ಹುಡುಗಿ ಚೆನ್ನಾಗಿದ್ದಾಳೆ ಟ್ರೈ ಮಾಡು ಅಂದಿದ್ರು ಮನೋಹರ

ಸುಮಾ - ಎಲ್. ಎನ್‌ಶಾಸ್ತ್ರಿ ಲೈಫ್ ಸ್ಟೋರಿ ಭಾಗ-6
ಶಂಕರ್‌ನಾಗ್‌ ಅವರ ಸಂಕೇತ್‌ ಸ್ಟುಡಿಯೊ ಇತ್ತು. ಅಲ್ಲಿ ವಿ.ಮನೋಹರ್‌ ಅವರ ರೆಕಾರ್ಡಿಂಗ್‌ ನಡೆಯುತ್ತಿತ್ತು. ಹಿನ್ನೆಲೆ ಗಾಯಕ ಶಂಕರ್‌ಶಾನ್‌ಭಾಗ್‌ ಅವರನ್ನು ಭೇಟಿ ಆಗಲು ಅಲ್ಲಿಗೆ ಬಂದಿದ್ದೆ. ಅವರು ಉಡುಪಿಯವರು. ನಾನು ಅಲ್ಲಿಯವಳೇ. ಉಡುಪಿ ವಾಸುದೇವ್‌ ಭಟ್‌ ನನ್ನ ಗುರುಗಳು. ನನಗೆ ಸಿನಿಮಾ ಹಾಡುಗಳ ಬಗ್ಗೆ ಒಲವಿತ್ತು. ಚೆನ್ನೈಗೆ ಹೋಗಿ ಇಳಯರಾಜ ಅವರ ಬಳಿ ವಾಯ್ಸ್‌ಟೆಸ್ಟ್‌ ಮಾಡಿಸಬೇಕೆಂದಿದ್ದೆ. ನನ್ನ ಗುರುಗಳಿಗೆ ಹೋಟೆಲ್ ವುಡ್‌ಲ್ಯಾಂಡ್ಸ್‌ ಅವರ ಪರಿಚಯವಿತ್ತು. ಅವರಿಗೆ ಇಳಯರಾಜ ಅವರ ಪರಿಚಯವಿತ್ತು. ಹಾಗಾಗಿ ಗುರುಗಳು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಎನ್ನುತ್ತಿದ್ರು. ಹಂಸಲೇಖ ಅವರ ಬಳಿ ನೇರವಾಗಿ ಹೋಗಲು ನನಗೆ ಗೊತ್ತಿರಲಿಲ್ಲ.


