ಸುಧೀರ್ ನಂತರ ನಾಟಕ ಕಂಪನಿ ನಡೆಸಲು ನಾನು ಪಟ್ಟಕಷ್ಟ

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 25

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಪರಮ್: ಮಾಲತಿ ಸುಧೀರ್ ಅವರಿಗೆ ಒಂದು ಅಸ್ತಿತ್ವ ಇದೆ. ಏನಂದ್ರೆ ಸುಧೀರ್ ಅವರ ನಾಟಕ ಅಕಾಡಮಿಗೆ ಅಧ್ಯಕ್ಷರಾಗಿ?


ಮಾಲತಿ ಸುಧೀರ್: ನಮ್ಮ ಸುಧೀರ್ ಅವರು ಭಾರತೀಯ ಜನತಾ ಪಾರ್ಟಿಯಲ್ಲಿ ಕೆಲ್ಸ ಮಾಡ್ತಾ ಇದ್ರು. ಯಾವಾಗ್ಲೂ ಯಡಿಯೂರಪ್ಪ ಅವರ ಜೊತೆಯಲ್ಲಿ ಟೂರ್ ಹೋಗೋರು. ಇನ್ನೂ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿರ್ಲಿಲ್ಲ. ಅವಾಗೆಲ್ಲಾ ಓಡಾಡೋರು. ತುಂಬಾ ಕೆಲ್ಸ ಮಾಡಿದ್ರು. ಆಮೇಲೆ ಅನಂತ್ ಕುಮಾರ್, ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರು ಸುಧೀರ್ ಅವರು ಸತ್ತ ಮೇಲೆ ನನ್ನ ಬಿಡ್ಲಿಲ್ಲ. ಇವತ್ತಿಗೂ ನಾನು ಆ ಪಾರ್ಟಿಯಲ್ಲೇ ಓಡಾಡ್ಕೊಂಡಿದ್ದೀನಿ. ಆದರೆ ಈಗ ಜಾಸ್ತಿ ಹೋಗಲ್ಲ ಅಷ್ಟೇ. ಅವರು ನನ್ನ ಗುರುತಿಸಿ ನಾಟಕ ಅಕಾಡಮಿಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಸೋ ಈ ಎಲ್ಲಾ ಕ್ರೆಡಿಟ್ ಯಡಿಯೂರಪ್ಪ ಅವರಿಗೆ, ಶೋಭಾ ಕರಂದ್ಲಾಜೆ ಹಾಗೂ ಅನಂತ್‍ಕುಮಾರ್ ಅವರಿಗೇ ಸಲ್ಲಬೇಕು. ಎಷ್ಟೋ ದಿವ್ಸ ನಮ್ಮನ್ನೆಲ್ಲಾ ನೋಡ್ಕೊಂಡಿದ್ದಾರೆ ಅವರು.


ಪರಮ್: ಸೋ ಇವಾಗ ನೀವು ಸುಧೀರ್ ಅವರನ್ನ ಮಿಸ್ ಮಾಡ್ಕೊತೀರ?


ಮಾಲತಿ ಸುಧೀರ್: ಇವಾಗ ಅವರು ಇದ್ದಿದ್ರೆ ಮಕ್ಕಳ ಬಗ್ಗೆ ಎಷ್ಟು ಸಂತೋಷ ಪಡ್ತಿದ್ರೇನೋ?


ಪರಮ್: ಮಕ್ಕಳ ಸಿನಿಮಾಗಳಲ್ಲಿ ಆಕ್ಟ್ ಮಾಡ್ತಿದ್ರೇನೋ?


