ಶೂಟಿಂಗ್‌ ಮೊದಲ ದಿನದ ಅನುಭವ…

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ - 8ಫಸ್ಟ್ ಡೇ ಶೂಟಿಂಗ್ ಸ್ಟಾರ್ಟ್ ಆಯ್ತು. ಅದೇ ನನ್ನ ಜೀವನದಲ್ಲಿ ಫಸ್ಟ್ ಕ್ಯಾಮೆರಾ ಎದುರಿಸ್ತಾ ಇರೋದು. ಆಗ ಕುಣಿಗಲ್ ನಾಗಭೂಷಣ್ ಕರೆದು ಡೈಲಾಗ್ ಕೊಟ್ರು. “ನೋಡಪ್ಪಾ ಈ ಡೈಲಾಗ್ ಹೇಳ್ಬೇಕು ನೀನು” ಅಂತ. ಡೈರಕ್ಟರ್ ಹೇಳಿದ್ರು “ನೋಡಪ್ಪಾ ವಿಷ್ಣುವರ್ಧನ್ ಸಾರ್ ಕಾಂಬಿನೇಶನ್. ಫಸ್ಟ್ ಟೇಕಲ್ಲೇ ಮಾಡ್ಬೇಕು. ಆಮೇಲೆ ಟೇಕ್ ಜಾಸ್ತಿ ಆದ್ರೆ ಬೇಜಾರಾಗ್ಬಿಡ್ತಾರೆ ಅವರು. ನೀನು ಒಂದೇ ಟೇಕಲ್ಲಿ ಮಾಡಿದ್ರೆ ಇಲ್ಲಿ ಇರ್ತೀಯ. ಮಾಡ್ಲಿಲ್ಲ ಅಂದ್ರೆ ಸೀದ ಊರಿಗೆ ಹೋಗ್ಬಿಡು” ಅಂದ್ರು. ಅವಾಗ ವಿಷ್ಣುವರ್ಧನ್ ನಾಗರಹಾವು ಸಿನಿಮಾ ಎಲ್ಲಾ ಮಾಡಿ ಒಳ್ಳೆ ಹೆಸರಿತ್ತು. ನನಗೆ ನಾಟಕಗಳಲ್ಲಿ ಅಭಿನಯ ಮಾಡಿದ್ದಿದ್ರಿಂದ ಡೈಲಾಗ್ ಡೆಲಿವರಿ ಚನ್ನಾಗಿತ್ತು. ನಾಟಕ ಕಂಪೆನಿಯಲ್ಲಿ ಆಕ್ಟ್ ಮಾಡಿದ್ರೆ ಯಾವ ಚಿತ್ರರಂಗದಲ್ಲೂ ಫೇಮಸ್ ಅದಕ್ಕೆ ಉದಾಹರಣೆ ರಾಜ್ ಕುಮಾರ್ ಅವರು. ರಾಜ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ ಇವರೆಲ್ಲಾ ನಾಟಕ ಕಂಪೆನಿಯಲ್ಲೇ ಇದ್ದವರು.


ಫಸ್ಟ್ ಡೇನೆ ಡೈರಕ್ಟರ್ ಹೀಗೆ ಹೇಳ್ಬಿಟ್ರಲ್ಲಾ ಅಂತ ನಂಗೆ ಹೆದರಿಕೆ ಶುರುವಾಗ್ಬಿಡ್ತು. ಅಕಸ್ಮಾತ್ ಏನಾದ್ರೂ ಎರಡನೇ, ಮೂರನೇ ಟೇಕ್ ಆಗ್ಬಿಟ್ರೆ ವಾಪಸ್ ಊರಿಗೆ ಹೋಗ್ಬೇಕಲ್ಲಾ? ಅಂತ ಯೋಚನೆ ನಂಗೆ. ಕೊನೆಗೆ ಡೈಲಾಗ್ ಪ್ರಾಕ್ಟಿಸ್ ಮಾಡ್ಕೊಳೋದಕ್ಕೆ ಟೈಮ್ ಇತ್ತು, ಚನ್ನಾಗಿ ಪ್ರಾಕ್ಟಿಸ್ ಮಾಡ್ಕೊಂಡೆ. ಅದು ಸೀನ್ ಏನಂದ್ರೆ ವಿಷ್ಣುವರ್ಧನ್ ಊರೊಳಗೆ ಬರ್ಬೇಕಾದ್ರೆ ತಡಿಯೋದು “ನಮ್ಮ ಊರೊಳಗೆ ಯಾವುದೇ ಒಂದು ನೊಣ ಬರ್ಬೇಕಾದ್ರೂ ಗೌಡರ ಅಪ್ಪಣೆ ತಗೊಂಡು ಬರ್ಬೇಕು, ಗೌಡರ ಅಪ್ಪಣೆ ಇಲ್ಲದೇ ಯಾರೂ ಊರೊಳಗೆ ಕಾಲಿಡುವ ಹಾಗೆ ಇಲ್ಲ” ಇದು ಡೈಲಾಗ್. ಒಂದೇ ಟೇಕ್‍ಗೆ ಓಕೆ ಆಗೋಯ್ತು. ಓಕೆ ಆದ ತಕ್ಷಣ ವಿಷ್ಣುವರ್ಧನ್ ಅವರು “ಯಾರು ಇವರು?” ಅಂದ್ರು. “ಸರ್ ಬ್ಯಾಂಕಲ್ಲಿ ಕೆಲ್ಸ ಮಾಡ್ತಾರೆ, ಮತ್ತೆ ನಾಟಕ ಕಂಪೆನಿಯಲ್ಲಿ ಕೆಲ್ಸ ಮಾಡಿದ್ದಾರೆ” ಅಂದ್ರು.ಮುಂದುವರೆಯುವುದು…

14 views