“ಶೂಟಿಂಗ್ ನಲ್ಲಿ ತೇಲಿ ಹೋದ ಕ್ಯಾಮೆರಾ”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 7

(ಶಂಕರ್ ನಾಗ್ ಆತ್ಮೀಯ ಗೆಳೆಯ ಜಗದೀಶ್ ಮಲ್ನಾಡ್ ಅವರ ನೆನಪುಗಳು)ಶೂಟಿಂಗ್‌ ನಡೆಯುವಾಗ ಬೇಕಾದ್ದನ್ನೆಲ್ಲ ಒದಗಿಸುವವರು ಇವರೆ

ಜಗದೀಶ್: ನನಗೆ ಎಸ್ಪೆಷಲ್ಲಿ ಪ್ರೊಡಕ್ಷನ್ ಮಾಡ್ಬೇಕಾದ್ರೆ, ಏನೇ ಕೇಳ್ಳಿ, ಅಸಾಧ್ಯವಾದದ್ದನ್ನೇ ಕೇಳಿದ್ರೂ, ಇಲ್ಲಂತ ಹೇಳಲ್ಲ. ಹೇಳ್ಳೂ ಬಾರ್ದು. ಅದರ ಬಗ್ಗೆ ಯೋಚನೆ ಮಾಡ್ಬೇಕು. ಆಗುತ್ತೋ ಆಗಲ್ವೋ ಅಂತ. ಅದಾದ್ಮೇಲೆ ಅದನ್ನ ಹೇಗೆ ಸಂಪಾದನೆ ಮಾಡೊದು? ಅದು ಎರಡ್ನೇ ಯೋಚನೆ. ಹೇಗೆ ಸಂಪಾದನೆ ಮಾಡ್ಬೇಕು, ಅಂತ ತಲೆಗೆ ಬಂದ್ರೆ, ಅದರ ಕಡೆ ಹೋಗ್ಬೇಕು. ಇಂಥ ಜಾಗದಲ್ಲಿ ಸಿಗಬಹುದು ಅಂತ ಅನಿಸಿದ್ರೆ ಆ ಕಡೆ ಹೋಗ್ಬೇಕು. ಅಲ್ಲಿ ಸಿಗಬಹುದಾ? ಸಿಗಲ್ವಾ? ಅಂತ ಯೋಚ್ನೆ ಮಾಡಿದ್ರೆ ನಮ್ಮ ಕೆಲ್ಸ ಆಗಲ್ಲ. “ಇಲ್ಲ ಸಿಗಲ್ಲ. ಆಗಲ್ಲ” ಅಂತ ಹೇಳೊದು ಸುಲಭ. ಅದು ಪ್ರೊಡಕ್ಷನ್ ಅವ್ರ ಚಾಲೆಂಜ್ ಅಲ್ಲ. ಹೋಗ್ಬೇಕು, ಅಪ್ರೋಚ್ ಮಾಡ್ಬೇಕು, ಸಾಮಾನ್ಯವಾಗಿ ಹೋದ್ರೆ ಕೆಲಸ ಆಗುತ್ತೆ. ಅಂಟಿಲ್ ಗವರ್ನಮೆಂಟ್ ರಿಸ್ಟ್ರಿಕ್ಷನ್ ಏನಾದ್ರು ಇದ್ರೆ ಆಗಲ್ಲ. ಅದಲ್ಲದೆ ಸಿನ್ಸಿಯರ್ ಅಪ್ರೋಚ್ ಇತ್ತು ಅಂದ್ರೆ ಕೆಲ್ಸ ಆಗಲ್ಲ ಅಂತೇನಿಲ್ಲ. ಹೋಗ್ಬೇಕು, ಗವರ್ನಮೆಂಟ್ ಆಫೀಸರ್ಸ್ ಹತ್ರ ಎಲ್ಲಾ ಮಾತಾಡ್ಬೇಕು.


ಒಂದು ಸಲ ಚೀಫ್ ಕನ್ಸರ್ವೇಟಿವ್ ಆಫಿಸರ್ ಹತ್ರ ಮಾತಾಡಕ್ಕೆ ಹೋಗ್ತಿದ್ದೆ, ನನಗೆ ಆಗ 25 ವರ್ಷ ವಯಸ್ಸು, ಅವ್ರೆಲ್ಲಾ ದೋಡ್ಡ ಪೊಸಿಷನ್ ಅಲ್ಲಿರೋರು. ಅವ್ರನ್ನೆಲ್ಲ ಕನ್ವಿನ್ಸ್ ಮಾಡಿ ಪರ್ಮಿಷನ್ ತಗೊಂಡು ಬರ್ತಿದ್ದೆ. ಹೇಗಿತ್ತು ಅಂದ್ರೆ, ಹೇಳ್ಕೊಳಕ್ಕೆ ಖುಷಿಯಾಗುತ್ತೆ, ಏನಾದ್ರೂ ರಿಕ್ವಾಯ್ರ್ಮೆಂಟ್ ಇತ್ತು ಅಂದ್ರೆ “ಹೇಳ್ಬಿಡ್ರಪ್ಪ ಜಗ್ಗನಿಗೆ”ತಕ್ಷಣ ಜಗ್ಗ ಅಲ್ಲಿರಲ್ಲ, ಕೂಡಲೇ ಬುಲೆಟಲ್ಲಿ ಹೊರಡ್ತಿದ್ದೆ. ಆಮೇಲೆ ವಾಪಸ್ ಬರೋದು ಕೆಲ್ಸ ಮುಗಿಸಿಕೊಂಡೇ. ಅಂದ್ರೆ ಹಂಡ್ರಡ್ ಪರ್ಸೆಂಟ್ ಗ್ಯಾರೆಂಟಿ. “ಜಗ್ಗನಿಗೆ ಹೇಳಿದ್ರೆ ಕೆಲ್ಸ ಆಗುತ್ತೆ” ಅಂತ. ಎಲ್ಲೂ ಕೆಲ್ಸ ಆಗುತ್ತೋ? ಇಲ್ವೋ? ಅನ್ನೋ ಅಪನಂಬಿಕೆ ಇರ್ತಿರ್ಲಿಲ್ಲ.


ಒಂದು ದೊಡ್ಡ ಜಾತ್ರೆ ಸೀನಲ್ಲಿ ಆನೆ, ಕುದುರೆ ಗಳೆಲ್ಲಾ ಬಂದಿತ್ತು. ಲೋಕಲ್ ಜನಗಳನ್ನ ಅರೇಂಜ್ ಮಾಡ್ಬೇಕಾಗಿತ್ತು. ನಾನು ‘ರಮೇಶ್ ಬೇಗಾರ’ ಅಂತ ಹೇಳಿದ್ನಲ್ಲ ಅವ್ನನ್ನ ಅಪ್ರೋಚ್ ಮಾಡಿ, ‘ಪಡಿಯಾರ್’ ಗೂ ಹೇಳಿ, ಸುತ್ತಮುತ್ತಲಿಂದ ಜನ ಅರೇಂಜ್ ಮಾಡಿದ್ವಿ. ನೀವು ಆ ಸೀನ್ ನೋಡಿದ್ರೆ ಗೊತ್ತಾಗುತ್ತೆ. ಇಷ್ಟೊಂದು ಜನ ಇದ್ದಾರಾ? ಅಂತ ಅನ್ಸುತ್ತೆ. ಅವ್ರಿಗೆ ಊಟ ತಿಂಡಿ ಅರೇಂಜ್ ಮಾಡ್ಬೇಕು. ಅವ್ರಿಗೆ ಬಂದು ಹೋಗೊ ವ್ಯವಸ್ಥೆ ಮಾಡ್ಬೇಕು.