ಮಾಲತಿ ಸುಧೀರ್: ಮಾಡ್ತಿದ್ರು. ಮತ್ತೆ ನಾವು ಈಗ ನಾಟಕದ ಕಂಪೆನಿ ಆಫೀಸ್ ಎಲ್ಲಾ ಕಟ್ಕೊಂಡು ಓಡಾಡೋ ಪರಿಸ್ಥಿತಿ ಇರ್ತಿರ್ಲಿಲ್ಲ. ಸುಧೀರ್ ಅವರು ತೀರ್ಕೊಂಡ್ಮೇಲೆ, ನಾಟಕ ಕಂಪೆನಿ ಕಟ್ಕೊಂಡು ತುಂಬಾ ಕಷ್ಟ ಅನುಭವಿಸಿದ್ದೀನಿ. ತೀರ್ಥಳ್ಳಿ ಅಂತ ಒಂದು ಊರು ಇದೆ. ಯಾರೋ ಹೇಳಿದ್ರು “ತೀರ್ಥಳ್ಳಿಯಲ್ಲಿ ನಿಮಗೆ ಒಳ್ಳೆ ಕಲೆಕ್ಷನ್ ಆಗುತ್ತೆ”ಅಂತ ಹಾಗಾಗಿ ಅಲ್ಲಿ ಕ್ಯಾಂಪ್ ಹಾಕಿದ್ವಿ. ಫಸ್ಟ್ ಡೇ ಒಂದು ಸಾವಿರ ರೂಪಾಯಿ ಕಲೆಕ್ಷನ್ ಆಯ್ತು. ಮಾರನೇ ದಿವ್ಸ ಆರ್ನೂರು ರೂಪಾಯಿ ಆಯ್ತು. ಯಾಕಂದ್ರೆ “ಎಂತದ್ರೀ ಮಾರಾಯರೇ ಇವರ ಭಾಷೆ? ಉತ್ತರ ಕರ್ನಾಟಕದ ಭಾಷೆ ಇಲ್ಲಿ ಯಾರು ನೋಡ್ತಾರೆ?” ಅನ್ಬಿಟ್ರು ಜನ. ನಮ್ಮ ಕಂಪೆನಿಯಲ್ಲಿ ಎಲ್ಲಾ ಉತ್ತರ ಕರ್ನಾಟಕದ ಕಲಾವಿದರೇ ಇದ್ರು. ನಮ್ಮ ಕಂಪೆನಿ ನಡ್ಸೋದಕ್ಕೆ ದಿವ್ಸ ಐದು ಸಾವಿರ ರೂಪಾಯಿ ಮೇಂಟೇನೆನ್ಸ್‍ಗೇ ಬೇಕು. ಐನೂರು ಆರ್ನೂರು ರೂಪಾಯಿ ಕಲೆಕ್ಷನ್ ಆದ್ರೆ ಎಲ್ಲಿಗೆ ಸಾಕು? ಮಲೆನಾಡಿನ ಕಡೆ ಬಸಲೆ ಸೊಪ್ಪು ಚನ್ನಾಗಿ ಬೆಳಿಯುತ್ತೆ, ಬಸಲೆ ಸೊಪ್ಪು ತಂದು ಸಾರು ಮಾಡಿ ರೇಷನ್ ಅಕ್ಕಿ ತಂದು ಅನ್ನ ಮಾಡೋದು. ಪಾಪ ಯಾವ ಕಲಾವಿದರಿಗೂ ಪೇಮೆಂಟ್ ಕೊಡಕ್ಕೆ ದುಡ್ಡೇ ಇಲ್ಲ. ಬಸಲೆ ಸೊಪ್ಪು ಸಾರು ಅನ್ನ ಊಟ ಮಾಡೋದು ಅಷ್ಟೇ. ಮತ್ತೆ ನಾಟಕ ಮಾಡಿ ಐನೂರು ಆರ್ನೂರು ರೂಪಾಯಿ ಆದ್ರೆ ಅಕ್ಕಿ ತರೋದಕ್ಕೇ ಸರಿಯಾಗ್ಬಿಡ್ತಿತ್ತು. ಮುಂದೆ ಈ ನಲವತ್ತು ಜನನ ಕಟ್ಕೊಂಡು ಎಲ್ಲಿಗೆ ಹೋಗ್ಬೇಕು? ತುಂಬಾ ಕಷ್ಟ ಅನುಭವಿಸ್ತಾ ಇದ್ದೆ.


