“ಶಿವರಸನ್ ‌ಅಡಗಿದ್ದ ಕೋಣನಕುಂಟೆ ಮನೆ ಹತ್ರ ಮೊದಲು ಹೋಗಿದ್ದು ಯಾರು”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 14


ಅವನು ಕೊಟ್ಟ ಮಾಹಿತಿಯಂತೆ ಹೆಚ್‌ಎಎಲ್‌ಎರಡನೇ ಹಂತದಲ್ಲಿ ದಾಳಿ ನಡೆಸಲು ಅಧಿಕಾರಿಗಳು ನಿರ್ಧರಿಸುತ್ತಾರೆ. ಸಿಬಿಐಯವರು ನಾವು ದಾಳಿ ಮಾಡ್ತೀವಿ ಅಂದ್ರು. ಡಿಸಿಪಿ ಕೆಂಪಯ್ಯ ಅವರು ನಾವು ಮಾಡ್ತೇವೆ ಅಂದ್ರು. ಸಿಬಿಐ ಅವರ ಪ್ರಕರಣ ಅದಾಗಿದ್ದರಿಂದ ಅವರೇ ಮಾಡಲಿ ಎಂದು ನಿರ್ಧಾರ ಆಯ್ತು.


ಅವತ್ತು ನಗರದಲ್ಲಿ ಜಿಡಿ ಮಳೆ. ಪೊಲೀಸರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ರು. ಪೊಲೀಸರು ನಾವೇ ರೇಡ್‌ಮಾಡಿಬಿಡ್ತೀವಿ ಅಂದ್ರು ಅವರು ಒಪ್ಪಲೇ ಇಲ್ಲ. ಬೇಡ ಅವರ ಹತ್ತಿರ ಎಕೆ 47, ಗ್ರೆನೇಡ್ ಎಲ್ಲ ಇರುತ್ತೆ. ಬಹಳ ಡೆಡ್ಲಿಯೆಸ್ಟ್‌ಟೆರರಿಸ್ಟ್‌ಗಳು ಅವರು. ರಿಸ್ಕ್‌ತೆಗೆದುಕೊಳ್ಳುವುದು ಬೇಡ ಅಂದ್ರು. ಕನಿಷ್ಠ ಪಕ್ಷ ನಮ್ಮನ್ನು ಕರೆದುಕೊಂಡು ಹೋಗಿ ಅಂದಾಗಲು ಇಲ್ಲ ನಾವೇ ಹೋಗ್ತೇವೆ ಅಂದ್ರು. ಅಂಬಾಸಿಡರ್‌ಕಾರಿನಲ್ಲಿ ಅವನು ತೋರಿಸಿದ ಮನೆಗೆ ಹೋದ್ರು. ಫೀಲ್ಡ್‌ಲೆವೆಲ್‌ಆಫೀಸರ್ಸ್‌ದಾಳಿ ಮಾಡುವುದಕ್ಕೂ, ಕಚೇರಿಯಲ್ಲಿ ಕುಳಿತು ನಿರ್ದೇಶನ ಕೊಡುವವರು ದಾಳಿ ನಡೆಸುವುದಕ್ಕೂ ತುಂಬಾ ವ್ಯತ್ಯಾಸ ಇರುತ್ತದೆ. ಇವರು ದಾಳಿ ಮಾಡಲು ಹೋಗುವ ಮೊದಲೇ ಅವರಿಗೆ ಹೆಚ್‌ಎಎಲ್‌ನೌಕರನನ್ನು ದಸ್ತಗಿರಿ ಮಾಡುವ ಮಾಹಿತಿ ಲಭಿಸಿತ್ತು. ರಾತ್ರಿ 1 ಗಂಟೆ ಇರಬಹುದು, ಆ ಮನೆಯಿಂದ ಎಲ್ಲ ಈಚೆ ಬರುತ್ತಾರೆ. ಇವರ‍್ಯಾರು ಅವರ ಮೇಲೆ ಕೈ ಹಾಕಲು ಹೋಗುವುದಿಲ್ಲ. ಗ್ರೆನೇಡ್ ಸಿಡಿಸಿಬಿಟ್ಟರೆ ನಮ್ಮ ಆರು ಅಧಿಕಾರಿಗಳು ಸಿಡಿದು ಹೋಗಿ ಬಿಡುತ್ತಿದ್ರು. ಅವರೆಲ್ಲ ಐಪಿಎಸ್‌ಅಧಿಕಾರಿಗಳು. ಕಳ್ಳನನ್ನು ಇವತ್ತಲ್ಲ ನಾಳೆ ಹಿಡಿಯುತ್ತೇವೆ ಎಂಬ ನಂಬಿಕೆ, ತಾಕತ್ತು ಇರುತ್ತದೆ. ಆದರೆ ನಮ್ಮ ಪೊಲೀಸರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದಲೇ ನಾವು ಪ್ರತಿ ಬಾರಿಯೂ ದಾಳಿ ನಡೆಸುವುದು. ಹಾಗಾಗಿ, ಅವರು ಬಿಟ್ಟುಬಿಟ್ರು. ಎಲ್ಲ ಎಸ್ಕೇಪ್‌ ಆಗುತ್ತಿದ್ದಾರೆ, ಶಂಕಿತರನ್ನು ಹಿಡಿಯಿರಿ ಎಂದು ಆಗ ಅವರು ನಮಗೆ ಅಲರ್ಟ್‌ ಮಾಡಿದ್ರು. ನಮ್ಮನ್ನು ಕರೆದುಕೊಂಡು ಹೋಗಿದ್ರೆ, ನಾವೇ ಹಿಡ್ಕೊಳ್ಳುತ್ತಿದ್ವಿ, ತಪ್ಪು ಮಾಡಿದ್ರು ಅವರು. ಅವರ ಕಣ್ಣ ಮುಂದೆಯೇ ಎಲ್ಲ ತಪ್ಪಿಸಿಕೊಂಡ್ರು.

ಇದಾದ ಮೇಲೆ ಆಳ್ವಾಡಿಸ್‌ ಎಂಬ ಸಬ್‌ಇನ್‌ಸ್ಟೆಕ್ಟರ್‌ ಮತ್ತು ನಾನು ಒಂದು ಕಡೆ ನಿಂತಿದ್ದಾಗ ಒಬ್ಬ ತಪ್ಪಿಸಿಕೊಂಡು ಓಡುತ್ತಿದ್ದ. ಚಿಕ್ಕ ಹುಡುಗ. ನಮಗೆ ಸಂಶಯ ಬಂದು, ಹಿಡ್ಕೊಂಡುಬಿಟ್ವಿ. ಅವನು ತಕ್ಷಣವೇ ಸೈನೆಡ್‌ ಮಾತ್ರೆ ನುಂಗಿದ. ಆಗ ಗೊತ್ತಾಯ್ತು ಅವನು ಎಲ್‌ಟಿಟಿಇ ಅವನು ಎಂದು. ಬಾಯಲ್ಲಿ ನೊರೆ ಬರಲು ಆರಂಭವಾಯ್ತು. ನಾವು ಇದನ್ನೆಲ್ಲ ಕಂಡಿದ್ದೆ ಇಲ್ಲ. ಹಾಗಾಗಿ ಭಯ ಶುರುವಾಯ್ತು. ಮಳೆಯಿಂದಾಗಿ ರಸ್ತೆಯಲ್ಲೆಲ್ಲ ನೀರು ನಿಂತಿತ್ತು. ನಾವು ತಕ್ಷಣವೇ ಕೊಚ್ಚೆ ನೀರನ್ನು ತೆಗೆದುಕೊಂಡು ಆತನ ಬಾಯಲ್ಲಿ ಹಾಕಿಬಿಟ್ವಿ. ಅವನು ವಾಂತಿ ಮಾಡಿಕೊಳ್ಳಲು ಶುರು ಮಾಡಿದ. ಅಕ್ಕಪಕ್ಕದ ಮನೆಯವರೆಲ್ಲ ಬಂದ್ರು. ನಾವು ಪೊಲೀಸ್‌ ಎಂದಾಗ, ತುಂಬಾ ಸಪೋರ್ಟ್‌ ಮಾಡಿದ್ರು. ನನಗೆ ಈಗಲೂ ನೆನಪಿದೆ, ಒಂದು ಹೆಣ್ಣುಮಗಳು ಬಂದು ನಾನೇನಾದ್ರು ಸಹಾಯ ಮಾಡಬೇಕಾ ಅಂದ್ಲು. ಉಪ್ಪು ನೀರು ಬೇಕಿತ್ತು ಎಂದೆ. ಯಾಕೆ ಅಂದ್ಲು, ಅವನು ಎಲ್‌ಟಿಟಿಇಗೆ ಸೇರಿದವನು. ಸೈನೆಡ್‌ ನುಂಗಿದ್ದಾನೆ ಎಂದೆ. ತಕ್ಷಣವೇ ಓಡಿ ಹೋಗಿ ಜಗ್‌ನಲ್ಲಿ ಉಪ್ಪು ನೀರು ತಂದುಕೊಟ್ಟಳು. ಕುಡಿಸಿದ ಕೂಡಲೇ ಅವನು ವಾಂತಿ ಮಾಡಲು ಶುರು ಮಾಡಿದ. ಬದುಕಿಬಿಟ್ಟ. ಆ ಹುಡುಗ ಶ್ರೀಲಂಕದವನು. ಅವನು ಅಲ್ಲಿಯ ತಮಿಳು ಮಾತನಾಡುತ್ತಿದ್ದ. ಬೇರೆ ಭಾಷೆ ಅವನಿಗೆ ಬರುತ್ತಿರಲಿಲ್ಲ. ಸಿಬಿಐ ಅವರು ಅವನನ್ನು ಕ್ಯೂ ಬ್ರಾಂಚ್‌ಎಂದು ಮದ್ರಾಸ್‌ನಲ್ಲಿತ್ತು ಅಲ್ಲಿಗೆ ಕರೆದುಕೊಂಡು ಹೋದ್ರು. ಅಲ್ಲಿ ಸಂಪೂರ್ಣ ಮಾಹಿತಿಯನ್ನು ಅವನಿಂದ ಪಡೆದುಕೊಂಡ್ರು.


ತಮಿಳರು ಮೂಲತಃ ಚಲನಚಿತ್ರದ ಹುಚ್ಚರು. ಆದರೆ, ಎಲ್‌ಟಿಟಿಇ ಸದಸ್ಯರು ಅವರು ಒಂದು ಚಲನಚಿತ್ರವನ್ನೂ ನೋಡುತ್ತಿರಲಿಲ್ಲ. ಹಾಡು ಕೇಳುತ್ತಿರಲಿಲ್ಲ. ಅವರ ಜೊತೆಗಿರುವ ಮಹಿಳಾ ಸದಸ್ಯರ ಕಣ್ಣೆತ್ತಿ ನೋಡುತ್ತಿರಲಿಲ್ಲ. ಶಿಸ್ತಿನ ಪರಮಾವಧಿ. ಎಲ್ಲಾ ರೀತಿಯ ಮಾಂಸವನ್ನು ಒಣಗಿಸಿ ಇಟ್ಟುಕೊಂಡಿರುತ್ತಿದ್ರು. ಹಿಂದೂ ಕೇಡರ್‌ಅದು. ಆದರೆ, ಅವರು ತಿನ್ನುತ್ತಿದ್ದುದ್ದು ದನದ ಮಾಂಸ. ಬ್ರೆಡ್‌, ಹಾಲು, ಒಣಗಿದ ಮಾಂಸ. ಐಶಾರಾಮಿ ಜೀವನ ಮಾಡಿದ್ದೇ ಇಲ್ಲ. ಅಷ್ಟು ಚಲ ಅವರಿಗೆ. ಆ ಮಟ್ಟಿಗೆ ತರಬೇತಿ ನೀಡಿರುತ್ತಾರೆ.


