಲ್ ದು, ಸ್ವಾಮಿ ಮತ್ತೆ ಅವ್ನ ಫ್ರೆಂಡ್ಸ್ ಜೊತೆ ಮಾತಾಡೊದು, ಇದೆಲ್ಲಾ ಶಾಟ್ಸ್ ಗಳು ಹದಿನೈದೇ ನಿಮಿಷದಲ್ಲಿ ಎಲ್ಲಾ ಕಂಪ್ಲೀಟ್ ಮಾಡ್ಬಿಟ್ವಿ. ಪಟಾ ಪಟಾ ಪಟಾ ಅಂತ. ಶಂಕರ್ ಸರ್ ಅವ್ರು ಒಂಥರಾ ಎಲೆಕ್ಟ್ರಿಸಿಟಿ ಅಂತ ಹೇಳ್ಬೋದು. ಅವರನ್ನ ‘ಮಿಂಚು ಅಂತಾನೇ ಹೇಳ್ಬೋದು. ಮಿಂಚಿನ ಓಟ ಅಂತಲ್ಲ, ಅವ್ರೇ ಒಂತರಾ ಮಿಂಚು. ಇಲ್ಲಿ ಪಟ್ ಅಂತ ಹೋದ್ರೆ ಅಲ್ಲಿರೋರು, ಆ ತರದಲ್ಲಿ ಅವ್ರು. ಶಾಟ್ ಕಟ್ ಅಂದ ತಕ್ಷಣ ಹುಡುಕಾಡಿದ್ರೆ ಅವ್ರು ಇರ್ತಿರ್ಲಿಲ್ಲ. ಅಲ್ಲೆಲ್ಲೋ ಇರೋರು. “ರಾಮು ಇಲ್ಬನ್ನಿ, ಕ್ಯಾಮರಾ ಇಲ್ಬನ್ನಿ”ಅಂತನ್ನೋರು. ಅಂತಾ ಫಾಸ್ಟ್ ಅವ್ರು. ಆಮೇಲೆ ನೋಡ್ತೀನಿ ಒಂದು ಅವರ್‌ ನಲ್ಲಿ ಇಡೀ ಒಂದಿವ್ಸದಲ್ಲಿ ಮಾಡ್ಬೇಕಾಗಿದ್ದ ಕೆಲ್ಸನೆಲ್ಲಾ ಕಂಪ್ಲೀಟಾಗಿ ಮುಗಿಸಿದ್ವಿ. ಆ ಶಾಟ್ ಆಯ್ತು ಈ ಶಾಟ್ ಆಯ್ತು ಇದು ಆಯ್ತು ಸುಮಾರು ಆರು ಸೀನ್ ದು ಶಾಟ್ಗಳು ಮುಗಿಸಿದ್ವಿ!! ಅಂತಾ ಫಾಸ್ಟ್ ಅವ್ರು.


ಪರಮ್: ಅರ್ಲಿ ಮಾರ್ನಿಂಗ್?


ಸಾವಂತ್: ಹೌದು ಅರ್ಲಿ ಮಾರ್ನಿಂಗ್. ಅದಾದ್ಮೇಲೆ ಲೊಕೇಷನ್ಗಳನ್ನೆಲ್ಲ ಚೇಂಜ್ ಮಾಡ್ಕೊಂಡು ಆ ಟ್ರೇನ್ ಸೀಕ್ವೆನ್ಸ್ ಏನಿದೆ ರೈಲ್ವೇ ಸ್ಟೇಶನ್ ದು ಯಾವ್ಯಾವ ಶಾಟ್ಗಳು ಬರುತ್ತೆ ಎಲ್ಲ ವಿತಿನ್ ಒನ್ ಅವರಲ್ಲಿ ಮುಗಿಸಿ, ನಾವು ಬೇರೆ ಲೊಕೇಷನ್ಗೆ ಹೋಗಿದ್ದು. ಹಂಗೆ ವರ್ಕೊಹಾಲಿಕ್ ಸರ್ ಅವ್ರು. ಕೆಲವೊಂದು ಜನ್ರಿಗೆ ಇರುತ್ತೆ ನಾನು ಡೈರೆಕ್ಟರು, ನಾನು ದೊಡ್ಡ ಸ್ಟಾರು ಅಂತೆಲ್ಲ. ಸರ್ ಈಗ ಅದಾಗಿ ಇಪ್ಪತ್ತೈದು ಮೂವತ್ತು ವರ್ಷ ಆಯ್ತು. ಅವ್ರನ್ನೂ ನೋಡಿದ್ದೀನಿ ಇವ್ರನ್ನೂ ನೋಡಿದ್ದೀನಿ ಹಳೇ ಆರ್ಟಿಸ್ಟ್ ಗಳು ಏನಾದ್ರು ಬಂದ್ರೆ ಈಗ್ಲೂ ಅವ್ರು ಹಂಗೇ ಇದ್ದಾರೆ. ನಯ ವಿನಯತೆ ಅವ್ರ ಡೆಡಿಕೇಶನು, ಪಂಕ್ಚುಯಾಲಿಟಿ ಅಂದ್ರೆ ಐದು ಗಂಟೆ ಅಂತ ಹೇಳಿದ್ರೆ ನಾಲ್ಕುವರೆಗೆನೇ ಬಂದಿರ್ತಾ ಇದ್ರು. ಹಿಂಗೆ ನಮಸ್ಕಾರ ಮಾಡ್ಬೇಕು ಅನ್ಸುತ್ತೆ. ಆದ್ರೆ ಈಗಿನವರಿಗೆ ಸ್ವಲ್ಪ ಈಗೋ ಪ್ರಾಬ್ಲಮ್ಮೋ ಏನೋ ಇದೆ.


ಮುಂದುವರೆಯುವುದು…

ಸಂದರ್ಶನ - ಕೆ.ಎಸ್ ಪರಮೇಶ್ವರ


42 views