“ಸ್ತ್ರೀ ಪಾತ್ರಧಾರಿ ಡಾ. ರಾಜ್‌ ಅವರನ್ನು ಕಂಡಾಗ”


ದೊರೆ-ಭಗವಾನ್‌ ಲೈಫ್‌ ಸ್ಟೋರಿ- ಭಾಗ ೨

(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


ಹಿರಣ್ಣಯ್ಯ ಅವರ ದೇವದಾಸಿ ನಾಟಕದಲ್ಲಿ ಜಡ್ಜ್‌ಪಾತ್ರ ಮಾಡುತ್ತಿದ್ದ ಸಂದರ್ಭದಲ್ಲಿ, ಸುಬ್ಬಣ್ಣ ಅವರು ಯಾವುದೋ ಕೆಲಸಕ್ಕೆಂದು ಮೈಸೂರಿಗೆ ಹೋದ್ರು. ಅವರು ಆ ನಾಟಕದಲ್ಲಿ ವಿಮಲೆ ಎಂಬ ಹೆಣ್ಣು ಪಾತ್ರವನ್ನು ಮಾಡುತ್ತಿದ್ರು. ಅವರು ತುಂಬಾ ಚೆನ್ನಾಗಿದ್ರು ನೋಡಲು, ಹಾಗಾಗಿ ಹೆಣ್ಣಿನ ಪಾತ್ರ ಅವರಿಗೆ ಕೊಡುತ್ತಿದ್ರು. ಆಗೆಲ್ಲ ಮೈಸೂರಿಗೆ ಈಗಿನ ಹಾಗೆ 15 ನಿಮಿಷಕ್ಕೊಂದು ಬಸ್‌ಇರಲಿಲ್ಲ. 15 ಗಂಟೆಗೊಂದರಂತೆ ಬಸ್‌ಇತ್ತು. ಬೆಳಿಗ್ಗೆ 7 ಗಂಟೆಗೆ ಇಲ್ಲಿಂದ ಮೈಸೂರಿಗೆ ಬಸ್‌ ಇತ್ತು. ಅದು ಮಧ್ಯಾಹ್ನ 1 ಗಂಟೆಗೆ ರೀಚ್‌ಆಗುತ್ತಿತ್ತು. ಎಲ್ಲ ಕಡೆ ನಿಂತು, ಜನರನ್ನು ಕರೆದು ಹತ್ತಿಸಿಕೊಂಡು ಹೋಗುವುದರೊಳಗೆ ಅಷ್ಟು ಹೊತ್ತು ಆಗುತ್ತಿತ್ತು. ಅಲ್ಲಿಂದ ಸಂಜೆ 7 ಗಂಟೆಗೆ ಹೊರಟರೆ, ಬೆಳಿಗ್ಗಿನ ಜಾವ ಆ ಬಸ್‌ಇಲ್ಲಿಗೆ ಬರುತ್ತಿತ್ತು.

