“ಹದ್ದು ಹಾರಲು ಶಂಕರ್ ನಾಗ್ ಮಾಡಿದ್ದೇನು?”

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 6

(ಶಂಕರ್ ನಾಗ್ ಆತ್ಮೀಯ ಗೆಳೆಯ ಜಗದೀಶ್ ಮಲ್ನಾಡ್ ಅವರ ನೆನಪುಗಳು)


ಜಗದೀಶ್: ಫಸ್ಟ್ 13 ಎಪಿಸೋಡಲ್ಲೇ ಇದು ಮನೆ ಮಾತಾಗೋಯ್ತು. ರಾಮಾಯಣದ್ದು ಒಂದು ಟೈಟಲ್ ಟೋನ್ ತರನೇ, ನಮ್ಮ ಟೈಟಲ್ ಟ್ಯೂನಿಗೂ ಜನ ಸ್ಥಬ್ದ ಆಗ್ತಿದ್ರು. ಮಾಲ್ಗುಡಿ ಡೇಸ್ ಬರುವಾಗ್ಲೂ, ರಾಮಾಯಣ ಬರುವಾಗ್ಲೂ ರೋಡಲ್ಲಿ ಜನನೇ ಇರ್ತಿರ್ಲಿಲ್ಲ. ಎಲ್ಲಾ ಟಿ.ವಿ. ಮುಂದೆ ಕೂತಿರ್ತಿದ್ರು. ಮದುವೆಗೆ ಹೀರೋ ಹೀರೋಯಿನ್ ಗಳು ಹೋಗ್ತಿರ್ಲಿಲ್ವಂತೆ. ಈ ತರದೊಂದು ಕ್ರೇಜ್ ಇರ್ತಿತ್ತು. ಎಲ್ಲರ ಮನೆಯಲ್ಲೂ ಟಿ.ವಿ. ಇರ್ತಿರ್ಲಿಲ್ಲ ಯಾರದ್ದೋ ಮನೆಯಲ್ಲಿ ಟಿ.ವಿ. ಇರ್ತಿತ್ತು. ಅಲ್ಲಿಗೆ ಇಡೀ ಊರೇ ಹೋಗಿ ಕೂತ್ಕೊತಾ ಇತ್ತು, ಸಿನಿಮಾ ತರ. ಆ ತರದ್ದು ಸಿಚ್ಯುವೇಷನ್ ಅದು. ಆ ಕಾರಣಕ್ಕಾಗಿ ಆರ್ಟಿಸ್ಟ್ ಗಳಿಗೆ ಮಾಲ್ಗುಡಿ ಡೇಸ್ ಅಲ್ಲಿ ಆಕ್ಟ್ ಮಾಡೊದು ಅಂದ್ರೆ ಒಂದು ಹಿರಿಮೆ. ಆ ಪ್ರಾಜೆಕ್ಟ್ ಜೊತೆ ನಾವು ಇದ್ದೀವಿ ಅನ್ನೊದು ಒಂದು ಹೆಮ್ಮೆ.


ಹಾಗಾಗಿ ಸಣ್ಣ ಪುಟ್ಟ ಹೆಚ್ಚುಕಮ್ಮಿಯಾದ್ರೂ ಎಲ್ಲಾ ಬರ್ತಿದ್ರು. ಅದ್ರಲ್ಲಿ ‘ಹೀರೋ’ಅಂತ ಒಂದು ಮಂಜುನಾಥ್ ಅವರ ಎಪಿಸೋಡ್ ಆಗುಂಬೆಯಲ್ಲೇ ಮಾಡಿದ್ವಿ. ಆಮೇಲೆ ಇನ್ನೊಂದು ಪೈಲೆಟ್ ಎಪಿಸೋಡ್ ಮಾಡಿದ್ವಿ, ಫೈನಲ್ ಎಪಿಸೋಡ್ ‘ಮಂದಿರ್ ಕಾ ಬುಡ್ಡಾ’ಇಂಗ್ಲೀಷಲ್ಲಿ ‘ವಾಚ್ಮನ್’ ಅದನ್ನ ಬೆಂಗಳೂರು ಹತ್ತಿರದ, ಬಸವನಪುರದ ಹತ್ತಿರದ ಪಾಳು ಬಿದ್ದಿರುವ ಕೋಟೆಯಲ್ಲಿರುವ ದೇವಸ್ಥಾನದಲ್ಲಿ ಮಾಡಿದ್ವಿ. ಅದ್ರಲ್ಲಿ ಗಿರೀಶ್ ಕಾರ್ನಾಡ್ ವಾಚ್ ಮ್ಯಾನ್ ಆಗಿರ್ತಾರೆ. ಒಂದು ದೆವ್ವದ ಕತೆ ಅದು. ಬಿಮಲ್ ದೇಸಾಯಿ ಅಂತ ಆಕ್ಟರ್ ಬೆಂಗಳೂರಿನ ಇಂಗ್ಲೀಷ್ ಥಿಯೇಟರ್ನವ್ರು. ಅದು ಪೈಲೆಟ್ ಎಪಿಸೋಡ್ ಮಾಡಿದ್ವಿ.ಬ್ಯಾಂಕರ್ ಮಾರ್ಗಯ್ಯ ಆರ್.ಕೆ.ನಾರಾಯಣ್ ಅವರಿಗೆ ಇಷ್ಟ ಆಗಿತ್ತು. ಅದಕ್ಕೂ ಮುಂಚೆ ದೇವಾನಂದ್ ಅವರ ‘ಗೈಡ್’ಅಂತ ಒಂದು ಸಿನಿಮಾ ಬಂದಿತ್ತು. ಅದು ಯಾವ ಕಾರಣಕ್ಕೋ ಏನೋ ಆರ್. ಕೆ. ನಾರಾಯಣ್ ಅವ್ರಿಗೆ ಇಷ್ಟ ಆಗ್ಲೇ ಇಲ್ಲ. ಅದೂ ಕೂಡ ಆರ್.ಕೆ. ನಾರಾಯಣ್ ಅವ್ರದ್ದೇ ಕಥೆ. ಯಾವ ಮಟ್ಟಕ್ಕೆ ಅಂದ್ರೆ ನಂದು ಯಾವ ಕಥೆನೂ ಇನ್ಮುಂದೆ ಸಿನಿಮಾಕ್ಕೆ ಕೊಡೊದೇ ಇಲ್ಲಾಂತ ಅವ್ರು ಡಿಸೈಡ್ ಮಾಡ್ಬಿಟ್ಟಿದ್ರು. ಬ್ಯಾಂಕರ್ ಮಾರ್ಗಯ್ಯ ಆದ್ಮೇಲೆ, ಅವರಿಗೆ ಶಂಕರ್ ನಾಗ್ ಬಗ್ಗೆ ಎಲ್ಲಾ ಹೇಳಿದ್ಮೇಲೆ ಮಾಡಬಹುದು ಅಂತ ಆಯ್ತು.


