
ಶಿಸ್ತಿನ ಸಿಪಾಯಿ ಅಶ್ವಥ್ಥ ರೂಢಿಸಿಕೊಂಡ ಶೂಟಿಂಗ್ ಜೀವನ
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 73
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಕಸ್ತೂರಿ ನಿವಾಸ ಶೂಟಿಂಗ್ ಮಾಡುವ ಸಂದರ್ಭದಲ್ಲಿ ರಾಜ್ಕುಮಾರ್ ಅವರ ದೃಶ್ಯಗಳು ಹೆಚ್ಚಾಗಿದ್ದ ಕಾರಣ, ಇವನನ್ನು ಹೊರಗೆ ಕೂರಿಸುತ್ತಿದ್ದೆ. ನಾನು ಹೀಗೆ ಕೂರಿಸಿದ್ದೇನೆ ಎಂದು ಬೇಜಾರಾಯ್ತ ಎಂದು ಕೇಳಿದ್ರೆ, ನನಗೆ ಬೇಜಾರು– ಗೀಜಾರು ಇಲ್ಲ. ನಾನು 5ನೇ ತಾರೀಕು ಬೆಳಿಗ್ಗೆ 9 ರಿಂದ ನಿನಗೆ ಕಾಲ್ಶೀಟ್ ಕೊಟ್ಟಿದ್ದೇನೆ. ಅದು 11ನೇ ತಾರೀಕು ಸಂಜೆ 6 ಗಂಟೆವರೆಗೂ ಇದೆ. ನೀನು ನನ್ನನ್ನು ಕೂರಿಸುತ್ತಿಯೋ, ಏಳಿಸುತ್ತಿಯೋ, ನಿದ್ದೆ ಮಾಡಿಸುತ್ತಿಯೋ ಅದು ಗೊತ್ತಿಲ್ಲ. ಈ ಸಮಯವನ್ನು ನಿನಗೆ ಬರೆದುಕೊಟ್ಟಿದ್ದೇನೆ. ಅದು ನಿನ್ನದು. 11 ನೇ ತಾರೀಕು 6 ಗಂಟೆ ಆದ ಮೇಲೆ ಒಂದು ನಿಮಿಷ ನೀನು ಇಲ್ಲಿ ಇರುವ ಎಂದರೂ ನಾನು ಇರುವುದಿಲ್ಲ. ಯಾಕಂದ್ರೆ ಮರುದಿನದಿಂದ ಬೇರೆಯವರಿಗೆ ಕಾಲ್ಶೀಲ್ ಕೊಟ್ಟಿದ್ದೇನೆ. ನಾನು ಹೋಟೆಲ್ಗೆ ಹೋಗಿ, ಫ್ರೆಶ್ ಅಪ್ ಆಗಿ ರಾತ್ರಿ ಮಲಗಿ, ಬೆಳಿಗ್ಗೆ 6.30 ಗೆ ಶೂಟಿಂಗ್ ಹೋಗಬೇಕು. ಹಾಗಾಗಿ ನೀನು 10 ನಿಮಿಷ ಇರು ಎಂದ್ರು ಇರಲು ಆಗುವುದಿಲ್ಲ ಎನ್ನುತ್ತಿದ್ದ.
ಇದು ನನಗೊಬ್ಬನಿಗೆ ಮಾತ್ರವಲ್ಲ, ಎಲ್ಲರಿಗೂ ಇದನ್ನೇ ಹೇಳುತ್ತಿದ್ದ. ಈ ಮಾತುಗಳನ್ನು ಅಶ್ವತ್ಥ್ ಬಿಟ್ಟು ಬೇರೆ ಯಾರೂ ಹೇಳುತ್ತಿರಲಿಲ್ಲ. ಅಂಥ ಶಿಸ್ತಿನ ಮನುಷ್ಯ ಆತ. ನಟನೆಯ ವಿಷಯಕ್ಕೆ ಬಂದರೆ ಹೇಳಿಕೊಟ್ಟಿದ್ದನ್ನು ತಕ್ಷಣ ಮಾಡುತ್ತಿದ್ದ. ಒಂದೇ ಟೇಕ್ನಲ್ಲೇ ಮುಗಿಸುತ್ತಿದ್ದ.
ಆಗ ಈಗಿನಂತೆ ಇರಲಿಲ್ಲ. ಎರಡನೇ ಟೇಕ್ ಎಂದರೆ ಖರ್ಚು ಹೆಚ್ಚಾಗುತ್ತಿತ್ತು. ಹಾಗಾಗಿ ಚೆನ್ನಾಗಿ ರಿಹರ್ಸಲ್ ಮಾಡುತ್ತಿದ್ದೆವು. ತಪ್ಪುಗಳಿದ್ದರೆ ತಿದ್ದಿ, ಅದನ್ನು ಸರಿಮಾಡಿಕೊಂಡು ಚಿತ್ರೀಕರಣ ಪ್ರಾರಂಭಿಸುತ್ತಿದ್ದೆವು. ಫಿಲ್ಮ್ ತುಂಬಾ ದುಬಾರಿ ಇತ್ತು. ಒಂದು ಸಾವಿರ ಅಡಿ ಕಲರ್ ಫಿಲ್ಮ್ಗೆ 35 ಸಾವಿರದವರೆಗೂ ಇತ್ತು.
ಮುಂದುವರೆಯುವುದು...