ಸುಧೀರ್ ಮಾಡ್ತಿದ್ದ ಆ ಪಾತ್ರ ದರ್ಶನ್ ಮಾಡ್ತಾರೆ

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 23

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಪರಮ್: ಮಕ್ಕಳ ಜೊತೆ ಬೆರೆಯೋದಕ್ಕೆ ಟೈಮ್ ಸಿಗ್ತಿತ್ತಾ ಸಾರ್‍ಗೆ?

ಮಾಲತಿ ಸುಧೀರ್: ಮಕ್ಕಳನ್ನ ಅವರು ಬಹಳ ಪ್ರೀತಿಸ್ತಾ ಇದ್ರು, ನಾನು ಅಷ್ಟು ಪ್ರೀತ್ಸಲ್ಲ ಅವರನ್ನ. ಇಬ್ಬರನ್ನೂ ನಾಟಕಕ್ಕೇ ಕರ್ಕೊಂಡೋಗ್ತಾ ಇದ್ರು. ಮನೆಯಲ್ಲಿ ನಾನೊಬ್ಬಳೇ ಇರ್ತಿದ್ದೆ. ನನ್ನ ಬಿಟ್ಟು ಇಬ್ಬರೂ ಮಕ್ಕಳನ್ನ ನಾಟಕಕ್ಕೆ ಕರ್ಕೊಂಡೋಗ್ತಾ ಇದ್ರು. ನಮ್ಮ ತರುಣ್ ಚಿಕ್ಕವನಾಗಿದ್ದಾಗ ನಾಟಕಕ್ಕೆ ಕರ್ಕೊಂಡೋದ್ರೆ, ನಮ್ಮ ಸುಧೀರ್ ಅವರು ಲಕ್ಷ್ಮಣ ನಾಟಕದಲ್ಲಿ ಲಾಸ್ಟಲ್ಲಿ ಸಾಯೋ ಸೀನ್ ಇದೆ. ಹೇಗೆ ಸಾಯ್ತಾನೆ ಅಂದ್ರೆ ಒಂದು ಸಣ್ಣ ಸಿಚ್ಯುವೇಷನ್ ಹೇಳ್ತೀನಿ. ಒಬ್ಬರು ವಾಲೇಕಾರರು ಅವರನ್ನ ಊಟಕ್ಕೆ ಕರ್ದಿರ್ತಾರೆ. “ಮನೆಗೆ ಬೇಡಪ್ಪಾ ಪೋಲೀಸ್‍ನವರೆಲ್ಲಾ ನಿನ್ನ ಹುಡುಕ್ತಾ ಇರ್ತಾರೆ. ತೋಟದ ಮನೆಯಲ್ಲಿ ನಿಂಗೆ ಊಟ”ಅಂತ ಹೇಳಿ, ಅಲ್ಲಿ ಬ್ರಿಟೀಶ್‍ರಿಗೆ “ನಾನು ಕರಕ್ಟಾಗಿ ಲ್ಯಾಟಿನ್‍ನಅವರ ಮುಂದೆ ಇಡ್ತೀನಿ ನೀವು ಅದರ ಬೆಳಕಿನಲ್ಲಿ ಕರಕ್ಟಾಗಿ ಅವನಿಗೆ ಗುಂಡು ಹೊಡೀರಿ” ಅಂತ ಹೇಳಿರ್ತಾನೆ. ವೆಂಕಟಪ್ಪ ನಾಯಕ ಅಂತ ನಮ್ಮವರೇ ನಮಗೆ ಶತ್ರು ಅನ್ನೋ ತರ ಹೇಳಿರ್ತಾರೆ. ಅವರ ಜೊತೆಯಲ್ಲಿ ಇವರ ಗನ್‍ಮ್ಯಾನ್ ಒಬ್ಬನನ್ನ ಕಳ್ಸಿರ್ತಾರೆ. ಲಕ್ಷ್ಮಣನ ಒಂದೇ ಗುರಿಯಲ್ಲಿ ಹೊಡಿಬೇಕು ಆಗ ಸಾಯ್ತ್ತಾನೆ, ಇಲ್ಲಾಂದ್ರೆ ಅವರೆಲ್ಲರನ್ನೂ ಸಾಯಿಸ್ತಾನೆ. ಅಲ್ಲಿ ವೆಂಕಟಪ್ಪ ನಾಯ್ಕನ ಆಪ್ತ ಶಿಶ್ಯ ಗನ್‍ಮ್ಯಾನ್ ಇರ್ತಾನೆ. ಅವನನ್ನ ಕಳಿಸ್ತಾರೆ. ಅವನು ಕರಕ್ಟಾಗಿ ಅವರು ಬಾಯಲ್ಲಿ ಊಟ ಇಟ್ಕೊಳೋವಾಗ ಎದೆಗೆ ಗುಂಡು ಹೊಡಿತಾನೆ. ಬಹಳ ಚನ್ನಾಗಿದೆ ಆನಾಟಕ. ನಮ್ಮ ಮಕ್ಕಳಿಗೆ ಹೇಳ್ದೆ “ಯಾರಾದ್ರೂ ಲಕ್ಷ್ಮಣನ ಪಾತ್ರ ಮಾಡ್ರೋ”ಅಂದ್ರೆ ಯಾರೂ ಮಾಡಲ್ಲ. ಈಗ ಸಿನಿಮಾ ಮಾಡ್ತಾ ಇದ್ದಾರೆ ದರ್ಶನ್‍ನ ಹಾಕೊಂಡು.