ಮಧ್ಯಾಹ್ನಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಬರುವ ಬಸ್‌ವೊಂದಿತ್ತು. ಅದು ಸಂಜೆ 6 ಕ್ಕೆ ಇಲ್ಲಿಗೆ ಬರುತ್ತಿತ್ತು. ಆ ಬಸ್‌ಸುಬ್ಬಣ್ಣ ಅವರಿಗೆ ತಪ್ಪಿಹೋಯ್ತು. ಅಂದು ನಾಟಕ ಇತ್ತು. ಸಂಜೆ 6 ಆದ್ರೂ ಸುಬ್ಬಣ್ಣ ಅವರು ಬರಲೇ ಇಲ್ಲ. ಹಿರಣ್ಣಯ್ಯ ಅವರಿಗೆ ತಳಮಳ ಶುರುವಾಯ್ತು. ನಾನು 6 ಗಂಟೆಗೆ ನಾಟಕದ ಸ್ಥಳಕ್ಕೆ ಹೋದೆ. ಆಗ ಅವರು ಭಗವಾನ್‌ವಿಮಲೆ ಪಾತ್ರ ನಿನಗೆ ಮಾಡಲು ಆಗುತ್ತಾ ಎಂದ್ರು. ಇಷ್ಟು ದಿನ ನೋಡಿಕೊಂಡಿದಿಯಲ್ವಾ ಮಾಡಬಹುದಾ ಎಂದ್ರು. ಲಕ್ಷ್ಮಯ್ಯ ಎನ್ನುವವರು ವಿಮಲೆ ಗಂಡನ ಪಾತ್ರ ಮಾಡುತ್ತಿದ್ರು. ಅವರು ಒತ್ತಾಸೆ ಕೊಟ್ರೆ, ಡೈಲಾಗ್‌ಮರೆತರೆ ಅವರು ಮ್ಯಾನೇಜ್ ಮಾಡಿದ್ರೆ ನಾನೂ ಮಾಡುವೆ ಎಂದೆ. ಹೇಗಾದ್ರು ಮಾನೇಜ್‌ಮಾಡು ಇವತ್ತೊಂದು ದಿವಸ ಎಂದು ಅವರಿಗೆ ಹೇಳಿದ್ರು. ನಾನು ಆ ಪಾತ್ರವನ್ನು ಮಾಡಿದೆ. ನಾಟಕ ಮುಗಿದ ಮೇಲೆ ಹಿರಣ್ಣಯ್ಯ ಅವರು ಬಂದು ’ಎಷ್ಟು ಚೆನ್ನಾಗಿ ಮಾಡ್ತಿಯಪ್ಪ ನೀನು, ಎಷ್ಟು ಚೆನ್ನಾಗಿ ಕಾಣಿಸುತ್ತೀಯಾ’ ಇನ್ನು ಮುಂದೆ ಆ ಪಾತ್ರವನ್ನು ನೀನೆ ಮಾಡು ಎಂದು ಬೆನ್ನುತಟ್ಟಿ ಹೇಳಿದ್ರು.

ಮರುದಿನ ಸುಬ್ಬಣ್ಣ ಅವರು ಬಂದ್ರು. ನೀನು ಬರದೇ ಇದ್ದ ದಿನ ಭಗವಾನ್‌ಎಷ್ಟು ಚೆನ್ನಾಗಿ ಆ ಪಾತ್ರವನ್ನು ಮಾಡಿದ್ರು ಗೊತ್ತಾ ಎಂದು ಸುಬ್ಬಣ್ಣ ಅವರ ಬಳಿ ಹಿರಣ್ಣಯ್ಯ ಅವರು ಹೇಳಿದ್ರು. ಅದಕ್ಕವರು ಭಗವಾನ್‌ಅವರೇ ಇನ್ನು ಮುಂದೆ ಆ ಪಾತ್ರ ಮಾಡಲಿ ಎಂದುಬಿಟ್ರು. ನನಗೆ ನಾಟಕ ಮಾಡಿ ಅಭ್ಯಾಸ ಇದೆ. ಅವನಿಗೂ ಅಭ್ಯಾಸ ಆಗಲಿ ಎಂದ್ರು. ಅಂದಿನಿಂದ ನಾನು ವಿಮಲೆ ಪಾತ್ರ ಮಾಡಲು ಆರಂಭಿಸಿದೆ.
ಈ ರೀತಿ ನಾಟಕ ಮಾಡಿಕೊಂಡಿರುವ ವೇಳೆ ಸೂರ್ಯ ನಾರಾಯಣ್‌ಎಂಬುವವರು ಬಂದ್ರು. ಅವರನ್ನು ಸೂರಿ ಎಂದು ಕರೆಯುತ್ತಿದ್ರು. ಅವರು ನೀನು ಈ ಕಂಪನಿಯಲ್ಲಿ ಪರ್ಮನೆಟ್‌ಆಗಿ ಇದ್ದೀಯಾ ಎಂದ್ರು. ಇಲ್ಲ ಹವ್ಯಾಸಿಯಾಗಿ ಬಂದಿದ್ದೇನೆ. ಹಿರಣ್ಣಯ್ಯ ಅವರು ಚಿಕ್ಕ ವಯಸ್ಸಿನಿಂದಲೂ ಗೊತ್ತು. ಅವರೂ ಮಾಡು ಎಂದ್ರು ಮಾಡ್ತಿದ್ದೇನೆ ಎಂದೆ. ನೀನು ಬೇರೆ ಕಡೆ ಬರ್ತಿಯಾ ಎಂದ್ರು. ಇಲ್ಲ, ನನಗೆ ಓದಿಕೊಳ್ಳಲು ಇದೆ ಎಂದೆ. ರಜೆ ದಿವಸಗಳಲ್ಲಿ ಬಾ. ನಿನಗೆ ಕೆಲಸ ಕೊಡ್ತೇನೆ ಎಂದ್ರು. ಇನ್ನೊಂದು ದಿನ ನನ್ನ ಪಾತ್ರ ಮುಗಿಸಿಕೊಂಡು ಹೊರಗೆ ಬಂದೆ. ಆಗ ಅವರು ಬಂದು ನೋಡಪ್ಪ ಏನು ಯೋಚನೆ ಮಾಡಿದ್ದೀಯ, ನನಗೆ ಗೊತ್ತಿಲ್ಲ ನೀನು ಬರಲೇಬೇಕು ಎಂದು ನನ್ನ ಕೈಯಲ್ಲಿ ಏನೋ ಇಟ್ಟು ಹೋದ್ರು. ಅವರು ಹೋದ ಮೇಲೆ ತೆಗೆದು ನೋಡಿದ್ರೆ, 100 ರೂಪಾಯಿಯ 3 ನೋಟು ಇತ್ತು. ನನ್ನ ಜೀವನದಲ್ಲಿ ಅಲ್ಲಿಯವರೆಗೂ ನಾನು 100 ರೂಪಾಯಿ ನೋಟು ನೋಡಿರಲಿಲ್ಲ. ಆಗ 100 ರೂಪಾಯಿ ನೋಟ್‌ಸೈಜ್‌ಸ್ವಲ್ಪ ದೊಡ್ಡದಿತ್ತು. ಆ ನೋಟು ನೋಡಿ ನನಗೆ ಮೂರ್ಛೆ ಹೋಗುವ ಹಾಗೆ ಆಯ್ತು.