ನರಸಿಂಹಮೂರ್ತಿ ಎಂಬ ಸಬ್‌ಇನ್‌ಸ್ಪೆಕ್ಟರ್‌ ಇದ್ರು. ಅಶ್ವತ್ಥರಾಮಯ್ಯ ಎಂದು ಜಯನಗರದ ಎಸಿಪಿ. ಅವರಿಗೆ ಸಿಬಿಐ ಅವರು ಮಾಹಿತಿಯನ್ನು ಕೊಟ್ಟು ಪತ್ತೆ ಮಾಡುವಂತೆ ಹೇಳಿದ್ರು. ಅಶ್ವತ್ಥರಾಮಯ್ಯ ಸಿಬಿಯಲ್ಲಿ ಕೆಲಸ ಮಾಡಿರುವ ಪೊಲೀಸ್‌ ಅಧಿಕಾರಿ. ನರಸಿಂಹಮೂರ್ತಿ ಬಹಳ ಅದ್ಭುತವಾಗಿ ತನಿಖೆ ಮಾಡಿದ್ದಾರೆ. ಇಡೀ ಏರಿಯಾದಲ್ಲಿ ಓಡಾಡಿ, ಆಂಜಿನಪ್ಪನನ್ನು ಹುಡುಕುತ್ತಾರೆ. ಆದರೆ, ಒಂಚೂರು ಮಾಹಿತಿ ಸಿಗುವುದಿಲ್ಲ. ಆಮೇಲೆ ಗೊತ್ತಾಗುತ್ತದೆ ಅವರು ಬ್ಯಾಂಕ್‌ ಸಿಬ್ಬಂದಿ ಇದ್ದಾರೆ ಎಂದು. ಆಂಜಿನಪ್ಪ ಸಿಗ್ತಾರೆ, ಆಗ ವಿಚಾರಣೆ ನಡೆಸಿದಾಗ, ಹೌದು ಸರ್, ಅವರೆಲ್ಲ ನಮ್ಮ ಮನೆಯಲ್ಲಿ ಬಾಡಿಗೆಗೆ ಇದ್ರು. ನಂತರ ಇದಕ್ಕಿದ್ದಂತೆ ಖಾಲಿ ಮಾಡಿಕೊಂಡು ಹೋದ್ರು. ನನಗೂ ಸಂಶಯ ಇದೆ ಸರ್‌ ಅಂದ್ರು. ಹೇಳದೇ, ಕೇಳದೇ ಅಂದ್ರೆ... ನೀನು ಮನೆ ಮಾಲೀಕ ಅಲ್ವಾ ಅಂದಾಗ. ಅವರು ಯಾರು ನನಗೆ ಪರಿಚಯ ಇಲ್ಲ. ಬಾಡಿಗೆ ಕೇಳಿದ್ರು ಕೊಟ್ಟೆ. ಯಾರು ಅವರನ್ನು ಕರೆದುಕೊಂಡು ಬಂದಿದ್ದು ಅಂದಾಗ, ಬ್ರೋಕರ್‌ಗಳು ಕರ್ಕೊಂಡು ಬಂದಿದ್ರು ಕೊಟ್ಟಿದ್ದೆ. ನನಗೆ ಹೇಳದೇ ಖಾಲಿ ಮಾಡ್ಕೊಂಡು ಹೋಗ್ಬಿಟ್ರು ಅಂದ್ರು. ಅಲ್ಲಿಗೆ ಈ ತನಿಖೆಯ ಸುಳಿವು ಅಲ್ಲೊಂದು ಕಡೆ ನಿಂತು ಬಿಡ್ತು. ಬಹುಶಃ ತನಿಖಾಧಿಕಾರಿಗಳು ನಿರುತ್ಸಾಹ, ಉಪೇಕ್ಷೆ ಮಾಡಿದ್ರೆ ಈ ಕೇಸ್‌ ಪತ್ತೆ ಆಗುತ್ತಿರಲಿಲ್ಲ. ಸಿಬಿಐ, ಎಸ್‌ಐಟಿಗೂ ಪತ್ತೆ ಮಾಡಲು ಆಗುತ್ತಿರಲಿಲ್ಲ.


ನೌಕಾದಳ ಸಮುದ್ರದ ತೀರವನ್ನು ಗಸ್ತು ಮಾಡುತ್ತಿತ್ತು. ಅವರು ಯಾವ ಕಾರಣಕ್ಕೂ ಶ್ರೀಲಂಕಾ ಮತ್ತು ಬೇರೆ ದೇಶಗಳಿಗೆ ತಪ್ಪಿಸಿಕೊಂಡು ಹೋಗಬಾರದೆಂದು ಕಾಯುತ್ತಿತ್ತು. ದೇಶದ ದಕ್ಷಿಣ ಭಾಗದಲ್ಲಿ ಕೋಲ್ಕತ್ತದಿಂದ ಪ್ರಾರಂಭವಾದ ಸಮುದ್ರ ತೀರ ಗುಜರಾತ್‌ವರೆಗೂ ಬರುತ್ತದೆ.