ಆಗ ನಾವು ಮೊದಲು ‘ಮಂದಿರ್ ಕಾ ಬುಡ್ಡ’ಗಿರೀಶ್ ಕಾರ್ನಾಡ್ ಅವ್ರದ್ದು, ಟ್ರಯಲ್ ಶೂಟ್ ಮಾಡಿದ್ವಿ. ಅದನ್ನ ನೋಡಿದ್ಮೇಲೆ ಆರ್.ಕೆ.ನಾರಾಯಣ್ ಅವ್ರಿಗೆ ಕಂಪ್ಲೀಟ್ ಸಮಾಧಾನ ಆಯ್ತು. ಯಾಕಂದ್ರೆ ಕಥೆ ಬರೆದವನ ತಲೆಯಲ್ಲಿ, ಏನೋ ಒಂದು ಕಲ್ಪನೆ ಇರುತ್ತೆ. ಹೀಗೇ ಇರ್ಬೇಕು ಅಂತ. ಈ ತರ ಕ್ಯಾರೆಕ್ಟರ್ ಬೇಕು, ಈ ತರ ಬ್ಯಾಕ್ ಗ್ರೌಂಡ್ ಬೇಕು. ಅದಕ್ಕೆ 50 ಪರ್ಸೆಂಟ್ ಮ್ಯಾಚ್ ಆದ್ರೆ ಸಕ್ಸಸ್ ಅಂತ. ನಾವು ಶೂಟ್ ಮಾಡಿದ್ದ ಪೈಲೆಟ್ ಎಪಿಸೋಡ್ ಕಳುಹಿಸಿಕೊಟ್ವಿ. ಅದನ್ನೆಲ್ಲಾ ನೋಡಿ ಒಪ್ಕೊಂಡ್ರು.


ಅಲ್ಲಿಂದ ಕಥೆಗಳೆಲ್ಲಾ, ಒಂದಾದ್ಮೇಲೆ ಒಂದು ಶುರವಾಯ್ತು. ಆರ್.ಕೆ.ನಾರಾಯಣ್ ಅವ್ರು ಐದಾರು ಸಲ ಸೆಟ್ ಗೆ ಬಂದಿದ್ರು. ಆಗುಂಬೆಗೂ ಬಂದಿದ್ರು. ನನಗೆ ಖುಷಿ ಕೊಡುವ ವಿಷಯ ಏನಂದ್ರೆ, ‘ಲೀಲಾಸ್ ಫ್ರೆಂಡ್’ಅದ್ರಲ್ಲಿ ಸಿದ್ದ ಅಂತ ಲೀಡ್ ಕ್ಯಾರಕ್ಟರ್ ನಂದು, ನಾನೇ ಹೀರೋ. ನನಿಗೆ ಒಂದು ದೊಡ್ಡ ಅವಾರ್ಡ್ ಏನಂದ್ರೆ, ನಾವು 15 ಎಪಿಸೋಡ್ ಶೂಟ್ ಮಾಡಿದ್ಮೇಲೆ ಒಂದು ಬುಕ್ ರಿಲೀಸ್ ಮಾಡಿದ್ರು. ಅದರ ಕವರ್ ಪೇಜಲ್ಲಿ ನನ್ನ ಫೋಟೋ ಇತ್ತು. ಅದನ್ನೇ ಸೆಲೆಕ್ಟ್ ಮಾಡಿದ್ರು ಇದೇ ಇರ್ಲಿ ಅಂತ.