ಮಾಲ್ಗುಡಿಯಲ್ಲಿ ಆಕ್ಟ್‌ ಮಾಡಲು ಬಂದ ಜನ ಸಾಗರ

ಆಮೇಲೆ ಇನ್ನೊಂದು ’ರಿಪ್ಪನ್ ಪೇಟ್‘ ಅಂತ ಹಳೇದೊಂದು ಬ್ರಿಟೀಷರ ಕಾಲದ ಬ್ರಿಡ್ಜ್, ಸ್ವಾತಂತ್ರ ಪೂರ್ವದ್ದು. ಆ ಸೀನಿಗೆ ಸಾವಿರ ಜನ ಬೇಕು ಅಂತ ಆಯ್ತು. ನಮ್ಮ ಲಿಮಿಟೇಶನಲ್ಲಿ ಸಾವಿರ ಜನನ ಕರ್ಸೋದು ಹೇಗೆ? ಹತ್ತು ಹದಿನೈದು ಜನ ಇಟ್ಕೊಂಡು ಮಾಡಕ್ಕಾಗಲ್ಲ. ಯಾಕಂದ್ರೆ ಆಜಾಗ ದೊಡ್ಡದು. ಹತ್ತಿಪ್ಪತ್ತು ಬಸ್ ಮಾಡಕ್ಕಾಗುತ್ತ? “ಏನು ಮಾಡ್ಬೇಕು?” ಅಂತ ಎಲ್ಲರೂ ಸೇರಿ ಡಿಸ್ಕಸ್ ಮಾಡಿದ್ವಿ. ಊರಲ್ಲೆಲ್ಲ ಹೇಳ್ಕೊಂಡು ಬರೋದು, ಪಾಂಪ್ಲೆಟ್ ಹಂಚೊದು. ಈ ತರ ಎಲ್ಲ ಮಾಡಿದ್ರೆ ಏನಾದ್ರೂ ಆಗಬಹುದು, ಅಂತ ಒಂದು ಪಾಸಿಟಿವ್ ಥಿಂಕಿಂಗ್ ಅಷ್ಟೆ. ಹಾಗೆ ಪಾಂಪ್ಲೆಟ್ ಹಂಚಿದ್ವಿ, “ದೇಶದ ಪ್ರತಿಷ್ಟಿತ ಚಾನೆಲ್ ದೂರದರ್ಷನದಲ್ಲಿ ಕನ್ನಡದವರಿಗೆ ಒಳ್ಳೆ ಅವಕಾಶ ಸಿಕ್ಕಿದೆ. ಅದಕ್ಕೆ ನೀವೆಲ್ಲ ಸಪೋರ್ಟ್ ಮಾಡಿದ್ರೆ, ನಾವು ಇದನ್ನ ಇನ್ನೂ ಮುಂದಕ್ಕೆ ತಗೊಂಡು ಹೋಗ್ಬಹುದು. ದಯವಿಟ್ಟು ಎಲ್ಲಾರು ಬಿಳಿ ಪಂಚೆ, ಬಿಳಿ ಜುಬ್ಬ, ಹಾಗೂ ಬಿಳಿ ಟೋಪಿ ಹಾಕೊಂಡು ಬನ್ನಿ. ಊಟ ತಿಂಡಿ ವ್ಯವಸ್ಥೆ ನಾವು ಮಾಡ್ತೀವಿ” ಅಂತ.


