ಸ್ಕೂಟರ್‌ ಹಿಂದೆ ಸಾವು ಎಂದು ಬರೆದಿದ್ದ ವ್ಯಕ್ತಿ ಜ್ಞಾನದ ಮಹಾಪೂರವಾಗಿದ್ದರು

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 19
ನನಗೆ ವಿದೇಶಗಳಿಗೆ ಹೋಗುವ ಅವಕಾಶವೂ ದೊರಕುತ್ತಿತ್ತು. ಒಮ್ಮೆ ಫಾರಿನ್‌ಗೆ ಹೋಗಬೇಕೆಂದ್ರೆ ಕೆಲಸದಲ್ಲಿದ್ದಾಗ ಸರ್ಕಾರದ ಅನುಮತಿಯನ್ನು ಪಡೆಯಬೇಕಿತ್ತು. ಅಮೆರಿಕಕ್ಕೆ ಹೋದೆ. ಆ ಸಮಯದಲ್ಲಿ ಆರ್ಕೆಸ್ಟ್ರಾದವರು ವಿದೇಶಗಳಿಗೆ ಹೋಗುತ್ತಿದ್ದುದು ಬಹಳ ಅಪರೂಪ. ನಾನು ಆ ಸಮಯದಲ್ಲಿ ಬಹಳ ಸಿನಿಮಾ ಮಾಡಿದ್ದೆ. ಕಮರ್ಷಿಯಲ್‌ ಸಿನಿಮಾಗಳಷ್ಟೇ ಅಲ್ಲದೇ, ಕಲಾತ್ಮಕ ಸಿನಿಮಾಗಳನ್ನು ಮಾಡಿದ್ದೆ. ರಾಷ್ಟ್ರೀಯ ಪ್ರಶಸ್ತಿ ಪಡೆದ ಸುರೇಶ್‌ ಹೆಬ್ಳೇಕರ್‌ ಅವರ ‘ಕಾಡಿನ ಬೆಂಕಿ’ಯಲ್ಲಿ ಖಳನಾಯಕ ನಾನು. ದೊಡ್ಡ ಪಾತ್ರವದು. ಆ ಸಿನಿಮಾ 100 ದಿವಸ ಓಡಿತ್ತು.


ಅಲ್ಲಿ ಬರಹಗಾರರೆಲ್ಲ ಇದ್ರು. ಹೀಗೆ ಒಬ್ಬರು ಬಹಳ ಪರಿಚಯವಾದರು. ಅವರ‍್ಯಾರು ಎಂಬುದು ನನಗೆ ಗೊತ್ತಿರಲಿಲ್ಲ. ಅವರು ಮದುವೆಯಾಗಿರಲಿಲ್ಲ. ಮದುವೆ ನಿಶ್ಚಯವಾಗಿತ್ತು. ಆ ಹುಡುಗಿಯೂ ಚಿತ್ರೀಕರಣದ ಸ್ಥಳಕ್ಕೆ ಬಂದಿದ್ರು. ಅವರ ಜೊತೆಗೆ ಹೀಗೆ ಹೋಗುತ್ತಿದ್ದ ವೇಳೆ, ನಾನು ಕಥೆ ಹೇಳುತ್ತೇನೆ ಎಂದು ಹೇಳಿ, ಒಂದು ಕಥೆ ಹೇಳಿದೆ. ಈ ಕಥೆ ನಿನಗೆ ಹೇಗೆ ಗೊತ್ತು, ಎಲ್ಲಿ ಸಿಕ್ತು ಎಂದ್ರು. ಗೊತ್ತಿಲ್ಲ ಯಾರು ಬರೆದದ್ದು ಎಂದು ಕಥೆಯನ್ನು ವಿಡಿಯೊ ಶೂಟ್ ಮಾಡಿ ಸಿನಿಮಾ ಮಾಡಿದ್ದೇವೆ ಎಂದೆ. ಆದರೆ, ಇನ್ನು ರಿಲೀಸ್‌ ಮಾಡಿಲ್ಲ ಎಂದೆ. ಮಾಡುವುದಕ್ಕೂ ಹೋಗಬೇಡಿ ಎಂದ್ರು. ಯಾಕೆ ಎಂದೆ. ಅವರು ಕೇಸ್‌ ಹಾಕಿಬಿಟ್ರೆ ಎಂದ್ರು. ಅವರು ಹೇಗೆ ಕೇಸ್‌ ಹಾಕ್ತಾರೆ ಎಂದೆ. ಅದಕ್ಕವರು ಹಾಕೇ ಹಾಕ್ತಾರೆ ಏಕೆಂದರೆ ಆ ಕಥೆ ಬರೆದದ್ದು ನಾನೇ. ನಾನು ನಾಗತಿಹಳ್ಳಿ ಚಂದ್ರಶೇಖರ್‌ ಎಂದ್ರು. ನನಗೆ ಶಾಕ್‌ ಆಯ್ತು.


ಅವರ ಬಗ್ಗೆ ಕೇಳಿದ್ದೆ. ಸ್ಕೂಟರ್‌ ಹಿಂದೆ ಸಾವು ಎಂದು ಬರೆದ ಏಕೈಕ ವ್ಯಕ್ತಿ ಅವರೇ ಅದು ನನಗೆ ಗೊತ್ತಿತ್ತು. ಅವರೇ ಇವರು ಎಂಬುದು ನನಗೆ ಗೊತ್ತಿರಲಿಲ್ಲ. ಅವರ ಕಥೆಯನ್ನೇ ಅವರಿಗೆ ಒಂದು ಗಂಟೆ ಹೇಳಿದ್ದೆ. ಅವರೂ ಕೇಳಿಸಿಕೊಂಡಿದ್ದರು. ನಂತರದಲ್ಲಿ ನನ್ನ ಡೈಲಾಗ್‌ಗಳನ್ನೆಲ್ಲ ತಿದ್ದುತ್ತಿದ್ರು.

ರಾಜ್‌ಕುಮಾರ್‌ ಅವರು ಅನುಭವದ ಮಹಾಪೂರ. ನಾಗತಿಹಳ್ಳಿ ಜ್ಞಾನದ ಮಹಾಪೂರ. ಅವರು ಅಷ್ಟು ಓದಿದ್ದರೂ ಅವರ ಊರಿನ ಭಾಷಾ ಸೊಗಡನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ನಮ್ಮ ಕನ್ನಡ ಸಿನಿಮಾ ರಂಗ ಇಷ್ಟು ಶ್ರೀಮಂತವಾಗಿರಲು ಇಂಥವರೇ ಕಾರಣ. ಅವರು ಪಾಠ ಮಾಡುವ ಕಾಲೇಜಿನಲ್ಲಿ ಮಿಮಿಕ್ರಿ ಮಾಡಲು ನನ್ನನ್ನು ಕರೆಸಿದ್ರು. ‘ಅಮೆರಿಕ ಅಮೆರಿಕ’ ಚಿತ್ರದ ಶೂಟಿಂಗ್‌ ನಡೆಯುವಾಗ ನಾನು ಶೋ ನಡೆಸಲು ಅಮೆರಿಕಕ್ಕೆ ಹೋಗಿದ್ದೆ. ಅಮೆರಿಕದಲ್ಲಿ ಮನಸ್ಸಿಗೆ ಹತ್ತಿರವಾದ್ದಂತಹ ಘಟನೆಯೊಂದು ನಡೆಯಿತು...ಮುಂದುವರಿಯುವುದು...

47 views