ನರಸಿಂಹಮೂರ್ತಿ ಅವರು ನಿಜಕ್ಕೂ ಪ್ರಶಂಸಿಸಬೇಕಾದ ಪೊಲೀಸ್‌ ಅಧಿಕಾರಿ. ಅವರ ಈ ಸೇವೆ ಶ್ಲಾಘನೀಯ. ಅವರು ಎಲ್ಲ ರೀತಿಯ ವೇಷ ಧರಿಸಿಕೊಂಡು ಮಾಹಿತಿ ಸಂಗ್ರಹಿಸಲು ಆರಂಭಿಸಿದ್ರು. ದನ ಕಾಯೋರ ಬಳಿ ಪಂಚೆ ಹಾಕಿಕೊಂಡು ಮಾತನಾಡಿಸುತ್ತಿದ್ರು. ಕೋಣನಕುಂಟೆಯಲ್ಲಿ ಆಗೆಲ್ಲ ಮನೆಗಳೇ ಕಡಿಮೆ. ಒಂದು ಮನೆಯಿಂದ ಇನ್ನೊಂದು ಮನೆಗೆ ಸಾಕಷ್ಟು ಅಂತರ ಇರುತ್ತಿತ್ತು. ಯಾವುದೇ ವ್ಯವಸ್ಥೆ ಇಲ್ಲದ ಬಡಾವಣೆ ಅವೆಲ್ಲ. ಅಲ್ಲಿ ದನ ಕಾಯೋನು ಒಬ್ಬ ಸುಳಿವು ಕೊಡ್ತಾನೆ. ನಾನು ನೋಡಿದೆ ಮನೆ ಖಾಲಿ ಮಾಡುವಾಗ ಏನು ಇಷ್ಟು ಆತುರದಲ್ಲಿ ಖಾಲಿ ಮಾಡುತ್ತಿದ್ದಾರೆ ಅಂಥ. ನನಗೂ ಸಂಶಯ ಬಂತು. ಆಗ ಅವರಿಗೆ ಏನೋ ಸಿಕ್ಕಿದ ಖುಷಿಯಾಗಿ, ಆತನಿಗೆ ಕಾಫಿ, ತಿಂಡಿ ಎಲ್ಲ ಕೊಡಿಸಿ ಮಾಹಿತಿ ಕಲೆಹಾಕುತ್ತಾರೆ. ಸರ್‌ ಮಧ್ಯಾಹ್ನ ಟೆಂಪೊ ಬಂತು. ಎಲ್ಲ ಸಾಮನುಗಳನ್ನು ತರಾತುರಿಯಲ್ಲಿ ತುಂಬಿಕೊಂಡ್ರು. ನಾನು ಹೋಗಿ ಮಾತನಾಡಿದೆ. ಏನಿಲ್ಲ. ನಮಗೆ ಟ್ರಾನ್ಸ್‌ಫರ್‌ ಆಗಿದೆ ಬೇರೆ ಕಡೆ ಹೋಗ್ತೇವೆ ಎಂದು ಯಾರೋ ಒಬ್ಬ ಹೇಳ್ದ. ಅವನು ಕನ್ನಡವನ್ನು ಮಾತಾಡ್ತಿದ್ದ ಅಂದ. ಇವರಿಗೆ ಇದೇನು ಸುಳ್ಳು ಇರಬೇಕು ಅನಿಸ್ತು. ಸುಳಿವು ಮತ್ತೊಮ್ಮೆ ಬ್ರೇಕ್‌ ಆಯ್ತು. ನಂಬರ್‌ ನೋಟ್‌ ಮಾಡಿಕೊಳ್ಳಲಿಲ್ವಾ ಅಂದಕ್ಕೆ, ನನಗೆ ಶಿಕ್ಷಣ ಇಲ್ಲ, ಎಂದ ಅವನು ಟೆಂಪೊ ಬಣ್ಣವನ್ನು ಮಾತ್ರ ಹೇಳಿದ.