ಒಂದು ಇನ್ನೂರು ಮುನ್ನೂರು ಜನ ಬರ್ಬೋದು, ಅಂತ ಅದಕ್ಕೆ ಬೇಕಾದ ಕಿಚನ್ ರಡಿ ಮಾಡ್ಕೊಂಡಿದ್ವಿ. ಎರಡು ಲಾರಿ ಇಟ್ಕೊಂಡಿದ್ವಿ. ಅಲ್ಲಿಂದ ಐದಾರು ಕಿಲೋಮೀಟರ್ ದೂರ, ಸಾಗರ ಕ್ಕೆ ಹೋಗುವ ರೂಟಲ್ಲಿ ಲೊಕೇಶನ್. ನಂಗೆ ಇದ್ದ ಇಮ್ಯಾಜಿನೇಶನ್ನಲ್ಲಿ ನಾನೇ ಹುಡುಕಿದ್ದೆ ಆ ಲೊಕೇಶನನ್ನ. ಆಗ ಫೋಟೊ ತಂದು ತೋರ್ಸೊದು ಎಲ್ಲ ಅಗ್ತಿರ್ಲಿಲ್ಲ. ವಾಟ್ಸಾಪ್ ಮಾಡುವಂಗಿರ್ಲಿಲ್ಲ. ಫೋಟೊ ತೆಗೆದ್ರೆ, ಪ್ರೋಸೆಸ್ ಆಗಿ, ಪ್ರಿಂಟಾಗಿ ಬರ್ಬೇಕು. ಅದೆಲ್ಲ ಇರ್ಲಿಲ್ಲ. ಬಂದು ಲೊಕೇಶನ್ ನೋಡಿ, ಒಕೆ ಮಾಡಿ, ಅಲ್ಲಿ ಶೂಟಿಂಗ್ ಮಾಡೊದೂಂತ ಆಯ್ತು.


ಅಲ್ಲಿ ನೋಡಿದ್ರೆ ನಂಬಕ್ಕಾಗೋದಿರುವಷ್ಟು ಜನ ಬಂದ್ಬಿಟ್ರು. ಸಾವಿರಾರು ಜನ ಬಂದ್ಬಿಟ್ರು. ಅವರನ್ನೆಲ್ಲಾ ಲಾರಿಯಲ್ಲಿ ಕರ್ಕೊಂಡೋಗಿ ಬಿಟ್ಟು ಬರೋದು, ಎಷ್ಟು ಜನ ಬಂದಿದ್ದಾರೆ ಅಂತ ನೋಡಿ ಅಡುಗೆ ಭಟ್ಟರಿಗೆ ಹೇಳಿ, ರಾಷನ್ ಅರೇಂಜ್ ಮಾಡಿ, ಅಲ್ಲೇ ಊಟಕ್ಕೆ ರಡಿ ಮಾಡೋದು. ನೀವು ಎಪಿಸೋಡ್ ನೋಡಿದ್ರೆ ಗೊತ್ತಾಗುತ್ತೆ ‘ಸ್ವಾಮಿ ಆಂಡ್ ಫ್ರೆಂಡ್ಸ್’ ಐದನೇ ಎಪಿಸೋಡಲ್ಲಿ ಅಷ್ಟು ಜನ ಬಂದ್ರು ಅಂತ. ಸುತ್ತ ಕಣ್ಹಾಯಿಸಿದ್ರೆ ಎಲ್ಲಾ ಕಡೆ ಜನನೇ, ಅಷ್ಟು ಜನ ಬಂದಿದ್ರು. ಅಷ್ಟು ಜನಕ್ಕೆ ಊಟ ತಿಂಡಿ ವ್ಯವಸ್ಥೆ ಮಾಡಿದ್ವಿ. ಎಲ್ಲಾರೂ ಸೇರ್ಕೊಂಡು, ಈವನ್ ಶಂಕರ್ ನಾಗ್ ಅವ್ರೂ ಸೇರ್ಕೊಂಡ್ರು ಊಟ ಬಡ್ಸಕ್ಕೆ. ಅದರ ಮಧ್ಯದಲ್ಲಿ ಏನೋ ಪ್ರಾಬ್ಲಮ್ ಆಯ್ತು. ಒಂದು ಅವಘಡ ಆಗ್ಬಿಡ್ತು.

ಪರಮ್: ಏನಾಯ್ತು ಹೇಳಿ ಸರ್.

