ಹೀರೋಯಿಸಮ್ ಗೆ ಬೇಲೆ ಸಿಗುವುದು ಯಾವಾಗ?

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 47
ಹೆಗಲ ಮೇಲೆ ಕೈ ಹಾಕಿ, ಜನಿವಾರ ಹಾಕಿದ್ದಾರಾ ಎಂಬುದನ್ನು ನೋಡಿ ಇಂಡಸ್ಟ್ರಿಯಲ್ಲಿ ಅವಕಾಶ ಕೊಡುತ್ತಿದ್ದ ಕಾಲವೂ ಇತ್ತು. ಈಗ ಅದು ಕಡಿಮೆಯಾಗಿದೆ. ಕೆಲವರು ಜನಿವಾರ ಇದ್ರೆ ಅವಕಾಶ ಕೊಡಲ್ಲ. ಇನ್ನು ಕೆಲವರು ಜನಿವಾರ ಇದ್ರೆ ಅವಕಾಶ ಕೊಡುತ್ತಾರೆ. ಎರಡೂ ರೀತಿಯ ಸಾಧ್ಯತೆಯೂ ಇರುತ್ತದೆ. ಇವೆಲ್ಲ ಯಾಕೆ ಬೇಕು. ಕಲಾವಿದ ಒಳಗೆ ಇರಬೇಕು. ಪ್ರತಿಭೆ ಎಲ್ಲದಕ್ಕೂ ಮುಖ್ಯ.


ಈಗಂತೂ ಸಾಕಷ್ಟು ಕಲಾವಿದರು ಮುನ್ನೆಲೆಗೆ ಬರುತ್ತಿದ್ದಾರೆ. ಇನ್ನು ಈ ಕ್ಷೇತ್ರ ಮುಂದುವರಿಯಬೇಕು. ವಿದೇಶಗಳಲ್ಲಿ ಕನ್ನಡ ಕಲಾವಿದರಿಗೆ ಕೈಮುಗಿದು ಕರೆಸಿ, ಕೈತುಂಬ ದುಡ್ಡು ಕೊಟ್ಟು ಕಳುಹಿಸುತ್ತಾರೆ.


ಎಷ್ಟೋ ಜನ ದೊಡ್ಡ ಕಲಾವಿದರು ಕಾರಿನಲ್ಲಿ ಹೋಗುವಾಗ ಜನರಿಗೆ ಕಾಣಿಸಬಾರದೆಂದೇ ಕಾರಿನ ಗಾಜು ಹಾಕಿಕೊಳ್ತಾರೆ. ನೊಣ ಬಂದು ಮುತ್ತಿಕೊಳ್ಳದಿದ್ದರೆ ಬೆಲ್ಲಕ್ಕೆ ಮರ್ಯಾದೆ ಇಲ್ಲ. ಜನ ಗುರುತು ಹಿಡಿಯಬೇಕು ಎಂಬುದೇ ಕಲಾವಿದನ ಆಸೆ. ಈಗ ಹೋಗಿ ಅವರ ಮುಂದೆ ನಿಂತುಕೊಳ್ಳಿ. ಮಾತಾಡಿಸಿದ್ರೆ ಮಾತನಾಡಿ. ಒಂದು ಸೆಲ್ಫಿ ಕೇಳಿದ್ರೆ ಕೊಡಿ. ಜನರು ಬೇಡ ಎಂದ್ರೆ ನೀವು ಇರುವುದಿಲ್ಲ. ಕಲಾವಿದರ ಮೇಲೆ ಪ್ರೇಕ್ಷಕರು ಇಟ್ಟಿರುವ ಸಂಬಂಧಕ್ಕೆ ದೊಡ್ಡ ನಮಸ್ಕಾರ. ನಮ್ಮ ಕಲೆಗೆ ಅವರು ಬೆಲೆ ಕೊಡುತ್ತಾರೆ. ಒಂದು ಸೆಲ್ಫಿ ಕೇಳಿದಾಗ, ಆಗಲ್ಲ ಹೋಗಿ, ಕಳಿಸಿ ಎಂದೆಲ್ಲ ಕೆಲವರು ಹೇಳ್ತಾರೆ. ಏನು ಭಿಕ್ಷೆಗೆ ಬಂದಿರುತ್ತಾರಾ ಅವರು. ನೀವು ಅವರ ಬಳಿ ಭಿಕ್ಷೆಗೆ ಹೋಗಿರುತ್ತೀರಿ. ಯಾರಾದರೂ ಫೋಟೊ, ಆಟೋಗ್ರಾಫ್‌ಕೇಳಿದ್ರೆ ಕಲಾವಿದ ಬೇಜಾರು ಮಾಡಿಕೊಳ್ಳಬಾರದು. ಮಾತಾಡಿಸಿದ್ರೆ ಮಾತಾಡಬೇಕು. ಕೋಪ ಮಾಡಿಕೊಳ್ಳುವ ಅಗತ್ಯವೇ ಇಲ್ಲ.


ತೆರೆ ಮೇಲಿನ ಹೀರೊ ನಿಜ ಜೀವನದಲ್ಲಿಯೂ ಹೀರೊ ಮತ್ತು ವೇದಿಕೆ ಮೇಲೆ ಮಾತನಾಡುವ ನಾವು ನಿಜವಾಗಿಯೂ ಹಾಗೆಯೇ ಇರುತ್ತೇವೆ ಎಂದೇ ಜನ ಅಂದುಕೊಂಡಿರುತ್ತಾರೆ. ನಾವು ದುಡ್ಡಿಗಾಗಿ ಮಾಡುತ್ತಿರುತ್ತೇವೆ ಎಂದೂ ಅವರು ತಿಳಿದುಕೊಳ್ಳುವುದಿಲ್ಲ. ಅವರ ಪ್ರೀತಿಗೆ ಗೌರವ ಕೊಡಬೇಕು. ರಾಜ್‌ಕುಮಾರ್‌ಅವರನ್ನು ಅದಕ್ಕಾಗಿಯೇ ನಾನು ಮೊದಲೇ ಉದಾಹರಣೆ ಕೊಟ್ಟಿದ್ದು. ಅವರು 360 ದಿನಗಳ ಕಲಾವಿದ.ಮುಂದುವರಿಯುವುದು...

9 views