ಸುಧೀರ್‌ ಅವರ ಸಾವು ನಮ್ಮನ್ನ ಅನಾಥರನ್ನಾಗಿಸಿತ್ತು

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 15

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಅವರು ಹೋದ್ಮೇಲೆ ನಮ್ಮ ಜೀವನದಲ್ಲಿ ಯಾತನೆ ಶುರುವಾಯ್ತು, ಏನು ಮಾಡ್ಬೇಕು? ನಾನು ಮನೆ ಗೃಹಿಣಿಯಾಗಿದ್ದವಳು, ಮಕ್ಕಳಿಬ್ಬರು ಚಿಕ್ಕವರಿದ್ದಾರೆ, ಸ್ವಂತ ಮನೆ ಇತ್ತು ಅಷ್ಟೇ ಬಿಟ್ರೆ ಬೇರೇನೂ ಪ್ರಾಪರ್ಟಿ ಇರ್ಲಿಲ್ಲ ಸುಧೀರ್ ಐವತ್ತು ವರ್ಷಕ್ಕೇ ಸಾಯ್ತಾರೆ ಅಂತ ನಾವು ಕನಸಲ್ಲೂ ಅನ್ಕೊಂಡಿರ್ಲಿಲ್ಲ. ನಮಗೆ ಆ ಥಾಟ್ಸೂ ಬಂದಿರ್ಲಿಲ್ಲ. ಏನು ಮಾಡೋದು ಮಕ್ಕಳನ್ನ ಕಟ್ಕೊಂಡು? ಅವರು ಒಂದು ನಾಟಕದ ಕಂಪೆನಿ ಮಾಡಿದ್ರು ಕರ್ನಾಟಕ ಕಲಾ ವೈಭವ ಸಂಘ ಅಂತ. ನಂಗೆ ನಾಟಕದ ಕಂಪೆನಿ ಅಂದ್ರೆ ತುಂಬಾ ಸಿಟ್ಟು. “ಮತ್ತೆ ನೀವು ಆತಗಡಿನ ಕಂಪೆನಿಗೆ ಹೋಗ್ಕೂಡ್ದು. ನಿಮಗೆ ಚಿತ್ರರಂಗದಲ್ಲಿ ಒಳ್ಳೆ ಹೆಸರು ಬಂದಿದೆ, ಸುಮಾರು ದುಡ್ಡು ಬರ್ತಾ ಇದೆ”ಇಬ್ಬರು ಮುದ್ದಿನಂತಾ ಮಕ್ಕಳಿದ್ದಾರೆ. ನೀವು ಯಾಕೆ ಮತ್ತೆ ನಾಟಕದ ಕಂಪೆನಿಗೆ ಹೋಗ್ಬೇಕು? ಹಾಗೆ ಬೇಕಾದ್ರೆ ನಾಲಕ್ಕು ಜನಕ್ಕೆ ಸಹಾಯ ಮಾಡ್ರೀ, ನಾಲಕ್ಕು ಜನಕ್ಕೆ ತೊಂದ್ರೆ ಇದೆ ಅಂತಂದ್ರೆ ವೀರಸಿಂಧೂರ ಲಕ್ಷ್ಮಣ ಅಥಾವ ಗೌಡರ ಗದ್ದಲ ನಾಟಕ ಮಾಡಿ.


ಪರಮ್: ಅವೆರಡೇ ಫೇಮಸ್?


ಮಾಲತಿ ಸುಧೀರ್: ಹೌದು ಕೊನೇ ವರೆಗೂ ಅವೆರಡೇ ಫೇಮಸ್ ನಾಟಕಗಳು. ನಾಟಕ ಮಾಡ್ತಿದ್ರು ಅವರಿಗೆ ಏನೋ ಸಂಭಾವನೆ ಕೊಡ್ತಿದ್ರು. ಒಂದೊಂದ್ಸಲ ಕೊಡ್ತಿರ್ಲಿಲ್ಲ. ಹಂಗೇ ಕಳಿಸ್ತಿದ್ರು. ಕೆಲವೊಮ್ಮೆ ಕೈತುಂಬಾ ಕೊಡ್ತಿದ್ರು. ಅದೂ ನಮಗೆ ಸಾಕಿತ್ತು, ಹಾಗಾಗಿ ಕಂಪೆನಿ ಮಾಡೋದು ಬೇಡ, ಕಂಪೆನಿ ಅಂದ್ರೆ ಅವರಿಗೆ ಜವಾಬ್ದಾರಿ ಬೀಳುತ್ತೆ. ಸುಧೀರ್ ಅವರೇ ಇಡೀ ಜವಾಬ್ದಾರಿ ತಗೋ ಬೇಕಾಗುತ್ತೆ. ಅದು ಮಾತ್ರ ಬೇಡ, ಅಂತೂ ಅವರಿಗೆ ಏನು ಮನಸ್ಸಾಯ್ತೋ ಏನೋ ಒಂದು ಕಂಪೆನಿ ಮಾಡಿದ್ರು. ಎರಡು ವರ್ಷ ಆಗಿತ್ತು ಕಂಪೆನಿ ಮಾಡಿ.