ಶೂಟಿಂಗ್‌ ಟೈಮಲ್ಲಿ ಜನಗಳ ಮೇಲೆ ಜೇನು ನೊಣಗಳ ಸುರಿಮಳೆ

ಜಗದೀಶ್: ಏನಿಲ್ಲ ಒಂದು ಜನರೇಟರ್ ನಿಲ್ಸಿದ್ವಿ, ಕ್ಯಾಮರಾ ಹಾಗೂ ಲೈಟ್ ಗಳಿಗೆ ಬೇಕಿತ್ತು ಅಂತ. ಅದರ ಕೆಳಗಡೆ ಒಂದು ಕುದುರೆನೂ ಕಟ್ಟಿದ್ವಿ. ಜನ ಎಲ್ಲಾ ಸೇರಿದ್ಮೇಲೆ, ಸಿ.ಆರ್. ಸಿಂಹ ಭಾಷಣ ಮಾಡ್ತಿದ್ರು, ಪೊಲ್ಯುಟೀಶಿಯನ್ ಅವ್ರು. ಸರಿ ಭಾಷಣ ಶುರು ಆಯ್ತು, ಜನ ಎಲ್ಲಾ ಭಾಷಣ ಕೇಳ್ತಾ ಇದ್ದಾರೆ. ಜನರೇಟರ್ ಆನ್ ಆಗಿತ್ತು. ಅಲ್ಲಿ ಏನಾಗಿದೆ ಜನರೇಟರ್ ಹೊಗೆ ಅಲ್ಲೇ ಮರದಲ್ಲಿದ್ದ ಹೆಜ್ಜೇನು ಗೂಡಿಗೆ ತಾಗಿ, ಆ ಬಿಸಿಗೆ ಎಫೆಕ್ಟಾಗಿ ಹೆಜ್ಜೇನೆಲ್ಲ ಎದ್ಬಿಡ್ತು. ಹೆಜ್ಜೇನಂದ್ರೆ ಕೇಳ್ಬೇಕಾ? ಇಡೀ ಶೂಟಿಂಗ್ ಜನಕ್ಕೆಲ್ಲ ಕಚ್ಚಕ್ಕೆ ಶುರು ಮಾಡ್ತು. ಜನ ಎಲ್ಲಾ ಚೆಲ್ಲಾಪಿಲ್ಲಿ. ನಮಗೆ ಗೊತ್ತು ಹೆಜ್ಜೇನು ಕಚ್ಚಿದ್ರೆ ಏನೆಲ್ಲಾ ಸಾಧ್ಯತೆಗಳಿವೆ ಅಂತ. ಆಮೇಲೆ ಒಂದೆರಡಲ್ಲ ಒಂದು ಗೂಡಲ್ಲಿ ಸಾವಿರಾರು ಹುಳಗಳಿರುತ್ತೆ. ನಾವು ಅಷ್ಟು ಜನ ಸೇರಿದ್ವಿ. ಒಬ್ಬೊಬ್ಬನಿಗೆ ಒಂದು ಐದು ಹುಳ ಹತ್ತು ಹುಳ ಕಚ್ಚಿದ್ರೂ, ಮುಖ ಎಲ್ಲಾ ಊದ್ಕೋಬಿಡುತ್ತೆ. ಎಲ್ಲ ಓಡ್ಹೋಗೋದು. ಆಗ “ಅಲ್ಲಿ ಓಡ್ಹೋಗು ಇಲ್ಲಿ ಓಡ್ಹೋಗು, ಮುಖ ಮುಚ್ಕೊಂಡು ಕೂತ್ಕೊ.” ಏನೇ ಆದ್ರೂ, ಹೆಜ್ಜೇನು ಬಿಡಲ್ಲ. ನೀರೊಳಗೆ ಹೋದ್ರೂ ಬಟ್ಟೆ ಸುತ್ತ ಸುತ್ತುತ್ತಿರುತ್ತಂತೆ. ಮಕ್ಕಳೆಲ್ಲ ಇದ್ರು, ನಮ್ಮ ಸ್ವಾಮಿ ಇದ್ದ, ಶ್ರೀನಾಥ್ ಅವ್ರ ಮಗ ಇದ್ದ. ಅಟ್ಯಾಕ್ ಮಾಡ್ಬಿಡ್ತು. ಏನ್ಮಾಡ್ಬೇಕು ಗೊತ್ತಾಗ್ತಿಲ್ಲ.