ನಾಟಕದಲ್ಲಿ ಇಷ್ಟೊಂದು ದುಡ್ಡು ಕೊಡ್ತಾರೆ ಎಂದ್ರೆ ಅಬ್ಬಾ ಎನ್ನುವಂತಾಯಿತು. ಮರುದಿನ ಮತ್ತೆ ಬಂದ್ರು. ಆಗ ನಾನು ಅವರ ಬಳಿ ನಾನು ಬರ್ತೇನೆ ಎಂದೆ. ಸರಿ, ಮುಂದಿನ ಸೋಮವಾರ ಕೃಷ್ಣರಾಜ ಪೇಟೆಗೆ ಹೋಗು ಎಂದ್ರು. ನಾನು ಹೋದೆ. ವಿಶ್ವಾಮಿತ್ರ ನಾಟಕದಲ್ಲಿ ಗಾಯತ್ರಿ ಪಾತ್ರವನ್ನು ಹೆಣ್ಣು ಮಕ್ಕಳು ಮಾಡಬಾರದು. ಗಂಡೇ ಮಾಡಬೇಕು ಎಂದು ಗುಂಡುರಾಯರು ಹೇಳಿದ್ರು. ಹೆಣ್ಣು ಮಾಡಿದ್ರೆ ಮೈಲಿಗೆ ಆಗುತ್ತದೆ ಎಂಬುದು ಅವರ ಭಾವನೆಯಾಗಿತ್ತು. ಹಾಗಾಗಿ ಸೂರಿ ಅವರು ನನ್ನನ್ನು ಅಷ್ಟು ಒತ್ತಾಯ ಮಾಡಿದ್ದು. ತಿಂಗಳಿಗೆ ₹ 300 ಸಂಬಳ ಅಂದಿದ್ರು. ಹೆಣ್ಣುಪಾತ್ರ ಮಾಡಲು ಗಂಡುಮಕ್ಕಳು ಸಿಗುತ್ತಿರಲಿಲ್ಲ. ಹಾಗಾಗಿ, ಅನಿವಾರ್ಯವಾಗಿ ಅಷ್ಟೊಂದು ಸಂಬಳವನ್ನು ಆ ಕಾಲದಲ್ಲಿ ಕೊಡುತ್ತಿದ್ರು. ವಿಮಲೆ ಪಾತ್ರದಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೆ ನಾನು.

