ಶಿಕ್ಷಕರ ಬಗ್ಗೆ ದಯಾನಂದ್‌ ಮಾತು

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 4ಮಿಸ್‌ ಡೊರೆಸ್‌ ಎಂಬ ಟೀಚರ್‌ ಇದ್ರು. ಅವರೇ ಮೊದಲು ನನ್ನ ಪ್ರತಿಭೆಯನ್ನು ಗುರುತಿಸಿದ್ದು. ಅವರು ನನ್ನ ತಾಯಿಯನ್ನು ಕರೆಸಿ, ಇವನು ನನ್ನ ಮಗನಾಗಿದ್ರೆ, ಪೂನಾ ಫಿಲ್ಮ್‌ ಇನ್‌ಸ್ಟಿಟ್ಯೂಷನ್‌ಗೆ ಸೇರಿಸುತ್ತಿದ್ದೆ ಎಂದ್ರು. ಅವರು ಯಾಕೆ ಹಾಗೆ ಹೇಳಿದ್ರು ಅಂದ್ರೆ, ಅವರೊಮ್ಮೆ ಲೆಕ್ಕ ಕೇಳಿದ್ರು. ಮರದ ಮೇಲೆ ನಾಲ್ಕು ಗಿಣಿ ಕೂತಿದೆ. ಎರಡನ್ನು ಗಿಡುಗ ಹೊಡೆದು ಹಾಕಿದೆ. ಬಾಕಿ ಉಳಿದದ್ದು ಎಷ್ಟು ಎಂದ್ರು. ಒಬ್ಬೊಬ್ರು ಒಂದೊಂದು ರೀತಿಯ ಉತ್ತರ ಕೊಟ್ರು. ನಾನು ಮಾತ್ರ, ಎಲ್ಲ ಹಾರಿ ಹೋಯ್ತು. ಒಂದು ಮಾತ್ರ ಇದೆ ಎಂದೆ. ಅದ್ಯಾಕೆ ಒಂದಿದೆ ಅಂದ್ರು. ಅದಕ್ಕೆ ಕಿವುಡು ಶಬ್ದ ಕೇಳಲ್ಲ ಅಂದೆ. ನನ್ನದು ಅತಿಯಾದ ಕಲ್ಪನೆ. ನಾನು ಇದಿದ್ದೇ ಹಾಗೆ. ಯಾರ ಮಾತನ್ನು ಕೇಳದೇ ನನ್ನದೇ ಪ್ರಪಂಚದಲ್ಲಿ ಇದ್ದೆ. ಹಾಗಾಗಿ ಅವರು ಅಮ್ಮನ ಬಳಿ ಇವನನ್ನು ನಟನಾಗಿ ಮಾಡಿ ಎಂದ್ರು. ಅದಕ್ಕೆ ಹೇಳುವುದು ಶಿಕ್ಷಕರು ತುಂಬಾ ಶ್ರೇಷ್ಠ. ಅವರು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನಾಗುತ್ತಾರೆ ಎಂಬುದನ್ನು ಬಹುಬೇಗ ಲೆಕ್ಕ ಹಾಕಿ ಬಿಡುತ್ತಾರೆ.


ಇನ್ನೊಬ್ಬ ವಿದ್ಯಾರ್ಥಿ ಬರಿಯೋ ಎಂದ್ರೆ ಪೆನ್ಸಿಲ್‌ ಕೆತ್ತುತ್ತ ಕೂತಿದ್ದ. ಸೌದೆ ಅಂಗಡಿ ಇಟ್ಕೊ ನೀನು ಟಿಂಬರ್‌ ಮರ್ಜೆಂಟ್‌ ಆಗು ಅಂದಿದ್ರು. ಇವತ್ತು ಅವನು ಮೈಸೂರಿನಲ್ಲಿ ಟಿಂಬರ್‌ ಮರ್ಜೆಂಟ್‌ ಆಗಿದ್ದಾನೆ. ಇನ್ನೊಬ್ಬ ಬ್ಲೇಡ್‌ ತಗೊಂಡು ಯಾರಿಗೊ ಒಬ್ಬನಿಗೆ ಕುಯ್ದಿದ್ದ. ಮಾಂಸದ ಅಂಗಡಿ ಇಡು ನೀನು ಅಂದಿದ್ರು. ಅವನು ಈಗ ಮಾಂಸದಂಗಡಿಯನ್ನೇ ಇಟ್ಟಿದ್ದಾನೆ. ಮತ್ತೊಬ್ಬ ಯಾವಾಗಲೂ ಲೇಟಾಗಿ ಬಂದು ತರಗತಿಯಿಂದ ಹೊರಗೆ ನಿಂತಿರುತ್ತಿದ್ದ. ನೀನು ರೈಲ್ವೆ ಸ್ಟೇಷನ್‌ನಲ್ಲಿ ಸೈಕಲ್‌ ಕಾಯ್ದುಕೊಂಡು ನಿಲ್ಲು ಅಂತಿದ್ರು. ಈಗ ಅವನು ಅದೇ ಕೆಲಸ ಮಾಡುತ್ತಿದ್ದಾನೆ. ತಂದೆ, ತಾಯಿಗೆ ಮಕ್ಕಳು ಏನಾಗುತ್ತಾರೆ ಎಂಬುದು ಗೊತ್ತಿರುವುದಿಲ್ಲ. ಆದರೆ ಶಿಕ್ಷಕರಿಗೆ ಗೊತ್ತಿರುತ್ತದೆ.ಮುಂದುವರೆಯುವುದು...

18 views