ಆಮೇಲೆ ಅಲ್ಲಿ ವಯಸ್ಸಾದವ್ರು ಒಬ್ಬರು ಇದ್ರು, ಅವ್ರು ಹೇಳಿದ್ರು. ನೋಡಿ ಅಲ್ಲಿ ಒಂದು ಗಣಪತಿ ದೇವಸ್ಥಾನ ಇದೆ. ಅದು ಮೈಲಿಗೆ ಆಗಿದೆ, ಅಲ್ಲಿ ಹೋಗಿ ಕೇಳ್ಕೊಳಿ. ಅದೊಂದೇ ದಾರಿ ಇರೋದು ನಿಮಗೆ. ಹುಳಗಳು ಅಟ್ಯಾಕ್ ಮಾಡಿದ್ಮೀಲೆ ಬಿಡಲ್ಲ, ಜನಗಳು ಯಾರೂ ಇಲ್ಲ ಅಂದ್ರೆ ಹೋಗುತ್ತೆ ಇಲ್ಲಾಂದ್ರೆ ಅದು ಹೋಗೊದೇ ಇಲ್ಲ ಅಂದ್ರು. ಆಷ್ಚರ್ಯಕರ ವಿಷಯ ಏನು ಅಂದ್ರೆ, ಹಿರಿಯರು ಹೇಳಿದ್ರಲ್ಲಾಂತ ಹೋಗಿ ಪ್ರೇಯರ್ ಮಾಡಿದ್ವಿ “ನಮ್ಮನ್ನ ಈ ವಿಪತ್ತಿನಿಂದ ಕಾಪಾಡಪ್ಪ, ನಿನಗೆ ಏನು ಪೂಜೆ ಪುರಸ್ಕಾರ ಬೇಕು ಮಾಡ್ತೀವಿ. ಕಾಪಾಡ್ಬಿಡು ನಮ್ಮನ್ನ” ಅಂತ ಕೇಳ್ಕೊಂಡ್ವಿ. ನೀವು ನಂಬ್ತೀರೋ ಬಿಡ್ತೀರೋ, ಒಂದು ಹತ್ತು ನಿಮಿಷದಲ್ಲಿ ಧಾರಾಕಾರ ಮಳೆ ಬಂದ್ಬಿಡ್ತು. ಹುಳಗಳೆಲ್ಲಾ ಮತ್ತೆ ಹೋಗಿ ಗೂಡಿಗೆ ಸೇರ್ಕೊಂಡ್ಬಿಡ್ತು. ಇನ್ನೇನು ಬೇಕು?

ಸಿನಿಮಾದಲ್ಲಿ ಸಿನಿಮಾ ತೋರಿಸೋದು ಹೀಗೆ!!!!