ಆಮೇಲೆ ‘ಮಿಠಾಯಿವಾಲ’ಅದು ಬೆಂಗಳೂರಲ್ಲಿ ಯಡಿಯೂರು ಹತ್ರ ಶೂಟ್ ಆಯ್ತು. ‘ಹಾರ್ಸ್ ಆಂಡ್ 2 ಗೋಟ್ಸ್’ ಅದು ನಂದಿ ಹಿಲ್ಸಲ್ಲಿ ಆಯ್ತು. ಈಶ್ವರನ್ ಅಂತ ಅದರಲ್ಲಿ ಸುನೀಲ್ ಅಂತ ಒಬ್ಬ ಆಕ್ಟ್ ಮಾಡಿದ್ದ, ಅನಂತ್ ನಾಗ್ ಮಗ ಆಗಿ. ‘ಮಿಠಾಯಿವಾಲ’ದಲ್ಲೂ ಕೂಡ ಅದೇ ಕಾಂಬಿನೇಶನ್ ಬಂತು. ಆ ಎಪಿಸೋಡ್ ನ ನಾವು ಬೆಂಗಳೂರು ಸೆಂಟ್ರಲ್ ಕಾಲೇಜ್, ಮತ್ತೆ ಮೈಸೂರಲ್ಲಿ ಶೂಟ್ ಮಾಡಿದ್ವಿ. ಯಾಕಂದ್ರೆ ಅವ್ನು ಕಾಲೇಜ್ ಸ್ಟೂಡೆಂಟ್. ಮತ್ತೆ ಮತ್ತೆ ಫೇಲ್ ಆಗ್ತಾನೆ. ಕೊನೆಗೆ ಒಂದ್ಸಲ ರಿಸಲ್ಟ್ ನೋಡ್ತಾನೆ. ಅವ್ನು ಫಸ್ಟ್ ಕ್ಲಾಸ್ ಬಂದಿರ್ತಾನೆ, ಅವ್ನು ಮೇಲ್ಗಡೆ ನೋಡೇ ಇರಲ್ಲ. ಫೇಲಾಗಿದ್ದೀನಿ! ಅಂತ ಹೋಗಿ, ಸ್ಯುಸೈಡ್ ಮಾಡ್ಕೊತಾನೆ!


‘ಲೀಲಾಸ್ ಫ್ರೆಂಡ್’ ಅಂತ ಹೇಳ್ದೆ ಅಲ್ವ ನಾನು ಆಕ್ಟ್ ಮಾಡಿರೋದು. ಅದು ಶೂಟ್ ಮಾಡಿರೋದು ನಮ್ಮ ಕ್ಯಾಮೆರಾ ಮ್ಯಾನ್ ಬಿ.ಸಿ. ಗೌರಿಶಂಕರ್ ಅವರ ಬಸವನಗುಡಿಯ ಮನೆಯಲ್ಲಿ. ಈಗೆಲ್ಲಾ ಅದು ಕಾಂಪ್ಲೆಕ್ಸ್ ಆಗಿದೆ. ಬಿಲ್ಡಿಂಗ್ ಆಗಿದೆ. ಆಮೇಲೆ ಜಿ.ವಿ.ಅಯ್ಯರ್ ಅವ್ರು ಒಂದು ಕ್ಯಾರೆಕ್ಟರ್ ಮಾಡಿದ್ರು. ಬಹಳ ವಯಸ್ಸಾಗಿತ್ತು ಅವ್ರಿಗೆ, ಆದರೆ ಉಕ್ಕಿನಂತ ಮನುಷ್ಯ ಅವ್ರು. ಆಗುಂಬೆಯಲ್ಲಿ ಕುಂದಾದ್ರಿ ಅಂತ ಒಂದು ಬೆಟ್ಟ ಇದೆ. ಅಲ್ಲಿ ಬಂದು ಆಕ್ಟ್ ಮಾಡಿದ್ರು.

ಇನ್ನೊಂದು ಇಂಪಾರ್ಟೆಂಟ್ ಪರ್ಸನ್ ಯಾರು ಅಂದ್ರೆ, ಆರ್ಟ್ ಡೈರಕ್ಟರ್ ‘ಜಾನ್ ದೇವರಾಜ್.’ ಅವ್ನು ಇವಾಗ್ಲೂ ಬಹಳ ಆಕ್ಟಿವ್ ಆಗಿದ್ದಾನೆ. ಅವನ ಕಲಾಕೃತಿಗಳೆಲ್ಲಾ ಸ್ವಲ್ಪ ಡಿಫ್ರೆಂಟ್. ನಮಗೆ ಏನು ಬೇಕೂಂತ ಹೇಳಿದ್ರೂ, ಕೊಡ್ತಾನೆ. ಜಿ.ವಿ.ಅಯ್ಯರ್ ಅವರ ಎಪಿಸೋಡಲ್ಲಿ, ದೇವಸ್ಥಾನದ ಮುಂದೆ ಎರಡು ವಿಗ್ರಹಗಳು ಇರುತ್ತೆ. ಅವು ಏನೋ ಮಾತಾಡ್ಕೊತಾ ಇರುತ್ತೆ, ಅಂತ ಪೂಜಾರಿಗೆ ಭ್ರಮೆ ಇರುತ್ತೆ. ಸಡನ್ನಾಗಿ ವಿಗ್ರಹಗಳು ಬೇಕೂಂತ ಆರ್ಟ್ ಡೈರೆಕ್ಟರಿಗೆ ಹೇಳಿದ್ವಿ. ಅವ್ನು ಯೋಚ್ನೆ ಮಾಡಿ “ಸರ್ ಸ್ವಲ್ಪ ಟೈಮ್ ಕೊಡಿ” ಅಂತ ಹೇಳಿ, ಹೊರಟ್ಹೋದ. ಅಲ್ಲೆಲ್ಲೋ ಕಾಡಲ್ಲೆಲ್ಲಾ ಹುಡುಕಿ ವಿಗ್ರಹ ಕೆತ್ತೋ ಬೆಣಚು ಕಲ್ಲು ಹುಡುಕ್ಕೊಂಡು ಬಂದು, ಅಲ್ಲೇ ವಿಗ್ರಹ ಕೆತ್ತಿ ಕೊಟ್ಟ. ಮೂರು ಗಂಟೆಯಲ್ಲಿ ಎರಡು ವಿಗ್ರಹ ರೆಡಿ ಮಾಡಿ ಕೊಟ್ಟ. ಯಾವುದನ್ನ ಕೇಳಿದ್ರೂ ಇಲ್ಲ ಅನ್ತಿರ್ಲಿಲ್ಲ. ‘ಮಾಲ್ಗುಡಿ ಡೇಸ್‌ʼ ಲ್ಲಿಎಲ್ಲಾ ಅವನದ್ದೇ ಕ್ರಿಯೇಶನ್. ಎಲ್ಲಾದ್ರೂ ಲೈಟ್ ಕಂಬ ಬಂತೂಂತಂದ್ರೆ, ಅದಕ್ಕೆ ತೆಂಗಿನ ಮರದ ತರ ರೆ ಡಿ ಮಾಡಿ ಇಟ್ಕೊಂಡಿದ್ದ. ಅದನ್ನ ಹೊಗಿ ಕಟ್ಬಿಡ್ತಾ ಇದ್ದ. ಇನ್ಯಾವುದಾದ್ರೂ ಲೇಟೆಸ್ಟ್ ಬ್ಯುಲ್ಡಿಂಗ್ ಬಂತೂಂತಂದ್ರೆ ಅದನ್ನ ಹೋಗಿ ಕವರ್ ಮಾಡಿ ಬಿಡೋನು. ಈ ತರ ಫೆಂಟಾಸ್ಟಿಕ್ ಪರ್ಸನ್ ಜಾನ್ ದೇವರಾಜ್.


