ಸುಧೀರ್ ಲೈಫ್‍ಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಎಂ.ಪಿ ಶಂಕರ್

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 10

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಪಕ್ಕದಲ್ಲೇ ಇನ್ನೊಂದು ಕಂಪೆನಿ ಇತ್ತು ಆ ಕಂಪೆನಿಯವರಿಗೆ ಹೊಟ್ಟೆ ಉರಿ ಶುರುವಾಯ್ತು. “ಇವರಿಗೆ ಇಷ್ಟು ಕಲೆಕ್ಷನ್ ಆಗ್ತಾ ಇದೆ, ನಾವೆಲ್ಲಾ ಬಿದ್ದೋಗಿದ್ದೀವಿ. ನಾವೂ ಏನಾದ್ರೂ ಗಮ್ಮತ್ತು ಮಾಡ್ಬೇಕು” ಅಂತ ಹೇಳಿ ಎಮ್.ಪಿ ಶಂಕರಣ್ಣ ಅವರನ್ನ ಕರ್ಸಿ ಯಾವುದೋ ಒಂದು ನಾಟಕ ಮಾಡ್ಸಿದ್ರು. ಆನಾಟಕಕ್ಕೆ ಕಲೆಕ್ಷನೇ ಆಗ್ಲಿಲ್ಲ.


ಪರಮ್: ಎಮ್.ಪಿ ಶಂಕರ್ ಅವರು ಬಂದ್ರೂ ಕಲೆಕ್ಷನ್ ಆಗ್ಲಿಲ್ಲ?


ಮಾಲತಿ ಸುಧೀರ್: ನಾಲ್ಕು ದಿವ್ಸ ಡೇಟ್ಸ್ ಕೊಟ್ಟಿದ್ರು, ಎರಡನೇ ದಿನನೇ “ನಾನು ಮಾಡೋದಿಲ್ಲಪ್ಪಾ, ನಂಗೆ ಇಷ್ಟ ಇಲ್ಲ.” ಅಂದ್ರು. ಅವರು ಅವಾಗ್ಲೇ ದೊಡ್ಡ ಸ್ಟಾರ್. “ಏನಿದು ಈ ಪರಿಸ್ಥಿತಿ ಸುಧೀರ್ ಎದುರಿಗೆ ನಾವು ಬಿದ್ದೋಗ್ತಾ ಇದ್ದೀವಲ್ಲಾ?” ಅಂತ ಅವರು ನಾಟಕ ಕ್ಲೋಸ್ ಮಾಡ್ಬಿಟ್ಟು ನಮ್ಮ ನಾಟಕ ನೋಡಕ್ಕೆ ಬಂದ್ರು. ನಮ್ಮ ಸುಧೀರ್ ಅವರ ಅದ್ಭುತ ಪಾತ್ರನ ನೋಡಿ ಅವರಿಗೆ ಏನು ಅನಿಸ್ತೋ ಏನೋ ಗೊತ್ತಿಲ್ಲ, ಅವರು ಹೋಗಿ ಒಂದು ಹದಿನೈದು ಇಪ್ಪತ್ತು ದಿವ್ಸಕ್ಕೇ ಒಂದು ಟೆಲಿಗ್ರಾಮ್ ಬಂತು ನಮಗೆ. “ನಿಂಗೆ ಶೂಟಿಂಗಲ್ಲಿ ಪಾತ್ರ ಫಿಕ್ಸ್ ಮಾಡಿದ್ದೀನಿ ತಕ್ಷಣ ಹೊರಟು ಬಾ” ಅಂತ. ನಮ್ಮ ಸುಧೀರ್ ಅವರು “ಇಲ್ಲಿ ಇಷ್ಟು ದೊಡ್ಡ ಕಲೆಕ್ಷನ್ ಇದೆ, ಇಷ್ಟು ಜನ ನನ್ನಿಂದ ಬದುಕ್ತಾ ಇದ್ದಾರೆ. ಚಿತ್ರರಂಗದಲ್ಲಿ ನನ್ನ ಪರ್ಸನಾಲಿಟಿ ನೋಡಿ ಒಂದು ಪಾತ್ರಕೊಡ್ತಾರೆ. ಅದರಲ್ಲಿ ಮೂರೇ ಮಾತು ಇರುತ್ತೆ. ಯಸ್ ಬಾಸ್, ನೋಬಾಸ್, ಓಕೆ ಬಾಸ್ ಅಂತ. ಈಮೂರು ಡೈಲಾಗೋಸ್ಕರ ನಾನು ಅಲ್ಲಿಗೆ ಹೋಗ್ಬೇಕಾ? ನಾನು ಹೋಗಲ್ಲ” ಅಂದ್ರು. ನಾನು “ನೀವು ಹೋಗ್ಲೇ ಬೇಕು, ನೀವು ಮಾಡ್ಲೇ ಬೇಕು. ಎಮ್.ಪಿ ಶಂಕರ್ ಅವರು ಇವತ್ತಿಗೂ ನಮ್ಮ ಕರ್ನಾಟಕದಲ್ಲಿ ಒಬ್ಬ ಪ್ರಮುಖ ಕಳನಾಯಕ, ಒಬ್ಬ ಪ್ರೊಡ್ಯೂಸರ್ ಎಲ್ಲಾ ಆಗಿದಾರೆ. ಅಷ್ಟು ದೊಡ್ಡ ಸ್ಥಾನದಲ್ಲಿದ್ದವರು ಕರೆದಾಗ ನೀವು ಹೋಗ್ಲೇ ಬೇಕು” ಅಂತ ಹೇಳಿ ಒಂದು ರಾತ್ರಿ ಸುಧೀರ್ ಅವರನ್ನ ಮೈಸೂರಿಗೆ ಕಳಿಸ್ಕೊಟ್ಬಿಟ್ಟೆ.


