ಸುಧೀರ್‌ ಮಕ್ಕಳು ಹೇಗಿದ್ದಾರೆ ಏನು ಮಾಡ್ತಿದ್ದಾರೆ

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 17

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಮಾಲತಿ ಸುಧೀರ್: ದೂರದ ಊರುಗಳಿಗೆ ಹೋಗಕ್ಕಾಗಲ್ಲ. ಯಾಕಂದ್ರೆ ಅಲ್ಲಿ ಮನೆಗಳು ಹುಡುಕ್ಬೇಕು. ಎಂತಹ ಮನೆ ಸಿಕ್ತವೇನೋ, ಮತ್ತೆ ಅಲ್ಲಿ ಜೀವನ ಅಸ್ತವ್ಯಸ್ತ ಆಗುತ್ತೆ. ಈಗ ಒಂದು ತರಹ ನೆಮ್ಮದಿಯಿಂದ ಇದ್ದೀವಿ. ಅದಕ್ಕೇ ಗುಬ್ಬಿ ರಂಗಮಂದಿರದಲ್ಲೇ ನಾಟಕ ಮಾಡ್ತಾ ಇದ್ದೀವಿ. ಅಲ್ಲಿ ದಿನೇಶ್ ಗುಂಡೂರಾವ್ ಅವರು, ಮತ್ತೆ ಅಲ್ಲಿಯ ಕಾರ್ಪೋರೇಟರ್ ಲತಾ ಮೇಡಮ್ ಎಲ್ಲರೂ ಥಿಯೇಟರ್ ಕೊಡ್ತೀವಿ ಅಂತ ಹೇಳಿದ್ದಾರೆ, ರೈಟಿಂಗಲ್ಲೂ ಕೊಟ್ಟಿದ್ದಾರೆ. ಈಗ ಕೊರೋನಾ ಮುಗಿದ ನಂತರ ಶುರು ಮಾಡ್ಬೇಕು. ಕಲಾವಿದರು “ಅಕ್ಕಾ ಯಾವಾಗ ಸ್ಟಾರ್ಟ್ ಮಾಡ್ತೀಯ?” ಅಂತ ಕೇಳ್ತನೇ ಇರ್ತಾರೆ. ಈಗ್ಲೂ ನನ್ನನ್ನೇ ನಂಬಿರುವ ಕಲಾವಿದರು ಬೇಕಾದಷ್ಟು ಜನ ಇದ್ದಾರೆ. ಸೋ ಅವರು ನಂಗೆ ಮಕ್ಕಳ ತರ, ಅಕ್ಕ ತಂಗಿಯರ ತರ, ಅಣ್ಣ ತಮ್ಮಂದಿರ ತರ. ನನ್ನ ಮಕ್ಕಳಿಗಿಂತ ಅವರನ್ನೇ ನಾನು ಜಾಸ್ತಿ ಪ್ರೀತಿ ಮಾಡ್ತೀನಿ. ಅದಕ್ಕೇ ನಮ್ಮ ತರುಣ್ ಯಾವಾಗ್ಲೂ ಹೇಳ್ತಾ ಇದ್ದ “ಅಮ್ಮಾ ನೀನು ಮನೆಯಲ್ಲಿರೋ ಕರುಗಳನ್ನ ಉಪವಾಸ ಹಾಕಿ ಗುಡ್ಡದಲ್ಲಿರೋ ಕರುಗಳಿಗೆ ಹುಲ್ಲು ಹೊರ್ತೀಯ”ಅಂತ ರೇಗಿಸ್ತಾ ಇರ್ತಾನೆ. ಈಗ್ಲೂ ಹಾಗೇ ಅಂತಾನೆ ಅವನು. ಈಗ್ಲೂ ನಾಟಕದ ಕಂಪೆನಿಯವರು ಯಾರೇ ಬಂದ್ರೂ ಕೂಡ ಪ್ರೀತಿ ವಿಶ್ವಾಸದಿಂದನೇ ಮಾತಾಡ್ತಾರೆ.