ಈ ತರದೆಲ್ಲಾ ಬಹಳಷ್ಟು ಸಣ್ಣ ಪುಟ್ಟ ಘಟನೆಗಳು ನಡಿತನೇ ಇರುತ್ತೆ. ಆಮೇಲೆ ಆಗುಂಬೆಯಿಂದ ಮುಂದೆ ‘ಮೇಘರವಳ್ಳಿ’ ಅಂತ ಒಂದು ಜಾಗ ಇದೆ, ಅಲ್ಲಿ ಒಂದು ಮೂರ್ನಾಲ್ಕು ಮನೆಗಳಲ್ಲಿ ಶೂಟ್ ಮಾಡಿದ್ವಿ. ಮತ್ತೆ ಒಂದು ಸಿನಿಮಾ ಟಾಕೀಸ್ ನಲ್ಲಿ ಶೂಟ್ ಮಾಡಿದ್ವಿ, ಆ ಸಿನಿಮಾ ಟಾಕೀಸ್ ನಲ್ಲಿ ನಮಗೆ ದೆವ್ವ ಭೂತ ಇರುವಂತಹ ಸಿನಿಮಾ ಬೇಕಾಗಿತ್ತು. ಅದಕ್ಕೆ ನಾನು ಬೆಂಗಳೂರಿಗೆ ಬಂದು ‘ಪಾತಾಳ ಭೈರವಿ’ಅಂತ ಸಿನಿಮಾದ ಪ್ರೊಡ್ಯೂಸರ್ ನ ಮೀಟ್ ಮಾಡಿ, ಡಿಸ್ಟ್ರಿಬ್ಯೂಟರ್ ಯಾರೂಂತ ತಿಳ್ಕೊಂಡು, ಅವ್ರ ಹತ್ರ ಪ್ರಿಂಟ್ ಕಲೆಕ್ಟ್ ಮಾಡ್ಕೊಂಡು, ಕಾರಲ್ಲಿ ಆಗುಂಬೆಗೆ ತಗೊಂಡು ಹೋಗಿ, ಅದನ್ನ ಪ್ರೊಜೆಕ್ಟ್ ಮಾಡಿ, ಆರ್ಟಿಸ್ಟ್ ಗಳ ಜೊತೆ ಕಾಂಬಿನೇಶನಲ್ಲಿ ಶೂಟ್ ಮಾಡಿದ್ವಿ. ಅದನ್ನ ಶೂಟ್ ಮಾಡಿ ಪ್ರಿಂಟನ್ನು ಅವ್ರಿಗೆ ಕಳಿಸಿ ಕೊಟ್ಟು, ಅವರಿಗೆ ಬಾಡಿಗೆ ಕೊಡ್ಬೇಕಲ್ವಾ?


ಏನಂದ್ರೆ ಮನಸ್ಸಿದ್ದರೆ ಮಾರ್ಗ. ಮಾಡೋ ಉತ್ಸಾಹ, ಆಸಕ್ತಿ ಇರ್ಬೇಕು. ಇಲ್ಲಿ ಶಕ್ತಿ ಪ್ರಶ್ನೆ ಬರಲ್ಲ. ಆಮೇಲೆ ಚಾಲೆಂಜಿಂಗಾಗಿ ತಗೊಂಡ್ರೆ ಕೆಲಸಗಳು ಆಗುತ್ತೆ. ಪ್ರೊಡಕ್ಷನಲ್ಲಿ ನಾನು ಯಾವತ್ತೂ ಹಿಂದೇಟು ಹಾಕ್ಲೇ ಇಲ್ಲ. ಇವತ್ತು ಏನು ಬೇಕಾದ್ರೂ ಚಿಟಿಕೆ ಹೊಡಿಯೊದ್ರೊಳಗೆ ಸಿಕ್ಬಿಡುತ್ತೆ. ಫೋನ್ ಮಾಡಿದ್ರೆ ಸಾಕು, ನಿಮಗೆ ಮಳೆ ಬೇಕಾ ? ಯಾವನೋ ಒಬ್ಬನಿಗೆ ಹೇಳಿದ್ರೆ ಸಾಕು ಮಳೆ ತರ್ತಾನೆ. ಈಗ ಅದೆಲ್ಲಾ ಸಿಗುತ್ತೆ. ಆ ಸಮಯದಲ್ಲಿ ಅವೆಲ್ಲಾ ಸಿಕ್ತಿರ್ಲಿಲ್ಲ. ನಮಗೆ ಮಳೆ ಬೇಕೂಂತಂದ್ರೆ ಫಯರ್ ಇಂಜನ್ ಬುಕ್ ಮಾಡಿ, ಎರಡು ಫಯರ್ ವ್ಯಾನ್ ತರ್ಸಿ, ಅದರ ಜೆಟ್ ಅನ್ನು ಮೇಲಕ್ಕೆ ಬಿಟ್ಟು, ಆ ಪ್ಲೇಸನ್ನ ಬ್ಲಾಕ್ ಮಾಡಿ ಮಳೆ ಎಫೆಕ್ಟ್ ಕೊಡ್ತಿದ್ವಿ. ಆ ತರ ಇತ್ತು. ಅವಾಗಿನ ರೀತಿನೇ ಬೇರೆ, ಇವಾಗಿನ ರೀತಿನೇ ಬೇರೆ.