ಶಂಕರ್ ನಾಗ್ ಗೆ ಗೊತ್ತಿತ್ತಲ್ವ ಏನ್ಬೇಕು ಅಂತ. ಸ್ವಲ್ಪ ದಿನದಲ್ಲೇ ಒಬ್ಬ ಡೈರಕ್ಟರಿಗೆ ಗೊತ್ತಾಗ್ಬಿಡುತ್ತೆ, ಆರ್ಟ್ ಡೈರೆಕ್ಟರಿಗಾಗ್ಲೀ ಯಾರಿಗಾದ್ರೂ ಗೊತ್ತಾಗ್ಬಿಡುತ್ತೆ. ಈ ಕಥೆಗೆ ಇದೇ ಬೇಕೂಂತ ಗೊತ್ತಾದ್ಮೇಲೆ ಅದೇ ತಗೊಂಡ್ಹೋಗುತ್ತೆ.


ಪರಮ್: ಸರ್ ಪ್ರೊಡಕ್ಷನ್ ಸವಾಲುಗಳ ಬಗ್ಗೆ ಹೇಳಿ. ಯಾಕಂದ್ರೆ ಮುಖ್ಯವಾಗಿ ಪ್ರೊಡಕ್ಷನ್ ಅಂದ್ರೆ ನೀವು..?


ಜಗದೀಶ್: ಪ್ರೊಡಕ್ಷನ್ ಸವಾಲ್ ಅಂದ್ರೆ, ಈಚ್ ಅಂಡ್ ಎವ್ರಿ ಮಿನಿಟ್ ಸವಾಲೆ. ಡಿಮ್ಯಾಂಡ್ಸ್ ವಿ ಡೋಂಟ್ ನೊ. ಕೆಲವೊಂದು ಮೊದ್ಲೇ ಗೊತ್ತಿರುತ್ತೆ, ಅರೇಂಜ್ ಮಾಡ್ಕೊಂಡಿರ್ತೀವಿ, ಶೂಟಿಂಗ್ ಪರ್ಮಿಶನ್ ತೆಗೊಂಡಿರ್ತೀವಿ. ಕೆಲವು ಕಡೆ ಪ್ಲಾನ್ ಪ್ರಕಾರ ಆಗಲ್ಲ. ಈಗ ಏನಾಗುತ್ತೆ? ಯಾವುದಾದ್ರೂ ಸಿನಿಮಾ ರಿಲೀಸ್ ಆಗುವಾಗ ನೀವು ಹೋಗಿ ಇಂಟರ್ವ್ಯೂವ್ ಮಾಡಿದ್ರೆ, ಎಲ್ಲರೂ ಹೇಳ್ತಾರೆ “ನಾನು ಬಹಳ ಕಷ್ಟ ಪಟ್ಟು ಸಿನಿಮಾ ಮಾಡಿದ್ದೀವಿ ಸರ್, ಎಲ್ಲಾ ಬಂದು ನೋಡ್ಬೇಕು” ಅಂತ. ಸುಲಭವಾಗಿ ಸಿನಿಮಾ ಮಾಡಕ್ಕೆ ಆಗಲ್ಲರಿ. ಕಷ್ಟ ಪಡ್ಲೇಬೇಕು, ಅದನ್ನ ಹೇಳ್ಕೊಳೋದಕ್ಕೆ ಏನೂ ಇಲ್ಲ. “ಕಷ್ಟ ಪಡಕ್ಕೆ ತಯಾರಿದ್ರೆ ಸಿನಿಮಾ ಮಾಡು. ಕಷ್ಟ ಪಡಕ್ಕೆ ತಯಾರಿಲ್ಲದಿದ್ರೆ ಸಿನಿಮಾ ಮಾಡ್ಬೇಡ!” ಇದು ಜನರಲ್ ರೂಲ್.


