ಶಂಕರ್‌ ನಾಗ್‌ ನನ್ನ ಮೊದಲ ಸಿನಿಮಾ ಪ್ರೊಡ್ಯೂಸರ್ ಮಾಡಲು ಕಾರಣ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 135

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ನಾನು ‘ಮಾಲ್ಗುಡಿ ಡೇಸ್ʼ ಅಲ್ಲಿ ಕೆಲವು ಎಪಿಸೋಡಿಗೆ ಕೆಲ್ಸ ಮಾಡ್ದೆ. ಅದಾದ್ಮೇಲೆ ಮತ್ತೆ ನನ್ನ ಜರ್ನಿ ಬೇರೆ ಆಗಿ ಹೋಯ್ತು, ನಾನು ಫ್ಯಾಕ್ಟರಿ ಇತ್ಯಾದಿಗಳಲ್ಲಿ ಮುಳುಗಿ ಹೋದೆ. ಈ ಮಧ್ಯೆ ಸುಮಾರು 1984 ರಲ್ಲಿ ನನಿಗೆ ಫ್ಯಾಕ್ಟರಿಯಿಂದ ಒಟ್ಟಿಗೆ 20 ಪರ್ಸಂಟಷ್ಟು ಬೋನಸ್ ಕೊಟ್ಬಿಟ್ರು. ಆ ಕಾಲದಲ್ಲಿ ಇಪ್ಪತ್ತು ಪರ್ಸಂಟ್ ಬೋನಸ್ ಅಂದ್ರೆ ಸರಿ ಸುಮಾರು ಇಪ್ಪತ್ತನಾಲ್ಕು ಸಾವಿರ ರೂಪಾಯಿಗಳು. ನನಿಗೆ ಬಹಳ ಖುಷಿಯಾಯ್ತು, ಒಂದು ಶಾರ್ಟ್ ಫಿಲಮ್ ಮಾಡ್ಬೇಕು ಅಂತ ಯೋಚ್ನೆ ಮಾಡ್ತಿದ್ದೆ.


ಅವತ್ತು ,ನೋಡಿ ಸ್ವಾಮಿ ನಾವಿರೋದೆ ಹೀಗೆ’ನಾಟಕದ ರಿಹರ್ಸಲ್ ಬೇರೆ ಇತ್ತು. ಅಲ್ಲಗೆ ಹೋದಾ ಗ ಶಂಕರ್ ಇದ್ರು. ನಾನು ಅವ್ರಿಗೆ ನಾನು ಬರೆದಿದ್ದಂತಹ ‘ಹಗ್ಗದ ಕೊನೆ’ಎಂಬ ಸ್ಕ್ರಿಪ್ಟ್ ರೀಡಿಂಗ್ ಕೊಟ್ಟೆ. “ಹೇ ಚೆನ್ನಾಗಿದೆಯಲ್ಲೋ ಸ್ಕ್ರಿಪ್ಟ್ ಏನ್ಮಾಡ್ತೀಯೋ?” ಅಂತ ಕೇಳಿದ್ರು. ನಾನು ಶಾರ್ಟ್ ಫಿಲ್ಮ್ ಮಾಡೋಣ ಅಂತ ಇದ್ದೀನಿ ಅಂದೆ. “ಹೌದೇನೋ ದುಡ್ಡು ಎಲ್ಲಾ ಹೆಂಗೆ ಮಾಡ್ತೀಯೋ?” ನಾನು ಬೋನಸ್ ಬಂದಿರುವ ವಿಷ್ಯ ಹೇಳ್ದೆ, ಏನೂ ತೊಂದರೆ ಇಲ್ಲ ಮಾಡಿಬಿಡೋದೇ ಅಂತ. “ ಹೇಯ್ ನಾಟಕ ಮುಗ್ದ ಮೇಲೆ ಎಲ್ಲೂ ಹೋಗ್ಬಾರ್ದು ಇಲ್ಲೇ ಇರ್ಬೇಕು” ಅಂದ್ರು. ನಾನು ಸರಿ ಅಂದೆ. ಲೈಟಿಂಗ್ ಮಾಡುವ ಸುರೇಂದ್ರನ ಜೊತೆಯಲ್ಲಿ ಕೂತಿದ್ದೆ. ನಾಟಕ ಮುಗಿದ ಮೇಲೆ ಸೈಡ್ ವಿಂಗ್ ಗೆ ಕರೆದರು. ನಾನು ಹೋದೆ, “ಇನ್ನೊಂದು ಸಲ ರೀಡಿಂಗ್ ಕೊಡು “ ಅಂದ್ರು, ನಾನು ರೀಡಿಂಗ್ ಕೊಟ್ಟೆ, ಸಣ್ಣಪುಟ್ಟ ಬದಲಾವಣೆಗಳನ್ನ ಹೇಳಿದ್ರು. ಆಮೇಲೆ “ಎಷ್ಟು ಖರ್ಚಾಗುತ್ತೋ?” ಅಂದ್ರು.