ಮೈಸೂರಿಗೆ ಹೋದ ತಕ್ಷಣ ಅವರು ಏನು ಮಾಡಿದ್ರು ಅಂದ್ರೆ ಐದು ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಬಿಟ್ಟು “ನಲವತ್ತು ದಿವ್ಸ ನಿನ್ನ ಡೇಟ್ಸ್ ಬೇಕು. ಪಾತ್ರ ಅಷ್ಟು ಅದ್ಭುತವಾಗಿದೆ, ನನ್ನ ತಮ್ಮನ ಪಾತ್ರ ನಿಂದು. ಇಡೀ ಪಿಚ್ಚರಲ್ಲಿ ನೀನು ಹೈಲೆಟ್ ಆಗ್ತೀಯ. ನಿನ್ನ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗುತ್ತೆ” ಅಂತ ಹೇಳಿ ಕಳಿಸಿದ್ರು. ಆಗ ಇಲ್ಲಿ ಕಂಪೆನಿ ಮಾಲೀಕರಿಗೆ ಬಂದು ಹೇಳಿದ್ರು “ನಾನು ಇಲ್ಲಿ ಇರಲ್ಲ, ನಂಗೆ ನಲವತ್ತು ದಿವಸ ಶೂಟಿಂಗ್ ಇದೆ” ಅಂತ. ಆದರೆ ಇವರು ಬಿಡಲ್ಲ. “ನಾವು ಬಿಡಲ್ಲ ನಿನ್ನ” ಅಂತ. ಆಗ ಏನು ಮಾಡ್ಬೇಕು? ಅವಾಗ ನಾನು ಧೈರ್ಯ ಕೊಟ್ಟೆ ಸುಧೀರ್ ಅವರಿಗೆ. “ಇಲ್ಲ ನೀವು ಹೋಗ್ಲೇ ಬೇಕು, ಅಲ್ಲಿ ಏನೋ ಒಂದು ಬದುಕು ಸಿಗ್ತಾ ಇದೆ ನಿಮ್ಗೆ, ಈನಾಟಕ ಯಾವಾಗ್ಲೂ ಇದ್ದಿದ್ದೇ” ಅಂತ ಹೇಳ್ದೆ. ನಂತರ ನನ್ನನ್ನ ಮಗುನ ಅಲ್ಲೇ ಬಿಟ್ಬಿಟ್ಟು ಇವರು ಮೈಸೂರಿಗೆ ಹೋದ್ರು.


ಪರಮ್: ನೀವು ಕಂಪೆನಿಯಲ್ಲೇ ಉಳ್ಕೊಂಡಿದ್ರಾ?


ಮಾಲತಿ ಸುಧೀರ್: ಹೌದು ನಾನು ಕಂಪೆನಿಯಲ್ಲೇ ಉಳ್ಕೊಂಡಿದ್ದೆ. ಅವರಿಗೆ ಹತ್ತು ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ರು, ಆಅಡ್ವಾನ್ಸ್ ತೀರಿಸ್ಬೇಕಲ್ವಾ? ಸೋ ಸುಧೀರ್ ಅವರು ಹೋದ್ರು ಒಳ್ಳೆ ಪಾತ್ರ ಮಾಡಿದ್ರು. ಒಳ್ಳೆ ಹೆಸರು ತಗೊಂಡ್ರು, ಆಮೇಲೆ ಅವರಿಗೆ ತೃಪ್ತಿ ಸಿಕ್ತು. ಆ ಪಿಚ್ಚರ್ ರಿಲೀಸ್ ಆಗೋದಕ್ಕಿಂತ ಮುಂಚೆನೇ “ನಾನು ಒಳ್ಳೆ ಪಾತ್ರ ಮಾಡಿದ್ದೀನಿ, ಸೈ ಅನಿಸ್ಕೊಂಡಿದ್ದೀನಿ” ಅಂತಿದ್ರು. ಚಿಟ್ಟಿಬಾಬು ಕ್ಯಾಮೆರಾ ಮ್ಯಾನ್ ಆ ಸಿನಿಮಾದಲ್ಲಿ. ರಾಮಲಕ್ಷ್ಮಣ ಸಿನಿಮಾ.ಮುಂದುವರೆಯುವುದು…

21 views