ಮೊನ್ನೆ ಕೊರೋನಾ ಲಾಕ್‍ಡೌನ್ ಟೈಮಲ್ಲಿ ತರುಣ್‍ಗೆ ಹೇಳ್ದೆ “ನೋಡಪ್ಪಾ ಎಲ್ಲಾ ಕಲಾವಿದರು ಕಷ್ಟದಲ್ಲಿದ್ದಾರೆ”ಅಂತ. ಆಗ ನಮ್ಮ ತರುಣ್ ಒಂದು ಐವತ್ತು ಜನರ ಅಕೌಂಟ್‍ಗೆ ಒಂದಿಷ್ಟು ದುಡ್ಡು ಹಾಕ್ದ. “ಯಾರಿಗೂ ಏನೂ ಹೇಳ್ಕೊಳೋದು ಬೇಡ. ನಮ್ಮ ಪ್ರೀತಿ ವಿಶ್ವಾಸ ನಮ್ಮ ಕಲಾವಿದರಿಗೆ ಅಂತ”ಹೇಳಿ ಮಾಡಿದ್ದಾನೆ. ನಂಗೆ ಅವನ ಮದುವೆ ಆದ್ರೆ ಸಾಕು ಅಂತ ಕಾಯ್ತಾ ಇದ್ದೀನಿ.


ಪರಮ್: ಇಬ್ಬರೂ ಮಕ್ಕಳಿಗೂ ಮದುವೆ ಆಗ್ಲಿಲ್ವಾ?


ಮಾಲತಿ ಸುಧೀರ್: ದೊಡ್ಡವನಿಗೆ ಮದುವೆ ಆಗಿದೆ. ನಂದ ಮದುವೆ ಆಗಿ ಒಂದು ಮಗು ಇದೆ. ತರುಣ್‍ಗೆ ಮದುವೆ ಆಗ್ಬಿಟ್ರೆ ನಾನು ನೆಮ್ಮದಿಯಿಂದ ಇರೋದಕ್ಕೆ ಸಾಧ್ಯ.


ಪರಮ್: ಈಗ್ಲೂ ತರುಣನಾಗೇ ಓಡಾಡ್ತಿದ್ದಾನೆ?


ಮಾಲತಿ ಸುಧೀರ್: ಹೌದು ಅವನು ಈಗ ಎರಡು ಪಿಚ್ಚರ್ ಮಾಡಿ ಸಕ್ಸಸ್ ಆಗಿದೆ. ಮತ್ತೆ ಈಗ ಆ ಗುರಿಯಲ್ಲೇ ಹೋಗ್ಬೇಕು. ಮಕ್ಕಳೂ ಇಂಡಸ್ಟ್ರಿಯಲ್ಲೇ ಇದ್ದಾರೆ. ಒಟ್ಟು ನಾವೆಲ್ಲರೂ ಕಲಾ ಕ್ಷೇತ್ರದಲ್ಲೇ ಕೆಲ್ಸ ಮಾಡ್ತಾ ಇದ್ದೀವಿ. ಇದು ದೇವರ ಕೊಡುಗೆ. ನಾವು ಬಯಸದೇ ಬಂದ ಭಾಗ್ಯ ಸಿನಿಮಾ ನಟರಾಗ್ಬೇಕು ಅಂತ ಸುಧೀರ್ ಅವರೂ ಬಂದವರಲ್ಲ. ನನ್ನ ಮಕ್ಕಳು ಡೈರಕ್ಟರ್ ಆಗ್ತಾರೆ ಅಂತ ನಾನು ಕನಸಲ್ಲೂ ನೆನೆಸ್ಕೊಂಡಿರ್ಲಿಲ್ಲ. ಈಗ್ಲೂ ನಾವು ಎಲ್ಲಾದ್ರೂ ಹೊರಗಡೆ ಹೋದ್ರೆ “ತರುಣ್ ತಾಯಿ, ನಂದಕಿಶೋರ್ ತಾಯಿ. ಅವರ ಮಕ್ಕಳಿಬ್ಬರೂ ಮುಗಿಲು ಮುಟ್ಟಿದ್ದಾರೆ”ಅಂತೆಲ್ಲಾ ಹೇಳ್ತಾರೆ. ನಂಗೆ ಹಾಗೇನೂ ಅನ್ಸಲ್ಲ. ನಾನು ಈಗ್ಲೂ ತಂಗ್ಳನ್ನ ತಂಗ್ಳು ಸಾರೇ ತಿನ್ಕೊಂಡಿರ್ತೀನಿ. ಯಾಕಂದ್ರೆ ಹಿಂದಿನದ್ದು ಮರಿಬಾರ್ದು. ಸೋ ಮುಂದಿನದ್ದು ಯಾವಾಗ್ಲಾದ್ರೂ ಇರುತ್ತೆ.