ಇನ್ನು ಏನಾಗುತ್ತೆ ಹೆಜ್ಜೆ ಹೆಜ್ಜೆಗೂ ಪ್ರಾಬ್ಲಮ್ ಇರುತ್ತೆ. ಫಾರ್ ಎಕ್ಸಾಂಪಲ್ ‘ಇಂಜಿನ್ ಟ್ರಬಲ್’ ಎಪಿಸೋಡ್ಗೆ ರೋಡ್ ರೋಲರ್ ಬೇಕು. ಅದು ಅಲ್ಲಿ ಸುತ್ತಮುತ್ತ ಎಲ್ಲೂ ಸಿಗಲ್ಲ. ನಾನು ಶಿವಮೊಗ್ಗದಲ್ಲೆಲ್ಲಾ ಕೇಳ್ದೆ, ನಾನು ಶಿವಮೊಗ್ಗದವ್ನೇ, ನನ್ನ ಫ್ರೆಂಡ್ಸ್ ನ ಕೇಳ್ದೆ, ಕಾಂಟ್ರಾಕ್ಟರ್ ಗಳನ್ನ ಕೇಳ್ದೆ. ಅವ್ರಿಗೇ ಬೇಕಾದ್ರೂ, ಅವರು ಬೆಂಗಳೂರಿಂದನೇ ತರಿಸ್ತಾ ಇದ್ರು. ನಾನೂ ಬೆಂಗಳೂರಿಗೆ ಬಂದು, ಒಬ್ಬ ಕಾಂಟ್ರಾಕ್ಟರ್ ಹತ್ರ ರೋಡ್ ರೋಲರ್ ಬಗ್ಗೆ ಮಾತಾಡ್ದೆ. ಅದೇನಾಗುತ್ತೆ ಒಬ್ಬ ಪ್ರೊಡಕ್ಷನ್ ಪರ್ಸನಿಗೆ ಒಂದು ಕೆಪಾಸಿಟಿ ಇರ್ಬೇಕು. ನನಿಗೇನಾದ್ರೂ ಬೇಕೂಂತಂದ್ರೆ, ನಿಮ್ಮನ್ನ ಕನ್ವಿನ್ಸ್ ಮಾಡಿ ಅದನ್ನ ತೆಗೊಳೋ ಕೆಪಾಸಿಟಿ ಇರ್ಬೇಕು.


ಪರಮ್: ತಾಕತ್ ಇರ್ಬೇಕು?


ಜಗದೀಶ್: ತಾಕತ್ ಅನ್ನೊದಕ್ಕಿಂತ, ನಿಮ್ಮ ಮಾತು ಕಥೆಯಲ್ಲಿ ಒಂದು ಗೌರವ ಇರ್ಬೇಕು. ನಾವು ಮಾತಾಡೊದು ಅವರಿಗೆ ಅರ್ಥ ಆಗ್ಬೇಕು. “ನನ್ನ ಹತ್ರ ರೋಡ್ ರೋಲರ್ ಇದೆ ನಿಮಗೆ ಯಾಕ್ರೀ ಕೊಡ್ಬೇಕು? ಅದನ್ನ ಹೆಂಗೆ ತಗೊಂಡು ಹೋಗ್ತೀರ? ಲಾರಿಯಲ್ಲಿ ತಗೊಂಡು ಹೋಗ್ತೀರಾ? ಅದೇನಾದ್ರೂ ಬಿದ್ದು ಡ್ಯಾಮೇಜಾದ್ರೆ, ನಮಿಗೆ ಯಾರು ಕೊಡ್ತಾರೆ? ಎಷ್ಟು ಕೊಡ್ತೀರ? ಏನಾದ್ರೂ ಆದ್ರೆ ಏನು ಜವಾಬ್ದಾರಿ ತಗೋತೀರ?” ಈ ತರದ್ದೆಲ್ಲಾ ಪ್ರಶ್ನೆಗಳು ಬರುತ್ತೆ. ಸೋ ಅಲ್ಲೊಬ್ರು ಕಾಂಟ್ರಾಕ್ಟರ್ ಹತ್ರ ಬಂದು ರೋಡ್ ರೋಲರ್ ತಗೊಂಡೆ. ಆ ಮೇಲೆ ಫಾರೆಸ್ಟ್ ಆಫೀಸ್ ಗೆ ಹೋಗಿ, ಮಾತಾಡಿ, ಇಲ್ಲಿಂದ ಆನೆಗಳನ್ನ ಲಾರಿಯಲ್ಲಿ ತಗೊಂಡು ಹೋದೆ.


ಆದಾಗಿ ಇನ್ಯಾವತ್ತೋ ಎಮರ್ಜೆನ್ಸಿ ಆನೆಗಳು ಬೇಕಿತ್ತು ಅಂತ, ಶಿವಮೊಗ್ಗಕ್ಕೆ ಹೋಗಿ ಸಕ್ಕರೆ ಬೈಲು ಅಂತಿದೆ ಅಲ್ಲಿ ಆನೆಗಳಿವೆ. ಇಟ್ಸ್ ಆಲ್ ಡಿಪೆಂಡ್ಸ್ ಹೌ ಯು ಕನ್ವಿನ್ಸ್? ಅಂತ. ಈಗ, ಫಾರೆಸ್ಟ್ ಆಫಿಸ್ ಗೆ ಹೋಗ್ಬೇಕು ಅಲ್ಲಿ, ರೇಂಜರ್ ಆಫಿಸರ್ ಯಾರಾದ್ರೂ ಇರ್ತಾರೆ. ಅವ್ರನ್ನ ಕನ್ವಿನ್ಸ್ ಮಾಡ್ಬೇಕು ಅಂದ್ರೆ, ನಾನು ಮಾತಾಡಿದ ತಕ್ಷಣ ಕೆಲ್ಸ ಆಗುತ್ತೆ ಅಂತಲ್ಲ. ಬ್ಯಾಕ್ ಗ್ರೌಂಡ್ ಇರುತ್ತಲ್ವ “ಶಂಕರ್ ನಾಗ್ ಡೈರೆಕ್ಟ್ ಮಾಡ್ತಾ ಇದ್ದಾರೆ, ಮಾಲ್ಗುಡಿ ಡೇಸ್ ನ್ಯಾಶನಲ್ ಟಿ.ವಿ. ನಲ್ಲಿ ಬರ್ತಾ ಇದೆ” ಅಂದಾಗ ಅವ್ರಿಗೂ ಖುಷಿಯಾಗುತ್ತೆ. ಆದ್ರೂ ಏನಾಗುತ್ತೆ ಅಂದ್ರೆ, ಆಗ್ಲೇ ಬೇಕುಂತಂದ್ರೆ, ಕೊಡ್ಲೇ ಬೇಕೂಂತೇನಿಲ್ಲ. ಹೆಚ್ಚಾಗಿ ಎಲ್ಲರೂ ಒಪ್ಕೊತಿದ್ರು, ಒಬ್ಲೇಜ್ ಮಾಡ್ತಿದ್ರು. ಆದ್ರೆ ಟೈಮಿಗೆ ಸರಿಯಾಗಿ ಅದನ್ನ ತಲುಪಿಸೋ ಕೆಲ್ಸ ನಮ್ದು ಇರುತ್ತೆ.