ಹೆಚ್ಚುಕಮ್ಮಿ 51ನೇ ಇಸವಿಯಲ್ಲಿ ಜಿ.ವಿ.ಅಯ್ಯರ್‌, ನಟ ಟಿ.ಎನ್.ಬಾಲಕೃಷ್ಣ ಸೇರಿ ಬೇಡರ ಕಣ್ಣಪ್ಪ ನಾಟಕ ಬರೆಯುತ್ತಿದ್ರು. ಬೆಂಗಳೂರಿನಿಂದ ಕಾಲೇಜು ಹುಡುಗ ಬಂದಿದ್ದಾನೆ ಹೆಣ್ಣು ಪಾತ್ರ ಮಾಡಲು ಕರೆಸಿದ್ದಾರೆ. ನೋಡಲು ಚೆನ್ನಾಗಿದ್ದಾನೆ ಎಂದು ಯಾರೋ ಅವರಿಗೆ ಹೇಳಿದ್ರು. ಆಗ ಅವರು ಕರೆಸು ಎಂದು ಹೇಳಿದ್ರು. ನಾನು ಹೋದೆ. ಅಯ್ಯರ್‌ಅವರ ಅಕ್ಷರ ಚೆನ್ನಾಗಿದ್ರೂ, ಲೈನ್‌ಪ್ರಕಾರ ಬರೆಯುತ್ತಿರಲಿಲ್ಲ. ಕೆಳಗಿನಿಂದ ಶುರುಮಾಡಿ ಬೆಟ್ಟ ಹತ್ತುವ ಬೆರವಣಿಗೆ ಅವರದು. ನಾನು ಹೇಗೇಗೋ ಬರೆಯುತ್ತೇನೆ ಅದನ್ನೆಲ್ಲ ನೀನು ನೀಟ್‌ಮಾಡ್ತೀಯಾ ಎಂದ್ರು. ಆಯ್ತು ನಾನು ಬಂದಿರುವುದೇ ಕೆಲಸ ಮಾಡಲು ಮಾಡಿ ಕೊಡ್ತೇನೆ ಎಂದೆ. ಹೇಗೆ ಬರೆಯುತ್ತೀಯಾ ಎಂದು ನೋಡೋಣ ಎಂದು ಬುಕ್‌ತಂದು ಕೊಟ್ರು, ಮೊದಲ ಪೇಜ್ ಬರೆದು ತೋರಿಸಿದೆ. ಅದನ್ನು ನೋಡಿದ ಅವರು ಕಣ್ಣಿಗೆ ಒತ್ತಿಕೊಂಡು ಏನಪ್ಪ ನಿನ್ನ ಅಕ್ಷರ ಇದು. ಎಷ್ಟು ಚೆನ್ನಾಗಿ ಬರೆದಿದ್ದೀಯಾ, ನಾನು ಬರೆದ ಹಳೆಯ ನಾಟಕವನ್ನೆಲ್ಲ ನೀನೇ ಬರಿ ಎಂದ್ರು. ನಮ್ಮ ತಂದೆಯ ಬಳವಳಿ ಅದು. ನಮ್ಮ ಮನೆಯಲ್ಲಿ ಎಲ್ಲರ ಅಕ್ಷರವೂ ಮುದ್ದಾಗಿದೆ. ಅಂದಿನಿಂದ ಅವರು ಬರೆದಿದ್ದನ್ನೆಲ್ಲ ಲೆಡ್ಜರ್‌ತೆಗೆದುಕೊಂಡು ಮತ್ತೆ ಬರೆದೆ. ಬೇಡರ ಕಣ್ಣಪ್ಪ ನಾಟಕವನ್ನು ಬರೆದೆ. ನನಗೆ ಅದರಲ್ಲಿ ಪಾತ್ರ ಇರಲಿಲ್ಲ. ಗುಂಪಿನಲ್ಲಿ ಬಂದು ಹೋಗುವುದಷ್ಟೇ ಇತ್ತು.