ನರಸಿಂಹಮೂರ್ತಿ ಚಲ ಬಿಡದ ತ್ರಿವಿಕ್ರಮ. ಮತ್ತೆ ಆ ಸುಳಿವಿನ ಹಿಂದೆ ಬೆನ್ನತ್ತುತ್ತಾರೆ. ಕಡೆಗೆ ಅವರೊಂದು ಪ್ಲಾನ್‌ ಮಾಡ್ತಾರೆ. ಅಲ್ಲಿ ಸುತ್ತಮುತ್ತ ಎಲ್ಲೆಲ್ಲಿ ಟೆಂಪೊ ಸ್ಟ್ಯಾಂಡ್‌ ಇದೆಯೋ ಅಲ್ಲೆಲ್ಲ ಮಾಹಿತಿದಾರರನ್ನು ಬಿಡುತ್ತಾರೆ. ಈ ಪ್ರದೇಶದಿಂದ ಯಾರಾದ್ರು ಶಿಫ್ಟ್‌ ಮಾಡಿದಾರ ಎಂಬ ಮಾಹಿತಿ ಕಲೆ ಹಾಕುತ್ತಾರೆ. ಆಗ ಅವರಿಗೆ ಬಾಡಿಗೆಗೆ ಹೋಗಿದ್ದ ಟೆಂಪೊ ಬಗ್ಗೆ ಗೊತ್ತಾಗುತ್ತದೆ. ಅವನೆಲ್ಲಿದ್ದಾನೆ ಎಂದಾಗ, ಅವನು ಬೇರ‍್ಯಾವುದೋ ಊರಿಗೆ ಹೋಗಿರುತ್ತಾನೆ. ಅವನನ್ನು ಪತ್ತೆ ಮಾಡ್ತಾರೆ. ಹೌದು ಸರ್‌, ನಾನು ಹೋಗಿದ್ದೆ. ಖಾಲಿ ಮಾಡಿದ್ದು ಹೌದು. ಬಹಳ ಅರ್ಜೆಂಟಲ್ಲಿದ್ರು. ಸಾಮನುಗಳನ್ನೆಲ್ಲ ಎಲ್ಲಿ ಇಟ್ಟಿದ್ದೀಯಾ ಎಂದಿದಕ್ಕೆ, ವಿಜಯನಗರದ ಯಾವುದೋ ಚರ್ಚ್‌ನಲ್ಲಿ ಇಟ್ಟು ಬಂದಿದ್ದೇನೆ ಅಂದ. ಆ ಚರ್ಚ್‌ನಲ್ಲಿ ಎಲ್ಲ ತಮಿಳಿನವರೇ ಇದ್ದಾರೆ ಎಂದು ಹೇಳ್ತಾನೆ.

ಆ ಚರ್ಚ್‌ ಫಾದರ್‌ ಎಲ್‌ಟಿಟಿಇ ಬಗ್ಗೆ ಅನುಕಂಪ ಹೊಂದಿರುವವರು. ಅಲ್ಲಿಯ ಬಹುತೇಕ ಸದಸ್ಯರು ಎಲ್‌ಟಿಟಿಇ ಬಗ್ಗೆ ಬಹಳ ಅನುಕಂಪ ಹೊಂದಿರುವವರು ಮತ್ತು ಅವರ ಬೆಂಬಲಿಗರು. ಇದು ಬಹಳ ಆತಂಕ ಸೃಷ್ಟಿಸಿತ್ತು. ಅಲ್ಲಿಗೆ ಹೋದಾಗ, ಒಬ್ಬ ಹೆಂಗಸು ಇವರ ಸಾಮಾನುಗಳನ್ನು ಕಾಯುತ್ತಿರುತ್ತಾಳೆ. ಮೃದುಲಾ ಎಂದು ಆಕೆಯ ಹೆಸರು. ಅವಳನ್ನು ಕೇಳಿದಾಗ, ನನಗೇನು ಗೊತ್ತಿಲ್ಲ ಸರ್‌, ಆದ್ರೆ, ಟಿವಿಯಲ್ಲಿ ತೋರಿಸುತ್ತಿದ್ದಾರಲ್ಲ ಒಕ್ಕಣ್ಣ, ಶಿವರಾಸನ್‌ ಅಂಥ, ಅವನ ತರನೇ ಇಲ್ಲೊಬ್ಬ ಇದ್ದ. ಅವನೇ ಇರಬಹುದು. ನನಗೇನು ಗೊತ್ತಿಲ್ಲ ಅಂದಳು. ನನ್ನ ಗಂಡ ಇಲ್ಲಿ ಇರಲು ಹೇಳಿದ. ನಾನು ಸಾಮನುಗಳನ್ನು ಕಾಯುತ್ತ ಇದ್ದೇನೆ. ಅವರ‍್ಯಾರು ಇಲ್ಲಿ ಇಲ್ಲ. ಅವರೆಲ್ಲ ಕೋಣಕುಂಟೆಯಲ್ಲಿ ಮನೆ ಮಾಡಿದ್ದಾರೆ ಅಂದಳು.