ಇದು ಒಂದೇಂತಲ್ಲ. ಈಗ ಒಂದು ಪ್ರಾಜೆಕ್ಟ್ ಶುರುವಾಗ್ತಾ ಇದೆ ಅಂದ್ರೆ, ಡಿಸ್ಕಶನ್ ಗೆ ಏರ್ಲೈನ್ಸಲ್ಲಿ ರೂಮ್ ಹಾಕೊದ್ರಿಂದ ಹಿಡ್ದು, ಆರ್ಟಿಸ್ಟ್ ಗಳನ್ನ ಮಾತಾಡ್ಸೊದ್ರಿಂದ ಹಿಡ್ದು, ಅವ್ರ ಪೇಮೆಂಟಿಂದ ಹಿಡ್ದು, ಅವ್ರ ಟ್ರಾನ್ಸಪೋಟೇಷನ್ ನಿಂದ ಹಿಡ್ದು, ಅವ್ರ ಊಟ ತಿಂಡಿಯಿಂದ ಹಿಡ್ದು, ಅವ್ರು ಉಳ್ಕೊಳೋ ಜಾಗದಿಂದ ಹಿಡ್ದು, ಪ್ರಾಪರ್ಟೀಸ್ ಏನೆಲ್ಲಾ ಬೇಕು? ಆರ್ಟ್ ಡೈರಕ್ಟರಿಗೆ ಏನೇನು ರಿಕ್ವಾಯರ್ಮೆಂಟ್ ಇದೆ? ಕಾಸ್ಟ್ಯೂಮರ್ ಗೆ ಏನು ರಿಕ್ವಾಯರ್ಮೆಂಟ್ ಇದೆ? ಮೇಕಪ್ನವ್ರದು ಏನು ರಿಕ್ವಾಯರ್ಮೆಂಟ್ ಇದೆ? ಇಷ್ಟೂ ಕೊಆರ್ಡಿನೇಷನ್ ಆಗ್ಬೇಕು.


ಒಂದು ಡಿಪಾರ್ಟ್ಮೆಂಟ್ ಮಿಸ್ ಆದ್ರೂ ಅವತ್ತಿನ ಶೂಟಿಂಗ್ ಗೆ ಕಷ್ಟ ಆಗ್ಬಿಡುತ್ತೆ. ಅವ್ನು ಯಾವದೋ ಕಂಟಿನ್ಯುಟಿ ಕೋಟೇ ತಂದಿರಲ್ಲ, ಎಲ್ಲೋ ಬಿಟ್ಟಿರ್ತಾನೆ. “ಬೆಂಗ್ಳೂರಲ್ಲೇ ಇದೆ ಸಾರ್”ಅಂತಾನೆ. ಈ ಪ್ರಾಬ್ಲಮ್ ಎಲ್ಲಾ ಇರುತ್ತೆ ಪ್ರೊಡಕ್ಷನ್ ಅವ್ರಿಗೆ. ನಾವು ಎಷ್ಟೇ ಪರ್ಫೆಕ್ಟ್ ಅಂತ ಅನ್ಕೊಂಡ್ರುನೂ ಅಷ್ಟು ಪರ್ಫೆಕ್ಟಾಗಿ ಕೆಲ್ಸ ಮಾಡೋದು ಕಷ್ಟನೇ. ಪ್ರೊಡಕ್ಷನ್ ಅವರು ಅಂದ್ರೆ, ಅಷ್ಟು ಗೊತ್ತಿರ್ಬೇಕು. ಈಗ ಇವತ್ತಿನ ಸಿನಿಮಾಗಳಲ್ಲೆಲ್ಲಾ ಸ್ಕ್ರಿಪ್ಟ್ ಕೊಡಲ್ಲ, ಬೇಸಿಕಲ್ಲಿ ಸ್ಕ್ರಿಪ್ಟೇ ಇರಲ್ಲ. ಅವಾಗ ಸ್ಕ್ರಿಪ್ಟ್ ಕೈಗೆ ಕೊಟ್ಟು ಬಿಡ್ತಿದ್ರು. ನಾವು ಒಂದ್ಸಲ ಓದ್ಕೊಂಡ್ಬಿಟ್ರೆ ಎಲ್ಲಾ ಗೊತ್ತಾಗೋದು. ನಾವು ರಂಗಭೂಮಿ ಕಲಾವಿದರೇ, ನಾವು ಆಕ್ಟರ್ ಆಗ್ಬೇಕುಂತನೇ ಬಂದಿರೋದು. ಮತ್ತೆ ಏನೇನೋ ಕಾರಣಗಳಿಂದ ಬೇರೆ ಬೇರೆ ಕೆಲ್ಸ ಮಾಡ್ಬೇಕಾಯ್ತು. ಒಂದ್ಸಲ ಸ್ಕ್ರಿಪ್ಟ್ ನೋಡ್ಕೊಂಡಾಗ ನನಿಗೆ ಒಂದು ಇಮ್ಯಾಜಿನೇಷನ್ ಬರುತ್ತೆ, ಹೀಗಿರುತ್ತೆ, ಹೀಗಿರ್ಬೇಕು, ಹೀಗಾದ್ರೆ ಚೆನ್ನಾಗಿರುತ್ತೆ ಅಂತ. ನನ್ದೂ ತಲೆ ಓಡ್ತಾ ಇರುತ್ತೆ. ಆಗ ಏನಾಗುತ್ತೆ ನಾವು ಮತ್ತೆ ಡೈರೆಕ್ಟರ್ ಅನ್ಕೊಳೊದು ಸೂಟ್ ಆದ್ರೆ ನಮ್ದು ಒಂದು ಕಾಂಟ್ರಿಬ್ಯೂಷನ್ ಅಂತ. ಹಾಗಾಗಿ ನನಿಗೆ ಅದೊಂದು ಅಡ್ವಂಟೇಜ್ ಇತ್ತು.