ಅವಾಗ ಒಬ್ರು ಪತ್ರಕರ್ತರು ಗಣೇಶ್ ಅಂತ ಹೇಳಿ ಇದ್ದಾರೆ. ಅವರು ಈಗ್ಲೂ ತೀರ್ಥಳ್ಳಿಯಲ್ಲಿ ಇದ್ದಾರೆ. ಅವರು ನಮ್ಮ ನಾಟಕ ನೋಡಿ “ಎಂತ ಮಾರ್ರೆ ಸುಧೀರ್ ಹೆಂಡ್ತಿಗೆ ಇಂತಹ ಪರಿಸ್ಥಿತಿ ಬಂತು” ಅಂತ ಹೇಳಿ ಮಾರನೇ ದಿವ್ಸ ಪೇಪರಲ್ಲಿ ಹಾಕ್ಸಿದ್ರು. “ನಮ್ಮೂರಿನ ಸೊಸೆ ಕಣ್ಣೀರಲ್ಲಿ ಕೈ ತೊಳಿತಿದ್ದಾಳೆ, ಅವಳಿಗೆ ಅನುಭವ ಸಾಲ್ದು, ಹೇಗೆ ಹೋಗ್ಬೇಕು ಅನ್ನೊದು ಗೊತ್ತಿಲ್ಲ. ನಾವೇ ಆಕೆಗೆ ದಾರಿ ದೀಪ ಆಗಿ ನಿಲ್ಬೇಕು” ಅಂತ. ಇವತ್ತಿಗೂ ಆಪೇಪರ್ ಇಟ್ಕೊಂಡಿದ್ದೀನಿ ನಾನು. ಪೇಪರಲ್ಲಿ ಹಾಕಿದ ನಂತರ ಅಲ್ಲಿದ್ದ ಕೆಲವು ಪ್ಮಣ್ಯಾತ್ಮರೆಲ್ಲಾ ಬಂದು “ನಾವು ನಿಂಗೆ ಸಹಾಯ ಮಾಡ್ತೀವಿ” ಅಂದ್ರು. ಹೊದ್ಲ ಹಾಲಪ್ಪನವರು ಇವತ್ತು ಇಲ್ಲ ಅವರು, ಅವರು ಆ ಊರಿಗೆ ದೊಡ್ಡ ಬ್ಯುಸ್ನೆಸ್ ಮ್ಯಾನ್. ಅರ್ಯಾಕ್ ಕಾಂಟ್ರಾಕ್ಟ್ ಎಲ್ಲಾ ಮಾಡ್ತಿದ್ರು. ಅವರ ಮನೆಗೆ ನಮ್ಮ ನಾಟಕದ ಕಂಪೆನಿಯ ನಾಲ್ಕೈದು ಜನನ ಕರ್ಕೊಂಡೋದ್ರು. ಹೋದ ತಕ್ಷಣ ಅವರು ನಂಗೆ “ಒಳಗೆ ಬಾರಮ್ಮಾ” ಅಂತಂದ್ರು. ಒಳಗೆ ಹೋದ ತಕ್ಷಣನೇ ಅವರ ಬೀರುನಿಂದ ಒಂದಿಷ್ಟು ದುಡ್ಡು ತೆಗೆದ್ರು. ಆಗ ನಾನು ಸೆರಗು ಹಿಡ್ಕೊಂಡು ನಿಂತೆ. “ನೋಡಮ್ಮಾ ನಾನು ನಿನ್ನ ಸೆರಗಿಗೆ ದುಡ್ಡು ಹಾಕ್ತಾ ಇದ್ದೀನಿ. ನಂಗೆ ಗಂಡು ಮಕ್ಕಳಿಲ್ಲ, ಒಂದು ಗಂಡು ಮಗು ಆಗ್ಲಿ ಅಂತ ಆಶೀರ್ವಾದ ಮಾಡಮ್ಮಾ”ಅಂದ್ರು. ಅವತ್ತು ಐವತ್ತು ಸಾವಿರ ರೂಪಾಯಿ ಕೊಟ್ರು ನಂಗೆ, ನಾನು ಇವತ್ತೂ ನಂಬಕ್ಕಾಗಲ್ಲ. ಅವರು ಐವತ್ತು ಸಾವಿರ, ಇನ್ನೊಬ್ರು ಇಪ್ಪತ್ತೈದು ಸಾವಿರ, ಇನ್ನೊಬ್ರು ಇಪ್ಪತ್ತು ಸಾವಿರ. ಹೀಗೆ ಎರಡು ದಿವ್ಸದಲ್ಲಿ ಒಂದು ಲಕ್ಷ ರೂಪಾಯಿ ಕಲೆಕ್ಷನ್ ಆಯ್ತು.

ಪರಮ್: ಎಲ್ಲಾ ಆರ್ಟಿಕಲ್‍ನಿಂದ?


