ಸ್ಟಂಟ್‌ ಶಿವಯ್ಯ ಹೇಳಿದ ಗುಂಗುರು ಕೂದಲಿನ ಈ ವಿಲನ್‌ ದೊಡ್ಡ ನಟನಾದ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 81


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ
‘ವೀರಪುತ್ರ’ ಸಿನಿಮಾದಲ್ಲಿ ಸ್ಟಂಟ್‌ ಡೈರೆಕ್ಟರ್‌ ಆಗಿ ಬಂದಿದ್ದ ಶಿವಯ್ಯ, ಸಮಯದ ಗೊಂಬೆ ಸಿನಿಮಾದವರೆಗೂ ನಮ್ಮ ಜೊತೆಯಲ್ಲಿಯೇ ಕೆಲಸ ಮಾಡಿದ್ದ. ಸುಬ್ಬಯ್ಯ ಶಿವಯ್ಯನ ಸಹಾಯಕನಾಗಿದ್ದ. ‘ಜೇಡರ ಬಲೆ’ ಸಿನಿಮಾದಲ್ಲಿ ವಿಲನ್‌ ಪಾತ್ರಧಾರಿ ಬೇಕಿತ್ತು. ಆಗ ಶಿವಯ್ಯ, ‘ಬೆಂಗಳೂರಿನಲ್ಲಿ ಎವರೆಸ್ಟ್‌ ಥಿಯೇಟರ್‌ ಹತ್ತಿರ ಗುಂಗುರು ಕೂದಲಿನ ಒಬ್ಬ ಇದ್ದಾನೆ. ತುಂಬಾ ಚೆನ್ನಾಗಿ ಸ್ಟಂಟ್‌ ಮಾಡ್ತಾನೆ. ದೇಹವೂ ಕಟ್ಟುಮಸ್ತಾಗಿದೆ. ಅವನ ಹೆಸರು ಗೊತ್ತಿಲ್ಲ, ಅವನನ್ನು ಕರೆದುಕೊಂಡು ಬನ್ನಿ ಈ ಪಾತ್ರಕ್ಕೆ ಹೊಂದಿಕೆಯಾಗುತ್ತಾನೆ’ ಎಂದು ಹೇಳಿದ. ಸರಿ ಎಂದು, ನಮ್ಮ ಭೇಟೆ ಶುರು ಮಾಡಿದೆ. ನಾನು ಪ್ರಕಾಶ್‌ ಪಿಕ್ಚರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಎವರೆಸ್ಟ್‌ ಥಿಯೇಟರ್‌ಗೆ ಹೋಗುತ್ತಿದ್ದೆ. ಹಾಗಾಗಿ ಮ್ಯಾನೇಜರ್‌ ಗೊತ್ತಿತ್ತು. ಆಗ ಅವರು ನನಗೆ ಮರ್ಯಾದೆ ಕೊಡುತ್ತಿರಲಿಲ್ಲ. ಈ ಸಮಯದಲ್ಲಿ ನಾನು ಡೈರೆಕ್ಟರ್‌, ಪ್ರೊಡ್ಯೂಸರ್‌ ಆಗಿದ್ದರಿಂದ ಏನು ಬೇಕು ಎಂದು ಗೌರವದಿಂದ ಕೇಳಿದ್ರು. ಇಲ್ಲೊಬ್ಬ ಗುಂಗುರು ಕೂದಲಿನ ವ್ಯಕ್ತಿ ಇದ್ದಾನಂತೆ. ಅವನಿಗೆ ನಟನೆಯ ಆಸಕ್ತಿಯಿದೆ. ಈಗಾಗಲೇ ಸಿನಿಮಾದಲ್ಲಿ ಮಾಡಿದ್ದಾನಂತೆ. ಅವನು ಬೇಕಿತ್ತು ಎಂದು ಹೇಳಿದೆ.


ಅವರು ಗೇಟ್‌ಕೀಪರ್‌ನನ್ನು ಕರೆದು ಕೇಳಿದ್ರು. ಇಲ್ಲಿಯೇ ಸಮೀಪ ಒಬ್ಬ ಇದ್ದಾನೆ. ಅವನ ಹೆಸರು ಪ್ರಭಾಕರ್‌ ಎಂದು ಹೇಳಿದ ಆತ. ಪ್ರಭಾಕರ್‌ ಬಳಿ ನನ್ನನ್ನು ಕರೆದುಕೊಂಡು ಹೋದ. ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಪ್ರಭಾಕರ್‌ ಹತ್ತಿರ ಕೇಳಿದೆ. ಅಯ್ಯೋ ನಾನು ಬಂದೇ ಬರುತ್ತೇನೆ. ರಾಜ್‌ಕುಮಾರ್‌ ಅವರ ಸಿನಿಮಾ ಎಂದ ಮೇಲೆ ಬರದೇ ಇರುತ್ತೇನಾ ಎಂದು ಹೇಳಿದ. ರೈಲ್ವೆ ಟಿಕೆಟ್‌ಗೆ ದುಡ್ಡು ಕೊಟ್ಟು ಮದ್ರಾಸ್‌ಗೆ ಮರುದಿನವೇ ಕರೆಸಿಕೊಂಡೆವು. ಟೈಗರ್‌ ಪ್ರಭಾಕರ್‌, ಶಿವಯ್ಯ ಅವರ ಅನ್ವೇಷಣೆ. ಒಬ್ಬನಿಂದ ಸಿನಿಮಾ ಮಾಡಲು ಸಾಧ್ಯವಾಗುವುದಿಲ್ಲ. ಹತ್ತಾರು ಜನರ ಸಹಕಾರ, ಒತ್ತಾಸೆಯಿಂದಲೇ ನಿರ್ದೇಶಕ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.ಮುಂದುವರೆಯುವುದು...

20 views