
ಶೂಟಿಂಗ್ ಗೆ ಲೇಟಾಗಿ ಬರುತ್ತಿದ್ದಕ್ಕೆ ಅಂಬಿ ಕೊಡುತ್ತಿದ್ದ ಕಾರಣಗಳು ವಿಚಿತ್ರ
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 39
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಅಂಬರೀಷ್ಗೆ ಪ್ರತಿದಿನವೂ ಮಟನ್ ಬೇಕಿತ್ತು. ಅವನು ತಿನ್ನದೇ ಇರುವ ದಿವಸವೇ ಇರಲಿಲ್ಲ. ಹನ್ನೆರಡು ಗಂಟೆಗೆ ಶೂಟಿಂಗ್ಗೆ ಬಂದಿದ್ದ. ಒಂದು ಗಂಟೆಗೆ ಊಟದ ಬ್ರೇಕ್ ಇತ್ತು. ಅವತ್ತು ಗುರುವಾರ ಊಟದ ಡಬ್ಬಿ ತಂದು ಇಟ್ಟಿದ್ದ. ರಾಜ್ಕುಮಾರ್ ಅವರನ್ನು ಕರೆದು, ಅಣ್ಣಾ ಇವತ್ತು ನನ್ನ ಜೊತೆ ಊಟ ಮಾಡಬೇಕು ಎಂದರು. ಇವತ್ತು ಗುರುವಾರ ಇವತ್ತು ನಿನ್ನ ಜೊತೆ ಬರುವುದಕ್ಕೆ ಆಗೋಲ್ಲ ಅಂದ್ರು ರಾಜ್ಕುಮಾರ್. ಏನು ಗುರುವಾರ, ಇವತ್ತು ನನ್ನ ಜೊತೆ ಊಟ ಮಾಡಲೇಬೇಕು ಎಂದ ಅಂಬರೀಷ್. ಅವರು ಬರಲ್ಲ ಎಂದ್ರು. ಬರದಿದ್ರೆ ನಾನು ಸುಮ್ನೆ ಬಿಡೋಲ್ಲ ಎಂದು... ಗೊತ್ತಲ್ಲ ಅವನ ಲಾಂಗ್ವೇಜ್ ಶುರುಮಾಡಿಕೊಂಡ. ನನ್ನ ಜೊತೆ ಊಟ ಮಾಡಬೇಕು ಎಂದ್ರೆ ಮಾಡಬೇಕು ಅಷ್ಟೆ. ವಾರ, ತಿಥಿ ನೋಡೊ ಜಾಯಮಾನ ನಂದಲ್ಲ. ನೀವು ಮಾಡಬಾರದು ಎಂದು ಬನ್ನಿ ಎಂದು ಎಳೆದುಕೊಂಡ ಹೋದ. ಅವರು ಸ್ವಲ್ಪ, ಸ್ವಲ್ಪನೇ ತಿಂದರಂತೆ. ಅವನ ಸಂತೃಪ್ತಿಗೆ ತಿಂದೆ ನಾನು. ನನ್ನ ವೃತ್ತ ಮುರಿದ ಹಾಗೆ ಆಯ್ತಲ್ಲಾ ಅದು ನನಗೆ ಖೇದ ಅಂದ್ರು. ನಾನು ಸಮಾಧಾನದ ಮಾತುಗಳನ್ನಾಡಿದೆ.
ಪ್ರತಿದಿನವೂ ಅಂಬರೀಷ್ ಶೂಟಿಂಗ್ ಬರುತ್ತಿದ್ದುದೇ ಹನ್ನೊಂದು ಗಂಟೆ ಮೇಲೆ. ಅಷ್ಟರೊಳಗೆ ಬೇರೆ ಶಾಟ್ ಮುಗಿಸುತ್ತಿದ್ದೆ. ಟಿ.ವಿ ಸೀರಿಯಲ್ ತರಹ ಶೂಟ್ ಮಾಡುತ್ತಿದ್ದೆ. ಒಂದೊಂದು ದಿವಸ ಒಂದೊಂದು ಕಾರಣ ಹೇಳುತ್ತಿದ್ದ. ಅದು ಕೂಡ ಬಹಳ ಚೆನ್ನಾಗಿರುತ್ತಿತ್ತು.
ಒಂದು ದಿವಸ 12.30ಗೆ ಶೂಟಿಂಗ್ಗೆ ಬಂದ. ಇನ್ನರ್ಧ ಗಂಟೆಗೆ ಬ್ರೇಕ್ ಆಗುತ್ತೆ ಎಂದು ಹೇಳಿದ್ರೆ. ನಾನು ಮೇಕಪ್ ಮಾಡಿ ಕೂತಿರುತ್ತೇನೆ. ಬ್ರೇಕ್ ಆದ ಮೇಲೆ ಶೂಟಿಂಗ್ ಮಾಡಿ ಎಂದ. ಯಾಕಿಷ್ಟು ಲೇಟ್ ಅಂದೆ. ಅದಕ್ಕೆ ಅವನು, ರಾತ್ರಿ ಒಂದು ಕಥೆ ಆಯ್ತು. ನಾವು ಮಲಗುವ ದಿಂಬ್ಬಿನ ಅಡಿಯಲ್ಲಿ ಗೋದ್ರೆಜ್ ಕೀ ಇಟ್ಟಿರುತ್ತೇವೆ ಎಂಬುದು ನಮ್ಮ ಡ್ರೈವರ್ಗೆ ಗೊತ್ತಿತ್ತು. ಅವನು ದಿಂಬ್ಬಿನ ಕೆಳಗಿನಿಂದ ಗೋದ್ರೆಜ್ ಕೀ ತೆಗೆದುಕೊಂಡು, 15 ಸಾವಿರ ಎಗರಿಸಿಕೊಂಡು ಹೋಗಿದ್ದಾನೆ. ಸ್ವಲ್ಪ ಒಡವೆಗಳು ಹೋಯ್ತು. ಅವನನ್ನು ಎಲ್ಲ ಕಡೆ ಹುಡುಕಿಸಿದೆ. ಹಾಗಾಗಿ ಸಮಯವಾಯ್ತು. ಈ ಘಟನೆ ಆಗದಿದ್ರೆ 11 ಗಂಟೆಗೆಲ್ಲ ನಾನು ಬಂದುಬಿಡುತ್ತಿದ್ದೆ ಎಂದ. ನಾವೆಲ್ಲ ಅಯ್ಯಯ್ಯೋ ಅಂದೆವು.