ನಾನು ಒಂದು ಎಂಟು ಸಾವಿರ ರೂಪಾಯಿ ಖರ್ಚಾಗ್ಬಹುದು ಅಷ್ಟೇ, ಇಪ್ಪತ್ತನಾಲ್ಕು ಸಾವಿರ ರೂಪಾಯಿ ಇದೆ ತೊಂದರೆ ಇಲ್ಲ ಅಂದೆ. “ಬಡ್ಡಿಮಗನೆ ನಿನ್ನ ದುಡ್ಡನ್ನ ನೀನು ಮುಟ್ಟುವ ಹಾಗೇ ಇಲ್ಲ, ನಿನ್ನ ಅಮ್ಮ ನಿನ್ನನ್ನ ಎಷ್ಟು ಕಷ್ಟ ಪಟ್ಟು ಬೆಳ್ಸಿದಾಳೆ ಗೊತ್ತಾ? ಆ ದುಡ್ಡನ್ನ ಪೂರ್ತಿ ತಗೊಂಡು ಹೋಗಿ ನಿಮ್ಮ ಅಮ್ಮನ ಕೈಗೆ ಕೊಡ್ಬೇಕು ನೀನು, ತಗೋ”ಅಂತ ಎಂಟು ಸಾವಿರ ರೂಪಾಯಿ ಚೆಕ್ ಕೊಟ್ಟು ಬಿಟ್ರು. ನಾನು ಇದ್ಯಾಕೆ ನೀವು ಕೊಡ್ತಾ ಇದ್ದೀರ? ಅಂದೆ “ಇಲ್ಲ ನೀನು ತಗೊ ಈ ದುಡ್ಡಲ್ಲಿ ನೀನು ಸಿನಿಮಾ ಮಾಡ್ಕೊ ಇದು ಸಂಕೇತ್ ಪ್ರೊಡಕ್ಷನ್, ನೀನು ಮಾಡ್ತಿದ್ದೀಯ ಸಿನಿಮಾ” ಅಂದ್ರು. ಹಾಗಾಗಿ ನನ್ನ ಮೊದಲ ಶಾರ್ಟ್ ಫಿಲ್ಮ್ ‘ಹಗ್ಗದ ಕೊನೆ’ಸಂಕೇತ್ ಪ್ರೊಡಕ್ಷನ್ ಇಂದ ಚಿತ್ರೀಕರಣ ಆಯ್ತು, ಸುಂದರರಾಜ್ ಸುವರ್ಣ ಕ್ಯಾಮರಾ ಮ್ಯಾನ್ ಆಗಿದ್ದ.


ಇವತ್ತು ಪ್ರಖ್ಯಾತ ನಟ ಆಗಿರುವ ‘ಮಂಜುನಾತ್ ಹೆಗಡೆ’ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ ಶಾರ್ಟ್ ಫಿಲ್ಮ್ ಆಗಿತ್ತು. ಆ ಶಾರ್ಟ್ ಫಿಲ್ಮ್ ಗೆ ಸುಚಿತ್ರಾ ಫಿಲ್ಮ್ ಸೊಸೈಟಿಯ ಕಿರು ಚಿತ್ರೋತ್ಸವದಲ್ಲಿ ಮೂರನೆಯ ಅತ್ಯುತ್ತಮ ಚಿತ್ರ ಅಂತ ಪ್ರಶಸ್ತಿ ಬಂತು. ಕಲ್ಕತ್ತಾ ಹಾಗೂ ಕೇರಳದ ಕಿರುಚಿತ್ರೋತ್ಸವದಲ್ಲಿ ಕೂಡ ಕಳಿಸಿದ್ದೆ, ಸುಮಾರು ಒಳ್ಳೆಯ ಮರ್ಯಾದಿ ಬಂತು. ಆ ಮೇಲೆ ಶಂಕರ್ ಮತ್ತು ಆ ತಂಡಕ್ಕೆ ಹತ್ರ ಆಗ್ಬಿಟ್ವಿ. ಅವ್ರಿಗೂ ಕೂಡ ಈ ಹುಡುಗ ಏನೋ ಪ್ರಯತ್ನ ಮಾಡ್ತಾನೆ ಅಂತ ಒಳ್ಳೆಯ ಅಭಿಪ್ರಾಯ ಇತ್ತು.ಮುದುವರೆಯುವುದು…

45 views