ವಿಶ್ವಾಮಿತ್ರ ನಾಟಕದಲ್ಲಿ ಗಾಯತ್ರಿ ನಾನು. ಆಕೆಯದೇ ಮುಖ್ಯ ಪಾತ್ರ ಅದರಲ್ಲಿ. ಜಿ.ವಿ.ಅಯ್ಯರ್‌ಅವರು, ಇವನು ತುಂಬಾ ವಿದ್ಯಾವಂತನಿದ್ದಾನೆ. ಸುಮ್ನೆ ಕೂರಿಸಿದ್ರೆ ಸರಿ ಇರಲ್ಲ ಎಂದು, ನನಗೆ ನಾಟಕ ಕಂಪನಿಯಲ್ಲಿ ಪ್ರಾಕ್ಟೀಸ್‌ಮ್ಯಾನೇಜರ್ ಹುದ್ದೆ ಕೊಟ್ಟರು. ಬೆಳಿಗ್ಗೆ 11 ಗಂಟೆಗೆ ಎಲ್ಲರನ್ನೂ ಸೇರಿಸಿ ನಾಟಕ ಪ್ರಾಕ್ಟೀಸ್‌ಮಾಡಿಸುವ ಜವಾಬ್ದಾರಿ ಇವನದು ಎಂದರು. ಇದರಿಂದಾಗಿ ಎಲ್ಲಾ ಪಾತ್ರಗಳಲ್ಲೂ ಹೊಕ್ಕಿಬರುವ ಅವಕಾಶ ನನಗೆ ದೊರಕಿತು. ಎಲ್ಲರೂ ಅನುಭವಸ್ಥರೇ ಇದ್ರು. ಎಲ್ಲಾ ಪಾತ್ರಗಳು ನನ್ನ ತಲೆಯಲ್ಲಿ ಕೂರುತ್ತಿತ್ತು. ಹೀಗೆ ನಾಟಕಾಭ್ಯಾಸ ಮುಂದುವರಿಯಿತು.

ಮಳೆಗಾಲ ಬಂತು. ನಾನು ಬೆಂಗಳೂರಿಗೆ ಬಂದೆ. ನವಂಬರ್‌ಗೆ ವಾಪಸ್‌ಬರಬೇಕು ಎಂದ್ರು. ಆಗ ನನ್ನ ತಂದೆಯವರು ಇರದ ಕಾರಣ, ಸಂಸಾರದ ಜವಾಬ್ದಾರಿ ನನ್ನ ಮಾವನ ಕೈಯಲ್ಲಿತ್ತು. ಅವರು ಪೊಲೀಸ್‌ಇನ್‌ಸ್ಪೆಕ್ಟರ್‌ಆಗಿದ್ರು. ಆಗ ನನ್ನ ತಂಗಿಯ ಮದುವೆ ಇತ್ತು, ಮಾವನೇ ಆಕೆಯನ್ನು ದತ್ತು ತೆಗೆದುಕೊಂಡಿದ್ರು. ಮದುವೆ ಇದೆ ಎಂದೇ ಅಲ್ಲಿಂದ ನಾನು ಬಂದಿದ್ದು. ಬಂದ ಮೇಲೆ ನಾನು ತಿರುಗಿ ಹೋಗ್ತೇನೆ ಎಂದು, ಕೋಣೆಯಲ್ಲಿ ಕೂಡಿಹಾಕಿ ಮಾವ, ಬೆಲ್ಟ್‌ನಲ್ಲಿ ಸರಿಯಾಗಿ ಬಾರಿಸಿದ್ರು. ಅವರು ಪೊಲೀಸ್‌ಇನ್‌ಸ್ಪೆಕ್ಟರ್‌ಬೇರೆ. ಆಗಿನ ಕಾಲದಲ್ಲಿ ಲಾಠಿ ಇರಲಿಲ್ಲ. ಬೆಲ್ಟ್‌ನಲ್ಲಿಯೇ ಹೊಡೆಯುತ್ತಿದ್ದಿದ್ದು ಪೊಲೀಸ್‌ನವರು. ‘ಮುಂಡೆದೇ, ಇನ್ನು ಮುಂದೆ ನಾಟಕ, ಸಿನಿಮಾ ಎಂದು ಹೋದ್ರೆ ನಿನ್ನ ಜೀವ ತೆಗೆಯುತ್ತೇನೆ ಹುಷಾರ್‌. ವಿದ್ಯೆ ಕಡೆ ಗಮನ ಕೊಡು. ಬೆಂಡೆತ್ತಿ ಬಿಡುತ್ತೇನೆ. ನಾನು ಇನ್‌ಸ್ಪೆಕ್ಟರ್‌ಅನ್ನುವುದು ಗೊತ್ತಿಲ್ವಾ, ಎಂತೆಂಥ ಕಳ್ಳರನ್ನೆಲ್ಲ ಹ್ಯಾಂಡಲ್‌ಮಾಡ್ತೇನೆ. ನಿನ್ನನ್ನು ಒಬ್ಬ ಕಳ್ಳನ ರೀತಿಯೇ ಸರಿದಾರಿಗೆ ತರುತ್ತೇನೆ’ ಎಂದ್ರು. ಇದಾದ ಮೇಲೆ ನಾನು ನಾಟಕವನ್ನು ಮರೆತು ಬಿಟ್ಟೆ. ವಿದ್ಯಾಭ್ಯಾಸ ಮುಂದುವರಿಯಿತು.