ಪರಮ್: ಸಿಂಧೂರ ಲಕ್ಷ್ಮಣ?


ಮಾಲತಿ ಸುಧೀರ್: ಹೌದು ಸಿಂಧೂರ ಲಕ್ಷ್ಮಣ ಈಗ ದರ್ಶನ್‍ನ ಹಾಕೊಂಡು ಪಿಚ್ಚರ್ ಮಾಡ್ತಾ ಇದ್ದಾರೆ. ದರ್ಶನ್ ಮಾಡ್ತೀನಿ ಅಂತ ಹೇಳಿದ್ದಾರೆ. ಸುಧೀರ್ ಅವರ ಆಶೀರ್ವಾದ ಅವನಿಗೆ ಇರ್ಲಿ ಅಂತ ನಾನು ಹಾರೈಸ್ತೀನಿ. ಅವಾಗ ನಮ್ಮ ತರುಣ್ ಆರು ಏಳು ವರ್ಷದ ಹುಡುಗ ಇರ್ಬೋದು. ಅವನು ಸುಧೀರ್ ಅವರು ಮೇಕಪ್ ಮಾಡ್ತಿದ್ರೆ ನೋಡ್ತಾ ಇರೋದು. ಇವನೂ ದೊಡ್ಡ ನಾಮ ಹಚ್ಕೊಂಡು ಒಂದು ದೊಡ್ಡ ಹೊರಲಾರದ ಗನ್ ಹಾಕೊಂಡು ಓಡಾಡ್ತಾ ಇರೋನು. “ಯಾಕೆ ಓಡಾಡ್ತಾ ಇದ್ದೀಯ?” ಅಂದ್ರೆ “ನಮ್ಮ ಅಪ್ಪನ ಕೊಲೆ ಮಾಡ್ತಾನೆ ಆಸೋಮಲೆ, ಅವನನ್ನ ಹುಡುಕ್ತಾ ಇದ್ದೀನಿ”ಅಂತಿದ್ದ. ಅವನನ್ನ ಹುಡುಕಿ ಇವನು ಶೂಟ್ ಮಾಡಿದ್ರೆ ಅವನು ಸುಧೀರ್ ಅವರಿಗೆ ಶೂಟ್ ಮಾಡಲ್ಲ ಅಲ್ವಾ? ಅವಾಗ ನಮ್ಮಪ್ಪ ನಾಟಕದಲ್ಲಿ ಸಾಯೋದೇ ಇಲ್ಲ”ಅಂತ ಅತ್ಕೊಂಡು ಬೆಂಗ್ಳೂರಿಗೆ ಬಂದ್ರೂ ಹೇಳೋನು. “ನಾನು ಸೋಮಲೆನ ಹುಡುಕ್ದೆ ಅಮ್ಮಾ ಅವನು ಸಿಕ್ಲೇ ಇಲ್ಲ” “ಯಾಕೆ ಹುಡುಕ್ದೆ?” ಅಂದ್ರೆ “ನಾನು ಗನ್ ಇಟ್ಕೊಂಡಿದ್ದೀನಿ ಅವನು ಬಂದ್ರೆ ಅವನಿಗೆ ಗುಂಡು ಹೊಡಿತೀನಿ. ಇಲ್ಲಾಂದ್ರೆ ಅಪ್ಪನಿಗೆ ಗುಂಡು ಹೊಡಿತಾನೆ ಅವನು” ಅಷ್ಟು ಪರಿಣಾಮ ಮಾಡ್ಕೊಳ್ತಾ ಇದ್ರು ನಮ್ಮ ಮಕ್ಕಳು. ಇದು ನಾಟಕ ಅದರಲ್ಲಿ ಅವರ ತಂದೆ ಪಾತ್ರ ಮಾಡ್ತಿದ್ದಾರೆ ಅಂತ ಗೊತ್ತಾದ್ರೂ ಕೂಡ ಅಷ್ಟೂ ಪರಿಣಾಮ ಮಾಡ್ಕೊತಾ ಇದ್ರು.ಮುಂದುವರೆಯುವುದು…

45 views