ಸಿನಿಮಾ ಸಂಬಳ ಸಾಲ್ತಿರ್ಲಿಲ್ಲ ಬ್ಯಾಂಕ್‌ ಸಂಬಳ ಬರ್ತಿರ್ಲಿಲ್ಲ…

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 11ಈ ರೀತಿ ಬೆಂಗಳೂರಿಗೆ ಬಂದ್ಮೇಲೆ 200 ಪಿಚ್ಚರ್ ಆಗೋಯ್ತು ಸಾರ್. ಬರೀ ಈ ತರದ್ದೇ ಪಿಚ್ಚರ್ ಆಗೋಯ್ತು. 1981 ರಿಂದ 1985ರ ವರೆಗೂ ಹೀಗೇ ಆಗೋಯ್ತು. ಬಂದೆ ಹೋದೆ ಅಂತ ಸಿನಿಮಾ ಮಾಡು, ಬೆಳಗ್ಗೆ ಏಳು ಗಂಟೆಯಿಂದ ಹತ್ತು ಗಂಟೆಯವರೆಗೂ ಹುಡುಕಾಟ. ಹತ್ತು ಗಂಟೆ ಮೇಲೆ

ಬ್ಯಾಂಕ್. ಆಮೇಲೆ ಐದು ಗಂಟೆ ಆದ್ಮೇಲೆ ಮತ್ತೆ ಹೋಟೆಲ್ ಹೈಲ್ಯಾಂಡ್, ಮೋತೀಮಹಲ್ ತಿರುಗಾಡೋದು ಹೀಗೇ ಆಗೋಯ್ತು. ಬ್ಯಾಂಕಲ್ಲಿ ರಜೆಗಳು ಹಾಕೋ ಗಲಾಟೆ ಇಲ್ಲೂ ಶುರುವಾಯ್ತು. ಅವಾಗ ಬ್ಯಾಂಕಲ್ಲಿ ಹೇಳಿದ್ರು “ನೀವು ಒಂದೋ ಬ್ಯಾಂಕ್ ಕೆಲ್ಸ ಮಾಡಿ, ಇಲ್ಲಾಂದ್ರೆ ಸಿನಿಮಾದಲ್ಲಿ ಹೋಗಿ ಮಾಡಿ. ಇಲ್ಲಿ ನಮಗೆ ತೊಂದರೆ ಕೊಡ್ಬೇಡಿ ನೀವು” ಅಂತ ಹೇಳಿದ್ರು. ಕೆಲ್ಸ ಬಿಟ್ರೆ ಸಂಬಳ ಇಲ್ಲ. ಮಧ್ಯದಲ್ಲಿ ಏನಾಯ್ತು ಸಂಬಳ ಇಲ್ಲದಂತಹ ಕೆಲ್ಸ.


ಮೆಡಿಕಲ್ ಲಿವ್ ಎಲ್ಲಾ ರಜೆಗಳು ಮಾಡಿದ್ರಿಂದ ಸಂಬಳ ಇಲ್ಲದೇ ಕೆಲ್ಸ ಮಾಡ್ಬೇಕಾಗಿತ್ತು. ಆಗ ನಮ್ಮ ಚಿತ್ರರಂಗದಲ್ಲಿ ಏನು ಕೊಡ್ತಾ ಇದ್ರು ಸಾರ್? ಇನ್ನೂರು ಮುನ್ನೂರು ರೂಪಾಯಿ ಕೊಡ್ತಾ ಇದ್ರು. ಐನೂರು ರೂಪಾಯಿ ಕೊಟ್ರೆ ಹೆಚ್ಚು ಸಂಭಾವನೆ. ಆಗ ಇಪ್ಪತ್ತು ರೂಪಾಯಿ ಕನ್ವೇಯನ್ಸ್ ಕೊಡ್ತಾ ಇದ್ರು. ಆದರೆ ಏನು ಮಾಡೋದು ನಂಗೆ ಹುಚ್ಚು. ದುಡ್ಡು ಕೊಡ್ತಾರೋ ಬಿಡ್ತಾರೋ ಪಿಚ್ಚರ್‍ನಲ್ಲಿ ಮಾಡಿದ್ನಲ್ಲಾ? ಅಂತ ಇನ್ನೂರು ಪಿಚ್ಚರ್‍ಗಳಲ್ಲಿ ಆಕ್ಟ್ ಮಾಡ್ದೆ. ರಾಜ್ ಕುಮಾರ್ ಜೊತೆ ಹಾಗೂ ಎಲ್ಲಾ ಕಲಾವಿದರ ಜೊತೆನೂ ಆಕ್ಟ್ ಮಾಡ್ದೆ. ಇನ್ನೂರು ಪಿಚ್ಚರ್ ಮಾಡಿದ್ರೂ ಮನಸ್ಸಿಗೆ ಸಮಾಧಾನ ಇಲ್ಲ. ನಮಗೇ ಒಂದು ತಾಕತ್ತು ತೋರ್ಸುವಂತಹ ಪಾತ್ರ ಸಿಗ್ಲ್ಲೇ ಇಲ್ಲ.

ನಂತರ ಹೀಗೇ ಆದ್ರೆ ಕೆಟ್ಟೋಗ್ತಾನೆ ಇವ್ನು ಅಂತ ಮದುವೆ ಮಾಡ್ಸಿದ್ರು. ಮದುವೆ ಆದ್ರೂ ನಾವೇನೂ ಬಿಡ್ಲಿಲ್ಲ. ಮೊದಲು ತಾಯಿ ಗಲಾಟೆ ಮಾಡ್ತಿದ್ರು. ಈಗ ಹೆಂಡ್ತಿ ಸೇರಿ ಗಲಾಟೆ ಮಾಡ್ತಿದ್ರು. ಈ ಮಧ್ಯದಲ್ಲಿ ಸಂತಾನ ಬೆಳೀತು. ಮೂರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ಸಂಸಾರ ಕೂಡ ಜಾಸ್ತಿ ಆಯ್ತು. ವಿಪರೀತ ಜವಾಬ್ದಾರಿ ಆಯ್ತು. ಬ್ಯಾಂಕಲ್ಲಿ ವಿಪರೀತ ರಜೆ ಹಾಕ್ತಾ ಇದ್ದಿದ್ರಿಂದ ಯಾವ ಬ್ರಾಂಚಲ್ಲೂ ನನ್ನ ಇಟ್ಕೊಳೋದಕ್ಕೆ ತಯಾರಿರ್ಲಿಲ್ಲ. ಹಾಗಾಗಿ ಹಿರಿಯೂರಿ ವಿಜಯ ಬ್ಯಾಂಕ್‍ಗೆ ನನ್ನ ಟ್ರಾನ್ಸ್ ಫರ್ ಮಾಡಿದ್ರು. ಮೊದಲು ಜಯಲಕ್ಷ್ಮೀ ಬ್ಯಾಂಕ್ ಇತ್ತು ನಂತರ ಅದು ವಿಜಯ ಬ್ಯಾಂಕ್‍ಗೆ ಮರ್ಜ್ ಆಯ್ತು 1967ರಲ್ಲಿ.ಮುಂದುವರೆಯುವುದು…

34 views