ಸೂತ್ರದ ಗೊಂಬೆ ಆಡ್ಸೋವಲ್ಲೂ ಶಂಕರ್‌ ಚಾಣಾಕ್ಷ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 137

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ಶಂಕರ್‌ ನಾಗ್‌ ಜೊತೆ ‘ನಾಗಮಂಡಲ’ಮಾಡಿದ್ವಿ ಇನ್ನೂ ಕೆಲವು ನಾಟಕಗಳನ್ನ ಮಾಡಿದ್ವಿ. ನಾಗಮಂಡಲದಲ್ಲಂತೂ ನನಿಗೆ ಸೂತ್ರದ ಗೊಂಬೆಗಳಲ್ಲಿ ಪರಿಣತಿ ಇದ್ದಿದ್ದರಿಂದ ಎರಡು ಗೊಂಬೆಗಳನ್ನ ಮಾಡಕ್ಕೆ ಹೇಳಿದ್ರು, ಹಾಗಾಗಿ ನಾನು ಒಂದು ನಾಯಿಯ ಬೊಂಬೆಯನ್ನ ಹಾಗೂ ಒಂದು ಹಾವಿನ ಬೊಂಬೆಯನ್ನ ಡಿಸೈನ್ ಮಾಡಿದ್ದೆ. ನಾನು, ಪ್ರಕಾಶ್ ರೈ ಮತ್ತೆ ಇವತ್ತು ಜೀ ಚಾನೆಲಲ್ಲಿ ಕ್ಯಾಮರಾ ಮ್ಯಾನ್ ಆಗಿರುವ ರಾಮ್ಕೀ, ನಾವೆಲ್ಲಾ ಒಂದು ನಾಲ್ಕು ಜನ ಈ ಬೊಂಬೆಗಳನ್ನ ಆಡಿಸ್ತಾ ಇದ್ವಿ. ನಾಯಿ ಆಡ್ಸೋದಕ್ಕೆ ಇಬ್ರು ಹಾವು ಆಡ್ಸೋದಕ್ಕೆ ಇಬ್ರು, ಸೆಟ್ ದೊಡ್ಡದಾಗಿತ್ತು.


ತಮಾಷೆ ಏನಂದ್ರೆ, ಚಿತ್ರಕಲಾ ಪರಿಷತ್ತಲ್ಲಿ ಸೆಟ್ ಹಾಕಿದ್ದಾರೆ, ಹದಿನೈದು ಅಡಿ ಮೇಲಿಂದ ನಾವು ದಾರ ಆಡಿಸ್ಬೇಕು. ನಮಿಗೆ ಆರಡಿ ಮೇಲಿಂದ ಆಡ್ಸಿ ಅಭ್ಯಾಸ ಇರೋದು. ಆರಡಿ ಮೇಲಿಂದ ದಾರ ಎಳೆದಾಗ ಅದು ಬರೋದಕ್ಕೂ ಹನ್ನೆರಡು ಅಡಿ ಮೇಲಿನಿಂದ ಎಳೆದಾಗ ಅದು ಬರೋದಕ್ಕೂ ಸಂಬಂಧನೇ ಇಲ್ಲ. ಡಿಸ್ಟೆನ್ಸ್ ಜಾಸ್ತಿ ಆದಾಗ ಫೋರ್ಸ್ ಜಾಸ್ತಿ ಆಗ್ಬಿಡುತ್ತೆ ಕೈ ಕಾಲು ಕಂಟ್ರೋಲೇ ಸಿಗ್ತಾ ಇರ್ಲಿಲ್ಲ. ಎರಡು ಮೂರು ದಿವ್ಸ ನೋಡಿದ್ರು ಇದ್ಯಾಕೆ ವರ್ಕ್ ಆಗ್ತಿಲ್ಲಾಂತ, ನಾವು ಒಂದು ನಾಯಿಗೆ ಬಾಲಕ್ಕೆ ಸಪರೇಟ್ ದಾರ, ಬಾಯಿಗೆ, ಮುಂದಿನ ಎರಡು ಕಾಲುಗಳಿಗೆ, ಕತ್ತಿಗೆ ಈತರ ಹದಿನಾರು ದಾರ ಮಾಡಿದ್ವಿ, ಅಂದ್ರೆ ಹದಿನಾರು ಕಂಟ್ರೋಲ್ಸ್, ಇಬ್ಬರು ಆಡಿಸ್ಬೇಕು. ಅಂದ್ರೆ ಒಬ್ಬೊಬ್ಬರು ಎಂಟೆಂಟು ದಾರ ಆಡಿಸ್ಬೇಕು.