ಸ್ವಲ್ಪ ಹೊತ್ತಿನ ಬಳಿ ಊಟ ಕಳುಹಿಸಿದ್ದೇನೆ ಎಂದು ಸುಮಲತಾ ಅವರಿಂದ ಫೋನ್ ಬಂತು. ನಾನು ಫೋನ್ ರಿಸೀವ್ ಮಾಡಿದೆ. ನಿಮ್ಮನೇಲ್ಲಿ ಕಳುವಾಗಿದ್ದ ಒಡವೆ, ದುಡ್ಡು ಸಿಕ್ಕಿದೆ ಅಂತಲ್ವಾ ಕಂಗ್ರಾಟ್ಸ್ ಎಂದು ಹೇಳಿದೆ. ಆಗ ಅವರು, ಯಾರು ಹೇಳಿದ್ದು ನಿಮಗೆ ಅಂದ್ರು. ನಿಮ್ಮ ಯಜಮಾನ್ರು ಹೇಳಿದ್ರು ಅಂದೆ. ಅದಕ್ಕವರು ನಿಮಗೆ ಗೊತ್ತಿಲ್ವಾ ಭಗವಾನ್ ಅವರ ಕಥೆ. ಅವರು ಎದಿದ್ದೆ 12 ಗಂಟೆಗೆ. ಸ್ನಾನ ಮಾಡಿ, ಬಟ್ಟೆ ಹಾಕಿಕೊಂಡು ಲೇಟಾಯ್ತು ಎಂದು ಓಡಿ ಹೋದ್ರು. ನೀವು ಅವರ ಕಥೆಯೆಲ್ಲ ನಂಬುತ್ತೀರಲ್ಲಾ, ಯಾವ ಡ್ರೈವರು ನಮ್ಮನೆಯಿಂದ ಏನು ತೆಗೆದುಕೊಂಡು ಹೋಗಿಲ್ಲ ಎಂದು ಆಕೆ ನಗು ನಗುತ್ತಾ ಹೇಳಿದ್ರು. ನನಗೂ ನಗು ಬಂತು. ಅಂಬರೀಷ್ಗೆ ಎಷ್ಟು ಚೆನ್ನಾಗಿ ಕಥೆ ಕಟ್ಟುತ್ತೀಯ ನೀನು ಎಂದೆ. ಸುಮ್ನಿರಿ, ಯಾರಿಗೂ ಹೇಳಬೇಡಿ. ಮತ್ತೆ ನಾನು ಸುಳ್ಳು ಹೇಳ್ತೇನೆ ಅಂದುಕೊಳ್ತಾರೆ ಎಂದ.
ನಾಳೆ ಎಷ್ಟು ಗಂಟೆಗೆ ಶೂಟಿಂಗ್ ಬರಬೇಕು ಎಂದು ಕೇಳಿದ. 9 ಗಂಟೆಗೆ ಬಂದು ಬಿಡು ಎಂದೆ. ಅದಕ್ಕೆ ರಾಜ್ಕುಮಾರ್ ಅವರ ಹತ್ತಿರ, ನೋಡಿ ನಿಮ್ಮ ಡೈರೆಕ್ಟರ್ 9 ಗಂಟೆಗೆ ಬರೋದಕ್ಕೆ ಹೇಳುತ್ತಿದ್ದಾರೆ ಎಂದ. ಅದಕ್ಕವರು ‘ಡೋಂಟ್ ಕೇರ್, ಕಮ್ ಎಟ್ ಎನಿ ಟೈಂ’ ಎಂದ್ರು. ಅವರು ಹೇಳಿದ್ರು. ಅದಕ್ಕವನು ಕೇಳಿದ್ರಾ, ನಾನು ಎಷ್ಟು ಗಂಟೆಗೆ ಬರುತ್ತೀನೋ ಅಷ್ಟು ಗಂಟೆಗೆ ಶೂಟಿಂಗ್ ಶುರು ಮಾಡಿ ಅಂದ. ನನಗೆ ನಕ್ಕು, ನಕ್ಕು ಸಾಕಾಯ್ತು. ಮಾಮೂಲಿಯಂತೆ 11 ಗಂಟೆಗೆ ಬರ್ತೇನೆ ಎಂದು ಹೇಳಿ ಹೊರಟುಹೋದ. ಅಂಬಿ ಇದ್ರೆ ನಗು, ನಗು... ಅಷ್ಟೆ. ಕೋಪದಲ್ಲಿ ಮಾತಾಡುವ ಶೈಲಿ, ನಿಜವಾಗಿಯೂ ಅದರಲ್ಲಿ ಕೋಪ ಇರುವುದಿಲ್ಲ. ಆತ್ಮೀಯತೆಯನ್ನು ಬೆರೆಸಿದ ಕೋಪ ಇರುತ್ತದೆ.
ಮುಂದುವರೆಯುವುದು...