ಪರಮ್: ಸಿನಿಮಾ ನಟ ಆಗಿ ಬ್ಯುಸಿ ಆದ್ಮೇಲೆ?


ಮಾಲತಿ ಸುಧೀರ್: ಹೌದು ಬ್ಯುಸಿ ಆದ್ಮೇಲೆ ನಾಟಕದ ಕಂಪೆನಿ ಮಾಡಿದ್ರು. ಕರ್ನಾಟಕ ಕಲಾ ವೈಭವ ಸಂಘ ಅಂದ್ರೆ ಕರ್ನಾಟಕದಲ್ಲಿರುವ ಕಲಾವಿದರೆಲ್ಲಾ ವೈಭವವಾಗಿ ಈಸಂಘದಲ್ಲಿ ಇರ್ಬೇಕು. ಅದು ಅವರ ಉದ್ದೇಶ ಆಗಿತ್ತು. ಸರಿ ನಾನು ಎರಡು ವರ್ಷ ಕಂಪೆನಿ ಮಾಡಿದ್ರೂ ಆಕಂಪೆನಿ ಕಡೆ ಹೋಗ್ತನೇ ಇರ್ಲಿಲ್ಲ “ಏಯ್ ನಂಗೆ ಬೇಡಪ್ಪಾ ಅದು”ಅಂತ. ಅಲ್ಲಿ ಒಬ್ರು ಮ್ಯಾನೇಜರ್ ಹಾಗೂ ಹಿರಿಯೂರು ಸಿದ್ದಣ್ಣ ಅವರು ಅಂತ ಇದ್ರು. ಅವರು ಅದರ ಮಾನೇಜ್ಮೆಂಟ್ ನಡೆಸ್ಕೊಂಡು ಹೋಗ್ತಾ ಇದ್ರು. ಏಲ್ಲಾದ್ರೂ ಅವರಿಗೆ ಲಾಸ್ ಅಂದ್ರೆ ಸುಧೀರ್ ಅವರು ಅಲ್ಲಿಗೆ ಹೋಗಿ ಒಂದು 10 ಡೇಸ್ ಅವರಿಗೆ ಕಲೆಕ್ಷನ್ ಮಾಡ್ಕೊಟ್ಟು ಬರ್ತಿದ್ರು. ಅವಾಗ ಸುಧೀರ್ ಅವರ ನಾಟಕ ಅಂದ್ರೆ ಟಿಕೇಟೇ ಸಿಗ್ತಿರ್ಲಿಲ್ಲ. ದೊಡ್ಡ ಸ್ಟಾರ್ ಆಗಿಟ್ಟಿದ್ರು “ಲೇ ನಮ್ಮೂರಿಗೆ ಸುಧೀರ್ ಬರ್ತಾ ಇದ್ದಾನ್ಲೇ”ಅಂತಂದ್ರೆ ಯಾರೂ ಮಲಗ್ತಾ ಇರ್ಲಿಲ್ಲ. ಅಷ್ಟು ದೊಡ್ಡ ಹೆಸರಲ್ಲಿ ಆಕಂಪೆನಿ ನಡಿತಾ ಇತ್ತು. ಸುಧೀರ್ ಅವರು ಹೋದ್ಮೇಲೆ ಆಕಂಪನಿ ಬಂದ್ ಮಾಡ್ಬೇಕಾ? ಅಥವಾ ನನ್ನ ಬದುಕಿಗೆ ದಾರಿಯಾಗುತ್ತಾ? ಏನು ಅಂತ ಗೊತ್ತಾಗ್ತಿರ್ಲಿಲ್ಲ. ಅವಾಗ ಎಲ್ಲಾ ಕಲಾವಿದರು ಬಂದು “ಮಾಲತಿ ಅಮ್ಮ ಅವರೇ ಈಗ ನೀವು ಗಿಡವಾಗಿ ನಿಲ್ಬೇಕು. ನೀವು ಗಿಡ ಆಗಿ ನಿಂತ್ರೆ ನಾವೆಲ್ರೂ ಅದರ ನೆರಳಲ್ಲಿ ಬದಕ್ತೀವಿ. ಇಲ್ಲಾಂದ್ರೆ ಸುಧೀರ್ ಅಣ್ಣಾವ್ರ ಕನಸು ನನಸಾಗೋದಿಲ್ಲ. ಅದು ಹಾಳಾಗೋಗ್ಬಿಡುತ್ತೆ.” ಅಂತೆಲ್ಲಾ ಹೇಳಿದ್ರು.ಮುಂದುವರೆಯುವುದು...

28 views