ನನ್ನ ಅಣ್ಣನ ನೆರವಿನಿಂದ ವಿದ್ಯಾಭ್ಯಾಸ ಮುಗಿಸಿದೆ. ಹೊಟ್ಟೆಪಾಡಿಗಾಗಿ ಕೆಲಸ ಹುಡುಕಬೇಕಿತ್ತು. ಏನು ಮಾಡಬೇಕು ಎಂದು ಯೋಚಿಸಿದಾಗ, ಪಕ್ಕದ ರಸ್ತೆಯಲ್ಲಿ ಪರಿಚಿತನಾದ ಗೆಳೆಯನಿದ್ದ. ಒಂದೇ ಅಂಗಡಿಯಲ್ಲಿ ವಸ್ತುಗಳನ್ನು ತರಲು ಹೋಗುತ್ತಿದ್ದಾಗ ಅವನ ಪರಿಚಯ ಆಗಿತ್ತು. ಅವನ ಹೆಸರು ಭೀಮರಾವ್‌ಎಂದು. ಪ್ರಕಾಶ್‌ಪಿಕ್ಚರ್ಸ್‌ಎಂದು ಗಾಂಧಿನಗರದಲ್ಲಿತ್ತು. ಅವನು ಅಲ್ಲಿ ಕೆಲಸ ಮಾಡುತ್ತಿದ್ದ. ನಾನು ಒಂದು ದಿವಸ ಮಾತನಾಡುತ್ತಿದ್ದ ವೇಳೆ, ಕೆಲಸಕ್ಕೆ ಟ್ರೈ ಮಾಡ್ತಿದ್ದೇನೆ ಎಂದೆ. ಸಿನಿಮಾದಲ್ಲಿ ಕೆಲಸ ಮಾಡ್ತೀಯಾ ಎಂದ. ಯಾವ ಕೆಲಸ ಆದ್ರೂ ಪರ್ವಾಗಿಲ್ಲ. ನಾಟಕದಲ್ಲಿ ಮಾಡುತ್ತಿದ್ದೆ. ಹಾಗಾಗಿ ಸಿನಿಮಾದ ಕೆಲಸ ಸುಲಭವಾಗಬಹುದು ಎಂದೆ. ಹಾಗಿದ್ರೆ, ನನ್ನ ಯಜಮಾನರನ್ನು ಕೇಳಿ ನಾಳೆ ಹೇಳ್ತೇನೆ ಎಂದ. ಮರುದಿನ ಯಜಮಾನರನ್ನು ಕೇಳಿದ್ದಾನೆ. ಆಗ ಅವರು ಕರೆದುಕೊಂಡು ಬಾ, ನನಗೆ ಓದಿರುವ ಹುಡುಗರೇ ಬೇಕಿರುವುದು ಎಂದಿದ್ದರು. ನಾನು ಹೋದೆ. ನಾನು ಟೈಪಿಂಗ್‌, ಶಾರ್ಟ್‌ಹ್ಯಾಂಡ್‌ಎಲ್ಲ ಕಲಿತಿದ್ದೆ. ನಮ್ಮ ಮನೆಯಲ್ಲಿ ವಿದ್ಯೆಗೆ ಹೆಚ್ಚು ಒತ್ತು ಕೊಡುತ್ತಿದ್ರು. ರೆಪ್ರೆಸೆಂಟೇಟಿವ್‌ಕೆಲಸ ಎಂದ್ರು. ಆ ಕಾಲದಲ್ಲಿ ರೆಪ್ರೆಸೆಂಟೇಟಿವ್‌ಎಂದ್ರೆ ಘನತೆಯುಕ್ತ ಕಾವಲುಗಾರನ ಕೆಲಸ ಇದ್ದಂತೆ. ಮಾಲೀಕರು ಅಥವಾ ಕೆಲಸಗಾರರು ಟಿಕೆಟ್‌ರೀಸೇಲ್‌ಮಾಡದ ಹಾಗೆ, ಕಂಪನಿಗೆ ಜಾಸ್ತಿ ದುಡ್ಡು ಬರುವ ನೋಡಿಕೊಳ್ಳುವ ಕೆಲಸ ನಮ್ಮದು. ₹5 ರೂಪಾಯಿ ದಿವಸಕ್ಕೆ ಸಂಪಾದನೆ ನನಗೆ. ಕೆಲಸ ಇದ್ದಾಗ ಮಾತ್ರ ಅಷ್ಟು ದುಡ್ಡು ಸಿಗುತ್ತಿತ್ತು. ಕೆಲಸ ಇಲ್ಲದಾಗ 5 ರೂಪಾಯಿ ಸಿಗುತ್ತಿರಲಿಲ್ಲ.

ಪ್ರಕಾಶ್‌ಪಿಕ್ಚರ್ಸ್‌ನಲ್ಲಿ ಮೂರು ಒಳ್ಳೆಯ ಸಿನಿಮಾ ಇತ್ತು. ಕೆಂಪರಾಜು ಅವರ ಮೊದಲ ಚಿತ್ರ ‘ರಾಜಾ ವಿಕ್ರಮ’, ಕಲ್ಯಾಣ್‌ಕುಮಾರ್‌ಅವರ ಮೊದಲ ಚಿತ್ರ ‘ನಟ ಶೇಖರ’, ‘ಥೂಕ್ಕು ತೂಕ್ಕಿ’ ಶಿವಾಜಿ ಗಣೇಶನ್‌ಅವರ ಸಿನಿಮಾ ಇದಿದ್ದರಿಂದ ಅಲ್ಲಿ ಬಿಡುವೇ ಇರುತ್ತಿರಲಿಲ್ಲ. ಪ್ರತಿದಿನ ಕೆಲಸ ಇತ್ತು. ಒಂದೂರಿಂದ ಇನ್ನೊಂದು ಊರು ಎಂದು ಇಡೀ ಕರ್ನಾಟಕ ಟೂರ್‌ಮಾಡಿದ್ದೆ. ಅಷ್ಟು ಕೆಲಸ ಇತ್ತು. ಇಂಟರ್‌ವಲ್‌ಗಿಂತ ಮೊದಲು ತಲೆ ಲೆಕ್ಕಹಾಕಿಕೊಂಡು ಬರುತ್ತಿದ್ದೆ. ಅಷ್ಟು ಟಿಕೆಟ್‌ಅವರ ಹತ್ತಿರ ಇರಬೇಕು. ಇಲ್ಲದಿದ್ದರೆ ಕಳ್ಳತನ ಮಾಡಿದ್ದಾರೆ ಎಂದು ಲೆಕ್ಕ ಹಾಕುತ್ತಿದ್ದೆ. ಫ್ರಿಯಾಗಿ ಬಿಡಬೇಕು ಎಂದ್ರೆ ನನ್ನ ಕೇಳಿ ನಾನು ಕಳುಹಿಸಿಕೊಡ್ತೇನೆ ಎಂದು ಮಾಲೀಕರಿಗೆ ಹೇಳುತ್ತಿದ್ದೆ. ಈ ರೀತಿ ಮಾಡಿ, ಕಳ್ಳತನ ಮಾಡುವುದನ್ನು ಹಿಡಿದು, ಜಾಸ್ತಿ ದುಡ್ಡು ತಂದು ಇವರಿಗೆ ಕೊಡುತ್ತಿದ್ದೆ. ಇದರಿಂದ, ಪ್ರಕಾಶ್‌ಪಿಕ್ಚರ್ ಮಾತ್ರವಲ್ಲದೇ, ತಲ್ಲಂ, ಶಾಂತಾ ಪಿಕ್ಚರ್ಸ್‌... ಹೀಗೆ ಎಲ್ಲರೂ ಭಗವಾನ್‌ಕಳುಹಿಸಿ ಅನ್ನುತ್ತಿದ್ರು. ಅಲ್ಲಿಯೂ ಒಳ್ಳೆಯ ಹೆಸರು ತೆಗೆದುಕೊಂಡೆ.

