ಸಿನಿಮಾ ಬಿಟ್ಟವನನ್ನ ಕರೆದು ಹಿಟ್‌ ಕೊಟ್ಟಿದ್ದು ಕಾಶಿನಾಥ

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 13ಒಂದು ದಿನ ಮಧ್ಯಾಹ್ನ ಲಂಚ್ ಎಲ್ಲಾ ಮುಗಿಸ್ಕೊಂಡು ಕೂತ್ಕೊಂಡಿದ್ದೆ. ಕೃಷ್ಣನಾಡಿಗ ಅಂತ ಒಬ್ಬ ಮ್ಯಾನೇಜರ್ ಇದ್ರು. ಅವರು ಬಂದ್ರು, ಎಲ್ಲಾ ಹೀರೋಗಳ ಜೊತೆಯಲ್ಲೆಲ್ಲಾ ಪಾರ್ಟ್ ಮಾಡಿದ್ರಿಂದ ಚನ್ನಾಗೇ ಪರಿಚಯ ಇತ್ತು. “ಜನಾರ್ಧನ್ ಕಾಶೀನಾಥ್ ಕರಿತಾ ಇದ್ದಾರೆ” ಅಂದ್ರು. ಅವಾಗ ನಂಗೆ ಎಲ್ಲೋ ಒಂದು ಆಸೆ ಶುರುವಾಯ್ತು. ಸಿನಿಮಾದ ಇಡ್ಲಿ ವಡೆ ವಾಸನೆ ಬರ್ತಾ ಇದೆ ನಂಗೆ ಅಂತ ಅನಿಸ್ತು. ಯಾಕಂದ್ರೆ ಕಾಶೀನಾಥ್ ಅವರಿಂದ ಉಮಾಶ್ರೀ, ಲೋಕನಾಥ್ ಇನ್ನೂ ಇತರ ಆರ್ಟಿಸ್ಟಗಳು ಬರ್ತಾ ಇದ್ರು.


ಪರಮ್: ಅವರ ಸ್ಕೂಲಿಂದ?


ಬ್ಯಾಂಕ್ ಜನಾರ್ಧನ್: ಹ್ಞು. ಉಮಾಶ್ರೀ, ಅಭಿನಯ ಇವರೆಲ್ಲಾ ಕಾಶೀನಾಥ್ ಗರಡಿಯಿಂದ ಬಂದ್ರು. ನನ್ನ ಕರೆದಾಗ ನಂಗೆ ಎಲ್ಲೋ ಒಂದು ಆಸೆ ಹುಟ್ತು. ಏನೋ ವಾಸನೆ ಇದೆ ಅಂತ ಹೇಳಿ ಹೋದೆ. ಅವರ ಜೊತೆ ಮೊದಲೇ ಜೈಲರ್ ಅದು ಇದು ಅಂತೆಲ್ಲಾ ನಾನು ಪಾತ್ರ ಮಾಡಿದ್ದೆ. ಹೋದ ತಕ್ಷಣ “ರೀ ನಾನು ಒಂದು ಸಿನಿಮಾ ಮಾಡ್ತಾ ಇದ್ದೀನಿ. ಅದಕ್ಕೆ ನೀವು ಒಂದು ಕ್ಯಾರೆಕ್ಟರ್ ಮಾಡ್ಬೇಕು. ಮಾಡ್ತೀರಾ?” ಅಂದ್ರು. “ಏನ್ಸಾರ್? ಮಾಡ್ತೀರಾ? ಅಂತ ಕೇಳ್ತೀರಾ? ಮಾಡು ಅಂತ ಹೇಳಿ ಸಾರ್” ಅಂದೆ. “ಅಜಗಜಾಂತರ ಅಂತ ಒಂದು ಪಿಚ್ಚರ್ ಅದರಲ್ಲಿ ಮೇಯ್ನ್ ಇಬ್ಬರೇ ಕ್ಯಾರೆಕ್ಟರ್. ನಾನು ಮತ್ತೆ ನೀವು. ನೀವು ಬ್ರೋಕರ್ ಭೀಮಯ್ಯ ಅಂತ, ನಾನು ಹೀರೋ. ಇಡೀ ಪಿಚ್ಚರ್ ನಿಮ್ಮ ಮೇಲೆನೇ ನಿಂತಿರುತ್ತೆ. ಕಾಮಿಡಿ ವಿಲನ್ ನೀವು. ನಾನು ಸಪೋರ್ಟ್” ಅಂದ್ರು. “ಆಯ್ತು ಸಾರ್ ಮಾಡ್ತೀನಿ” ಅಂದೆ. “ನಾನು ಹೇಳ್ಕಳಿಸ್ತೀನಿ” ಅಂದ್ರು. ಇಷ್ಟೇ ಮಾತಾಗಿದ್ದು. ಯಾವಾಗ ಹೇಳ್ಕಳಿಸ್ತೀನಿ ಅಂದ್ರೋ ನಂಗೆ ಟುಸ್ ಆಗೋಯ್ತು.


