ಶಾಸ್ತ್ರಿ ಸತ್ತ ನಂತರ ಕುಟುಂಬದ ಪರಿಸ್ಥಿತಿ

ಸುಮಾ - ಎಲ್. ಎನ್‌ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-22ಕ್ಯಾನ್ಸರ್‌ಗೆ ಗಾಂಜಾದಿಂದ ಮಾಡಿದ ಔಷಧಿ ಕೊಡುತ್ತೇನೆ ಎಂದು ಒಬ್ಬರು ಹೇಳಿದ್ರು. ಅವರು ಬರುವುದರೊಳಗೆ ಶಾಸ್ತ್ರಿ ಹೋಗಿಬಿಟ್ಟಿದ್ರು.


ಕೆಲವು ದೊಡ್ಡ ವ್ಯಕ್ತಿಗಳು ಸಿಂಗಪುರಕ್ಕೆ ಚಿಕಿತ್ಸೆಗೆ ಕರೆದುಕೊಂಡು ಹೋಗೋಣ ಎಂದೆಲ್ಲ ಭರವಸೆ ತುಂಬಿಸಿದ್ರು. ಪಾಪ, ಅವರು ತಯಾರಾದ್ರು. ಆದರೆ, ಮತ್ತೆ ನಾನು ಫೋನ್‌ ಮಾಡಿದ್ರೆ ಅವರಿಂದ ಸುದ್ದಿಯೇ ಇರಲಿಲ್ಲ. ಮೊದಲೇ ಸಾಲದಲ್ಲಿ ಇದ್ವಿ. ಅಲ್ಲಿ ಹೋಗಿ ಚಿಕಿತ್ಸೆ ಕೊಡಿಸುವಷ್ಟು ಹಣ ನಮ್ಮ ಬಳಿ ಇರಲಿಲ್ಲ. ಆದರೆ, ಆ ಹಂತದಲ್ಲಿ ನೀವು ಏನೇ ಚಿಕಿತ್ಸೆ ಕೊಡಿಸಿದ್ರು ವ್ಯರ್ಥ ವಾಗುತ್ತಿತ್ತು. ದುಡ್ಡೊಂದು ಖರ್ಚಾಗುತ್ತಿತ್ತು ಎಂದು ವೈದ್ಯರು ಹೇಳಿದ್ರು.


ಅವರು ತೀರಿಹೋಗುವ ಸಂದರ್ಭದಲ್ಲಿ 50 ವರ್ಷವೂ ಆಗಿರಲಿಲ್ಲ. ಆಗಸ್ಟ್‌ 30 ಅವರು ಹುಟ್ಟಿದ್ದು, ಅದೇ ದಿನಾಂಕದಂದೇ ಅವರು ತೀರಿಹೋದರು. ‘ಹುಟ್ಟಿದ ದಿನವೇ ತೀರಿಹೋಗಿರುವುದರಿಂದ ಆತ ದೈವಿಕ ಮನುಷ್ಯ. ಅವರು ಮತ್ತೆ ಜನುಮ ತಾಳುವ ಸಂದರ್ಭದಲ್ಲಿ ಅವರ ಇಷ್ಟದಂತೆ ಜನ್ಮ ತಾಳುತ್ತಾರೆ’ ಎಂದು ಯಾರೋ ದೊಡ್ಡ ವ್ಯಕ್ತಿ ನನಗೆ ಹೇಳಿದ್ರು.


ಒಬ್ಬಳೆ ಮಗಳು ನಮಗೆ. ವಿಂಧ್ಯ ಎಂದು. ಅವಳನ್ನು ಕಂಡರೆ ಶಾಸ್ತ್ರಿ ಅವರಿಗೆ ಬಹಳ ಇಷ್ಟ. ಕಾಯಿಲೆ ಬಂದಾಗ ಅವಳದೇ ಚಿಂತೆ ಆಗಿತ್ತು ಅವರಿಗೆ. ಸ್ವಂತ ಮನೆಯನ್ನು ಮಾರಿ ಸಾಲ ತೀರಿಸಿದ್ದರಿಂದ, ನಮ್ಮ ಜೀವನಕ್ಕೆ ಈಗ ತೊಂದರೆಯಿಲ್ಲ. ನನ್ನ ಅಣ್ಣ ದೈವಿಕ ಪುರುಷ. ತುಂಬಾ ಒಳ್ಳೆಯ ವ್ಯಕ್ತಿ. ಚಾರ್ಟರ್ಡ್ ಅಕೌಂಟೆಂಟ್‌ ಅವನು. ಶಾಸ್ತ್ರಿ ಅಂದ್ರೆ ತುಂಬಾ ಇಷ್ಟ ಅವನಿಗೆ. ಅವರು ತೀರಿ ಹೋದ ಮೇಲೆ ನನಗೆ ಸ್ವಲ್ಪವೂ ತೊಂದರೆ ಆಗದ್ದಂತೆ ನೋಡಿಕೊಂಡ. ಅಕ್ಕ ಮತ್ತು ಭಾವ ಅವರು ತುಂಬಾ ಸಹಾಯ ಮಾಡಿದ್ರು. ಸದ್ಯಕ್ಕೆ ನಾನು ಪಾರು ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ.ಮುಂದುವರೆಯುವುದು...

18 views