ಈಗ ಡೈರೆಕ್ಟರ್ ನನಿಗೆ ಈ ಸೀನ್ ಬೇಕು ಅಂದಾಗ, ನನ್ಹತ್ರ ಎಲ್ಲಾ ಫೆಸಿಲಿಟೀಸ್ ಇದೇಂತಂದ್ರೆ, ಆ ಸೀನ್ ಮಾಡ್ತೀನಿ ನಾನು. ಅದ್ರಲ್ಲಿ ಏನಾದ್ರೂ ಮಿಸ್ ಆಯ್ತುಂತಂದ್ರೆ ನನಗೆ ಮಾಡಕ್ಕೆ ಆಗಲ್ಲ. ಅಷ್ಟು ಪರ್ಫೆಕ್ಟಾಗಿ ಪ್ರೊಡಕ್ಷನ್ ಅವ್ರು ಇರ್ಬೇಕು. ಈಗ ಆಗುಂಬೆಯಲ್ಲಿ ಬ್ಯಾಕ್ ಗ್ರೌಂಡಲ್ಲಿ ಕತ್ತೆಗಳು ಬೇಕೂಂತಂದ್ರೆ, “ನನಗೆ 10 ಕತ್ತೆಗಳು ಬೇಕಣ್ಣ”ಅಷ್ಟೇ ಹೇಳ್ತಾರೆ. “ಅದು ಎಲ್ಲಿಂದ ತರೋದು? ಏನು ಮಾಡೊದುಂತೆಲ್ಲ”ಪ್ರಶ್ನೆ ಮಾಡಿದ್ರೆ “ನಿನ್ಗೆ ಕೆಲ್ಸ ಬರಲ್ಲ”ಅಂತ. “10 ಕತ್ತೆ ಬೇಕು, ಒಂದಾನೆ ಬೇಕು. ರೋಡ್ ರೋಲರ್ ಬೇಕು.” ಇಷ್ಟೇ ಹೇಳೋದು “ಒಂದು ಕುದುರೆ ಬೇಕು. ಜಟಕಾ ಗಾಡಿ.” ಅದನ್ನೆಲ್ಲಾ ಎಲ್ಲಿಂದ ತಗೊಂಡು ಹೋಗೋದು? ಶಿವಮುಗ್ಗದಿಂದ ಜಟಕಾ ಗಾಡಿ ತೆಗೊಂಡು ಹೋಗಿದ್ವಿ. ಕುದುರೆ ಬೆಂಗಳೂರಿಂದ ತಗೊಂಡು ಹೋಗಿದ್ವಿ.


ಒಂದು ಕುದುರೆ ನಾವು ಇಟ್ಕೊಂಡಿದ್ವಿ. ಅದು ಸೀನಿಗೆ ಬೇಕಾಗ್ತಿತ್ತು. ಯಾವುದೋ ಒಂದು ಎಪಿಸೋಡ್ ‘ಸ್ವಾಮಿ ಆಂಡ್ ಫ್ರೆಂಡ್ಸ್’ ಇಲ್ಲಿ ಐ.ಬಿ. ನಲ್ಲೂ ಮಾಡಿದ್ದಿವಿ. ಆ ಮಕ್ಕಳದೆಲ್ಲಾ ಕಥೆ ಅದು. ಹಾಗಾಗಿ ಕೇಳಿದ್ದನ್ನ ಅರ್ಥ ಮಾಡ್ಕೊಳೋದು, ಎಲ್ಲಿ ಸಿಗುತ್ತೆ ಅಂತ ಹುಡುಕೋದು, ಮತ್ತೆ ಟೈಮಿಗೆ ಸರಿಯಾಗಿ ಅದನ್ನ ಪ್ರವಾಯ್ಡ್ ಮಾಡೋದು. ನಾನು ಹೇಳಿದ್ನಲ್ಲ, “ಕತ್ತೆಗಳು ಬೇಕು”ಅಂತ ಹೇಳಿದ್ರು. ಅಲ್ಲಿ ಆಗುಂಬೆಯಲ್ಲಿ ಕತ್ತೆಗಳಿಲ್ಲ, ತೀರ್ಥಳ್ಳಿಯಲ್ಲೂ ಕತ್ತೆಗಳಿಲ್ಲ, ನಾನು ಶಿವಮುಗ್ಗದವ್ನೇ ಆಗಿದ್ರಿಂದ ನನಗೆ ಗೊತ್ತಿತ್ತು. “ಅಲ್ಲಿ ಕತ್ತೆಗಳು ಸಿಗುತ್ತೆ” ಅಂತ . ಆಮೇಲೆ ಮಾತಾಡಿ ಅರೇಂಜ್ ಮಾಡಿ ಕತ್ತೆಗಳು 15 ದಿವ್ಸನೋ ಒಂದು ತಿಂಗ್ಳೋ, ನಾವು ಮೂರು ತಿಂಗಳು ಶೂಟಿಂಗ್ ಮಾಡ್ತಿದ್ವಿ. ಆ ಮೂರು ತಿಂಗಳು ಕತ್ತೆಗಳು ನಮ್ಹತ್ರ ಇರ್ಬೇಕಲ್ವ? ಅವನದ್ದು ಏನೋ ಕಮಿಟ್ಮೆಂಟ್ ಇರುತ್ತೆ, ಅವ್ನಿಗೆ ಒಂದು ಎಕ್ಸಾಯಿಟ್ಮೆಂಟ್ ಇರ್ಬೇಕು. ಮತ್ತೆ ಪೇಮೆಂಟ್ ಅವ್ನಿಗೆ ಖುಷಿ ಕೊಡುವ ಹಾಗೆ ಇರ್ಬೇಕು. ಅಂತದ್ರಲ್ಲಿ ಅವ್ರ್ನ ಒಪ್ಪಿಸಿ, ಕತ್ತೆಗಳನ್ನ ತೆಗೊಂಡು ಬಂದಿದ್ದೆ ನಾನು, ಆಗುಂಬೆಗೆ. ಗ್ರೌಂಡಲ್ಲಿ ಕತ್ತೆಗಳಿರೋದು, ಕುದುರೆಗಳಿರೋದು.