ಮಾಲತಿ ಸುಧೀರ್: ಆರ್ಟಿಕಲ್‍ನಿಂದನೇ ಆ ಗಣೇಶ್ ಅವರಿಗೆ ಸಲ್ಲಬೇಕು ಅದರ ಕೀರ್ತಿ. “ಮಾಲತಿ ನೀನು ಸುಧೀರ್‍ನ ಹೆಂಡ್ತಿಯಾಗಿ ಈಊರಲ್ಲಿ ಅಳಬಾರ್ದು ಕಣಮ್ಮಾ, ನೀನು ಬೇರೆ ಊರಿಗೆ ಹೋಗಿ ಕ್ಯಾಂಪ್ ಮಾಡು”ಅಂತ ಹೇಳಿ ಒಂದು ಲಕ್ಷ ರೂಪಾಯಿ ಕೊಟ್ಟು, ನಮ್ಮ ಕ್ಯಾಂಪ್ ಸಾಮಾನೆಲ್ಲಾ ಲಾರಿಯಲ್ಲಿ ಏರ್ಸಿ ನಮ್ಮನ್ನ ಕಳ್ಸಿದ್ರು. ನಂತರ ನ್ಯಾಮ್ತಿ ಅನ್ನೋ ಊರಲ್ಲಿ ಒಂದು ಕ್ಯಾಂಪ್ ಮಾಡಿದ್ವಿ. ಅಲ್ಲಿ ಫಸ್ಟ್ ಎಚ್ಚರ ತಂಗಿ ಎಚ್ಚರ ಅನ್ನೋ ನಾಟಕ ಹಾಕೊಂಡ್ವಿ. ಆ ಊರಿಗೆ ಇಪ್ಪತ್ತು ವರ್ಷದಿಂದ ನಾಟಕದ ಕಂಪೆನಿನೇ ಹೋಗಿರ್ಲಿಲ್ಲ. ನಮಗೆ ತುಂಬಾ ಒಳ್ಳೆ ಕಲೆಕ್ಷನ್ ಕೊಡ್ತು. ನಾನು ಮತ್ತೆ ಹಿಂದೆ ತಿರುಗಿ ನೋಡ್ಲೇ ಇಲ್ಲ.


ನಂತರ ಸ್ವಂತ ಸಾಮಾನುಗಳೆಲ್ಲಾ ಮಾಡ್ಕೊಂಡು, ಕಲಾವಿದರೆಲ್ಲಾ ನನ್ನ ಮಕ್ಕಳು ಅನ್ನೋ ಭಾವನೆ ಇಟ್ಕೊಂಡು ಕಂಪೆನಿ ನಡೆಸಿಕೊಂಡು ಇವತ್ತಿನ ವರೆಗೂ ಬಂದಿದ್ದೀನಿ. ನನಗೆ ವೈಯಕ್ತಿಕವಾಗಿ ನಾಟಕದ ಕಂಪೆನಿ ನಡ್ಸೊದ್ರಲ್ಲಿ, ನಾಟಕದಲ್ಲಿ ಪಾತ್ರ ಮಾಡೋದ್ರಲ್ಲಿ ತುಂಬಾ ತೃಪ್ತಿ ಸಿಕ್ಕಿದೆ. ಅದಕ್ಕೇ ನಂಗೆ ನಾಟಕ ಅಕಾಡಮಿ ಅವಾರ್ಡ್ ಸಿಕ್ಕಿದೆ. ಆಮೇಲೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಸ್ವಾಮಿ ವಿವೇಕಾನಂದ ಪ್ರಶಸ್ತಿ ಸಿಕ್ಕಿದೆ. ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಸಿಕ್ಕಿದೆ. ಈಗ ಗುಬ್ಬಿ ವೀರಣ್ಣ ಪ್ರಶಸ್ತಿ ಒಂದು ಆಗ್ಬೇಕು ಕರ್ನಾಟಕದಿಂದ.


ಪರಮ್: ಸೋ ಸುಧೀರ್ ಸರ್‍ನ ಮಿಸ್ ಮಾಡ್ಕೋತೀರ?


ಮಾಲತಿ ಸುಧೀರ್: ಅದನ್ನ ಹೇಳೋವಂಗೇ ಇಲ್ವಲ್ಲಾ. ಇಪ್ಪತ್ತು ವರ್ಷದಿಂದ ಮಿಸ್ ಮಾಡ್ತನೇ ಇದೀವಿ.ಸಂದರ್ಶನ-ನಿರ್ದೇಶನ

ಕೆ.ಎಸ್ ಪರಮೇಶ್ವರ್

(ಕನ್ನಡ ಚಿತ್ರರಂಗದ ಖ್ಯಾತ ಖಳನಟ ಸುಧೀರ್ ಅವರ ಪತ್ನಿ ಮಾಲತಿ ಸುಧೀರ್ ಅವರ ಸಂದರ್ಶನ ಮುಕ್ತಾಯವಾಯಿತು.)

58 views