ಈ ಮೂರು ಪಿಕ್ಚರ್‌ಗಳಿಗೆ ಹಣದ ಸುರಿಮಳೆಯೇ ಬಂತು. ಜಾತ್ರೆಗಳಲ್ಲಿ ರಾಜಾ ವಿಕ್ರಮ ಸಿನಿಮಾ ನಮಗೆ ಕೊಡಿ ₹10 ಸಾವಿರ ಕೊಡ್ತೇವೆ ಎಂದು ದುಂಬಾಲು ಬೀಳುತ್ತಿದ್ರು. ಶೇರಿಂಗ್‌ನಲ್ಲಿ ಕೊಡ್ತೇವೆ. ಎಷ್ಟಾಗುತ್ತೋ ನಿನಗೆ ಅರ್ಧ ನನಗೆ ಅರ್ಧ ಎಂದು ಪ್ರಕಾಶ್‌ಪಿಕ್ಚರ್ಸ್‌ನವರು ಹೇಳುತ್ತಿದ್ರು. ನನ್ನನ್ನು ಟೆಂಟ್‌ಗೆ ಕಳುಹಿಸುತ್ತಿದ್ರು. ಅಲ್ಲಿ ಟಿಕೆಟ್‌ಕೊಡಲು ಆಗುತ್ತಿರಲಿಲ್ಲ. ಕುತ್ತಿಗೆಗೆ ಟವಲನ್ನು ಗಟ್ಟಿಯಾಗಿ ಹಾಕಿಕೊಂಡು ನಿಂತಿರುತ್ತಿದ್ದೆ. ಎರಡು ಅಣೆ ಹಾಕಿ ಜನರು ಒಳಗೆ ಹೋಗುತ್ತಿದ್ರು. ಟವಲ್‌ಹಿಡಿದುಕೊಳ್ಳಲು ಭಾರವಾಗುತ್ತಿತ್ತು. ದುಡ್ಡಿನಿಂದ ಅಷ್ಟು ತುಂಬಿ ಹೋಗುತ್ತಿತ್ತು. ಇಡೀ ಸಿನಿಮಾ ಕ್ಷೇತ್ರದಲ್ಲಿ ನಾನ್ನೊಬ್ಬನೇ ಅನಿಸುತ್ತದೆ ಈ ಕ್ಷೇತ್ರದ ಬೇರಿನಿಂದ ಬೆಳೆದಿರುವವನು. ಗೇಟ್‌ಕೀಪರ್‌ನಿಂದ, ಪ್ರೊಡ್ಯೂಸರ್‌, ಡೈರೆಕ್ಟರ್‌...ನಂತರ ದಾದಾಸಾಹೇಬ್‌ಫಾಲ್ಕೆವರೆಗೂ ಹೋದವನು ಬಹುಶಃ ನಾನ್ನೊಬ್ಬನೇ.ಮುಂದುವರೆಯುವುದು...


ಸಂದರ್ಶಕರು

ಕೆ.ಎಸ್‌ ಪರಮೇಶ್ವರ

56 views