ಇದೊಂದು ಅದ್ಭುತವಾದ ಪತ್ತೇದಾರಿಕೆ. ಸುಳಿವುಗಳು ಅಲ್ಲಲ್ಲಿ ಕಟ್‌ ಆಗುತ್ತಿದ್ದಾಗ, ಇನ್ನೇನು ಈ ಕೇಸ್‌ ಮುಗೀತು ಎನ್ನುವಾಗ, ಮತ್ತೊಂದು ಸುಳಿವನ್ನು ಅವರು ತೆಗೆಯುತ್ತಾರೆ. ನರಸಿಂಹಮೂರ್ತಿ ಅವರು ಕೋಣನಕುಂಟೆ ಮನೆ ಪತ್ತೆ ಮಾಡ್ತಾರೆ. ಅದೊಂದು ನಿರ್ಜನ ಪ್ರದೇಶದಲ್ಲಿರುವ ಮನೆ. ಸುತ್ತಮುತ್ತ ಯಾವ ಮನೆಗಳು ಇಲ್ಲ. ಹಳ್ಳಿ, ಸಣ್ಣಸಣ್ಣ ಮನೆಗಳಿದ್ದವು. ಮನೆ ಮಾಲೀಕನು ಪತ್ತೆ ಆಗುತ್ತಾನೆ. ಯಾರೋ ಬಾಡಿಗೆಗೆ ಬಂದ್ರು ಕೊಟ್ಟೆ ಎಂದು ಅವನು ಹೇಳ್ತಾನೆ. ಒಂದು ಮಹಡಿಯ ಮನೆ ಅದು. ದೂರದಿಂದ ಒಂದು ತಂಡ ಮನೆಯನ್ನು ಗಮನಿಸುತ್ತಿತ್ತು.


ಆಗಸ್ಟ್‌, 18, 1991, ಭಾನುವಾರ. ಡಿಸಿಪಿ ಕೆಂಪಯ್ಯ ಅವರು ಫೋನ್‌ ಮಾಡಿ ತಕ್ಷಣ ಇಲ್ಲಿಗೆ ಬರಬೇಕು ಅಂದ್ರು. ನಾನು ಆಡುಗೋಡಿ ಸಬ್‌ಇನ್‌ಸ್ಪೆಕ್ಟರ್‌ ರಮೇಶ್‌ಚಂದ್ರ, ಸಿದ್ದಾಪುರ ಸಬ್‌ಇನ್‌ಸ್ಪೆಕರ್‌ ಬಾಲಾಜಿ, ಮಡಿವಾಳದ ಸಬ್‌ಇನ್‌ಸ್ಪೆಕ್ಟರ್ ಎಂ.ಸಿ ಶ್ರೀನಿವಾಸ್‌, ಹೆಬ್ಬಾಳದ ಸಬ್‌ಇನ್‌ಸ್ಪೆಕ್ಟರ್‌ ಈಶ್ವರನ್‌, ಸಬ್‌ಇನ್‌ಸ್ಪೆಕ್ಟರ್‌ ರಾಮಲಿಂಗಪ್ಪ ನಾವು ಆರು ಜನ ಅವರ ಹತ್ತಿರ ಹೋದೆವು. ಮನೆ ಗೊತ್ತಾಗಿದೆ. ವಿಷಯ ಯಾವ ಕಾರಣಕ್ಕೂ ಲೀಕ್‌ ಆಗಬಾರದು. ಅವರು ತಪ್ಪಿಸಿಕೊಳ್ಳಲು ಎಲ್ಲ ತಯಾರಿ ನಡೆಸುತ್ತಿದ್ದಾರೆ. ಎಲ್ಲ ಕಡೆ ಅಲರ್ಟ್ ಮಾಡಿದ್ದೇವೆ. ಎಲ್ಲ ಮಫ್ತಿಯಲ್ಲಿ ಬರಬೇಕು. ಮನೆಯನ್ನು ಕಾಯಬೇಕು ಅಂದರು. ಶೋಕಿಯ ಶರ್ಟ್ ಹಾಕಿಕೊಂಡ್ರೆ ಈ ಕೆಲಸ ನಡೆಯುವುದಿಲ್ಲ ಎಂದು, ಗಾಢ ಬಣ್ಣದ ಜೀನ್ಸ್‌ಪ್ಯಾಂಟ್‌, ಅದಕ್ಕೆ ತಕ್ಕಂತೆ ನೀಲಿ, ಕಪ್ಪು ಗಾಢ ಬಣ್ಣದ ಶರ್ಟ್‌ ಹಾಕಿಕೊಂಡು ಹೋದ್ವಿ. ಜಯನಗರ ಪೊಲೀಸ್‌ ಠಾಣೆಯಲ್ಲಿ ಮೀಟಿಂಗ್‌ ಆಯ್ತು. ಮನೆಯಿರುವ ಸ್ಥಳದ ವಿವರ ಕೊಟ್ರು. ಇಷ್ಟು ದೂರದಲ್ಲಿ ಪೊಲೀಸರು ಗಮನಿಸುತ್ತಿದ್ದಾರೆ ಎಂದೆಲ್ಲ ಹೇಳಿದ್ರು. ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಅವರು. ವಿಶೇಷ ತನಿಖಾ ದಳ, ಸಿಬಿಯವರೆಲ್ಲ ಬರುತ್ತಿದ್ದಾರೆ ಅಂದ್ರು. ನಾವು ತಕ್ಷಣವೇ ಬೇರೆ, ಬೇರೆ ಕಾರುಗಳಲ್ಲಿ ಹೋಗಿ, ಕಾರನ್ನು ದೂರದಲ್ಲಿ ನಿಲ್ಲಿಸಿ, ನಡೆದುಕೊಂಡು ಹೋದ್ವಿ. ಅರ್ಧ ಕಿ.ಮೀ. ದೂರದಲ್ಲಿ ಪೊಲೀಸರು ಇದ್ರು. ಜಡಿ ಮಳೆ ಬರುತ್ತಿತ್ತು. ಕತ್ತಲು ಕವಿಯುತ್ತಿದ್ದ ಸಮಯವದು. ಸಂಜೆ ಸುಮಾರು 5 ಗಂಟೆ ಇರಬಹುದು. ಮನೆ ಎಲ್ಲಿ ಎಂದಾಗ ಅಲ್ಲಿದೆ ಎಂದು ಮೊದಲೇ ನಿಂತಿದ್ದ ಪೊಲೀಸರು ಹೇಳಿದ್ರು. ಮತ್ತೆ ಹತ್ತಿರ ಹೋಗಬೇಕಲ್ವಾ? ಇಲ್ಲಂದ್ರೆ ಅವರು ತಪ್ಪಿಸಿಕೊಳ್ಳಬಹುದು, ನಾವು ಹೋಗ್ತೇವೆ ಎಂದಿದ್ದಕ್ಕೆ ಅವರ ಬಳಿ ಎ.ಕೆ. 47 ಇದೆ ಎಂದು ಕೆಲವರು ಹೆದರಿಸಿದ್ರು. ನಮ್ಮ ಆರು ಜನರ ಬಳಿಯೂ ಪಿಸ್ತೂಲ್‌, ರಿವಾಲ್ವರ್‌ ಇತ್ತು. ಆ ಮನೆಯ ಹತ್ತಿರ ಅರ್ಧ ನಿರ್ಮಾಣ ಸ್ಥಿತಿಯಲ್ಲಿದ್ದ ಮನೆಯ ಬಳಿ ಹೋಗಿ ಅಡ್ಡ ನಿಂತುಕೊಂಡ್ವಿ. ಗಂಟೆ ಮುಂದಕ್ಕೆ ಹೋಗುತ್ತಿತ್ತು. ರಾತ್ರಿಯಾಗುತ್ತಲೇ ಮನೆಯ ಒಳಗಡೆ ಚಲವಲನ ಕಾಣಿಸಲು ಆರಂಭವಾಯಿತು.


ಮುಂದುವರೆಯುವುದು…


ಸಂದರ್ಶಕರು-ಕೆ.ಎಸ್. ಪರಮೇಶ್ವರ


22 views