ಆಮೇಲೆ ಸ್ಪೆಷಲ್ ಪ್ರಾಪರ್ಟೀಸ್ “ಹಾವುಗಳು ಬೇಕು” ಹಾವುನೂ ಬೆಂಗಳೂರಿಂದ ತಗೊಂಡು ಹೋಗಿದ್ವಿ. “ಹದ್ದು ಬೇಕು” ಅಂತ ಹೇಳಿದ್ರು. ತಮಾಷೆ ಏನಂದ್ರೆ ನಾಗ ಅಂತ ಹಾವಿನ ಕಥೆ ಅದು, ಅದ್ರಲ್ಲಿ ಹಾವು ಬರುತ್ತೆ, ಆಗ ಹದ್ದು ಬಂದು ಅಟಾಕ್ ಮಾಡುತ್ತೆ ಅದನ್ನ. ಸಡನ್ನಾಗಿ ಹದ್ದು ಹಾವುನ ನೋಡಿದ ಕೂಡಲೇ ಅಟ್ಯಾಕ್ ಮಾಡ್ಬೇಕಲ್ವ? ಒಂದು ಹದ್ದು ತೆಗೊಂಡು ಹೋಗಿದ್ವಿ. ಸರಿ ಹಾವು ಬಿಟ್ವಿ. ಇನ್ನೇನು ಹದ್ದು ಮೇಲ್ಗಡೆಯಿಂದ ಬಂದು ಅಟ್ಯಾಕ್ ಮಾಡ್ಬೇಕು, ಕ್ಯಾಮರಾ ಎಲ್ಲಾ ರೆಡಿ, ಹದ್ದಿನ ಕಡೆಯಿಂದ ಕ್ಯಾಮರಾ ಬರ್ಬೇಕು. ಹಾವನ್ನು ಬಿಟ್ರೆ ಹದ್ದು ಮೂವೇ ಆಗ್ಲಿಲ್ಲ. ಹಾವಿನ ಕಡೆಗೇ ಬರ್ಲಿಲ್ಲ. ಹಾವು ಹೊರ್ಟೋಗುತ್ತೆ. ತಿರ್ಗ ಹಾವುನ ಹಿಡ್ಕೊಂಡು ಬರ್ತಾನೆ, ಹಾವು ಹೋಗುತ್ತೆ, ಹದ್ದು ಮಾತ್ರ ಬರ್ತನೇ ಇಲ್ಲ. ಸರಿ ಯಾರೋ ಮರದ ಮೇಲೆ ಹೋಗಿ ಹದ್ದುನ ಎತ್ಹಾಕಿದ್ರು. ಆದ್ರೆ ಹದ್ದು ಲ್ಯಾಂಡ್ ಆಗ್ಲೇ ಇಲ್ಲ, ಡಬಾರ್ ಅಂತ ಬಿದ್ದೋಯ್ತು. ಅದ್ರದ್ದು ಏನೋ ಹೆಲ್ಥ್ ಇಶ್ಯೂಸ್ ಏನೋ ಇತ್ತು. ಕೊನೆಗೆ ಆರ್ಟ್ ಡೈರೆಕ್ಟರಿಗೆ ಹೇಳಿ ಹದ್ದಿನ ತರದ್ದು ಒಂದು ಪೇಪರ್ ಕಟೌಟ್ ಮಾಡಿ, ಅದನ್ನ ಮೇಲೆ ಬರೋ ತರ ಮಾಡಿ, ಅದರ ಶಾಡೋ ಹಾವಿನ ಮೇಲೆ ಬೀಳೋ ಹಾಗೆ ಮಾಡಿ, ಆ ಶೂಟಿಂಗ್ ಮಾಡಿದ್ವಿ.


ಮುಂದುವರೆಯುವುದು…

ಸಂದರ್ಶನ-ಕೆ.ಎಸ್ ಪರಮೇಶ್ವರ


28 views