ನಮ್ಮ ತರುಣ್‍ಗೆ ಈಗ ಚಿತ್ರರಂಗದಲ್ಲಿ ಒಳ್ಳೆ ಸಿನಿಮಾಗಳನ್ನ ಕೊಡ್ಬೇಕು. ಜನಗಳಿಗೆ ಮನದಟ್ಟಾಗುವಂತಹ ಸಿನಿಮಾಗಳು ಮಾಡ್ಬೇಕು ಅಂತ ಇದೆ. ಇವಾಗ ಎರಡು ಸಿನಿಮಾ ಮಾಡಿದ್ದಾನೆ. ಫಸ್ಟ್ ಪಿಚ್ಚರ್‍ಗೇ ಅವನಿಗೆ ಫಿಲಮ್‍ಫೇರ್ ಅವಾರ್ಡ್ ಬಂತು. ಹಾಗಾಗಿ ಅವನು ಆನಿಟ್ಟಿನಲ್ಲೇ ಕೆಲ್ಸ ಮಾಡ್ತಾ ಇದ್ದಾನೆ. ಅವರು ನನ್ನ ಹತ್ರ ಎರಡೇ ಮಾತಾಡೋದು “ಅಮ್ಮಾ ಊಟ ಬಡ್ಸು, ಅಮ್ಮಾ ಸಾಕು” ಎರಡೇ ಮಾತು.


ನಮ್ಮ ನಂದಕಿಶೋರ್ ಹತ್ತು ಪಿಚ್ಚರ್ ಮಾಡಿದ್ದಾನೆ. ಅದರಲ್ಲಿ ಒಂಭತ್ತು ಪಿಚ್ಚರ್ ಸೂಪರ್ ಹಿಟ್ ಆಗಿದೆ. ಒಂದೇ ಒಂದು ಪಿಚ್ಚರ್ ಬೃಹಸ್ಪತಿ ಒಂದು ಫೇಲ್ ಆಯ್ತು. ತರುಣ್‍ಗಿಂತಾ ಅವನು ಟಾಪ್. ಬುದ್ದಿವಂತ ಕೂಡ ಹಾಗೂ ವಿಧ್ಯೆಯಲ್ಲೂ ಮುಂದೆ. ಏನೋ ದೇವರ ದಯೆಯಿಂದ ರಾಘವೇಂದ್ರರ ಅನುಗ್ರಹದಿಂದ ಇಂಡಸ್ಟ್ರೀನಲ್ಲಿ ಇದ್ದಾರೆ. ಇಡೀ ಕರ್ನಾಟಕದ ಜನ ಅವರನ್ನ ಪ್ರೀತಿಸ್ತಾರೆ, ಫಸ್ಟ್ ಸುಧೀರ್ ಅವರನ್ನ ಪ್ರೀತಿಸ್ತಾರೆ. ಸುಧೀರ್ ಅವರ ಮಕ್ಕಳು ಅಂದ್ರೆ ನಮ್ಮ ಮಕ್ಕಳು ಅಂತ ಇಡೀ ಕರ್ನಾಟಕನೇ ಅವರನ್ನ ಪ್ರೀತ್ಸಿ ಗೌರವಿಸಿ ಆಶೀರ್ವಾದ ಮಾಡುತ್ತೆ. ಇನ್ನು ಇದಕ್ಕಿಂತ ಇನ್ನೇನು ಬೇಕು? ನಂಗೆ ಜೀವನ ತೃಪ್ತಿ ಆಗಿದೆ ಅಂತ ಅನ್ಸುತ್ತೆ.ಮುಂದುವರೆಯುವುದು…

19 views