ಶಂಕರ್‌ಶಾನ್‌ಭಾಗ್‌ ಅವರಿಗೆ ನನ್ನ ಗುರುಗಳು ಕಳುಹಿಸಿದ್ದ ಒಂದು ಕವರ್‌ ಕೊಡಲು ಬಂದಿದ್ದೆ. ಅವರನನ್ನು ನನ್ನ ಚಿಕ್ಕಮ್ಮನ ಮನೆಯಲ್ಲಿ ಭೇಟಿಯಾಗಬೇಕಿತ್ತು. ಆದರೆ, ಅವನಿಗೆ ಅಲ್ಲಿಗೆ ಬರಲು ಸಮಯವೇ ಸಿಕ್ಕಿಲ್ಲ. ನನಗೆ ಅಂದೇ ಊರಿಗೆ ಹೋಗಬೇಕಿತ್ತು. ನಾನು ಊರಿಗೆ ವಾಪಸ್‌ ಹೋಗುತ್ತೇನೆ. ನೀನು ಊರಿನಲ್ಲಿಯೇ ಅದನ್ನು ತೆಗೆದಿಕೋ ಎಂದು ನಾನು ಅವನಿಗೆ ಹೇಳಿದೆ. ಅದಕ್ಕವನು ಇಲ್ಲ, ನಿನಗೆ ಅರ್ಡಸ್‌ ಹೇಳುತ್ತೇನೆ. ನೀನು ಯಾರನಾದ್ರೂ ಕರೆದುಕೊಂಡು ಬಾ ಎಂದು ಹೇಳಿದ. ಇಲ್ಲಿ ನಿನಗೆ ಸಾಂಗ್‌ ರೆಕಾರ್ಡಿಂಗ್‌ ಎಲ್ಲ ಹೇಗೆ ನಡೆಯುತ್ತದೆ ಎಂಬುದು ನೋಡಲು ಅವಕಾಶ ಸಿಗುತ್ತದೆ ಎಂದ. ಸರಿ ಎಂದು ನಾನು ಸಂಕೇತ್‌ ಸ್ಟುಡಿಯೊಗೆ ಹೋದೆ. ಅಲ್ಲಿ ಮನೋಹರ್‌ ಅವರದು ರೆಕಾರ್ಡಿಂಗ್‌ ನಡೆಯುತ್ತಿತ್ತು. ಅವರ ಬಳಿ ಇವನು, ಈಕೆ ತುಂಬಾ ಚೆನ್ನಾಗಿ ಹಾಡುತ್ತಾಳೆ ಎಂದು ಹೇಳಿದ. ಹಾಗಿದ್ರೆ, ಈ ಟ್ರ್ಯಾಕ್ ನಿಮ್ಮ ಜೊತೆ ಹಾಡಲಿ ಎಂದು ಹೇಳಿದ್ರು. ಈಗಲೇ ಹಾಡಬೇಕು ಎಂದರೆ ಹೇಗೆ, ನನಗೆ ಆಗುತ್ತಾ ಎಂದು ಕೇಳಿದೆ. ಶಂಕರ್‌ ನನಗೆ ಚಿಕ್ಕ ವಯಸ್ಸಿನಿಂದಲೂ ಪರಿಚಯ. ಬಾ, ಆಗುತ್ತೆ ನಾನು ನಿನಗೆ ಹೇಳಿಕೊಡುತ್ತೇನೆ ಎಂದ. ಅವನು ಹೇಳಿಕೊಟ್ಟ ನಾನು ಕಲಿತೆ. ರೆಕಾರ್ಡಿಂಗ್‌ ಆಗುತ್ತಿತ್ತು. ಟೇಕ್‌ ಆದ ಮೇಲೆ ಮಾನಿಟರ್‌ ಸಮಯದಲ್ಲಿ ಶಾಸ್ತ್ರಿ ಬಂದಿದ್ದಾರೆ. ಹಂಸಲೇಖ ಅವರ ರೆಕಾರ್ಡಿಂಗ್‌ ಮುಗಿಸಿ ಅವರು ಇಲ್ಲಿಗೆ ಬಂದಿದ್ದರು. ಮನೋಹರ್‌, ಶಾಸ್ತ್ರಿ ಸೇರಿ ಇನ್ನು ಮೂರ್ನಾಲ್ಕು ಬ್ಯಾಚ್ಯುಲರ್ಸ್‌ ಒಂದೇ ಮನೆಯಲ್ಲಿಯೇ ಇದ್ದರು. ಆಗ ಅವರು ಯಾರದಿದ್ದು ವಾಯ್ಸ್‌ ಎಂದು ಮನೋಹರ್‌ ಬಳಿ ಕೇಳಿದರಂತೆ. ಹೊಸ ಹುಡುಗಿ, ನಮ್ಮೂರಿನವಳು. ಚೆನ್ನಾಗಿದೆಯಲ್ವಾ ವಾಯ್ಸ್ ಎಂದು ಮನೋಹರ್‌ ಹೇಳಿದ್ದಾರೆ. ಶಾಸ್ತ್ರಿ ಅವರು ಹೌದಾ, ವಾಯ್ಸ್‌ ಡಿಫರೆಂಟ್‌ ಆಗಿದೆ. ಚೆನ್ನಾಗಿದೆ ಎಂದರಂತೆ. ಆಗ ಮನೋಹರ್‌ ಅವರು, ಹುಡುಗಿಯೂ ಚೆನ್ನಾಗಿದ್ದಾಳೆ, ಟ್ರೈ ಮಾಡ್ತೀರಾ ಎಂದು ಕೇಳಿದ್ದಾರೆ. ಶಾಸ್ತ್ರಿ ತುಂಬಾ ಡೀಸೆಂಟ್‌. ಏನ್‌, ಮನೋಹರ್‌ ಹೀಗೆ ಮಾತ್ತಾಡುತ್ತೀರಾ ಎಂದು ಹೇಳಿದರಂತೆ. ಅಲ್ಲಾ, ನೀನು ಮಾಡದಿದ್ದರೆ ನಾನು ಟ್ರೈ ಮಾಡುತ್ತೇನೆ ಎಂದು ಮನೋಹರ್ ಹೇಳಿದರಂತೆ. ಸುಮ್ನೀರಿ, ನೀವು ರೆಕಾರ್ಡಿಂಗ್‌ ನಡೆಸಿ ಎಂದು ಶಾಸ್ತ್ರಿ ಹೇಳಿದ್ರಂತೆ.ಮುಂದುವರೆಯುವುದು...

27 views