ದೆನ್ ಯಾವುದೇ ಸೂತ್ರದ ಬೊಂಬೆಯ ಬಗ್ಗೆ ತಿಳುವಳಿಕೆ ಇದೆ ಅಂತ ಯಾವತ್ತೂ ತೋರಿಸ್ಕೊಳ್ಳದೇ ಇದ್ದಂತಹ ಶಂಕರ್ ನಾಗ್ ಎಲ್ಲಾ ದಾರಗಳನ್ನ ಕಟ್ ಮಾಡಿ ನಾಲ್ಕೇ ದಾರಗಳಲ್ಲಿ ಹೇಗೆ ಕಂಟ್ರೋಲ್ ಬೆಟರಾಗಿ ಮಾಡ್ಬಹುದು ಅಂತ ನಮಿಗೆ ಹೇಳಿಕೊಟ್ಟು, ಮರದ ಮೇಲೆ ನಮಿಗೆ ಅರಾಮವಾಗಿ ಓಡಾಡುವ ಹಾಗೆ ಒಂದು ಪ್ಲಾಟ್ ಫಾರ್ಮ್ ಹಾಕಿಕೊಟ್ಟು, ಅಷ್ಟೂ ನಾಟಕಗಳನ್ನ ಮಾಡುವ ಹಾಗೆ ಮಾಡಿದ್ರು. ಚಿತ್ರಕಲಾ ಪರಿಷತ್ತಲ್ಲಿ, ಸುಚಿತ್ರಾದಲ್ಲಿ ಓಪನ್ ಏರಲ್ಲಿ, ಸಂಸದ್ ಅಲ್ಲಿ ಈವನ್ ಕಲ್ಕತ್ತಾದಲ್ಲಿ ಕೂಡ ಎಲ್ಲಾ ಕಡೆ ನಮಿಗೆ ಬೇಕಾದ ಹಾಗೆ ವ್ಯವಸ್ಥೆ ಮಾಡಿಕೊಟ್ಟು ನಾನೇ ಬೊಂಬೆ ಆಡಿಸುವ ಹಾಗೆ ಮಾಡಿಕೊಟ್ಟರು. ಹೀಗೆ ಶಂಕರ್, ಆತನ ಒಳಗಡೆ ಎಲ್ಲಾ ಗೊತ್ತಿತ್ತು. ನನಿಗೆ ಗೊತ್ತು ಅಂತ ಆತ ಯಾವತ್ತೂ ಹೇಳ್ತಿರ್ಲಿಲ್ಲ ತೋರಿಸ್ಕೊಳ್ತಾನೂ ಇರ್ಲಿಲ್ಲ. ಎಷ್ಟೋ ಜನ ಚೂರು ಪಾರು ಗೊತ್ತಿದ್ರೆ ಎಲ್ಲಾ ಸ್ಟೈಲ್ ಮಾಡ್ತಾರೆ, ಆತ ಏನಾದರೂ ತೊಂದರೆ ಆದಾಗ ಸಡನ್ನಾಗಿ ಬಂದು ಸರಿ ಮಾಡ್ತಿದ್ರು, ಅದು ಸರಿ ಹೋಗ್ತಿತ್ತು.


ಆಮೇಲೆ ‘ಆರುಂಧತಿ ನಾಗ್’ಆಕೆ ಇನ್ನೊಬ್ಬ ಅಪರೂಪದ ಹೆಣ್ಣು ಮಗಳು. ನನಿಗೆ ಚೆನ್ನಾಗಿ ನೆನಪಿದೆ, ಐದನೇ ಅಥವಾ ಆರನೇ ಶೊ ‘ನಾಗಮಂಡಲ’ನಾನೇ ಹಾವಿನ ಹೆಡೆ ಆಡಿಸ್ತಾ ಇದ್ದೇನೆ. ಅಗ್ನಿದಿವ್ಯ ಮಾಡ್ತಾಳೆ ಆಕೆ, ಕೈಯಲ್ಲಿ ಹಿಡ್ಕೊತಾಳೆ ಆಕೆ, ಹಾವು ಏನೂ ಮಾಡೋದಿಲ್ಲ. ಅವ್ರು ಹಿಡ್ಕೊಂಡ ಫೋರ್ಸಲ್ಲಿ ನಾನು ಹಿಡ್ಕೊಂಡಿದ್ದ ದಾರ ಬಿದ್ದು ಹೋಗ್ಬಿಡ್ತು. ನಾಟಕ ಮುಂದುವರಿಯಬೇಕಾದ್ರೆ ಹಾವು ಎಲ್ಲೋ ಹೋಗಿ ಬಚ್ಚಿಡ್ಕೋಬೇಕು. ಎಷ್ಟು ಚೆನ್ನಾಗಿ ಆಕೆ ಮಾಡಿದ್ರು ಅಂದ್ರೆ, ಆ ತರಹದ ಪ್ರೆಸನ್ಸ್ ಆಫ್ ಮೈಂಡ್ ಇರುವಂತಹದ್ದು. ಆ ನಿಮಿಶಕ್ಕೆ ಔಚಿತ್ಯ ಪ್ರಜ್ಞೆಯ ಜೊತೆಗೆ ರಂಗಭೂಮಿಯನ್ನು ನಿರ್ವಹಣೆ ಮಾಡುವಂತಹವರು,ಅಂತಹವರನ್ನ ನೋಡಿದ್ದೇ ನನ್ನ ಭಾಗ್ಯ ಅಂತ ನಾನು ಭಾವಿಸ್ತೀನಿ.ಮುಂದುವರೆಯುವುದು…

43 views