ಪರಮ್: ನಂಬಿಕೆ ಹೋಯ್ತು?


ಬ್ಯಾಂಕ್ ಜನಾರ್ಧನ್: ಸಿನಿಮಾದಲ್ಲಿ ಹೇಳ್ಕಳಿಸ್ತೀನಿ ಅಂದ್ರೆ ಮುಗೀತು ಅಂತನೇ ಲೆಕ್ಕ. ಗೋವಿಂದ ಅಂತ ಆಸೆನೇ ಬಿಟ್ಬಿಟ್ಟೆ. ನಂತರ ಒಂದು ಹದಿನೈದು ದಿನ ಆದ್ಮೇಲೆ ಮತ್ತೆ ಕೃಷ್ಣ ನಾಡಿಗ ಬಂದ. “ಕಾಶೀನಾಥ್ ಕರಿತಾರೆ” ಅಂದ. ಮತ್ತೆ ಹೋದೆ. ಆಗ ಮೇಕಪ್ ಮಾಡ್ಸಿ ಡ್ರೆಸ್ ಹಾಕ್ಸಿ ಡೈಲಾಗ್ ಕೊಟ್ರು. ಹೇಗೆ ಮಾತಾಡ್ತೀಯ? ಅಂತ. ಸರಿ ನಾನು ಮಾಡಿ ತೋರಿಸ್ದೆ. ನಂತರ “ಹೇಳ್ಕಳಿಸ್ತೀನಿ ಹೋಗ್ರೀ” ಅಂದ್ರು. ಅದೂ ಹಾಗೇ ಆಗೋಯ್ತು. ಹೇಳೋದಾದ್ರೆ ಅಲ್ಲೇ ಹೇಳ್ತಿದ್ರಾ? ಇದು ಅಷ್ಟೇ ನಂಗೆ ಅದೃಷ್ಟ ಇಲ್ಲ ಅಂತ ಸುಮ್ಮನಾಗ್ಬಿಟ್ಟೆ. ಮತ್ತೆ ಒಂದು ವಾರ ಆದ್ಮೇಲೆ ಫೋನ್ ಬಂತು. “ಕಾಶೀನಾಥ್ ಅವರು ಬರಕ್ಕೆ ಹೇಳಿದ್ದಾರೆ ಬನ್ನಿ” ಅಂತ. ಹೋದೆ. ತಕ್ಷಣ ಅವರು ಹೇಳಿದ್ರು “ನೋಡಿ ಈ ಸಿನಿಮಾದಲ್ಲಿ ನೀವು ಕಾಮಿಡಿ ವಿಲನ್. ನಾನು ಹೀರೋ. ನಿಮಗೆ ಒಬ್ಳು ಮಗಳಿರ್ತಾಳೆ” ನಮ್ಮ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಪ್ರಭಾ ಅಂತ ಆಪಾತ್ರ ಮಾಡ್ತಾ ಇದ್ದಾಳೆ. ಅವಳು ತುಂಬಾ ದಪ್ಪ ಇದ್ಳು. ಸರಿ ಅಂತ ಒಪ್ಕೊಂಡೆ ಎಲ್ಲಾ ಆಯ್ತು. “ಒಂದೇ ಸಲ ನಲವತ್ತೈದು ದಿವ್ಸ ಡೇಟ್ಸ್ ಬೇಕು” ಅಂದ್ರು. “ಸಾರ್ ನಲವತ್ತೈದು ದಿವ್ಸ ಒಂದೇ ಸಲ ಕೊಟ್ಬಿಟ್ರೆ ನನ್ನ ಬ್ಯಾಂಕಿಂದ ಓಡಿಸ್ಬಿಡ್ತಾರೆ ಸಾರ್. ನಂಗೆ ಬೇರೆ ಏನಿಲ್ಲ ಬ್ಯಾಂಕ್ ಒಂದೇ ಆಧಾರ” ಅಂದೆ. “ಹಾಗಾದ್ರೆ ಸರಿ” ಅಂತ ಶೆಡ್ಯೂಲ್ ಬ್ರೇಕ್ ಬ್ರೇಕ್ ಮಾಡಿ ಕೊಟ್ರು.ಮುಂದುವರೆಯುವುದು…

84 views