ಸಿನಿಮಾದಲ್ಲಿ ಬರುವ ಅಂಡರ್‌ ವಾಟರ್‌ ಶೂಟ್‌ ಟೆಕ್ನಿಕ್

ಆಮೇಲೆ ಎಲ್ಲೋ ಒಂದ್ಕಡೆ ಅಂಡರ್ವಾಟರ್ ಶೂಟ್ ಮಾಡ್ಬೇಕಾಗಿತ್ತು. ಬಟ್ ಒಂದು ಹತ್ತು ಪರ್ಸಂಟ್ ಸಕ್ಸಸ್ ಆಯ್ತು ಅಷ್ಟೇ. ಯಾಕಂದ್ರೆ, ನೀರಿನ ವೆಲಾಸಿಟಿ ಇದ್ಯಲ್ಲ ಅದರ ಸೈನ್ಸ್ ನಮಗೆ ಅರ್ಥ ಆಗದೇ ಇರೋದು. ನಾವೇನ್ಮಾಡಿದ್ವಿ ಒಂದು ಹೆವಿ ಮೆಟಲ್ ಬಾಕ್ಸ್ ಮಾಡಿ, ಅದರ ಕೆಳಗಡೆ ಅದಕ್ಕೆ ಗ್ಲಾಸ್ ಎಲ್ಲಾ ಹಾಕಿದ್ವಿ. ನಮ್ಮ ಪ್ರಕಾರ ಏನಂದ್ರೆ, ಅದು ತುಂಬಾ ಹೆವಿ ಇರೋದ್ರಿಂದ ನೀರಿಗೆ ಹಾಕಿದ ಕೂಡಲೇ, ಅದು ಒಳಗೆ ಹೋಗಿ ಸೆಟಲ್ ಆಗ್ಬಿಡುತ್ತೆ ಅಂತ. ಹೆವಿ ಅಂದ್ರೆ ಅದನ್ನ ಎತ್ತಕ್ಕೆ ಇಪ್ಪತೈದು ಜನ ಬೇಕು. ಅದನ್ನ ತಗೊಂಡೋಗಿ ನೀರಿಗೆ ಬಿಟ್ರೆ ಅದು ನೀರಲ್ಲಿ ತೇಲಕ್ಕೆ ಶುರುವಾಯ್ತು, ಹಡಗಿನ ತರ. ನೀರಲ್ಲಿ ಮುಳುಗಲ್ಲ ಅದು. ಆಮೇಲೆ ಹೇಗೆ ಶೂಟ್ ಮಾಡೋದು? ಕಬ್ಬಿಣದ್ದು ಅದು. ಅದನ್ನ ತೂಕ ಮಾಡಕ್ಕೆ ಆಗಲ್ಲ, ಇನ್ನೇನು ಮಾಡಕ್ಕಾಗಲ್ಲ. ಕೆಳಗಡೆ ಫ್ರೇಮ್ ಎಲ್ಲ ಫಿಕ್ಸ್ ಆಗಿದೆ. ಅದಕ್ಕೆ ಮರಗಳನ್ನ ಕಟ್ಟಿ, ಮರಗಳ ಮೇಲೆ ನಾಲ್ಕು ಜನ ಕೂತ್ಕೊಂಡ್ರೂನೂ, ಅದು ಫ್ಲೋಟ್ ಆಗ್ತನೇ ಇತ್ತು. ಕಷ್ಟ ಪಟ್ಟು ಏನೇನು ಶಾಟ್ಸ್ ಬೇಕು ತಗೊಂಡ್ವಿ. ಆತರದ್ದೆಲ್ಲಾ ಕೆಲವೊಂದು ಫೇಲ್ಯೂರ್ಸ್ ಕೂಡ ಇದೆ.

ಮುಂದುವರೆಯುವುದು…

26 views